Monday, April 28, 2025

ಅನಿರೀಕ್ಷಿತ ಮಳೆಗೆ ಕುಸಿದು ಬಿದ್ದ ಮನೆಯ ಗೋಡೆ

ಭದ್ರಾವತಿ ಹಳೇನಗರದ ಭೂತನಗುಡಿಯಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ಮನೆಯೊಂದರ ಗೊಡೆ ಕುಸಿದು ಬಿದ್ದಿರುವುದು.
    ಭದ್ರಾವತಿ : ಕೆಲವು ದಿನಗಳಿಂದ ಅನಿರೀಕ್ಷಿತ ಗಾಳಿ ಮಳೆಗೆ ಒಂದೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ಬಿದ್ದಿರುವ ಘಟನೆಗಳು ನಡೆದಿವೆ. ಮತ್ತೊಂದೆಡೆ ಮನೆಯ ಗೋಡೆಗಳು ಕುಸಿದು ಬಿದ್ದಿದ್ದು, ಭಾನುವಾರ ರಾತ್ರಿ ಸುರಿದ ಮಳೆಗೆ ನಗರಸಭೆ ವ್ಯಾಪ್ತಿಯ ಭೂತನಗುಡಿಯಲ್ಲಿ ಮನೆಯೊಂದರ ಗೋಡೆ ಕುಸಿದು ಬಿದ್ದಿದೆ.  
    ನಗರಸಭೆ ಕಛೇರಿ ಹಿಂಭಾಗದ ವಾರ್ಡ್.೧೩ರ ಭೂತನಗುಡಿ ಶ್ರೀ ಶನೇಶ್ಷರ ಸ್ವಾಮಿ ದೇವಸ್ಥಾನದ ಪಕ್ಕದ ರಸ್ತೆಯಲ್ಲಿರುವ ಪ್ರಶಾಂತ್ ಎಂಬುವವರ ಮನೆ ಗೋಡೆ ಕುಸಿದು ಬಿದ್ದದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ರಾತ್ರಿ ಸುಮಾರು ೧ ತಾಸು ಸುರಿದ ಮಳೆಯಿಂದಾಗಿ ಮನೆಯ ಗೋಡೆ ಶಿಥಿಲಗೊಂಡು ಬಿದ್ದಿದೆ. 
    ಘಟನೆ ಸಂಬಂಧ ಮಾಹಿತಿ ನೀಡಿದರೂ ಸಹ ನಗರಸಭೆ ಅಧಿಕಾರಿಗಳಾಗಲಿ, ತಾಲೂಕು ಆಡಳಿತದ ಅಧಿಕಾರಿಗಳಾಗಲಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ. 
    ವಾರ್ಡ್ ಸದಸ್ಯೆ ಅನುಸುಧಾಮೋಹನ್ ಈ ವಿಚಾರ ಶಾಸಕರ ಗಮನಕ್ಕೂ ತಂದಿದ್ದಾರೆ. ಪ್ರಶಾಂತ್ ಟೈಲರ್ ವೃತ್ತಿ ನಡೆಸುತ್ತಿದ್ದು, ಈ ಮನೆಯಲ್ಲಿ ೩-೪ ಮಂದಿ ವಾಸವಿದ್ದಾರೆ. ಮನೆ ಗೋಡೆಯನ್ನು ತಕ್ಷಣ ದುರಸ್ತಿಗೊಳಿಸುವ ಕಾರ್ಯ ಕೈಗೊಳ್ಳಬೇಕಾಗಿದೆ.   

No comments:

Post a Comment