ಫಾ. ಸಂತೋಷ್ ಪೆರೇರಾರಿಂದ ಸೆ.೨೮ರಂದು ಧ್ವಜಾರೋಹಣ, ದಿವ್ಯ ಬಲಿಪೂಜೆ
ಭದ್ರಾವತಿ ಮಾವಿನಕೆರೆ ಕಿರಿಯ ಪುಷ್ಪ ಸಂತ ತೆರೇಸರ ದೇವಾಲಯ.
ಭದ್ರಾವತಿ : ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿರುವ ಕಿರಿಯ ಪುಷ್ಪ ಸಂತ ತೆರೇಸರ ಶತಮಾನೋತ್ಸವ ಮತ್ತು ದೇವಾಲಯದ ವಾರ್ಷಿಕ ಮಹೋತ್ಸವ ಅ.೧ರ ಬುಧವಾರ ವಿಜೃಂಭಣೆಯಿಂದ ನಡೆಯಲಿದೆ ಎಂದು ಧರ್ಮಕೇಂದ್ರದ ಗುರುಗಳಾದ ಫಾದರ್ ಪೌಲ್ ಕ್ರಾಸ್ಟ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿ ಸಹ ದೇವಾಲಯದ ವಾರ್ಷಿಕ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮಾವಿನಕೆರೆ ಧರ್ಮ ಕೇಂದ್ರದ ಸಂತ ತೆರೇಸಾ ರವರಿಗೆ ಈ ವರ್ಷದ ವಾರ್ಷಿಕ ಮಹೋತ್ಸವ ಅರ್ಪಿಸಲಾಗಿದ್ದು, ಸಂತರ ೧೦೦ನೇ ವರ್ಷದ ಶತಮಾನೋತ್ಸವ ಸಂಭ್ರಮಾಚರಣೆ ಸಹ ಆಚರಿಸಲಾಗುತ್ತಿದೆ ಎಂದರು.
ಮೂರು ದಿನಗಳ ಭಕ್ತಿ ಕಾರ್ಯ :
ಸೆ.೨೮ರ ಭಾನುವಾರ ಬೆಳಗ್ಗೆ ೮ ಗಂಟೆಗೆ ಹಿರಿಯೂರಿನ ಕಿರಿಯ ಗುರು ಅಭ್ಯರ್ಥಿ ನಿಲಯದ ನಿರ್ದೇಶಕರಾದ ಫಾದರ್ ಸಂತೋಷ್ ಪೆರೇರಾರವರು ಸಂತ ತೆರೇಸಾರವರ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಿರುವರು. ೨೯ರ ಸೋಮವಾರ ಸಂಜೆ ೫.೩೦ಕ್ಕೆ ಉಜ್ಜನಿಪುರ ಡಾನ್ ಬಾಸ್ಕೋ ಕೈಗಾರಿಕಾ ತರಬೇತಿ ಸಂಸ್ಥೆ ನಿರ್ದೇಶಕರಾದ ಫಾದರ್ ನೀಲಗಳ್ ಕ್ರಿಸ್ತುರಾಜ್‌ರವರಿಂದ ಪೂಜಾ ವಿಧಿ-ವಿಧಾನಗಳು ನೆರವೇರಲಿದ್ದು, ೩೦ ಮಂಗಳವಾರ ಸಂಜೆ ೫:೩೦ಕ್ಕೆ ರಿದೆಂಥೋರಿಸ್ಟ್ ಸಭೆಯ ಗುರುಗಳಾದ ಫಾದರ್ ಅಶ್ವಿಲ್ ಡಯಾಸ್‌ರವರಿಂದ ಪೂಜಾ ವಿಧಿ-ವಿಧಾನ ನೆರವೇರಲಿದ್ದು, ನಂತರ ಗ್ರಾಮದ ಮುಖ್ಯಬೀದಿಗಳಲ್ಲಿ ಭವ್ಯ ತೇರಿನ ಮೆರವಣಿಗೆ ನಡೆಯಲಿದೆ.
ಶತಮಾನೋತ್ಸವದ ಹಬ್ಬ :
ಅ.೧ರಂದು ಸಂಜೆ ೫:೩೦ಕ್ಕೆ ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಬಿಷಪ್ ಫ್ರಾನ್ಸಿಸ್ ಸೆರಾವೋರವರಿಂದ ವಾರ್ಷಿಕೋತ್ಸವದ ಸಂಭ್ರಮಿಕ ಪೂಜಾ ವಿಧಿ-ವಿಧಾನಗಳು ನೆರವೇರಲಿದೆ. ನಂತರ ಅನ್ನಸಂತರ್ಪಣೆ ಕಾರ್ಯ ಹಮ್ಮಿಕೊಳ್ಳಲಾಗಿದ್ದು, ಭಕ್ತಾದಿಗಳಿಗೆ ಮುಖ್ಯ ಬಸ್ ನಿಲ್ದಾಣದಿಂದ ಸಂಜೆ ೫ ಗಂಟೆಗೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ.
ಮಾವಿನಕೆರೆ ಧರ್ಮಕೇಂದ್ರದ ಪಾಲಕಿ ಸಂತ ಕಿರಿಯ ಪುಷ್ಪ ಸಂತ ತೆರೇಸಾರವರು ಸಂತ ಪದವಿಗೇರಿದ ಶತಮಾನೋತ್ಸವದ ಸಂಭ್ರಮದಲ್ಲಿ ಈ ಮಹೋತ್ಸವ ಆಚರಿಸುತ್ತಿದ್ದು, ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಬೇಕಾಗಿ ಧರ್ಮಕೇಂದ್ರದ ಗುರುಗಳು, ಧರ್ಮಭಗಿನಿಯರು, ಪದಾಧಿಕಾರಿಗಳು ಮತ್ತು ಭಕ್ತರು ಕೇಳಿಕೊಂಡಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ