೧೧೦ನೇ ಜನ್ಮದಿನ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಬಣ್ಣನೆ
ಭದ್ರಾವತಿಯಲ್ಲಿ ಬುಧವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಳೇನಗರದ ಬಸವೇಶ್ವರ ವೃತ್ತದ ಬಲಿಜ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ ೧೧೦ನೇ ಜನ್ಮದಿನ ಕಾರ್ಯಕ್ರಮ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಬಿ.ಕೆ ಮೋಹನ್, ಪರುಸಪ್ಪ ಕುರುಬರ, ಕೆ.ಎನ್ ಹೇಮಂತ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ : ಬಾಲ್ಯದಲ್ಲಿಯೇ ರೈತರ ಸಂಕಷ್ಟಗಳನ್ನು ಅರಿತುಕೊಂಡಿದ್ದ ಡಿ. ದೇವರಾಜ ಅರಸುರವರು ತಮ್ಮ ಆಡಳಿತ ಅವಧಿಯಲ್ಲಿ ಹಲವಾರು ಭೂ ಸುಧಾರಣೆ ಕಾಯ್ದೆಗಳನ್ನು ಜಾರಿಗೆ ತಂದ ಧೀಮಂತ ನಾಯಕ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಬಣ್ಣಿಸಿದರು.
ಅವರು ಬುಧವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಳೇನಗರದ ಬಸವೇಶ್ವರ ವೃತ್ತದ ಬಲಿಜ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ ೧೧೦ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ತಮ್ಮ ಜೀವನದಲ್ಲಿ ಕೃಷಿ ಪ್ರಮುಖ ಉದ್ಯೋಗವನ್ನಾಗಿಸಿಕೊಂಡಿದ್ದ ದೇವರಾಜ ಅರಸುರವರು ತಾವು ಕಂಡ ಹಾಗು ಅನುಭವಿಸಿದ ನೋವುಗಳು ಭವಿಷ್ಯದಲ್ಲಿ ರೈತರ ಬದುಕಿನಲ್ಲಿ ಹೊಸ ಬದಲಾವಣೆಗಳನ್ನು ತರಲು ಸಾಧ್ಯವಾಯಿತು. ಭೂ ಮಾಲೀಕರ ಕೈಯಿಂದ ಹೂಳುವವನ ಕೈಗೆ ಭೂಮಿ ಹಂಚಿಕೆ ಮಾಡುವ ಭೂ ಸುಧಾರಣೆ, ಜೀತ ಪದ್ದತಿ ನಿರ್ಮೂಲನೆ ಸೇರಿದಂತೆ ಹಲವಾರು ಕ್ರಾಂತಿಕಾರಕ ಕಾಯ್ದೆಗಳು ಜಾರಿಗೆ ತರುವಲ್ಲಿ ಯಶಸ್ವಿಯಾದರು ಎಂದರು.
ದೇಶದಲ್ಲಿ ಹಿಂದುಳಿದ ಹಾಗು ದಲಿತರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗು ರಾಜಕೀಯ ಏಳಿಗಾಗಿ ಅಂದು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ಜಾರಿಗೆ ತಂದ ೨೦ ಅಂಶಗಳ ಕಾರ್ಯಕ್ರಮಗಳನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಿದ ದೇಶದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ದೇವರಾಜ ಅರಸುರವರು ಪಾತ್ರರಾಗಿದ್ದರು. ಇಂದಿರಾಗಾಂಧಿಯವರ ಆಡಳಿತದಿಂದ ಪ್ರೇರೇಪಿತರಾಗಿದ್ದ ಅರಸುರವರು ಹಿಂದುಳಿದ ಹಾಗು ದಲಿತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರು. ಈ ಹಿನ್ನಲೆಯಲ್ಲಿ ಇಂದಿಗೂ ಹಿಂದುಳಿದ ಹಾಗು ದಲಿತರ ಧೀಮಂತ ಶಕ್ತಿಯಾಗಿ ಉಳಿದುಕೊಂಡಿದ್ದಾರೆ ಎಂದರು.
ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್ ಮಾತನಾಡಿ, ಮಾನವೀಯ ಮೌಲ್ಯಗಳ ಹರಿಕಾರ ದೇವರಾಜ ಅರಸು. ಜೀತ ಪದ್ದತಿ, ಮಲ ಹೊರುವ ಪದ್ದತಿ ಸೇರಿದಂತೆ ಹಲವಾರು ಅನಿಷ್ಠ ಪದ್ದತಿಗಳನ್ನು ನಿರ್ಮೂಲನೆ ಮಾಡುವ ಮೂಲಕ ಎಲ್ಲರ ಬದುಕಿನ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಏಳಿಗೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ. ಇಂತಹ ಧೀಮಂತ ನಾಯಕ ಸಮಾಜಕ್ಕೆ ಎಂದಿಗೂ ಆದರ್ಶಪ್ರಾಯ ಎಂದರು.
ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ಮಣಿ ಎಎನ್‌ಎಸ್, ಹಿರಿಯ ಸದಸ್ಯ ಬಿ.ಕೆ ಮೋಹನ್, ತಹಸೀಲ್ದಾರ್ ಪರುಸಪ್ಪ ಕುರುಬರ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಸದಸ್ಯರಾದ ಸರ್ವಮಂಗಳ ಭೈರಪ್ಪ, ಅನುಸುಧಾ ಮೋಹನ್ ಪಳನಿ, ಬಸವರಾಜ ಬಿ. ಆನೇಕೊಪ್ಪ, ನಗರ ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ವಿವಿಧ ಸಂಘ-ಸಂಸ್ಥೆಗಳ ಮುಖಂಡರಾದ ಟಿ. ವೆಂಕಟೇಶ್, ಸತ್ಯ ಭದ್ರಾವತಿ, ಚಿನ್ನಯ್ಯ, ವಿ. ವಿನೋದ್, ಈಶ್ವರಪ್ಪ, ಚೌಡಪ್ಪ, ಎಚ್.ಆರ್ ರಂಗನಾಥ್, ಎಸ್. ಉಮಾ, ಸಿ. ಜಯಪ್ಪ, ಪುಟ್ಟರಾಜ್, ಶಿವಬಸಪ್ಪ, ಎಂ.ಎಸ್ ಸುಧಾಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ