Saturday, February 15, 2025

ಭದ್ರಾವತಿ ನಗರಸಭೆ ಅಧ್ಯಕ್ಷರಾಗಿ ಪುನಃ ಗೀತಾ ರಾಜ್‌ಕುಮಾರ್

ಈ ಹಿಂದೆ ಭದ್ರಾವತಿ ನಗರಸಭೆಯ ಮೀಸಲಾತಿಯ ಮೊದಲ ಅವಧಿಗೆ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದ ಗೀತಾ ರಾಜ್‌ಕುಮಾರ್ ಶನಿವಾರ ನಡೆದ ಚುನಾವಣೆಯಲ್ಲಿ ಪುನಃ ಮೀಸಲಾತಿಯ ಎರಡನೇ ಅವಧಿಯ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು. 
    ಭದ್ರಾವತಿ :  ಈ ಹಿಂದೆ ನಗರಸಭೆಯ ಮೀಸಲಾತಿಯ ಮೊದಲ ಅವಧಿಗೆ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದ ಗೀತಾ ರಾಜ್‌ಕುಮಾರ್ ಶನಿವಾರ ನಡೆದ ಚುನಾವಣೆಯಲ್ಲಿ ಪುನಃ ಮೀಸಲಾತಿಯ ಎರಡನೇ ಅವಧಿಯ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು. 
     ಚುನಾವಣಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಜಿ.ಎಚ್ ಸತ್ಯನಾರಾಯಣರವರು ಗೀತಾ ರಾಜ್ ಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಮಧ್ಯಾಹ್ನ ೧.೩೦ಕ್ಕೆ ಘೋಷಿಸಿದರು. ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್ ಉಪಸ್ಥಿತರಿದ್ದರು. 
ಚುನಾವಣೆಯಲ್ಲಿ ಕಾಂಗ್ರೆಸ್-೧೮, ಜೆಡಿಎಸ್-೪, ಬಿಜೆಪಿ-೩ ಮತ್ತು ಪಕ್ಷೇತರ-೧ ಸದಸ್ಯ ಸೇರಿದಂತೆ ಒಟ್ಟು ೨೬ ಸದಸ್ಯರು ಹಾಗು ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು ಸೇರಿ ಒಟ್ಟು ೨೭ ಮಂದಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.  
     ೩೫ ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚಿನ ಸದಸ್ಯರನ್ನು ಹೊಂದುವ ಮೂಲಕ ಅಧಿಕಾರದ ಗದ್ದುಗೆ ಹಿಡಿದಿದೆ. ಮೊದಲ ಅವಧಿಯ ೩೦ ತಿಂಗಳಿಗೆ  ಅಧಿಕಾರ ಹಂಚಿಕೆ ಮಾಡಿಕೊಂಡು ಗೀತಾ ರಾಜ್‌ಕುಮಾರ್, ಅನುಸುಧಾ ಮೋಹನ್ ಪಳನಿ, ಶೃತಿ ವಸಂತಕುಮಾರ್ ಮತ್ತು ಲತಾ ಚಂದ್ರಶೇಖರ್ ಒಟ್ಟು ೪ ಮಹಿಳೆಯರು ಅಧಿಕಾರ ಅನುಭವಿಸಿದ್ದರು. ೨ನೇ ಅವಧಿಗೆ ಮೀಸಲಾತಿ ಘೋಷಣೆ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನದ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಈ ಹಿನ್ನಲೆಯಲ್ಲಿ ಉಪಾಧ್ಯಕ್ಷ ಸ್ಥಾನದ ಚುನಾವಣೆ ಮಾತ್ರ ನಡೆದು ಎಂ. ಮಣಿ ಎಎನ್‌ಎಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ಇವರನ್ನು ಪ್ರಭಾರ ಅಧ್ಯಕ್ಷರಾಗಿ ನಿಯೋಜನೆಗೊಳಿಸಲಾಗಿತ್ತು.  ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆರವುಗೊಂಡ ಹಿನ್ನಲೆಯಲ್ಲಿ ಚುನಾವಣೆ ಘೋಷಣೆಯಾಗಿತ್ತು.
    ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಬಿಜೆಪಿ-ಜೆಡಿಎಸ್ ಸದಸ್ಯರು: 
    ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದ ಪ್ರೇಮ ಬದರಿನಾರಾಯಣ, ಬಸವರಾಜ ಬಿ ಆನೇಕೊಪ್ಪ, ಪಲ್ಲವಿ ದಿಲೀಪ್ ಮತ್ತು ಕೋಟೇಶ್ವರರಾವ್ ಹಾಗು ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದ ವಿ. ಕದಿರೇಶ್, ಅನಿತಾ ಮಲ್ಲೇಶ್ ಮತ್ತು ಶಶಿಕಲಾ ನಾರಾಯಣಪ್ಪರವರು ಇತ್ತೀಚಿಗೆ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಈ ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. 
    ಪಟಾಕಿ ಸಿಡಿಸಿ ಸಂಭ್ರಮಾಚರಣೆ: 
    ಚುನಾವಣಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಜಿ.ಎಚ್ ಸತ್ಯನಾರಾಯಣರವರು ಗೀತಾ ರಾಜ್ ಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಘೋಷಣೆ ಮಾಡುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ನಗರಸಭೆ ಮುಂಭಾಗ ಕಾಂಗ್ರೆಸ್ ಧ್ವಜ ಹಿಡಿದು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. 
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷೆ ಗೀತಾ ರಾಜ್‌ಕುಮಾರ್‌ಗೆ ವಿಡಿಯೋ ಕರೆ ಮೂಲಕ ಮೊಬೈಲ್‌ನಲ್ಲಿಯೇ ಶುಭ ಕೋರಿದರು. ಉಳಿದಂತೆ ವಿಧಾನಪರಿಷತ್ ಸದಸ್ಯೆ ಬಲ್ಕೀಷ್ ಬಾನು, ನಗರಸಭೆ ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್ ಸೇರಿದಂತೆ ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಗೀತಾ ರಾಜ್‌ಕುಮಾರನ್ನು ಅಭಿನಂದಿಸಿದರು. 
    ಗೀತಾ ರಾಜ್‌ಕುಮಾರ್ : 
    ವಾರ್ಡ್ ನಂ.೨ರ ಸದಸ್ಯೆಯಾಗಿರುವ ಗೀತಾರಾಜ್‌ಕುಮಾರ್‌ರವರು ಮೊದಲ ಬಾರಿಗೆ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ವಿಶೇಷತೆ ಎಂದರೆ ಮೊದಲ ಅವಧಿಯಲ್ಲಿಯೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ೨ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಒಂದೇ ಬಾರಿ ೨ ಅವಧಿಯ ಅಧ್ಯಕ್ಷರಾಗಿರುವ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 


ಗೀತಾ ರಾಜ್‌ಕುಮಾರ್ 
    ಗೀತಾರವರ ಪತಿ ಕೆ.ಜಿ ರಾಜ್‌ಕುಮಾರ್‌ರವರ ಕುಟುಂಬ ಕ್ಷೇತ್ರದಲ್ಲಿ ಚಿರಪರಿಚಿತವಾಗಿದ್ದು, ಕಡದಕಟ್ಟೆ ಬಳಿ ವಿದ್ಯಾಸಂಸ್ಥೆ ನಿರ್ಮಾಣದ ಜೊತೆಗೆ ಆನೇಕ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಪ್ರತಿಷ್ಠಿತ ಕುಟುಂಬವಾಗಿದೆ. ರಾಜ್‌ಕುಮಾರ್‌ರವರ ತಂದೆ ರಾಮನಗೌಡ್ರು ಮೂಲತಃ ಕಾಂಗ್ರೆಸ್ ಪಕ್ಷದವರಾಗಿದ್ದು, ತಾಲೂಕು ಬೋರ್ಡ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ತದ ನಂತರ ಈ ಕುಟುಂಬದ ಯಾರೊಬ್ಬರೂ ಸಹ ರಾಜಕೀಯದ ಕಡೆ ಗಮನ ಹರಿಸಿರಲಿಲ್ಲ. ಹಲವಾರು ಬಾರಿ ಅವಕಾಶಗಳು ಲಭಿಸಿದರೂ ಸಹ ರಾಜಕೀಯದಿಂದ ಅಂತರ ಕಾಯ್ದುಕೊಂಡಿತ್ತು. ನಗರಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಸ್ಥಳೀಯರಿಂದ ಹೆಚ್ಚಿನ ಒತ್ತಡಗಳು ಬಂದ ಹಿನ್ನಲೆಯಲ್ಲಿ ಹಾಗು ರಾಮನಗೌಡ್ರುರವರ ರಾಜಕಾರಣಕ್ಕೆ ಪುನಃ ಮರುಜೀವ ನೀಡಬೇಕೆಂಬ ಆಶಯದೊಂದಿಗೆ ಗೀತಾರವರು ಕಣಕ್ಕಿಳಿಯುವುದು ಅನಿವಾರ್ಯವಾಯಿತು. ಇದಕ್ಕೆ ಪೂರಕವೆಂಬಂತೆ ಗೀತಾರವರು ಗೆಲುವು ಸಾಧಿಸುವ ಜೊತೆಗೆ ೨ ಬಾರಿ ಅಧ್ಯಕ್ಷರಾಗಿ ಮುನ್ನಡೆಯುತ್ತಿದ್ದಾರೆ.  

1 comment: