ಶಾಸಕ ಸಂಗಮೇಶ್ವರ್ ಮುಸ್ಲಿಂ ಓಲೈಕೆ ರಾಜಕಾರಣಕ್ಕೆ ಆಕ್ರೋಶ
ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದು, ತಕ್ಷಣ ಇವರನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಹಾಗು ಇನ್ನಿತರರು ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಜೊತೆಗೆ ಭಾರತ್ ಮಾತಾಕೀ ಜೈ ಘೋಷಣೆಗಳನ್ನು ಕೂಗಿದರು.
ಭದ್ರಾವತಿ: ಮಹಮದ್ ಪೈಗಂಬರರ ಜನ್ಮದಿನ ಸಂಭ್ರಮಾಚರಣೆ ಅಂಗವಾಗಿ ನಗರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆಂಬ ವಿಡಿಯೋ ಮಂಗಳವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ರಾತ್ರಿ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯಲ್ಲಿ ಸಾಗಿದ ಈದ್ ಮಿಲಾದ್ ಮೆರವಣಿಗೆ ಮಹಾತ್ಮಗಾಂಧಿ ವೃತ್ತದ ಬಳಿ ತಲುಪಿದಾಗ ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವ ಸುಮಾರು ೧೨ ಸೆಕೆಂಡ್‌ಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋ ನೈಜತೆ ಕುರಿತು ಪೊಲೀಸರು ಎಎಫ್‌ಎಲ್ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೆ ಈ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್‌ರವರು ತನಿಖೆಗೆ ಮೂವರು ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ತಂಡ ರಚಿಸಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಫ್ಲೆಕ್ಸ್ ತೆರವುಗೊಳಿಸಿ, ಅನಧಿಕೃತ ವಿದ್ಯುತ್ ಸಂಪರ್ಕಕ್ಕೆ ಪ್ರಕರಣ ದಾಖಲಿಸಿ:
ಈ ನಡುವೆ ಘಟನೆ ಸಂಬಂಧ ಹಿಂದೂಪರ ಸಂಘಟನೆಗಳ ಹಾಗೂ ಭಾರತೀಯ ಜನತಾ ಪಕ್ಷ ಮತ್ತು ಜಾತ್ಯಾತೀತ ಜನತಾದಳ ಪಕ್ಷಗಳ ಪ್ರಮುಖರು, ಅಭಿಮಾನಿಗಳು, ದೇಶ ಭಕ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಈ ನಡುವೆ ಈದ್ ಮಿಲಾದ್ ಹಬ್ಬದ ಅಂಗವಾಗಿ ನಗರದೆಲ್ಲೆಡೆ ಅಳವಡಿಸಲಾಗಿರುವ ಫ್ಲೆಕ್ಸ್, ಬ್ಯಾನರ್ ಹಾಗು ಬಂಟಿಂಗ್ಸ್‌ಗಳನ್ನು ತಕ್ಷಣ ತೆರವುಗೊಳಿಸುವಂತೆ ನಗರಸಭೆ ಆಡಳಿತಕ್ಕೆ ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ಕೆ.ಎನ್ ಹೇಮಂತ್ ರಾತ್ರಿಯೊಳಗೆ ತೆರವುಗೊಳಿಸುವುದಾಗಿ ಭರವಸೆ ನೀಡಿದರು.
ಈ ನಡುವೆ ನಗರದೆಲ್ಲೆಡೆ ಈದ್ ಮಿಲಾದ್ ಹಬ್ಬಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದು ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ಇದರ ವಿರುದ್ಧ ಮೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಹಿನ್ನಲೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬೀರಪ್ಪ ವಿದ್ಯುತ್ ದೀಪಗಳನ್ನು ತೆರವುಗೊಳಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಸೋಮವಾರ ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಮತ್ತು ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
`ಮುಂದಿನ ಜನ್ಮದಲ್ಲಿ ಮುಸಲ್ಮಾನಾಗಿ ಹುಟ್ಟುವ ಆಸೆ' ಹೇಳಿಕೆಗೆ ಎಲ್ಲೆಡೆ ಆಕ್ರೋಶ :
ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಸೋಮವಾರ ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಮತ್ತು ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, `ಮುಂದಿನ ಜನ್ಮದಲ್ಲಿ ಮುಸಲ್ಮಾನಾಗಿ ಹುಟ್ಟುವ ಆಸೆ ಇದೆ. ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದವರು ನನ್ನ ಮೇಲೆ ಹೊಂದಿರುವ ಪ್ರೀತಿ, ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ. ಕಳೆದ ಸುಮಾರು ೨೦ ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಮೆರವಣಿಗೆಯನ್ನು ಅಂದಿನ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್‌ರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪುನಃ ಆರಂಭಸಿದ್ದು, ಅಂದಿನಿಂದ ಇಂದಿನವರೆಗೂ ಶಾಂತಿ ಸೌಹಾರ್ತೆಯಿಂದ ಆಚರಿಸಿಕೊಂಡು ಬರುವ ಮೂಲಕ ನನಗೆ ಗೌರವ ತಂದುಕೊಡುವಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚು ಶ್ರಮವಹಿಸಿದ್ದಾರೆ. ಈ ಹಿನ್ನಲೆಯಲ್ಲಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ' ಎಂದು ಹೇಳಿಕೆ ನೀಡಿದ್ದರು. ಇದೀಗ ಇವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ, ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಸೇರಿದಂತೆ ಇನ್ನಿತರ ಪ್ರಮುಖರು, ವಿವಿಧ ಸಂಘಟನೆಗಳು ಸಂಗಮೇಶ್ವರ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಸಮುದಾಯದವರ ಓಲೈಕೆ ರಾಜಕಾರಣ ಕೈಬಿಡುವಂತೆ ಆಗ್ರಹಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ