Friday, January 26, 2024

ಸಂಗಮೇಶ್ವರ್‌ಗೆ ಎರಡನೇ ಬಾರಿಗೆ ಕೆಆರ್‌ಐಡಿಎಲ್ ಅಧ್ಯಕ್ಷ ಪಟ್ಟ

ಶಾಸಕ ಬಿ.ಕೆ ಸಂಗಮೇಶ್ವರ್
    ಭದ್ರಾವತಿ: ಶಾಸಕ ಬಿ.ಕೆ ಸಂಗಮೇಶ್ವರ್‌ಗೆ 2ನೇ ಬಾರಿಗೆ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ(ಕೆಆರ್‌ಐಡಿಎಲ್) ಅಧ್ಯಕ್ಷ ಪಟ್ಟ ಒಲಿದು ಬಂದಿದ್ದು, ಕ್ಷೇತ್ರದ ಜನತೆಯಲ್ಲಿ ಸ್ವಲ್ಪಮಟ್ಟಿಗೆ ಸಮಾಧಾನ ಉಂಟು ಮಾಡಿದೆ.  
    4 ಬಾರಿ ಕ್ಷೇತ್ರದ ಶಾಸಕರಾಗಿರುವ ಸಂಗಮೇಶ್ವರ್‌ಗೆ ಈ ಬಾರಿ ಬಹುತೇಕ ಸಚಿವ ಸ್ಥಾನ ಲಭಿಸುವ ನಿರೀಕ್ಷೆ ಇತ್ತು. ಆದರೆ ಕ್ಷೇತ್ರದ ಜನರ ನಿರೀಕ್ಷೆ ಹುಸಿಯಾಗುವ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ಕಂಡು ಬಂದಿತ್ತು. ಈ ನಡುವೆ ಸಂಗಮೇಶ್ವರ್ ಬೆಂಬಲಿಗರು, ಅಭಿಮಾನಿಗಳು ಸಚಿವ ಸ್ಥಾನ ನೀಡುವಂತೆ ನಿರಂತರವಾಗಿ ಆಗ್ರಹಿಸುತ್ತಿದ್ದರು. ಅಲ್ಲದೆ ಸಂಗಮೇಶ್ವರ್ ಸಹ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸಿದ್ದರು. ಇದೀಗ ಪುನಃ ಎರಡನೇ ಬಾರಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ(ಕೆಆರ್‌ಐಡಿಎಲ್) ಅಧ್ಯಕ್ಷ ಪಟ್ಟ ಲಭಿಸಿದೆ.
    ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಂಗಮೇಶ್ವರ್ ಪುನಃ ಆಯ್ಕೆಯಾದಲ್ಲಿ ಸಚಿವ ಸ್ಥಾನ ನೀಡುವುದಾಗಿ ಹಲವು ಬಾರಿ ಬಹಿರಂಗ ಸಭೆಗಳಲ್ಲಿ ಭರವಸೆ ನೀಡಿದ್ದರು. ಅಲ್ಲದೆ ಕಳೆದ ಸುಮಾರು 9 ವರ್ಷಗಳಿಂದ ಸ್ಥಗಿತಗೊಂಡಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಪುನರ್ ಆರಂಭಿಸುವುದಾಗಿ ಸಹ ಭರವಸೆ ನೀಡಲಾಗಿತ್ತು. ಇದೀಗ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಕ್ಷೇತ್ರದ ಜನತೆಗೆ ನೀಡಿರುವ ಒಂದು ಭರವಸೆ ಕೈತಪ್ಪಿ ಹೋಗಿದ್ದು,  ಕಾರ್ಖಾನೆ ಪುನರ್ ಆರಂಭಿಸುವ ಮೂಲಕ ಎರಡನೇ ಭರವಸೆಯನ್ನಾದರೂ ಈಡೇರಿಸಲು ಮುಂದಾಗಬೇಕಾಗಿದೆ.

No comments:

Post a Comment