Monday, August 14, 2023

ಎಚ್. ಕಾಂತರಾಜ ಆಯೋಗದ ವರದಿ ಜಾರಿಗೊಳಿಸಿ : ತೀ.ನ ಶ್ರೀನಿವಾಸ್

ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಿಂದುಳಿದ ಜನಜಾಗೃತಿ ವೇದಿಕೆ ಅಧ್ಯಕ್ಷ ತೀ.ನ ಶ್ರೀನಿವಾಸ್ ಮಾತನಾಡಿದರು.
    ಭದ್ರಾವತಿ, ಆ. ೧೪ :  ಹಿಂದುಳಿದ ವರ್ಗದವರ ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಮುಖ್ಯಮಂತ್ರಿ ಎಂದೇ ಹೆಸರಾದ ಸಿದ್ಧರಾಮಯ್ಯನವರು ಎಚ್. ಕಾಂತರಾಜ ಆಯೋಗದ ವರದಿಯನ್ನು ಶೀಘ್ರವೇ ಜಾರಿಗೊಳಿಸಬೇಕೆಂದು ಹಿಂದುಳಿದ ವರ್ಗಗಳ ಪರವಾಗಿ ಹಿಂದುಳಿದ ಜನಜಾಗೃತಿ ವೇದಿಕೆ ಆಗ್ರಹಿಸುತ್ತದೆ ಹಾಗು ಈ ಸಂಬಂಧ ಹಮ್ಮಿಕೊಳ್ಳಲಾಗಿರುವ ಸಮಾಜಪರ ಹೋರಾಟಕ್ಕೆ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡುವಂತೆ ಕೋರುತ್ತದೆ ಎಂದು ವೇದಿಕೆ ಅಧ್ಯಕ್ಷ ತೀ.ನ ಶ್ರೀನಿವಾಸ್ ಹೇಳಿದರು.
    ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೧೯೯೪ರ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಸಧ್ಯದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಮುಂದುವರೆಸಿಕೊಂಡು ಬಂದಿದೆ. ಸರ್ವೋಚ್ಛ ನ್ಯಾಯಾಲಯ ಮೀಸಲಾತಿಯನ್ನು ಶೇಕಡ ೫೦ಕ್ಕಿಂತ ಹೆಚ್ಚಾಗಿ ನೀಡಬಾರದೆಂದು ಆದೇಶಿಸಿದೆ. ಈ ಹಿಂದೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಎಚ್. ಕಾಂತರಾಜ ಅವರ ಅಧ್ಯಕ್ಷತೆಯಲ್ಲಿ ೨೦ ಜನವರಿ ೨೦೧೪ ರಲ್ಲಿ ಆಯೋಗ ರಚಿಸಲಾಗಿತ್ತು. ಈ ಆಯೋಗ ೨೦೧೯ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು ಎಂದರು.
    ಈ ಆಯೋಗ ತನ್ನ ಸಮೀಕ್ಷೆಯಲ್ಲಿ ಇಡೀ ರಾಜ್ಯದಲ್ಲಿ ಕುಟುಂಬಗಳ ನಿಖರವಾದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಅಭ್ಯಸಿಸಿ, ಸಾಕಷ್ಟು ವೈಜ್ಞಾನಿಕ ಮಾಹಿತಿಯನ್ನು ಕಲೆಹಾಕಿದೆ. ಆದ್ದರಿಂದ ಈ ಆಯೋಗ ಅತ್ಯಂತ ವೈಜ್ಞಾನಿಕವಾದ ಹಿಂದುಳಿದ ವರ್ಗಗಳ ಜಾತಿವಾರು ಸಮೀಕ್ಷೆಯನ್ನು ಕೈಗೊಂಡಿದೆ ಎಂಬ ಮಾಹಿತಿಗಳು ಬಲ್ಲಮೂಲಗಳಿಂದ ತಿಳಿದುಬಂದಿದೆ ಎಂದರು.
    ದೇಶದಲ್ಲಿ ಜಾತಿವ್ಯವಸ್ಥೆ ಎನ್ನುವುದು ವಾಸ್ತವಿಕ ಸತ್ಯ. ಯಾವುದೇ ಜಾತಿಗೆ ಮೀಸಲಾತಿ ನೀಡಲು ಆಯಾ ಜಾತಿಗಳಿಗೆ ಯೋಜನೆಗಳನ್ನು ರೂಪಿಸಲು ಅಂಕಿ-ಅಂಶಗಳು ಅತ್ಯಂತ ಅವಶ್ಯಕ ಎಂಬ ಅಂಶವನ್ನು ೧೬ ನವೆಂಬರ್ ೧೯೯೨ರಂದು ಮಂಡಲ್ ವರದಿಗೆ ಸಂಬಂಧಿಸಿದ ತೀರ್ಪಿನಲ್ಲಿ ಸವೋಚ್ಛ ನ್ಯಾಯಾಲಯ ಸ್ಪಷ್ಟಪಡಿಸಿದೆ. ಅನೇಕ ಸಂದರ್ಭಗಳಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ನೀಡುವ ಸಂದರ್ಭದಲ್ಲಿ ನಿಖರವಾದ ಅಂಕಿ-ಅಂಶಗಳ ಕೊರತೆಯಿಂದಾಗಿ ವಿವಿಧ ರಾಜ್ಯಗಳು ಹಿಂದುಳಿದ ವರ್ಗಗಳಿಗೆ ನೀಡಿದ್ದ ವಿಶೇಷ ಸವಲತ್ತುಗಳನ್ನು ನ್ಯಾಯಾಲಯಗಳು ರದ್ದು ಪಡಿಸಿರುವುದನ್ನು ಕಾಣಬಹುದಾಗಿದೆ ಎಂದರು.
 ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿದ್ದ ಕಾಂತರಾಜ ಅವರ ಜಾತಿವಾರು ಜನಗಣತಿಯು ಜಾತಿ ಸಮಾಜವನ್ನು ಗಟ್ಟಿಮಾಡಲು ಅಲ್ಲ, ಆದರೆ ಸಮಾಜದಲ್ಲಿ "ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು" ಎಂಬ ತತ್ವಾಧಾರದ ಮೇಲೆ ಸಮಾನತೆಯನ್ನು ಸಾಧಿಸಲು, ಜನಪರ ಯೋಜನೆಗಳನ್ನು ರೂಪಿಸಲು ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಜಾತಿ ಸಮೀಕ್ಷೆ ಅತ್ಯಾವಶ್ಯಕವಾಗಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಒಂದು ಮಾರ್ಗಸೂಚಿ. ವಿಶ್ವದೆಲ್ಲೆಡೆ ಒಪ್ಪಿಕೊಂಡಿರುವ ಒಂದು ವಿಧಾನವೂ ಸಹ ಆಗಿದೆ ಎಂದರು.
    ಕಾಂತರಾಜ ಅವರು ೨೦೧೯ರಲ್ಲಿಯೇ ಹಿಂದುಳಿದ ವರ್ಗಗಳ ಸಮೀಕ್ಷೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಸಹ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ  ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಮತ್ತು ಬಸವರಾಜ ಬೊಮ್ಮಾಯಿ ಇವರಾರೂ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇದು ಹಿಂದುಳಿದ ವರ್ಗಗಳಿಗೆ ಮಾಡಿದ ಅನ್ಯಾಯ ಮತ್ತು ದ್ರೋಹದ ಕೃತ್ಯವಾಗಿದೆ ಎಂದು ಆರೋಪಿಸಿದರು.
    ಹಿಂದುಳಿದ ವರ್ಗದವರ ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಮುಖ್ಯಮಂತ್ರಿ ಎಂದೇ ಹೆಸರಾದ ಸಿದ್ಧರಾಮಯ್ಯನವರು ಕಾತರಾಜ ಆಯೋಗದ ವರದಿಯನ್ನು ತಕ್ಷಣ ಜಾರಿಗೊಳಿಸುವ ವಿಶ್ವಾಸವಿದೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದರು.
    ವೇದಿಕೆ ಗೌರವಾಧ್ಯಕ್ಷ ಪ್ರೊ, ಎಚ್. ರಾಚಪ್ಪ  ಪ್ರಧಾನ ಕಾರ್ಯದರ್ಶಿ ಸಿ.ಬಿ. ಮನೋಹರ ಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಡಿ.ಆರ್. ಉಮೇಶ್ ಚನ್ನವೀರಪ್ಪ ಗಾಮನಗಟ್ಟಿ, ಸಂಚಾಲಕರಾದ ಬಿ. ಜನಮೇಜಿರಾವ್, ರಾಮಕೃಷ್ಣ ಎಸ್. ಉರಣಕರ್, ಆರ್.ಟಿ. ನಟರಾಜ್, ಅಮೀರ್ ಜಾನ್, ಬಿ. ಗಂಗಾಧರ್, ಅಬಿದ್ ಆಲಿ, ದಿಲ್‌ದಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment