Monday, July 10, 2023

ಮಣಿಪುರ, ಜು. ೧೦ : ಶಾಂತಿ ಮರುಸ್ಥಾಪನೆಗೆ ಪ್ರಧಾನಿ ಮಧ್ಯ ಪ್ರವೇಶಿಸಲು ಒತ್ತಾಯ

ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತೆಲುಗು ಕ್ರಿಶ್ಚಿಯನ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಕೆ. ಭಾಸ್ಕರ್‌ಬಾಬು ಮಾತನಾಡಿದರು.  
    ಭದ್ರಾವತಿ : ಮಣಿಪುರ ರಾಜ್ಯದಲ್ಲಿ ಉಂಟಾಗಿರುವ ಜನಾಂಗೀಯ ಘರ್ಷಣೆಯಿಂದಾಗಿ ವ್ಯಾಪಕ ಹಿಂಸಾಚಾರ ನಡೆಯುತ್ತಿದ್ದು, ನಾಗರಿಕ ಸಮಾಜ ವಿಶ್ವದ ಎದುರು ತಲೆ ತಗ್ಗಿಸುವಂತೆ ಮಾಡಿದೆ. ಕೇಂದ್ರ ಗೃಹ ಸಚಿವರು ಭೇಟಿ ನೀಡಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೂಡಲೇ ಮಧ್ಯ ಪ್ರವೇಶಿಸಿ ಶಾಂತಿ ಮರುಸ್ಥಾಪನೆಗೆ ಮುಂದಾಗುವಂತೆ ತೆಲುಗು ಕ್ರಿಶ್ಚಿಯನ್ ವೆಲ್‌ಫೇರ್ ಅಸೋಸಿಯೇಷನ್ ಒತ್ತಾಯಿಸಿದೆ.
    ಅಸೋಸಿಯೇಷನ್‌ ಅಧ್ಯಕ್ಷ ಜೆ.ಭಾಸ್ಕರ್‌ಬಾಬು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಮಾನವ ಹಕ್ಕುಗಳ ರಕ್ಷಣೆ ಮಾಡುವುದರೊಂದಿಗೆ ಶಾಂತಿ ನೆಲೆಸಲು ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ, ರಾಷ್ಟ್ರಪತಿ-ಪ್ರಧಾನಮಂತ್ರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು.
    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸ್ಥಾಪಿಸಿ ಒಂದು ನೂರು ಕೋಟಿ ರು. ಅನುದಾನ ಬಜೆಟ್‌ನಲ್ಲಿ ಘೋಷಿಸಿರುವುದು ಸ್ವಾಗತಾರ್ಹವಾಗಿದ್ದು, ಅಲ್ಪಸಂಖ್ಯಾತರ ಆಯೋಗ ಹಾಗು ನಿಗಮದ ನಾಮಕರಣ ದಲ್ಲಿ ಕ್ರೈಸ್ತ ಸಮಾಜದವರನ್ನು ಮಾತ್ರ ಪರಿಗಣಿಸುವಂತೆ ಒತ್ತಾಯಿಸಿದರು.
    ಮಣಿಪುರದ ಘಟನೆಗೆ ಸಂಬಂಧಿಸಿದಂತೆ ಜು.11 ರಂದು ಕ್ರೈಸ್ತಸಮಾಜದ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜೆ.ಭಾಸ್ಕರ್ ಬಾಬು ಮನವಿ ಮಾಡಿದರು.
    ಪತ್ರಿಕಾಗೋಷ್ಠಿಯಲ್ಲಿ  ಜಾರ್ಜ್, ಆನಂದ್, ಗ್ರಾಬಿಯಲ್, ಪ್ರಕಾಶ್, ರಾಜು, ಮನೋಹರ್, ಆನಂದ್ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment