ವೈಭವ ಕಣ್ತುಬ್ಬಿಕೊಳ್ಳಲು ಜಲಾಶಯದ ಬಳಿ ಜನಸಾಗರ, ನದಿಪಾತ್ರದ ಜನರಿಗೆ ಎಚ್ಚರಿಕೆ
ಭದ್ರಾವತಿ ತಾಲೂಕಿನ ಜೀವನದಿ ಭದ್ರಾ ನದಿ ಜಲಾಶಯ ಭರ್ತಿಯಾಗಲು ಇನ್ನೂ ೧೦ ಅಡಿ ಬಾಕಿ ಉಳಿದಿದ್ದು, ಈ ನಡುವೆ ಶುಕ್ರವಾರ ಸಂಜೆಯಿಂದ ಸುಮಾರು ೩,೫೦೦ ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ.
ಭದ್ರಾವತಿ: ತಾಲೂಕಿನ ಜೀವನದಿ ಭದ್ರಾ ನದಿ ಜಲಾಶಯ ಭರ್ತಿಯಾಗಲು ಇನ್ನೂ ೧೦ ಅಡಿ ಬಾಕಿ ಉಳಿದಿದ್ದು, ಈ ನಡುವೆ ಶುಕ್ರವಾರ ಸಂಜೆಯಿಂದ ಸುಮಾರು ೩,೫೦೦ ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ.
೧೮೬ ಅಡಿ ಸಾಮಥ್ಯದ ಜಲಾಶಯದಲ್ಲಿ ಪ್ರಸ್ತುತ ೧೭೪.೭ ಅಡಿ ನೀರು ಸಂಗ್ರಹವಾಗಿದೆ. ಸುಮಾರು ೧೨ ಸಾವಿರ ಕ್ಯೂಸೆಕ್ ನೀರು ಒಳಹರಿವಿದ್ದು, ೩,೫೦೦ ಕ್ಯೂಸೆಕ್ ನೀರಿನಲ್ಲಿ ೧,೩೦೦ ಕ್ಯೂಸೆಕ್ ನೀರನ್ನು ೪ ಕ್ರಸ್ಟ್ ಗೇಟ್‌ಗಳ ಮೂಲಕ ಹಾಗು ಉಳಿದ ೨,೨೦೦ ಕ್ಯೂಸೆಕ್ ನೀರು ರಿವರ್ ಬೆಡ್ ಮೂಲಕ ನದಿಗೆ ಬಿಡಲಾಗುತ್ತಿದೆ. ಕಳೆದ ವರ್ಷ ಇದೆ ದಿನ ೧೩೬ ಅಡಿ ನೀರು ಸಂಗ್ರಹವಾಗಿತ್ತು.
ಜಲಾಶಯದ ವೈಭವ ಕಣ್ತುಬ್ಬಿಕೊಳ್ಳಲು ಹರಿದು ಬರುತ್ತಿರುವ ಜನಸಾಗರ :
ಜಲಾಶಯದಿಂದ ನದಿಗೆ ನೀರು ಹರಿಸಿದಾಗ ಹಾಲ್ನೊರೆಯಂತೆ ಧುಮುಕುವ ನೀರಿನ ವೈಭವ ಕಣ್ತುಬ್ಬಿಕೊಳ್ಳಲು ಪ್ರತಿ ವರ್ಷ ಜಲಾಶಯದ ಬಳಿ ಜನಸಾಗರ ಹರಿದು ಬರುತ್ತಿದ್ದು, ಈ ಬಾರಿ ಸಹ ಜನರು ಜಲಾಶಯದ ಬಳಿ ನೀರಿನ ವೈಭವ ಕಣ್ತುಬ್ಬಿಕೊಂಡು ಸಂಭ್ರಮಿಸಿದರು. ಅಲ್ಲದೆ ಕೆಲವರು ತಮ್ಮ ಮೊಬೈಲ್‌ಗಳಲ್ಲಿ ದೃಶ್ಯ ಸೆರೆ ಹಿಡಿದುಕೊಂಡರೇ, ಮತ್ತೆ ಕೆಲವರು ಸೆಲ್ಪಿ ಕ್ಲಿಕ್ಕಿಸಿಕೊಂಡರು, ಇನ್ನೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಜಲಾಶಯದ ವೈಭವ ಹಂಚಿಕೊಂಡು ಸಂಭ್ರಮಿಸಿದರು.
ನದಿಪಾತ್ರದ ನಿವಾಸಿಗಳಿಗೆ ಎಚ್ಚರಿಕೆ :
ಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ ವ್ಯಾಪಾಕ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ. ಜಲಾಶಯದ ಸುರಕ್ಷತೆ ಹಿನ್ನಲೆಯಲ್ಲಿ ನದಿಗೆ ನೀರನ್ನು ಹೊರಬಿಡಲಾಗುತ್ತಿದೆ. ನದಿಪಾತ್ರದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಾಗು ನದಿಪಾತ್ರದಲ್ಲಿ ಯಾರು ಸಹ ತಿರುಗಾಡುವುದಾಗಲಿ, ಬಟ್ಟೆ ಒಗೆಯುವುದಾಗಲಿ, ಪಾತ್ರೆ ತೊಳೆಯುವುದಾಗಲಿ, ಜಾನುವಾರುಗಳನ್ನು ಮೇಯಿಸುವುದಾಗಲಿ ಮಾಡಬಾರದು. ನದಿಪಾತ್ರದಲ್ಲಿ ಸಂಚಾರ ನಿಷೇಧಿಸಲಾಗಿದೆ ಎಂದು ಎಚ್ಚರಿಸಲಾಗಿದೆ.
ತಾಲೂಕು ಆಡಳಿತದಿಂದ ಪ್ರವಾಹ ಎದುರಿಸಲು ಸಿದ್ದತೆ:
ಪ್ರತಿ ವರ್ಷ ಮಳೆಗಾಲದಲ್ಲಿ ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುವ ಸಂದರ್ಭದಲ್ಲಿ ಪ್ರವಾಹ ಉಂಟಾಗಿ ನಗರದ ಹೃದಯ ಭಾಗದಲ್ಲಿರುವ ತಗ್ಗು ಪ್ರದೇಶಗಳಿಗೆ ಹಾಗು ಹೊಳೆಹೊನ್ನೂರು ಭಾಗದಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಇದರಿಂದಾಗಿ ಪ್ರತಿ ವರ್ಷ ತಗ್ಗು ಪ್ರದೇಶದ ನಿವಾಸಿಗಳನ್ನು ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಈ ಬಾರಿ ಸಹ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ್ದಲ್ಲಿ ಸಮಸ್ಯೆ ಎದುರಾಗಲಿದ್ದು, ಈ ಹಿನ್ನಲೆಯಲ್ಲಿ ಈಗಾಗಲೇ ತಾಲೂಕು ಆಡಳಿತ ನಗರಸಭೆ ಹಾಗು ತಾಲೂಕು ಪಂಚಾಯಿತಿ ಸಹಯೋಗದೊಂದಿಗೆ ಪ್ರವಾಹ ಎದುರಿಸಲು ಸಿದ್ದತೆಗಳನ್ನು ಕೈಗೊಂಡಿದೆ. ಈ ಕುರಿತು ತಹಸೀಲ್ದಾರ್ ಪರುಸಪ್ಪ ಕುರುಬರ ಶುಕ್ರವಾರ ಮಾಹಿತಿ ನೀಡಿ, ತಗ್ಗು ಪ್ರದೇಶದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದ್ದಾರೆ.
No comments:
Post a Comment