Thursday, June 1, 2023

ಸೈಲ್ ಅಧ್ಯಕ್ಷರಾಗಿ ಅಮರೇಂದು ಪ್ರಕಾಶ್ : ವಿಐಎಸ್‌ಎಲ್ ಗತ ವೈಭವ ಮರಳುವ ವಿಶ್ವಾಸ

ಭಾರತೀಯ ಉಕ್ಕು ಪ್ರಾಧಿಕಾರ ನೂತನ ಅಧ್ಯಕ್ಷ ಅಮರೇಂದು ಪ್ರಕಾಶ್
    ಭದ್ರಾವತಿ, ಜೂ. ೧: ಭಾರತೀಯ ಉಕ್ಕು ಪ್ರಾಧಿಕಾರದ(ಸೈಲ್) ಅಧ್ಯಕ್ಷರಾಗಿ ಅಮರೇಂದು ಪ್ರಕಾಶ್ ಬುಧವಾರ ಅಧಿಕಾರ ವಹಿಸಿಕೊಂಡರು.  
    ಸೈಲ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಪ್ರಕಾಶ್‌ರವರು ಬೊಕಾರೋ ಸ್ಟೀಲ್ ಪ್ಲಾಂಟ್ (ಬಿಎಸ್‌ಎಲ್), ಸೈಲ್ ಪ್ರಭಾರ ನಿರ್ದೇಶಕ ಹುದ್ದೆಯನ್ನು ಹೊಂದಿದ್ದರು.
    ಬಿಐಟಿ ಸಿಂಧಿಯಿಂದ ಮೆಟಲರ್ಜಿಕಲ್ ಇಂಜಿನಿಯರ್ ಆಗಿರುವ ಪ್ರಕಾಶ್‌ರವರು ೧೯೯೧ರಲ್ಲಿ ಸೈಲ್‌ಗೆ ಮ್ಯಾನೇಜ್‌ಮೆಂಟ್ ಟ್ರೈನಿ(ತಾಂತ್ರಿಕ) ಆಗಿ ಸೇರ್ಪಡೆಗೊಂಡರು. ಸ್ಥಾವರಗಳು ಮತ್ತು ಘಟಕಗಳಲ್ಲಿ ವಿವಿಧ ಜವಾಬ್ದಾರಿಗಳ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ ನಂತರ ೨೦೨೦ರಲ್ಲಿ ಬೊಕಾರೋ ಸ್ಟೀಲ್ ಪ್ಲಾಂಟ್ ಉಸ್ತುವಾರಿ ನಿರ್ದೇಶಕರಾಗಿ ಸೈಲ್ ಮಂಡಳಿಯಲ್ಲಿ ಆಯ್ಕೆಯಾದರು.
    ಇವರೊಬ್ಬ ನಿಪುಣ ತಂತ್ರಜ್ಞರಾಗಿದ್ದು, ಸೈಲ್‌ನ ಮೂರು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ ವಿಭಾಗೀಯ ಮಟ್ಟದಲ್ಲಿ ಸ್ಥಾವರ ಕಾರ್ಯಾಚರಣೆಗಳಿಗೆ ಒಡ್ಡಿಕೊಂಡಿದ್ದಾರೆ. ಪ್ರಧಾನ ಕಛೇರಿಯಲ್ಲಿ ಕಾರ್ಪೊರೇಟ್ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.  ಗಣಿಗಾರಿಕೆ ಕಾರ್ಯಾಚರಣೆಗಳೊಂದಿಗೆ ದೊಡ್ಡ ಉಕ್ಕಿನ ಕಾರ್ಖಾನೆಯನ್ನು ಮುನ್ನಡೆಸಿರುವ ಅನುಭವ ಹೊಂದಿದ್ದಾರೆ.
    ೨೦೧೫-೧೭ರಲ್ಲಿ ಸೈಲ್ ವ್ಯಾಪಾರ ರೂಪಾಂತರ ಮತ್ತು ಆರ್ಥಿಕ ಬದಲಾವಣೆಯನ್ನು ಮುನ್ನಡೆಸುತ್ತಿದ್ದ ತಂಡದ ಪ್ರಮುಖ ಸದಸ್ಯರಾಗಿದ್ದರು. ಬೊಕಾರೋ ಸ್ಟೀಲ್ ಪ್ಲಾಂಟ್‌ನ ಉಸ್ತುವಾರಿ ನಿರ್ದೇಶಕರಾಗಿ ಅಧಿಕಾರವಹಿಸಿಕೊಂಡ ನಂತರ, ವರ್ಷದಿಂದ ವರ್ಷಕ್ಕೆ ಎಲ್ಲಾ ಪ್ರಮುಖ ನಿಯತಾಂಕಗಳಲ್ಲಿ ತಮ್ಮ ಅತ್ಯುತ್ತಮ ಕಾರ್ಯಕ್ಷಮತೆಯನ್ನು ತಲುಪಲು ಸ್ಥಾವರ ತಂಡವನ್ನು ಮುನ್ನಡೆಸಿದ್ದಾರೆ. ಕಾರ್ಯಕ್ಷಮತೆಯ ಸುಧಾರಣೆಯು ಪರಿಮಾಣಾತ್ಮಕ ಮತ್ತು ಗುಣಾತ್ಮಕವಾಗಿದೆ. ಗಮನಾರ್ಹ ಸಾಂಸ್ಥಿಕ ಕೌಶಲ್ಯ ಮತ್ತು ಕಾರ್ಯತಂತ್ರದ ಯೋಜನಾ ಕುಶಾಗ್ರಮತಿಯೊಂದಿಗೆ, ವ್ಯಾಪಾರ ಪ್ರಕ್ರಿಯೆಗಳು ಮತ್ತು ಯೋಜನೆಯ ಅನುಷ್ಠಾನದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
    ತಾಂತ್ರಿಕವಾಗಿ ನಿಪುಣ ನಾಯಕರಾಗಿ, ಕಂಪನಿಯ ಡಿಜಿಟಲೀಕರಣದ ಪ್ರಯತ್ನಗಳನ್ನು ಮುನ್ನಡೆಸುತ್ತಿದ್ದಾರೆ. ಆದಾಯವನ್ನು ಹೆಚ್ಚಿಸುವ ತಂಡದ ಪ್ರಮುಖ ಸದಸ್ಯರಾಗಿ,  ಸಂಸ್ಥೆಗೆ ಮಾತ್ರವಲ್ಲದೆ ಗ್ರಾಹಕರಿಗೆ ಮೌಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಟ್ಟಾರೆ ಉತ್ಪಾದನೆ ಮತ್ತು ಮಾರಾಟ ಯೋಜನೆಯ ಕಾರ್ಯತಂತ್ರ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
    ದಾರ್ಶನಿಕ ಮತ್ತು ಶಕ್ತಿಯುತ ನಾಯಕರಾಗಿದ್ದು, ಉದ್ಯೋಗಿಗಳೊಂದಿಗೆ ಸಂಪರ್ಕ ಸಾಧಿಸುತ್ತಾ ವಿವಿಧ ಉಪಕ್ರಮಗಳ ಮೂಲಕ ಉತ್ಕೃಷ್ಟರಾಗಲು ಅವರನ್ನು ಪ್ರೇರೇಪಿಸುತ್ತಾರೆ. ಬೊಕಾರೋದಲ್ಲಿ ನಿರ್ದೇಶಕರಾಗಿದ್ದ ಅವಧಿಯಲ್ಲಿ ವಿಶೇಷ ಒಲಿಂಪಿಕ್ಸ್‌ಗೆ ಬೆಂಬಲ ನೀಡುವುದು ಸೇರಿದಂತೆ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದಾರೆ.
    ಸಾರ್ವಜನಿಕ ಸಹಭಾಗಿತ್ವವನ್ನು ಒಳಗೊಂಡ ಅನೇಕ ಸಾಮಾಜಿಕ ಉಪಕ್ರಮಗಳು ಬೊಕಾರೋ ನಗರ ಮತ್ತು ಅದರ ಬಾಹ್ಯ ಪ್ರದೇಶಗಳಲ್ಲಿ ಧನಾತ್ಮಕ ಬದಲಾವಣೆಗಳನ್ನು ತಂದಿವೆ. ವ್ಯಾಪಕವಾಗಿ ಪ್ರಯಾಣಿಸಿರುವ ತಂತ್ರಜ್ಞರಾಗಿದ್ದು, ಉಕ್ಕು ಮತ್ತು ಗಣಿಗಾರಿಕೆ ಉದ್ಯಮದ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುತ್ತಾರೆ.
    ಅಮರೇಂದು ಪ್ರಕಾಶ್‌ರವರು ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಸೈಲ್ ಅಧೀನದಲ್ಲಿಯೇ ಮುನ್ನಡೆಸಿಕೊಂಡು ಹೋಗುವ ಮೂಲಕ ಅಭಿವೃದ್ಧಿಗೊಳಿಸುವ ಜೊತೆಗೆ ಇತಿಹಾಸದ ಗತ ವೈಭವ ಮರುಕಳುಹಿಸುವಂತೆ ಮಾಡುತ್ತಾರೆಂಬ ವಿಶ್ವಾಸ, ಭರವಸೆ ಕಾರ್ಖಾನೆ ಆಡಳಿತ ಹಾಗು ಕಾರ್ಮಿಕ ವರ್ಗ ಹೊಂದಿದೆ.

No comments:

Post a Comment