ಶನಿವಾರ, ಸೆಪ್ಟೆಂಬರ್ 13, 2025

ಸೆ.೧೫ರಂದು ಅಂಬೇಡ್ಕರ್ ಭವನ, ತಾಲೂಕು ಕಛೇರಿ ಮುಂಭಾಗ ಹೋರಾಟ


    ಭದ್ರಾವತಿ: ನಗರದ ಹೃದಯ ಭಾಗದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಭವನ ರಾಜ್ಯದ ಮುಖ್ಯಮಂತ್ರಿ  ಲೋಕಾರ್ಪಣೆಗೊಳಿಸುವಂತೆ ಹಾಗು ತಾಲೂಕಿನ ಎಲ್ಲಾ ಗ್ರಾಮಪಂಚಾಯಿತಿಗಳಲ್ಲಿ ಈ-ಸ್ವತ್ತು, ಜಾತಿ ಮತ್ತು ಆದಾಯ ಪ್ರಮಾಣಪತ್ರ ವಿತರಣೆ ಸೇರಿದಂತೆ ಇನ್ನಿತರ ಸೇವೆಗಳಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಖಂಡಿಸಿ ಸೆ.೧೫ರಂದು ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ. 
    ಹಲವು ದಶಕಗಳ ನಿರಂತರ ಹೋರಾಟದ ಫಲವಾಗಿ ನಗರದಲ್ಲಿ ೨೦೧೮ರಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಭವನ ಕಾಮಗಾರಿ ಆರಂಭಗೊಂಡಿದ್ದು, ಸುಮಾರು ೭ ವರ್ಷಗಳ ನಂತರ ಪೂರ್ಣಗೊಂಡಿದೆ. ದಲಿತ ಚಳುವಳಿ ಹುಟ್ಟಿದ ನೆಲದಲ್ಲಿ ವಿಶ್ವಜ್ಞಾನ ಡಾ. ಬಿ.ಆರ್ ಅಂಬೇಡ್ಕರ್‌ರವರನ್ನು ಗೌರವಿಸಲು ನೂತನವಾಗಿ ನಿರ್ಮಾಣಗೊಂಡಿರುವ ಭವನ ನಾಡಿನ ಹಿಂದುಳಿದ ವರ್ಗಗಳ, ದೀನದಲಿತರ ನಾಯಕ, ಹಿರಿಯ ರಾಜಕೀಯ ಮುತ್ಸದ್ದಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಲೋಕಾರ್ಪಣೆಗೊಳಿಸಬೇಕೆಂದು ಸಮಿತಿ ಒತ್ತಾಯಿಸುತ್ತದೆ. 
    ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರದ ಸೇವೆಗಳನ್ನು ಪಡೆದುಕೊಳ್ಳಲು ಗ್ರಾಮೀಣ ಜನರು ಸಾಕಷ್ಟು ತೊಂದರೆ ಎದುರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಕಾಲ ಕಾಲಕ್ಕೆ ಗ್ರಾಮ ಸಭೆ, ವಾರ್ಡ್ ಸಭೆ ನಡೆಸುವಂತೆ ಹಾಗು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳು, ಈ-ಸ್ವತ್ತು, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಮತ್ತು ಬಗರ್ ಹುಕುಂ ರೈತರಿಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಸಮಿತಿ ಆಗ್ರಹಿಸುತ್ತದೆ. 
    ಈ ಹಿನ್ನಲೆಯಲ್ಲಿ ಸಮಿತಿ ವತಿಯಿಂದ ಸೆ.೧೫ರಂದು ಬೆಳಿಗ್ಗೆ ೧೦ ಗಂಟೆಗೆ ಅಂಬೇಡ್ಕರ್ ಭವನ ಮುಂಭಾಗ ಧರಣಿ ನಡೆಸಿ ನಂತರ ತಾಲೂಕು ಕಛೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ವಿವಿಧ ಸಂಘ-ಸಂಸ್ಥೆಗಳು, ಕಾರ್ಮಿಕರು, ರೈತರು, ಮಹಿಳೆಯರು, ಗ್ರಾಮಸ್ಥರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ