ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ: ಅಭಿವೃದ್ಧಿ ಕೆಲಸಗಳು ಹೆಚ್ಚು ಕಾಲ ಉಳಿಯುವಂತೆ ಇರಬೇಕು. ಆಗ ಮಾತ್ರ ಅಧಿಕಾರಿಗಳನ್ನು ಜನರು ಸದಾ ಕಾಲ ನೆನಪಿಟ್ಟುಕೊಳ್ಳುತ್ತಾರೆಂದು ಎಂದು ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ಹೇಳಿದರು.
ಅವರು ಹಳೇನಗರದ ಕನಕಮಂಟಪ ಮೈದಾನದಲ್ಲಿ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ದಸರಾ ಉದ್ಘಾಟಿಸಿ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಕೆಲವು ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ. ಇನ್ನೂ ಸಾಕಷ್ಟು ಕೆಲಸ ನಡೆಯಬೇಕಾಗಿದೆ. ಅಧಿಕಾರಿಗಳಿಗೆ ಸ್ಥಳೀಯ ಶಾಸಕರು, ನಗರಸಭೆ ಸದಸ್ಯರು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕೆಂದರು.
ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ನಾಡಹಬ್ಬ ದಸರಾ ಈ ಬಾರಿ ಸಹ ವಿಜೃಂಭಣೆಯಿಂದ ನಡೆಯುತ್ತಿದೆ. ಸಾರ್ವಜನಿಕರು ಎಲ್ಲಾ ಕಾರ್ಯಕ್ರಮಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೋರಿದರು.
ನಗರಸಭೆ ಪೌರಾಯುಕ್ತ ಮನುಕುಮಾರ್ ಮಾತನಾಡಿ, ಸಮಾಜದ ಸಕಲ ಕೆಲಸಗಳಲ್ಲಿ ಶ್ರಮವಹಿಸುವ ಮಹಿಳೆಯರ ಪ್ರತಿಭಾ ಪ್ರದರ್ಶನಕ್ಕೆ ಮಹಿಳಾ ದಸರಾ ವೇದಿಕೆಯಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಮಾತನಾಡಿ, ಇಡೀ ಜೀವರಾಶಿಯ ತೂಕ ಹೊತ್ತಿರುವುದು ಭೂತಾಯಿ. ಮಹಿಳೆಯರ ಸಾಮರ್ಥ್ಯಕ್ಕೆ ಭೂತಾಯಿಯೇ ಉದಾಹರಣೆ. ಮಹಿಳೆ ಎಂದರೆ ಶಕ್ತಿ ಎಂದರು.
ವೇದಿಕೆಯಲ್ಲಿ ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಕ್ರೀಡಾಸಮಿತಿ ಅಧ್ಯಕ್ಷ ಚೆನ್ನಪ್ಪ, ಸದಸ್ಯರಾದ ಬಸವರಾಜ್ ಆನೇಕೊಪ್ಪ, ಅನುಸುಧಾ ಮೋಹನ್ ಪಳನಿ, ಪಲ್ಲವಿ, ನಾಗರತ್ನ, ಪ್ರೇಮ, ನಾಗರತ್ನ, ಲತಾ ಚಂದ್ರಶೇಖರ್, ರೇಖಾ ಪ್ರಕಾಶ್, ಮಂಜುಳ ಸುಬ್ಬಣ್ಣ, ಜಯಶೀಲ, ಮಾಜಿ ಸದಸ್ಯರಾದ ಬದರಿನಾರಾಯಣ, ಲಕ್ಷ್ಮೀದೇವಿ, ಸುಧಾಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವೀರಶೈವ ಲಿಂಗಾಯತ ಮಹಿಳಾ ಸಮಾಜದಿಂದ ನೃತ್ಯ ರೂಪಕ, ಹಳೇನಗರದ ಮಹಿಳಾ ಸೇವಾ ಸಮಾಜದಿಂದ ಜನಪದ ಗೀತೆ, ಪೌರಕಾರ್ಮಿಕರಿಂದ ನಾಟಕ, ಜ್ಯೋತಿ ಪ್ರಸಾದ್ ತಂತ್ರಿ ಅವರಿಂದ ನೃತ್ಯ, ಚೌಡೇಶ್ವರಿ ಮಹಿಳಾ ಮಂಡಳಿಯಿಂದ ದೇವಿ ನೃತ್ಯ, ವೀರಶೈವ ಸೇವಾ ಸಮಿತಿ ವತಿಯಿಂದ ಕೋಲಾಟ, ಅಖಿಲ ಭಾರತ ವೀರಶೈವ ಮಹಿಳಾ ವೇದಿಕೆಯಿಂದ ನೀರಿಗೆ ಬಾರೇ ಚನ್ನಿ, ಚುಂಚಾದ್ರಿ ವೇದಿಕೆ ಹಾಗು ಬನಶಂಕರಿ ಗಾಯನ ತಂಡದಿಂದ ನೃತ್ಯ ನಡೆಯಿತು.
ಭದ್ರಾ ಸುಗಮಸಂಗೀತ ವೇದಿಕೆ ಮಹಿಳೆಯರು ಪ್ರಾರ್ಥಿಸಿದರು. ನಗರಸಭೆ ಅಧಿಕಾರಿ ಸುಹಾಸಿನಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
No comments:
Post a Comment