ಭದ್ರಾವತಿ: ಕಟ್ಟಡ ಕಾರ್ಮಿಕರಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ.೨೨ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಟ್ಟಡ ಕಾರ್ಮಿಕರ ಸಂಘಟನೆಗಳ ಪ್ರಮುಖರು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಫಲಾನುಭವಿಗಳ ಮಕ್ಕಳಿಗೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ನೀಡಲಾಗುತ್ತಿದ್ದ ಶೈಕ್ಷಣಿಕ ಸಹಾಯಧನ ಯೋಜನೆಯಲ್ಲಿ ಶೇ.೮೦ರಷ್ಟು ಕಡಿತಗೊಳಿಸಲಾಗಿದೆ. ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಈ ಹಿನ್ನಲೆಯಲ್ಲಿ ಸಹಾಯಧನ ಕಡಿತಗೊಳಿಸುವುದನ್ನು ಕೈಬಿಟ್ಟು ಈ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಎಲ್ಲಾ ಫಲಾನುಭವಿಗಳಿಗೂ ಸಹಾಯಧನ ನೀಡಬೇಕೆಂದು ಆಗ್ರಹಿಸಿದರು.
ಕಾರ್ಮಿಕರ ಆರೋಗ್ಯ ಭಾಗ್ಯ ಯೋಜನೆಯಡಿ ಫಲಾನುಭವಿ ಹಾಗು ಅವಲಂಬಿತರು ಖಾಸಗಿ ಆಸ್ಪತ್ರೆಯಲ್ಲಿ ಯಾವುದೇ ಮುಂಗಡ ಹಣ ಪಾವತಿ ಮಾಡದೆ ಗುರುತಿನ ಚೀಟಿ ತೋರಿಸಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿಕೊಡುವ ಜೊತೆಗೆ ಚಿಕಿತ್ಸೆಗೆ ತಗಲುವ ಸಂಪೂರ್ಣ ವೆಚ್ಚ ಮಂಡಳಿ ಭರಿಸುವುದು. ಅಪಘಾತ ಪರಿಹಾರ ಸಹಾಯ ಧನ ೮ ಲಕ್ಷ ರು., ಸಂಪೂರ್ಣ ಶಾಶ್ವತ ದುರ್ಬಲತೆಗೆ ೫ ಲಕ್ಷ ರು. ಹಾಗು ಭಾಗಶಃ ದುರ್ಬಲತೆಗೆ ೩ ಲಕ್ಷ ರು. ನೀಡುವುದು. ೩ ವರ್ಷ ಸದಸ್ಯತ್ವದೊಂದಿಗೆ ೬೦ ವರ್ಷ ಪೂರೈಸಿದ ಫಲಾಭವಿಗೆ ಮರಣ ನಂತರ ಅಂತ್ಯಕ್ರಿಯೆ ವೆಚ್ಚ ೨೫ ಸಾವಿರ ರು. ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಬೆಳಿಗ್ಗೆ ೧೦ ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಅಭಿಲಾಷ್, ಚಂದ್ರಶೇಖರ್, ಅಂತೋಣಿ ಕ್ರೂಸ್, ಸಮಿವುಲ್ಲಾ, ವಿ. ವಿನೋದ್, ಮನೋಹರ್, ಶಿವಣ್ಣಗೌಡ, ನಾರಾಯಣಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment