ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ನಗರಸಭೆ ವತಿಯಿಂದ ಅದ್ದೂರಿಯಾಗಿ ನಾಡಹಬ್ಬ ಆಚರಿಸಲು ನಿರ್ಧರಿಸಲಾಗಿದ್ದು, ನಗರದ ವಿವಿಧ ಸಂಘ-ಸಂಸ್ಥೆಗಳು, ದೇವಸ್ಥಾನ ಸಮಿತಿಗಳು ಸೇರಿದಂತೆ ಪ್ರತಿಯೊಬ್ಬರು ಯಶಸ್ವಿಗೊಳಿಸಲು ಕೈಜೋಡಿಸಬೇಕೆಂದು ಗುರುವಾರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೋರಲಾಯಿತು.
ಭದ್ರಾವತಿ : ಪ್ರತಿ ವರ್ಷದಂತೆ ಈ ಬಾರಿ ಸಹ ನಗರಸಭೆ ವತಿಯಿಂದ ಅದ್ದೂರಿಯಾಗಿ ನಾಡಹಬ್ಬ ಆಚರಿಸಲು ನಿರ್ಧರಿಸಲಾಗಿದ್ದು, ನಗರದ ವಿವಿಧ ಸಂಘ-ಸಂಸ್ಥೆಗಳು, ದೇವಸ್ಥಾನ ಸಮಿತಿಗಳು ಸೇರಿದಂತೆ ಪ್ರತಿಯೊಬ್ಬರು ಯಶಸ್ವಿಗೊಳಿಸಲು ಕೈಜೋಡಿಸಬೇಕೆಂದು ಗುರುವಾರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೋರಲಾಯಿತು.
ಸಭೆ ಆರಂಭದಲ್ಲಿ ಪೌರಾಯುಕ್ತ ಕೆ.ಎನ್ ಹೇಮಂತ್ ಮಾತನಾಡಿ, ನಾಡಹಬ್ಬ ದಸರಾ ಆಚರಣೆ ರೂಪುರೇಷೆಗಳನ್ನು ತಿಳಿಸಿದರು. ವಿವಿಧ ದೇವಸ್ಥಾನಗಳ ಸಮಿತಿ ಪ್ರಮುಖರು ಮಾತನಾಡಿ, ದಸರಾ ಮೆರವಣಿಗೆ ವ್ಯವಸ್ಥಿತವಾಗಿ ನಡೆಯಬೇಕು. ನಿಗದಿತ ಸಮಯಕ್ಕೆ ಸರಿಯಾಗಿ ಆರಂಭಗೊಳ್ಳಬೇಕು. ನಗರದ ಎಲ್ಲಾ ದೇವಸ್ಥಾನಗಳ ಅಲಂಕೃತಗೊಂಡ ದೇವಾನುದೇವತೆಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ದೇವಸ್ಥಾನ ಸಮಿತಿಯವರು ಎಲ್ಲಾ ರೀತಿಯ ಸಿದ್ದತೆಗಳನ್ನು ಮುಂಚಿತವಾಗಿ ಮಾಡಿಕೊಳ್ಳಬೇಕೆಂದು ಸಲಹೆ ನೀಡಲಾಯಿತು.
ಈ ನಡುವೆ ಕೆಲವು ದೇವಸ್ಥಾನಗಳ ಸಮಿತಿಯವರು ಮಾತನಾಡಿ, ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ದೇವಸ್ಥಾನಗಳಿಗೆ ನೀಡುತ್ತಿರುವ ಗೌರವಧನ ಹೆಚ್ಚಿಸಬೇಕು. ಈ ಹಿಂದೆ ಗೌರವಧನದ ಚೆಕ್ ಬೌನ್ಸ್ ಆಗಿದ್ದು, ಇದನ್ನು ವಿಚಾರಿಸಲು ನಗರಸಭೆಗೆ ಬಂದರೆ ಅಧಿಕಾರಿಗಳು ಅಗೌರವದಿಂದ ವರ್ತಿಸುತ್ತಾರೆಂದು ದೂರುವ ಮೂಲಕ ದೇವಸ್ಥಾನ ಸಮಿತಿಗಳಿಗೆ ಅವಮಾನ ಮಾಡುವ ಕೆಲಸ ಮಾಡಿಬೇಡಿ ಎಂದರು.
ಮೆರವಣಿಗೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ, ಸ್ವಸಹಾಯ ಸಂಘಗಳ ಮಹಿಳೆಯರು, ಅಂಗನವಾಡಿ ಹಾಗು ಆಶಾಕಾರ್ಯಕರ್ತೆಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳಬೇಕು. ಜೊತೆಗೆ ಮೆರವಣಿಗೆಯಲ್ಲಿ ಶಾಲಾ-ಕಾಲೇಜು, ಪೊಲೀಸ್ ಹಾಗು ಗೃಹರಕ್ಷಕ ದಳದಿಂದ ಪಥಸಂಚಲನ ನಡೆಸಬೇಕು. ಇದರಿಂದ ಮೆರವಣಿಗೆಗೆ ಮತ್ತಷ್ಟು ಮೆರಗು ಬರಲಿದೆ ಎಂದು ಸಲಹೆ ವ್ಯಕ್ತಪಡಿಸಲಾಯಿತು.
ನಗರಸಭೆ ಅಸ್ತಿತ್ವಕ್ಕೆ ಬಂದಾಗಿನಿಂದಲೂ ನಾಡಹಬ್ಬ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇಲ್ಲಿನ ನಾಡಹಬ್ಬ ದಸರಾ ಆಚರಣೆಗೆ ವಿಶಿಷ್ಟವಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ ನಡುವೆ ಜಿಲ್ಲಾ ಧಾರ್ಮಿಕ ಪರಿಷತ್ ನಿರ್ದೇಶಕ ಕೆ. ರಮಾಕಾಂತ ಮಾತನಾಡಿ, ನಾಡಹಬ್ಬಕ್ಕೆ ತಹಸೀಲ್ದಾರ್ ಅವರನ್ನು ಸಂಪ್ರದಾಯ ಬದ್ಧವಾಗಿ ಆಹ್ವಾನಿಸುವುದನ್ನು ಇಂದಿಗೂ ರೂಢಿಸಿಕೊಂಡು ಬರಲಾಗಿದೆ. ಇಂತಹ ಪದ್ದತಿ ಜಿಲ್ಲೆಯಲ್ಲಿ ಎಲ್ಲೂ ಸಹ ಆಚರಣೆಯಲ್ಲಿಲ್ಲ ಎಂಬುದು ವಿಶೇಷವಾಗಿದೆ. ನಗರಸಭೆ ಸದಸ್ಯರು, ಅಧಿಕಾರಿಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕರಿಸಿದ್ದಲ್ಲಿ ಇನ್ನೂ ಹೆಚ್ಚಿನ ವೈಭವಯುತವಾಗಿ ಆಚರಿಸಬಹುದು ಎಂದರು.
ಸಭೆಯಲ್ಲಿ ಈ ಬಾರಿ ದಸರಾ ಆಚರಣೆಗೆ ಆನೆ ಅಂಬಾರಿ ಕುರಿತು ಸಹ ಚರ್ಚಿಸಲಾಯಿತು. ಈ ಸಂಬಂಧ ಕೆಲವು ಸದಸ್ಯರು ಮಾತನಾಡಿ, ಆನೆ ಅಂಬಾರಿ ದುಬಾರಿಯಾಗಲಿದ್ದು, ನಗರಸಭೆ ಬಜೆಟ್‌ನಲ್ಲಿ ಸಾಧ್ಯವಾಗುದಿಲ್ಲ. ಅಲ್ಲದೆ ಆನೆ ಅಂಬಾರಿಗಾಗಿ ಸಾಕಷ್ಟು ಕಾನೂನು ತೊಡಕುಗಳು ಎದುರಾಗಲಿವೆ. ಹಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಇದರಿಂದ ಹೆಚ್ಚಿನ ಸಮಸ್ಯೆ ಎದುರಾಗಲಿದೆ ಎಂದರು.
ನಾಡಹಬ್ಬ ದಸರಾ ಆಚರಣೆ ಸಂಬಂಧ ಬುಧವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಇಲಾಖೆಗಳು ಕೈಗೊಳ್ಳಬೇಕಾಗಿರುವ ಕಾರ್ಯಗಳ ಕುರಿತು ಚರ್ಚಿಸಲಾಯಿತು. ಪೊಲೀಸ್, ಶಿಕ್ಷಣ, ಲೋಕೋಪಯೋಗಿ, ಮೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ನಾಡಹಬ್ಬ ದಸರಾ ವಿವಿಧ ಸಮಿತಿಗಳ ಅಧ್ಯಕ್ಷರಾದ ಬಿ.ಎಂ ಮಂಜುನಾಥ, ಕೆ. ಸುದೀಪ್ ಕುಮಾರ್, ವಿ. ಕದಿರೇಶ್, ಚನ್ನಪ್ಪ, ಸರ್ವಮಂಗಳ ಭೈರಪ್ಪ, ಉದಯ್ ಕುಮಾರ್, ಬಷೀರ್ ಅಹಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ