ಭದ್ರಾವತಿ ತಾಲೂಕಿನ ದೊಡ್ಡೇರಿ ಕ್ಲಸ್ಟರ್ ವ್ಯಾಪ್ತಿಯ ಗಂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಳೆ ಗಂಗೂರು ವೆಂಕಣ್ಣರವರು ದೇಣಿಗೆಯಾಗಿ ನೀಡಿದ ಸೌಂಡ್ ಸಿಸ್ಟಂ ಉಪವಿಭಾಗಾಧಿಕಾರಿ ಸತ್ಯನಾರಾಯಣ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರರು ಶಾಲೆಗೆ ಹಸ್ತಾಂತರಿಸಿದರು.
ಭದ್ರಾವತಿ: ಶಾಲೆಗಳಿಗೆ ದಾನವಾಗಿ ಪಡೆದ ವಸ್ತುಗಳು ಮಕ್ಕಳ ಕಲಿಕೆಗೆ ದಾರಿ ದೀಪವಾಗಬೇಕು. ಈ ನಿಟ್ಟಿನಲ್ಲಿ ಅವುಗಳ ಸದ್ಬಳಕೆಯಾಗಬೇಕೆಂದು ಉಪವಿಭಾಗಾಧಿಕಾರಿ ಸತ್ಯನಾರಾಯಣ ಹೇಳಿದರು.
ಅವರು ತಾಲೂಕಿನ ದೊಡ್ಡೇರಿ ಕ್ಲಸ್ಟರ್ ವ್ಯಾಪ್ತಿಯ ಗಂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಳೆ ಗಂಗೂರು ವೆಂಕಣ್ಣರವರು ದೇಣಿಗೆಯಾಗಿ ನೀಡಿದ ಸೌಂಡ್ ಸಿಸ್ಟಂ ಶಾಲೆಗೆ ಹಸ್ತಾಂತರಿಸಿ ಹಾಗು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು.
ಮಕ್ಕಳು ಕಲಿಕೆಗೆ ಹೆಚ್ಚಿನ ಗಮನ ನೀಡುವ ಜೊತೆಗೆ ಶಿಕ್ಷಕರು ಹಾಗು ಪೋಷಕರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಭವಿಷ್ಯದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮಾತನಾಡಿ, ಪ್ರಸ್ತುತ ಮಕ್ಕಳ ಕಲಿಕೆ ಸರಳಗೊಳಿಸುವ ನಿಟ್ಟಿನಲ್ಲಿ ಇಲಾಖೆ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಲ್ಲದೆ ಶಿಕ್ಷಕರು ಕಲಿಕೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಾರೆ. ಈ ಹಿನ್ನಲೆಯಲ್ಲಿ ಕಲಿಕೆ ಕಷ್ಟವಾಗಲಾರದು. ಮಕ್ಕಳು ಪೋಷಕರಿಗೆ ಹೊರೆಯಾಗದಂತೆ ನಡೆದುಕೊಳ್ಳಬೇಕು. ಉತ್ತಮ ಸಹವಾಸದೊಂದಿಗೆ ಮುಂದಿನ ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನ ಹರಿಸಬೇಕೆಂದರು.
ಶಾಲೆಯ ಮುಖ್ಯ ಶಿಕ್ಷಕ ಮಂಜಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಹಳೇಯ ವಿದ್ಯಾರ್ಥಿಗಳು, ದಾನಿಗಳು, ಸಂಘ-ಸಂಸ್ಥೆಗಳು ಸಹ ಕೈಜೋಡಿಸುತ್ತಿರುವ ಪರಿಣಾಮ ಸರ್ಕಾರಿ ಶಾಲೆಗಳು ಸಹ ಸಬಲೀಕರಣಗೊಳ್ಳುತ್ತಿವೆ. ಈ ನಡುವೆ ಸಮಾಜದಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಒಲವು ಮೂಡಿಸುವ ಕಾರ್ಯ ಸಹ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಶಾಲೆಗಳ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದರು.
ಕಾವ್ಯ ಪ್ರಾರ್ಥಿಸಿ, ಶಿಕ್ಷಕಿಯರಾದ ಸವಿತಾ ಸ್ವಾಗತಿಸಿ, ಫಾತೀಮಾಬೀ ನಿರೂಪಿಸಿದರು. ಶಿಕ್ಷಕ ಕಿರಣ್ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
No comments:
Post a Comment