ನಾಡಹಬ್ಬ ದಸರಾ ಆಚರಣೆಗೆ ಹಿರಿಯ ಸಮಾಜ ಸೇವಕ ಹೆಬ್ಬಂಡಿ ವೀರಪ್ಪ ಶಿವರುದ್ರಪ್ಪ ಅದ್ದೂರಿ ಚಾಲನೆ
ಭದ್ರಾವತಿ ನಗರಸಭೆಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಗೆ ಸೋಮವಾರ ಹಿರಿಯ ಸಮಾಜ ಸೇವಕ ಹೆಬ್ಬಂಡಿ ವೀರಪ್ಪ ಶಿವರುದ್ರಪ್ಪ ಚಾಲನೆ ನೀಡಿದರು.
ಭದ್ರಾವತಿ : ನಾಡಹಬ್ಬ ದಸರಾ ಆಚರಣೆ ಜಾತಿ, ಮತ, ಧರ್ಮ, ಜನಾಂಗ, ಲಿಂಗಬೇಧಗಳಿಲ್ಲದೆ ಸರ್ವರನ್ನು ಒಳ್ಳಗೊಳ್ಳುವ ಮೂಲಕ ಜಗತ್ತಿಗೆ ಮಾದರಿಯಾಗಿದೆ ಎಂದು ಹಿರಿಯ ಸಮಾಜ ಸೇವಕ ಹೆಬ್ಬಂಡಿ ವೀರಪ್ಪ ಶಿವರುದ್ರಪ್ಪ ಹೇಳಿದರು.
ಅವರು ಈ ಬಾರಿ ನಗರಸಭೆಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. 11 ದಿನಗಳ ನಾಡಹಬ್ಬ ದಸರಾ ಮಹೋತ್ಸವ ಆಚರಣೆಗೆ ಒಂದು ಮಹತ್ವವಿದೆ. ರಾಜಮಹಾರಾಜರ ಕಾಲದಿಂದಲೂ ಅಂದರೆ 15ನೇ ಶತಮಾನದಿಂದಲೂ ವೈಭವಯುತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಮಹೋತ್ಸವ ಹಲವು ವಿಶಿಷ್ಟತೆಗಳಿಂದ ಕೂಡಿದ್ದು, ನಾಡಿನ ಸರ್ವರನ್ನು ಭಾವನಾತ್ಮಕವಾಗಿ ಒಂದುಗೂಡಿಸಿದೆ. ನಾಡಿನ ಮೂಲೆ ಮೂಲೆಗಳಲ್ಲಿರುವ ಕಲಾ ತಂಡಗಳ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ವೇಷಭೂಷಣ, ಆಚಾರ-ವಿಚಾರ ಮತ್ತು ಪ್ರತಿಭೆಗಳು ಅನಾವರಣಗೊಳ್ಳಲು ಇರುವ ವೇದಿಕೆಯಾಗಿದೆ ಎಂದರು.
ಶ್ರೀ ಚಾಮುಂಡೇಶ್ವರಿ ತಾಯಿ ದುಷ್ಟ ಶಕ್ತಿಯ ವಿರುದ್ಧ ಹೋರಾಡಿ ಶಿಷ್ಟರನ್ನು ಸಂರಕ್ಷಿಸುವ ಪರಿ ನಿಜಕ್ಕೂ ವಿಸ್ಮಯ ಮತ್ತು ಜನರ ದೈವಿಕ ನಂಬಿಕೆಗೆ ಸಾಕ್ಷಿಯೂ ಆಗಿದೆ. ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಮಾಡಲಿ ಎಂದರು.
ಸಮಾಜಕ್ಕೆ ಸಲ್ಲಿಸಿರುವ ಸೇವೆ ಹಾಗು ಹಿರಿತನ ಪರಿಗಣಿಸಿ ನನಗೆ ಉದ್ಘಾಟನೆಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ನನ್ನ ಸೌಭಾಗ್ಯವಾಗಿದ್ದು, ಕ್ಷೇತ್ರದ ಶಾಸಕಾರದ ಬಿ.ಕೆ ಸಂಗಮೇಶ್ವರ್ ಹಾಗು ನಗರಸಭೆ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಭದ್ರಾವತಿಯಲ್ಲಿ ನಾಡಹಬ್ಬ ದಸರಾ ಉದ್ಘಾಟನೆಗೆ ಆಗಮಿಸಿದ ಹಿರಿಯ ಸಮಾಜ ಸೇವಕ ಹೆಬ್ಬಂಡಿ ವೀರಪ್ಪ ಶಿವರುದ್ರಪ್ಪರನ್ನು ಸಾರೋಟ ಮೂಲಕ ನಗರಸಭೆ ಆವರಣದವರೆಗೂ ಮೆರವಣಿಗೆಯಲ್ಲಿ ಕರೆ ತರಲಾಯಿತು.
ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಮಾತನಾಡಿ, ಈ ಬಾರಿ ನಾಡಹಬ್ಬ ದಸರಾ ಉದ್ಘಾಟನೆಯನ್ನು ನಮ್ಮೆಲ್ಲರಿಗೂ ಹಿರಿಯರಾದ ಎಚ್.ವಿ ಶಿವರುದ್ರಪ್ಪರವರು ಉದ್ಘಾಟಿಸಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ. ಅವರು ಸಮಾಜದಲ್ಲಿ ಸಲ್ಲಿರುವ ಸೇವೆ ಅಪಾರವಾಗಿದ್ದು, ಧಾರ್ಮಿಕ ಕಾರ್ಯಗಳಿಗೆ, ಸೇವಾ ಕಾರ್ಯಗಳಿಗೆ ಸಾಕಷ್ಟು ನೆರವಾಗಿದ್ದಾರೆ. ಅವರ ಮಾರ್ಗದರ್ಶನ ಇಂದಿನವರೆಗೆ ಅಗತ್ಯವಾಗಿದೆ. ನಾವೆಲ್ಲರೂ ಒಟ್ಟಾಗಿ 11 ದಿನಗಳ ಕಾಲ ತಾಯಿ ಚಾಮುಂಡೇಶ್ವರಿ ಆರಾಧನೆ ಮಾಡುವ ಮೂಲಕ ಸಮಾಜದಲ್ಲಿ ದೃಷ್ಟ ಶಕ್ತಿಗಳು ನಾಶವಾಗುವಂತಾಗಲಿ ಎಂದರು.
ಹಿರಿಯ ಸದಸ್ಯ ಬಿ.ಟಿ ನಾಗರಾಜ್ ಮಾತನಾಡಿ, ಬಹಳ ವರ್ಷಗಳ ಹಿಂದೆಯೇ ನಗರಸಭೆಯಿಂದ ನಾಡಹಬ್ಬ ದಸರಾ ಆಚರಣೆ ವಿಜೃಂಭಣೆಯಿಂದ ಆಚರಿಸಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಎಲ್ಲರ ಸಹಕಾರದಿಂದ ಅಂದಿನಿಂದಲೂ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಶಾಸಕ ಸಂಗಮೇಶ್ವರ್‌ರವರು ಎಲ್ಲಾ ರೀತಿಯಿಂದಲೂ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಪ್ರಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ ಎಂದರು.
ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ನಾಡಹಬ್ಬ ದಸರಾ ಆಚರಣೆ ಜಾತಿ, ಮತ, ಪಂಥಗಳನ್ನು ಮೀರಿದೆ. ಇಂತಹ ಹಬ್ಬದ ಆಚರಣೆಗೆ ಕೆಲವರು ಅಡ್ಡಿ ಮಾಡಲು ಯತ್ನಿಸಿದರು. ನ್ಯಾಯಾಲಯವೇ ಅಡ್ಡಿಪಡಿಸಲು ಯತ್ನಿಸಿದವರಿಗೆ ಸೂಕ್ತ ಉತ್ತರ ನೀಡಿದೆ. ಕ್ಷೇತ್ರದಲ್ಲಿ ಶಾಸಕರು ಜನರಿಗೆ ನೀಡಿರುವ ಬಹುತೇಕ ಭರವಸೆಗಳನ್ನು ಈಡೇರಿಸಿದ್ದಾರೆ. ಅಲ್ಲದೆ 4 ಬಾರಿ ಶಾಸಕರಾಗಿ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಸರ್ವಧರ್ಮಗಳನ್ನು ಪ್ರೀತಿಸಿ, ಗೌರವಿಸುವ ಶಾಸಕರು ಎಲ್ಲಾ ಜಾತಿ, ಧರ್ಮದವರ ಅಭಿವೃದ್ಧಿಗೆ ಬದ್ಧರಾಗಿದ್ದಾರೆ. ಪ್ರಸ್ತುತ ನಗರದ ಬಹುತೇಕ ರಸ್ತೆಗಳಿಗೆ ಹಲವಾರು ಮಹಾನ್ ವ್ಯಕ್ತಿಗಳ ಹೆಸರು ನಾಮಕರಣಗೊಳಿಸಿದ್ದಾರೆ. ಈ ನಡುವೆ ಶಾಸಕರ ವಿರುದ್ಧ ಕೆಲವರು ವಿನಾಕಾರಣ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇವುಗಳಿಗೆ ಕ್ಷೇತ್ರದ ಜನರು ಕಿವಿಗೊಡುವುದಿಲ್ಲ ಎಂದರು.
ನಗರಸಭೆ ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಎನ್.ಕೆ ಹೇಮಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್ ಸೇರಿದಂತೆ ನಾಡಹಬ್ಬ ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು ಹಾಗು ನಗರಸಭೆ ಬಹುತೇಕ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭದ್ರಾವತಿಯಲ್ಲಿ ನಾಡಹಬ್ಬ ದಸರಾ ಆಚರಣೆ ಹಿನ್ನಲೆಯಲ್ಲಿ ರಂಗಪ್ಪ ವೃತ್ತದಲ್ಲಿ ಅಳವಡಿಸಲಾಗಿರುವ ಶ್ರೀ ಚಾಮುಂಡೇಶ್ವರಿ ದೇವಿಯ ಬೃಹತ್ ಫ್ಲೆಕ್ಸ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಚನ್ನಪ್ಪ ಸ್ವಾಗತಿಸಿ, ಸುನಂದ ಸಂಗಡಿಗರು ಪ್ರಾರ್ಥಿಸಿದರು. ಸಿದ್ದಾರ್ಥ ಅಂಧರ ಕೇಂದ್ರದ ವಿಕಲಚೇತನರು ನಾಡಗೀತೆ ಹಾಡಿದರು. ನರಸಿಂಹಮೂರ್ತಿ ನಿರೂಪಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ 11.30ರ ಸಮಯದಲ್ಲಿ ನಗರದ ರಂಗಪ್ಪ ವೃತ್ತಕ್ಕೆ ಆಗಮಿಸಿದ ಶಿವರುದ್ರಪ್ಪರವರನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಎನ್.ಕೆ ಹೇಮಂತ್, ನಾಡಹಬ್ಬ ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರ ಕಾರ್ಮಿಕರು, ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರು ಸೇರಿದಂತೆ ಇನ್ನಿತರರು ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಅದ್ದೂರಿಯಾಗಿ ಸ್ವಾಗತಿಸಿದರು.
ಇದೆ ವೇಳೆ ರಂಗಪ್ಪ ವೃತ್ತದಲ್ಲಿ ಅಳವಡಿಸಲಾಗಿರುವ ಶ್ರೀ ಚಾಮುಂಡೇಶ್ವರಿ ದೇವಿಯ ಬೃಹತ್ ಫ್ಲೆಕ್ಸ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಶಿವರುದ್ರಪ್ಪರವರನ್ನು ಸಾರೋಟ ಮೂಲಕ ನಗರಸಭೆ ಆವರಣದವರೆಗೂ ಮೆರವಣಿಗೆಯಲ್ಲಿ ಕರೆ ತರಲಾಯಿತು. ನಂತರ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಜಿಲ್ಲಾ ಧಾರ್ಮಿಕ ಪರಿಷತ್ ನಿರ್ದೇಶಕ ರಮಾಕಾಂತ್ ಮತ್ತು ಕಂಚಿನಬಾಗಿಲು ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಪವನ್ ಕುಮಾರ್ ಉಡುಪ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಶ್ರೇಯಸ್ ರಾವ್ ಭರತ್ಯ ನಾಟ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ