ಗುರುವಾರ, ಸೆಪ್ಟೆಂಬರ್ 4, 2025

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ : ರಾಜಬೀದಿ ಉತ್ಸವ ಮೆರವಣಿಗೆಗೆ ಚಾಲನೆ

ಭದ್ರಾವತಿ ನಗರದ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೫೩ನೇ ವರ್ಷದ ವಿನಾಯಕ ಮೂರ್ತಿ ರಾಜಬೀದಿ ಉತ್ಸವ ಮೆರವಣಿಗೆ ಗುರುವಾರ ಬೆಳಿಗ್ಗೆ ಆರಂಭಗೊಂಡಿದ್ದು, ಕಲಾತಂಡಗಳೊಂದಿಗೆ ಸಾವಿರಾರು ಭಕ್ತರು ಹೆಜ್ಜೆ ಹಾಕಿ ಮುಂದೆ ಸಾಗುತ್ತಿದ್ದಾರೆ. 
    ಭದ್ರಾವತಿ:  ನಗರದ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೫೩ನೇ ವರ್ಷದ ವಿನಾಯಕ ಮೂರ್ತಿ ವಿಸರ್ಜನೆ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ರಾಜಬೀದಿ ಉತ್ಸವ ಮೆರವಣಿಗೆ ಗುರುವಾರ ಬೆಳಿಗ್ಗೆ ಆರಂಭಗೊಂಡಿದ್ದು, ಮಧ್ಯಾಹ್ನ ೨ರ ವೇಳೆಗೆ ರಂಗಪ್ಪವೃತ್ತ ಸಮೀಪ ಆಗಮಿಸಿತು. 
   ಪ್ರತಿವರ್ಷದಂತೆ ಈ ಬಾರಿ ಸಹ ವೈಭವಯುತವಾಗಿ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ನಡೆಯುತ್ತಿದ್ದು, ನಿರೀಕ್ಷೆಗೂ ಮೀರಿ ಭಕ್ತರು ಪಾಲ್ಗೊಂಡಿದ್ದಾರೆ. ಪ್ರತಿಷ್ಠಾಪನೆ ಸ್ಥಳದಿಂದ ಆರಂಭಗೊಂಡ ಮೆರವಣಿಗೆ ಹೊಸಮನೆ ಶಿವಾಜಿ ವೃತ್ತ ತಲುಪಿ ಪುನಃ ಹಿಂದಿರುಗಿ ಹೊಸಮನೆ ಮುಖ್ಯ ರಸ್ತೆಯಲ್ಲಿ ಸಾಗಿತು. ಪ್ರಮುಖ ವೃತ್ತಗಳ ದ್ವಾರಬಾಗಿಲುಗಳ ಬಳಿ ಫ್ಲೆಕ್ಸ್, ಬಂಟಿಂಗ್ಸ್, ಕೇಸರಿ ಧ್ವಜ ರಾರಾಜಿಸುತ್ತಿವೆ. ಹೊಸಮನೆ ಮುಖ್ಯ ರಸ್ತೆ, ಡಾ. ರಾಜ್‌ಕುಮಾರ್ ರಸ್ತೆ, ಬಿ.ಎಚ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು ಸಂಪೂರ್ಣವಾಗಿ ಕೆಸರಿಮಯವಾಗಿ ಕಂಗೊಳಿಸುತ್ತಿವೆ. 
    ಅಂಗಡಿಮುಂಗಟ್ಟುಗಳ ಬಳಿ ಅನ್ನಸಂತರ್ಪಣೆಗೆ ಕೈಗೊಳ್ಳಲಾಗಿದ್ದು, ಲಾಡು, ಮಜ್ಜಿಗೆ, ಪಾನಕ ವಿತರಣೆ ಸಹ ನಡೆಯಿತು. ಹಲವು ಸಂಘಟನೆಗಳಿಂದ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ಒಳ ರಸ್ತೆಗಳ ಸಂಪರ್ಕ ಬ್ಯಾರಿಕೇಡ್‌ಗಳಿಂದ ಕಡಿತಗೊಳಿಸಲಾಗಿದೆ. ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ. ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕಂಸಾಳೆ, ಕೋಲಾಟ, ಗೊಂಬೆ ನೃತ್ಯ, ವೀರಗಾಸೆ, ನಾದಸ್ವರ ಸೇರಿದಂತೆ ವಿವಿಧ ಕಲಾತಂಡಗಳು ಪಾಲ್ಗೊಂಡಿವೆ. ಸಾವಿರಾರು ಭಕ್ತರು ಕಲಾತಂಡಗಳೊಂದಿಗೆ ಹೆಜ್ಜೆ ಹಾಕಿ ಮುಂದೆ ಸಾಗುತ್ತಿದ್ದಾರೆ. 
    ರಾಜಬೀದಿ ಉತ್ಸವ ಮೆರವಣಿಗೆ ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ, ಅಂಬೇಡ್ಕರ್ ವೃತ್ತ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮೂಲಕ ಲೋಯರ್ ಹುತ್ತಾ ಬಸ್ ನಿಲ್ದಾಣದ ವರೆಗೆ ಸಾಗಿ ಪುನಃ ಹಿಂದಿರುಗಿ ಸಂಜೆ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯಲ್ಲಿ ಸಾಗಿ ನಗರಸಭೆ ಮುಂಭಾಗ ಅಂತ್ಯಗೊಳ್ಳಲಿದೆ. ನಂತರ ವಿನಾಯಕ ಮೂರ್ತಿ ವಿಸರ್ಜನೆ ನಡೆಯಲಿದೆ. 
    ಬಿಗಿ ಪೊಲೀಸ್ ಬಂದೋಬಸ್ತ್ : 
    ಪ್ರತಿ ವರ್ಷದಂತೆ ಈ ಬಾರಿ ಸಹ ಮುನ್ನಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪೊಲೀಸ್ ಅಧೀಕ್ಷಕರು-೩, ಹೆಚ್ಚುವರಿ ಅಧೀಕ್ಷಕರು-೫, ಪೊಲೀಸ್ ಉಪಾಧೀಕ್ಷಕರು-೧೭, ವೃತ್ತ ನಿರೀಕ್ಷಕರು-೩೪, ನಿರೀಕ್ಷಕರು ೨೩, ಕಾನ್‌ಸ್ಟೇಬಲ್-೧೭೫೦, ಗೃಹರಕ್ಷಕದಳ-೨೨೦, ಕೆಎಸ್‌ಆರ್‌ಪಿ(ಮೀಸಲು ಪಡೆ) ತುಕಡಿ-೮, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ(ಡಿಆರ್)-೮ ತುಕಡಿ, ಕ್ಷಿಪ್ರ ಕಾರ್ಯಪಡೆ(ಆರ್‌ಎಎಫ್)-೧ ತುಕಡಿ, ವಿಶೇಷ ಕಾರ್ಯಪಡೆ(ಎಸ್‌ಎಎಫ್)-೧ ತುಕಡಿ ಹಾಗು ೧೦೦ ದ್ರೋಣ್ ನಿರ್ವಾಹಕರು ಮತ್ತು ೫೦ ವಿಡಿಯೋ ಚಿತ್ರೀಕರಣ ಛಾಯಾಗ್ರಾಹಕರು ಬಿಗಿ ಪೊಲೀಸ್ ಬಂದೋಬಸ್ತ್‌ಗೆ ಬಳಸಿಕೊಳ್ಳಲಾಗಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ