ಶನಿವಾರ, ಜುಲೈ 26, 2025

ಹುಟ್ಟುಹಬ್ಬದ ಶುಭಾಶಯ ಕೋರಿ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ

ಭದ್ರಾವತಿ ಜನ್ನಾಪುರ ಶ್ರೀ ಡಿ. ದೇವರಾಜ ಅರಸು ಜನಸ್ಪಂದನಾ ಸೇವಾ ಟ್ರಸ್ಟ್ ವತಿಯಿಂದ ವಿಧಾನಪರಿಷತ್ ಸದಸ್ಯೆ ಬಲ್ಕೀಶ್‌ಬಾನುರವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಜೊತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ : ಜನ್ನಾಪುರ ಶ್ರೀ ಡಿ. ದೇವರಾಜ ಅರಸು ಜನಸ್ಪಂದನಾ ಸೇವಾ ಟ್ರಸ್ಟ್ ವತಿಯಿಂದ ವಿಧಾನಪರಿಷತ್ ಸದಸ್ಯೆ ಬಲ್ಕೀಶ್‌ಬಾನುರವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಜೊತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. 
    ಟ್ರಸ್ಟ್ ಛೇರ್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್‌ರವರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಹೋರಾಟ ಪ್ರಾರಂಭಿಸಿ ಜನವರಿ, ೨೦೨೭ಕ್ಕೆ ೫೦ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಸರ್ಕಾರದ ಸಹಕಾರದಿಂದ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಣತೊಟ್ಟಿರುವುದರಿಂದ ಪ್ರಾಥಮಿಕ ಹಂತವಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗಿದೆ. 
    ಭದ್ರಾ ಜಲಾಶಯದ ಮುಂಭಾಗದಲ್ಲಿ ಖಾಲಿ ಇರುವ ನೂರಾರು ಎಕರೆ ವಿಶಾಲವಾದ ಖಾಲಿ ಜಾಗದಲ್ಲಿ ಕೆ.ಆರ್.ಎಸ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಆಕರ್ಷಣೀಯ ಪ್ರವಾಸಿಗರ ತಾಣವನ್ನಾಗಿ ಮಾಡುವುದು. ಆರಳಿಕೊಪ್ಪ ಗ್ರಾಮಪಂಚಾಯತಿ ವ್ಯಾಪ್ತಿ ಗೊಂದಿ ಗ್ರಾಮದಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಸಮೀಪವಿರುವ ಖಾಲಿ ಜಾಗದಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವುದು. ಗೊಂದಿ ಅಣೆಕಟ್ಟಿಯಲ್ಲಿ ತಡೆಗೋಡೆ ಹಾಗೂ ಚೈನ್‌ಲಿಂಕ್ ಮೆಸ್ ಇಲ್ಲದೇ ಪ್ರವಾಸಿಗರು ಅಪ್ಪಿತಪ್ಪಿ ಆಣೆಕಟ್ಟು ಕೆಳಗೆ ಬಿದ್ದು ಸಾವು ಸಂಭವಿಸುವ ಸಂಭವವಿರುವುದರಿಂದ ಇದನ್ನು ತಡೆಗಟ್ಟಲು ಹಾಗೂ ಸೂಕ್ತ ರಕ್ಷಣೆ ಒದಗಿಸಲು ಗೊಂದಿ ಆಣೆಕಟ್ಟು ಸುತ್ತಲೂ ಚೈನ್ ಲಿಂಕ್ ಕಲ್ಪಿಸುವುದು. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲಾ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಮಾಡುವುದು. ಗೊಂದಿ ಅಣೆಕಟ್ಟೆಯಿಂದ ಕಡಗುಂಚಿ ಗ್ರಾಮದವರೆಗೆ ತುಂಗಾ ಅಣೆಕಟ್ಟಿನಲ್ಲಿ ಹೂಳು ತೆಗೆಯುವುದು ಹಾಗೂ ತುಂಗಾ ಅಣೆಕಟ್ಟಿನಲ್ಲಿರುವ ಹೂಳು ತೆಗೆಯಲು ಸರ್ಕಾರದಿಂದ ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸುವಂತೆ ಮನವಿಯಲ್ಲಿ ಕೋರಲಾಗಿದೆ. 
    ಟ್ರಸ್ಟ್ ಗೌರವಾಧ್ಯಕ್ಷ ವಿಶ್ವೇಶ್ವರರಾವ್, ಸಂಚಾಲಕ ಎಂ.ವಿ ಚಂದ್ರಶೇಖರ್ ಹಾಗು ಮೊಹಮ್ಮದ್ ರಫಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ