ಭದ್ರಾವತಿ ನಗರದಲ್ಲಿ ಶುಕ್ರವಾರ ಸಂಜೆಯಿಂದ ಧಾರಾಕಾರ ಮಳೆಯಾಗಿದ್ದು, ಚರಂಡಿಗಳಲ್ಲಿ ಕಸಕಡ್ಡಿ ಕಟ್ಟಿಕೊಂಡು ರಸ್ತೆ ಮೇಲೆ ನೀರು ಹರಿಯುತ್ತಿರುವುದು ಕಂಡು ಬಂದಿತು. ಅಲ್ಲದೆ ರಸ್ತೆ ಪಕ್ಕದ ಕೆಲವು ಮನೆಗಳಿಗೆ ಚರಂಡಿ ನೀರು ನುಗ್ಗಿದೆ.
ಭದ್ರಾವತಿ: ನಗರದಲ್ಲಿ ಶುಕ್ರವಾರ ಸಂಜೆಯಿಂದ ಧಾರಾಕಾರ ಮಳೆಯಾಗಿದ್ದು, ಇದರಿಂದಾಗಿ ಕೆಲವು ಗಂಟೆಗಳವರೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಹಳ್ಳಕೊಳ್ಳಗಳ್ಳಲ್ಲಿ ನೀರು ತುಂಬಿಕೊಂಡಿದ್ದು, ಕೆಲವು ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಚರಂಡಿಗಳಲ್ಲಿ ಕಸಕಡ್ಡಿ ಕಟ್ಟಿಕೊಂಡು ರಸ್ತೆ ಮೇಲೆ ನೀರು ಹರಿಯುತ್ತಿರುವುದು ಕಂಡು ಬಂದಿತು. ಅಲ್ಲದೆ ರಸ್ತೆ ಪಕ್ಕದ ಕೆಲವು ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಆಯುಧಪೂಜೆ ದಿನದಂದು ಮಳೆಯಾಗಿರುವುದು ಕೆಲವು ಗಂಟೆಗಳವರೆಗೆ ಹಬ್ಬದ ಸಂಭ್ರಮ ಕುಸಿಯುವಂತೆ ಮಾಡಿತು.
ವ್ಯಾಪಾರ ವಹಿವಾಟು ಸ್ಥಗಿತ :
ಸಂಜೆ ಏಕಾಏಕಿ ಧಾರಕಾರವಾಗಿ ಮಳೆಯಾದ ಹಿನ್ನಲೆಯಲ್ಲಿ ಹೂ-ಹಣ್ಣು, ತರಕಾರಿ ವ್ಯಾಪಾರಸ್ಥರು, ಬೀದಿಬದಿ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ನಗರದ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ, ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದ ಭರ್ಜರಿ ವ್ಯಾಪಾರ ವಹಿವಾಟು ನಡೆದಿದ್ದು, ಸಂಜೆ ಧಾರಾಕಾರ ಮಳೆಯಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತು. ಜನರು ಮನೆಯಿಂದ ಹೊರಬಾರದೆ ಮನೆಗಳಲ್ಲಿ ಉಳಿದುಕೊಂಡಿದ್ದು, ಹೆಚ್ಚಿನ ವ್ಯಾಪಾರ ವಹವಾಟಿನ ನಿರೀಕ್ಷೆ ಹೊಂದಿದ್ದ ವ್ಯಾಪಾರಸ್ಥರು ಹಾಗು ವರ್ತಕರಲ್ಲಿ ನಿರಾಸೆ ಉಂಟು ಮಾಡಿತು.
ರಾತ್ರಿ ಕತ್ತಲಿನಲ್ಲಿ ಕಳೆದ ಜನರು :
ಧಾರಕಾರ ಮಳೆ ಹಿನ್ನಲೆಯಲ್ಲಿ ಸಂಜೆ ವಿದ್ಯುತ್ ಸ್ಥಗಿತಗೊಂಡಿದ್ದು, ಮಧ್ಯರಾತ್ರಿವರೆಗೂ ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಯಿತು. ಅಲ್ಲಲ್ಲಿ ಸಣ್ಣಪುಟ್ಟ ವಿದ್ಯುತ್ ಸಮಸ್ಯೆಗಳು ಕಂಡು ಬಂದಿದ್ದು, ಶನಿವಾರ ಬೆಳಿಗ್ಗೆ ಕೆಲವು ತಾಸು ವಿದ್ಯುತ್ ವ್ಯತ್ಯಯ ಉಂಟಾಯಿತು. ಮೆಸ್ಕಾಂ ಸಿಬ್ಬಂದಿಗಳು ರಾತ್ರಿಯಿಂದಲೇ ಸಣ್ಣಪುಟ್ಟ ವಿದ್ಯುತ್ ಸಮಸ್ಯೆಗಳನ್ನು ಸರಿಪಡಿಸಿದರು.
No comments:
Post a Comment