ಭದ್ರಾವತಿ ನಗರಸಭೆ ಅಧ್ಯಕ್ಷರಾಗಿ ವಾರ್ಡ್ ನಂ. ೩೪ರ ಸದಸ್ಯೆ ಲತಾ ಚಂದ್ರಶೇಖರ್ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಅಭಿನಂದಿಸಿದರು.
ಭದ್ರಾವತಿ: ನಗರಸಭೆ ಅಧ್ಯಕ್ಷರಾಗಿ ವಾರ್ಡ್ ನಂ. ೩೪ರ ಸದಸ್ಯೆ ಲತಾ ಚಂದ್ರಶೇಖರ್ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರಸಭೆ ಆಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಮೀಸಲಾತಿ ಮೊದಲ ೩೦ ತಿಂಗಳ ಅವಧಿ ಒಪ್ಪಂದದಂತೆ ಹಂಚಿಕೆ ಮಾಡಿಕೊಂಡಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ಶಾಸಕ ಬಿ.ಕೆ ಸಂಗಮೇಶ್ವರ್ ನಿರ್ದೇಶನದಂತೆ ಅರ್ಹ ಸದಸ್ಯರಿಗೆ ಬಿಟ್ಟುಕೊಡಲಾಗುತ್ತಿದೆ. ಸಾಮಾನ್ಯ ಮಹಿಳಾ ಮೀಸಲು ಹೊಂದಿರುವ ಅಧ್ಯಕ್ಷ ಸ್ಥಾನ ಅಧಿಕಾರ ಈಗಾಗಲೇ ಗೀತಾ ರಾಜ್‌ಕುಮಾರ್, ಅನುಸುಧಾ ಮೋಹನ್ ಪಳನಿ ಮತ್ತು ಶೃತಿ ಸಿ. ವಸಂತಕುಮಾರ್ ಕೆ.ಸಿ ಒಟ್ಟು ೩ ಮಂದಿ ಸದಸ್ಯರು ಅನುಭವಿಸಿದ್ದು, ಉಳಿದ ಅವಧಿಗೆ ವಾರ್ಡ್ ನಂ.೩೪ರ ಸದಸ್ಯೆ ಲತಾ ಚಂದ್ರಶೇಖರ್ ಅವರಿಗೆ ಬಿಟ್ಟು ಕೊಡಲಾಗಿದೆ.
ಈ ಹಿಂದೆಯೇ ಅಧಿಕಾರ ಅನುಭವಿಸಬೇಕಾಗಿದ್ದ ಲತಾ ಚಂದ್ರಶೇಖರ್ ಅವರಿಗೆ ಮೀಸಲಾತಿ ಕೊನೆ ಅವಧಿ ಅಧಿಕಾರ ಬಿಟ್ಟುಕೊಡುವುದಾಗಿ ತೀರ್ಮಾನಿಸಲಾಗಿತ್ತು. ಅದರಂತೆ ಶೃತಿ ಸಿ. ವಸಂತಕುಮಾರ್ ಕೆ.ಸಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಉಪವಿಭಾಗಾಧಿಕಾರಿ ಸತ್ಯನಾರಾಯಣ ಅವರ ನೇತೃತ್ವದಲ್ಲಿ ಚುನಾವಣೆ ನಡೆಯಿತು.
ಪ್ರಸ್ತುತ ನಗರಸಭೆಯಲ್ಲಿ ೧೮ ಕಾಂಗ್ರೆಸ್, ೧೨ ಜೆಡಿಎಸ್, ೪ ಬಿಜೆಪಿ ಹಾಗು ೧ ಪಕ್ಷೇತರ ಸದಸ್ಯರಿದ್ದಾರೆ. ಲತಾ ಚಂದ್ರಶೇಖರ್‌ರವರು ಮೂಲತಃ ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡು ಮೊದಲ ಬಾರಿಗೆ ವಾರ್ಡ್ ನಂ.೩೪ರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.
ನಗರದ ಅಭಿವೃದ್ಧಿಗೆ ಶ್ರಮಿಸಿ : ಶಾಸಕ ಬಿ.ಕೆ ಸಂಗಮೇಶ್ವರ್
ನೂತನ ಅಧ್ಯಕ್ಷೆ ಲತಾ ಚಂದ್ರಶೇಖರ್ ಅವರನ್ನು ಅಭಿನಂದಿಸಿದ ಶಾಸಕ ಬಿ.ಕೆ ಸಂಗಮೇಶ್ವರ್, ೩೦ ತಿಂಗಳ ಅಧಿಕಾರ ಹಂಚಿಕೆಯಲ್ಲಿ ಈಗಾಗಲೇ ೩ ಮಂದಿ ಮಹಿಳಾ ಸದಸ್ಯರು ಅಧ್ಯಕ್ಷರಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಹೆಚ್ಚಿನ ಸಹಕಾರ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನೂತನ ಅಧ್ಯಕ್ಷರು ಸಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರ ನೀಡಬೇಕೆಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಹಿರಿಯ ಸದಸ್ಯರಾದ ವಿ. ಕದಿರೇಶ್, ಬಿ.ಟಿ ನಾಗರಾಜ್, ಟಿಪ್ಪು ಸುಲ್ತಾನ್ ಸೇರಿದಂತೆ ಇನ್ನಿತರರು ಅಭಿನಂದಿಸಿ ಮಾತನಾಡಿದರು.
ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಹಾಗು ಸದಸ್ಯರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ನೂತನ ಅಧ್ಯಕ್ಷೆ ಲತಾ ಚಂದ್ರಶೇಖರ್ ಅವರನ್ನು ಅಭಿನಂದಿಸಿದರು.
No comments:
Post a Comment