ಬುಧವಾರ, ಜುಲೈ 16, 2025

ಭದ್ರಾ ನದಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ ೫೦ ಕೋ. ರು. ಅನುದಾನ

ಜಲಸಂಪನ್ಮೂಲ ಇಲಾಖೆಯಿಂದ ಆಡಳಿತಾತ್ಮಕ ಅನುಮೋದನೆ 

ಭದ್ರಾವತಿ ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾ ನದಿ
    ಭದ್ರಾವತಿ: ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾ ನದಿಯ ಎಡ ಮತ್ತು ಬಲ ದಂಡೆಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳನ್ನು ರಕ್ಷಿಸಲು ತಡೆಗೋಡೆ ನಿರ್ಮಿಸಲು ೫೦ ಕೋ. ರು. ಅನುದಾನ ಬಿಡುಗಡೆಗೊಳಿಸಲಾಗಿದ್ದು, ಈ ಸಂಬಂಧ ಜಲಸಂಪನ್ಮೂಲ ಇಲಾಖೆ ವಿಶೇಷ ಕರ್ತವ್ಯಾಧಿಕಾರಿ ಕೆ. ಶುಭಾ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿದ್ದಾರೆ. 
ಜು.೨ರ ಸಚಿವ ಸಂಪುಟ ಸಭೆಯ ನಿರ್ಣಯದಂತೆ ೫೦ ಕೋ.ರು. ಅಂದಾಜು ಮೊತ್ತದಲ್ಲಿ (೨೦೨೩-೨೪ನೇ ಸಾಲಿನ ಏಕರೂಪ ದರಪಟ್ಟಿಯನ್ವಯ) ತಡೆಗೋಡೆ ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
    ನಗರದ ಹೃದಯ ಭಾಗದಲ್ಲಿ ಭದ್ರಾ ನದಿ ೩ ಕಿ.ಮೀ ಹರಿಯುತ್ತಿದ್ದು, ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಟ್ಟಾಗ ಹಲವಾರು ವರ್ಷಗಳಿಂದ ನದಿಯ ಎಡ ಮತ್ತು ಬಲ ಭಾಗದಲ್ಲಿರುವ ಅಂಬೇಡ್ಕರ್ ಕಾಲೋನಿ, ಗೌಳಿಗರ ಬೀದಿ, ಚಾಮೇಗೌಡ ಏರಿಯಾ, ಗುಂಡೂರಾವ್ ಶೆಡ್ ಮತ್ತು ಯಕಿನ್ಸಾ ಕಾಲೋನಿಗಳಲ್ಲಿ ವಾಸಿಸುತ್ತಿರುವ ಮನೆಗಳಿಗೆ ನೀರು ನುಗ್ಗಿ ಮನೆಗಳಿಗೆ ಹಾನಿ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ನದಿಯ ಎರಡು ಬದಿಯಲ್ಲಿ ತಡೆಗೋಡೆ ನಿರ್ಮಿಸುವಂತೆ ಬಹಳ ವರ್ಷಗಳಿಂದ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ನಿರಂತರ ಪ್ರಯತ್ನದ ಫಲವಾಗಿ ಇದೀಗ ಬೇಡಿಕೆ ಈಡೇರಿದ್ದು, ಮಳೆಗಾಲ ಮುಕ್ತಾಯಗೊಂಡ ನಂತರ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಇದೆ. 
    ಗೌಳಿಗರ ಬೀದಿಯಲ್ಲಿ ೪೦೦ ಮೀ., ಚಾಮೇಗೌಡ ಏರಿಯಾದಲ್ಲಿ ೪೦೦ ಮೀ., ಯಕಿನ್ಸಾ ಕಾಲೋನಿಯಲ್ಲಿ ೧೨೫ ಮೀ. ಮತ್ತು ಗುಂಡೂರಾವ್ ಶೆಡ್‌ನಲ್ಲಿ ೧೯೦ ಮೀ. ಸೇರಿದಂತೆ ಒಟ್ಟು ೧೧೧೫ ಮೀ. ತಡೆಗೋಡೆ ನಿರ್ಮಿಸಲಾಗುತ್ತಿದೆ.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ