Thursday, July 10, 2025

ಮುಂಗಾರು ಮಳೆಯಿಂದ ನಗರಸಭೆ ವಾರ್ಡ್‌ಗಳಲ್ಲಿ ಸಮಸ್ಯೆಗಳು ಉಲ್ಬಣ

ಹಾಜರಿರಬೇಕಿದ್ದ ಅಧಿಕಾರಿಗಳೇ ಇಲ್ಲದ ಕಾರಣ ಸಾಮಾನ್ಯಸಭೆ ಮುಂದೂಡಿಕೆ  

ಭದ್ರಾವತಿ ನಗರಸಭೆ ಸಾಮಾನ್ಯ ಸಭೆ ಗುರುವಾರ ಪ್ರಮುಖ ಅಧಿಕಾರಿಗಳು ಸಭೆಗೆ ಬಾರದ ಹಿನ್ನಲೆಯಲ್ಲಿ ಮುಂದೂಡಿಕೆಯಾಗಿದ್ದು, ಸಭೆ ಆರಂಭಗೊಳ್ಳುವ ಮೊದಲು ಸದಸ್ಯರು ಕೆಲವು ವಿಚಾರಗಳ ಕುರಿತು ಚರ್ಚಿಸಿದರು.
    ಭದ್ರಾವತಿ: ಮುಂಗಾರು ಮಳೆಯಿಂದ ನಗರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದು, ಪ್ರಮುಖ ರಸ್ತೆಗಳು, ಚರಂಡಿಗಳು ಹಾಳಾಗಿದ್ದು, ಅಲ್ಲದೆ ಮನೆಗಳು ಶಿಥಿಲಗೊಂಡು ಹಾನಿಗೊಳಗಾಗಿವೆ. ವಾರ್ಡ್‌ಗಳಲ್ಲಿ ಸಮಸ್ಯೆಗಳು ಉಲ್ಬಣಗೊಳ್ಳುತ್ತಿದ್ದು, ಸದಸ್ಯರು ನಿವಾಸಿಗಳ ಹಿಡಿ ಶಾಪಕ್ಕೆ ಗುರಿಯಾಗುತ್ತಿದ್ದಾರೆ. ಮುಂಗಾರು ಮಳೆ  ಆರಂಭಗೊಂಡ ನಂತರ ನಡೆಯುತ್ತಿರುವ ಮೊದಲ ಸಾಮಾನ್ಯ ಸಭೆಗೆ ಹಾಜರಿರಬೇಕಿದ್ದ ತಹಸೀಲ್ದಾರ್ ಸೇರಿದಂತೆ ಪ್ರಮುಖ ಇಲಾಖೆಗಳ ಹಿರಿಯ ಅಧಿಕಾರಿಗಳೇ ಇಲ್ಲದಿರುವುದು ಗುರುವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಅಲ್ಲದೆ ಇದೆ ಕಾರಣಕ್ಕೆ ಸಭೆ ಮುಂದೂಡುವಂತಾಯಿತು. 
    ನಗರಸಭೆ ಸಭಾಂಗಣದಲ್ಲಿ ಬೆಳಿಗ್ಗೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಸಭೆಯಲ್ಲಿ ಮಾತನಾಡಿದ ಹಿರಿಯ ಸದಸ್ಯ ಬಿ.ಕೆ ಮೋಹನ್, ೨೮ ಸರ್ಕಾರಿ ಇಲಾಖೆಗಳಿಗೆ ಸಾಮಾನ್ಯಸಭೆಗೆ ಆಗಮಿಸುವಂತೆ ತಿಳುವಳಿಕೆ ಪತ್ರ ತಲುಪಿಸಲಾಗಿದ್ದರೂ ಸಹ ಪ್ರಮುಖ ಇಲಾಖೆಗಳ ಜವಾಬ್ದಾರಿ ಸ್ಥಾನ ಹೊಂದಿರುವ ಹಿರಿಯ ಅಧಿಕಾರಿಗಳು ಗೈರು ಹಾಜರಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಅಲ್ಲದೆ ಕೆಲವು ಕಚೇರಿಯ ಅಧಿಕಾರಿಗಳು ಸಭೆಗೆ ಪ್ರತಿ ಬಾರಿಯೂ ಆಗಮಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸಭೆ ಮುಂದೂಡುವಂತೆ ಆಗ್ರಹಿಸಿದರು. 
    ನಗರದ ಪ್ರಮುಖ ರಸ್ತೆಗಳು ಗುಂಡಿಗಳಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಮಸ್ಯೆ ಪರಿಹರಿಸಬೇಕಾದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಸಭೆಗೆ ಗೈರು ಹಾಜರಾಗಿದ್ದಾರೆ. ಇದೀಗ ಸಭೆ ನಡೆಸುವುದು ಬೇಡ. ಅಧಿಕಾರಿಗಳು ಬರಲಿ ಎಂದು ಬಿ.ಕೆ ಮೋಹನ್ ಪಟ್ಟು ಹಿಡಿದಾಗ ಆಯುಕ್ತರು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ನಗರಸಭೆ ಸಭೆಗೆ ಆಗಮಿಸುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.
    ತಾಲೂಕಿನಾದ್ಯಂತ ಹೆಚ್ಚಿನ ಮಳೆ ಸುರಿಯುತ್ತಿರುವ ಕಾರಣ ನದಿ ಪಾತ್ರದ ಮನೆಗಳು ಸೇರಿದಂತೆ ನಗರಸಭೆ ವ್ಯಾಪ್ತಿಯ ಅನೇಕ ಮನೆಗಳಿಗೆ ಹಾನಿಯಾಗುತ್ತಿದೆ.  ಆದರೆ ಇದಕ್ಕೆ ಪರಿಹಾರ ಸೂಚಿಸಬೇಕಾಗಿರುವ ತಹಶೀಲ್ದಾರ್‌ರವರು ಸಭೆಗೆ ಗೈರು ಹಾಜರಾಗಿರುವ ಕಾರಣ ಮಾಹಿತಿಯನ್ನು ಯಾರ ಬಳಿ ಪಡೆಯಬೇಕು ಎಂದು ಚನ್ನಪ್ಪ ಹಾಗೂ ಟಿಪ್ಪುಸುಲ್ತಾನ್ ಸೇರಿದಂತೆ ಹಲವು ಸದಸ್ಯರು ಪ್ರಶ್ನಿಸಿದರು. ಅಲ್ಲದೆ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಇದುವರೆಗೂ ಯಾವುದೇ ಸಬೆsಗಳಿಗೆ ಹಾಜರಾಗದೆ ನಿರ್ಲಕ್ಷ್ಯ ತಾಳಿರುವುದನ್ನು ತೀವ್ರವಾಗಿ ಖಂಡಿಸಿದರು. 
    ತಹಶೀಲ್ದಾರ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಹೈವೇ)ದ ಇಂಜಿನಿಯರ್ ಸೇರಿದಂತೆ ಗೈರು ಹಾಜರಾಗಿರುವ ಪ್ರಮುಖ ಇಲಾಖೆಗಳ ಅಧಿಕಾರಿಗಳನ್ನು ಸಭೆಗೆ ಕರೆಸಬೇಕು. ಅಧಿಕಾರಿಗಳು ಬರುವವರೆಗೂ ಸಾಮಾನ್ಯ ಸಭೆಯನ್ನು ಮುಂದೂಡಬೇಕೆಂದು ಆಡಳಿತ ಪಕ್ಷದವರು ಸೇರಿದಂತೆ ಪಕ್ಷಭೇದ ಮರೆತು ಎಲ್ಲಾ ಸದಸ್ಯರು ಆಗ್ರಹಿಸಿ ಸಭೆಯಿಂದ ಹೊರ ನಡೆದರು.
    ಸಭೆ ಆರಂಭಕ್ಕೂ ಮೊದಲು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಸ್ಮಶಾನದ ಜಾಗವನ್ನು ಪಡೆದಾಗ ರಸ್ತೆ ಒತ್ತುವರಿ ಸಂದರ್ಭದಲ್ಲಿ ಸ್ಮಶಾನದ ಜಾಗದಲ್ಲಿದ್ದ ಗೇಟ್ ತೆರವುಗೊಳಿಸಲಾಗಿದ್ದು,  ಆದರೆ ಇದುವರೆಗೂ ಗೇಟ್ ಅಳವಡಿಸಿದ ಕಾರಣ ಸ್ಮಶಾನವು ಆಕ್ರಮ ದಂಧೆಗಳ ತಾಣವಾಗುತ್ತಿದೆ ಎಂದು ಸದಸ್ಯ ಉದಯ್ ಕುಮಾರ್ ಆರೋಪಿಸಿ, ಕೂಡಲೇ ಗೇಟ್ ಅಳವಡಿಸಿ ಸಮಸ್ಯೆಯನ್ನು ಸರಿಪಡಿಸಿ ಕೊಡಬೇಕೆಂದು ಒತ್ತಾಯಿಸಿದರು.
ನಗರದ ರುದ್ರಭೂಮಿ ಕಾವಲುಗಾರರ ಬಗ್ಗೆ ವಿಷಯ ಸ್ತಾಪಿಸಿ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಸ್ಮಶಾನಗಳಲ್ಲಿ ಕಳ್ಳತನಗಳು ಆಗುತ್ತಿವೆ. ಅದನ್ನು ತಡೆಗಟ್ಟಲು ನಗರಸಭೆಯಿಂದ ಯಾವುದೇ  ಕ್ರಮ  ಕೈಗೊಂಡಿಲ್ಲ ಎಂದು ಆರೋಪಿಸಿದರು. ಕಾವಲುಗಾರರಿಗೆ ವೇತನ ನೀಡಲು ಯಾವ ಸದಸ್ಯರ ವಿರೋದsವಿಲ್ಲ. ಆದರೆ ಸ್ಮಶಾನದಲ್ಲಿನ ಕಳ್ಳತನ ಎಲ್ಲಾ ಸದಸ್ಯರಿಗೂ ಬೇಸರವಿದೆ ಎಂದರು. 
ಪರಿಸರ ಅಭಿಯಂತರ ಪ್ರಭಾಕರ್ ಮಾತನಾಡಿ, ರಾತ್ರಿಯಲ್ಲಿ ಶವ ಸುಡುವ ಪ್ಲೇಟ್‌ಗಳನ್ನು ಕಳ್ಳತನ ಮಾಡುತ್ತಿದ್ದಾರೆ ಎಂದು ಸಭೆಗೆ ತಿಳಿಸಿದರು. ಕೂಡಲೇ ನಗರಸಭೆ ವ್ಯಾಪ್ತಿಯ ಎಲ್ಲಾ ರುದ್ರಭೂಮಿಗಳಲ್ಲಿ ಸಿ.ಸಿ ಕ್ಯಾಮರಗಳನ್ನು ಅಳವಡಿಸಿ ಎಂದು ಬಿ.ಕೆ ಮೋಹನ್ ಸಲಹೆ ವ್ಯಕ್ತಪಡಿಸಿದರು. 
ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್,  ಸ್ಥಾಯಿಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೊಲೀಸ್ ನಗರವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್ ಉಪಸ್ಥಿತರಿದ್ದರು.

No comments:

Post a Comment