ಗುರುವಾರ, ಅಕ್ಟೋಬರ್ 2, 2025

ಜಾನಪದ ಕಲಾವಿದ, ಶಿಕ್ಷಕ ಎಂ.ಆರ್ ರೇವಣಪ್ಪರಿಗೆ `ಕರ್ನಾಟಕ ಜಾನಪದ ರತ್ನ' ರಾಜ್ಯ ಪ್ರಶಸ್ತಿ

ಕೆಆರ್‌ಐಡಿಎಲ್ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ವಿ. ವಿನೋದ್ ಪ್ರಶಸ್ತಿ ಪ್ರದಾನ 

ಭದ್ರಾವತಿ ತಾಲೂಕಿನ ಸುಲ್ತಾನಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪರವರಿಗೆ ಕರ್ನಾಟಕ ದಲಿತ ಸಮನ್ವಯ ಸಮಿತಿಯಿಂದ `ಕರ್ನಾಟಕ ಜಾನಪದ ರತ್ನ' ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
    ಭದ್ರಾವತಿ : ತಾಲೂಕಿನ ಸುಲ್ತಾನಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪರವರಿಗೆ ಕರ್ನಾಟಕ ದಲಿತ ಸಮನ್ವಯ ಸಮಿತಿಯಿಂದ `ಕರ್ನಾಟಕ ಜಾನಪದ ರತ್ನ' ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
     ಕರ್ನಾಟಕ ದಲಿತ ಸಮನ್ವಯ ಸಮಿತಿ ಕೇಂದ್ರ ಕಾರ್ಯಾಲಯ ಉದ್ಘಾಟನೆ ಹಾಗು ರಾಜ್ಯ ಪದಾಧಿಗಳ ಪದಗ್ರಹಣ ಮತ್ತು ನಾಮಫಲಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ವಿ. ವಿನೋದ್‌ರವರು ಎಂ.ಆರ್ ರೇವಣಪ್ಪ-ಎಂ.ರೇಣುಕ ದಂಪತಿಗೆ `ಕರ್ನಾಟಕ ಜಾನಪದ ರತ್ನ' ಪ್ರಶಸ್ತಿ ನೀಡಿ ಗೌರವಿಸಿದರು. 
    ಬಿ.ಕೆ ಸಂಗಮೇಶ್ವರ್ ಮಾತನಾಡಿ, ಶಿಕ್ಷಕ ಹಾಗು ಜಾನಪದ ಕಲಾವಿದರಾದ ಎಂ.ಆರ್ ರೇವಣಪ್ಪರವರು ಅದ್ಭುತ ಕಲಾವಿದರಾಗಿದ್ದು, ಈಗಾಗಲೇ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶಿಕ್ಷಣ ಮತ್ತು ಕಲಾ ಕ್ಷೇತ್ರದಲ್ಲಿ ಅಪಾರವಾದ ಪ್ರತಿಭೆ ಹೊಂದಿದ್ದಾರೆ. ಇಂತಹ ಪ್ರತಿಭಾವಂತರಿಗೆ ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಬೇಕು. ಆಗ ಮಾತ್ರ ಇವರ ಪ್ರತಿಭೆಗೆ ಗೌರವ ಸಲ್ಲುತ್ತದೆ ಎಂದರು.  
   ಎಂ.ಆರ್ ರೇವಣಪ್ಪ : 
  ಎಂ.ಆರ್ ರೇವಣಪ್ಪರವರು ಹೊಸನಗರ ತಾಲೂಕು, ಕೆರೆಹಳ್ಳಿ ಹೋಬಳಿ, ಕೆಂಪನಾಲ ಅಂಚೆ, ಮಾದಾಪುರ ಎಂಬ ಒಂದು ಕುಗ್ರಾಮದಲ್ಲಿ ರಾಮಣ್ಣ ಮತ್ತು ಭರ್ಮಮ್ಮ ದಂಪತಿಗಳ ಏಳು ಜನ ಮಕ್ಕಳಲ್ಲಿ ಕೊನೆಯ ಮಗನಾಗಿ ೦೧-೦೬-೧೯೭೧ರಲ್ಲಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣ ತಮ್ಮ ಹುಟ್ಟೂರಿನಲ್ಲಿ ಕಲಿತು. ಪ್ರೌಢ ಶಿಕ್ಷಣ ಮತ್ತು ಕಾಲೇಜು ಶಿಕ್ಷಣ ಸಾಗರ ತಾಲೂಕಿನ ಆನಂದಪುರಂನಲ್ಲಿ ಪಡೆದರು. ೧೯೯೮ರಲ್ಲಿ ಬಿ.ಸಿ.ಹೆಚ್ ತರಬೇತಿ ಶಿವಮೊಗ್ಗ ಡಯಟ್‌ನಲ್ಲಿ ಪಡೆದು ದಿನಾಂಕ ೧೯೯೮ರಲ್ಲಿ ತೀರ್ಥಹಳ್ಳಿ ತಾಲೂಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಳಸುರಳಿಯಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು. 
ರೇವಣಪ್ಪ ಕುಟುಂಬ್ಥರು ಮೂಲತಃ ಜಾನಪದ ಕಲಾವಿದರಾಗಿದ್ದು, ಈ ಹಿನ್ನಲೆಯಲ್ಲಿ ಗ್ರಾಮೀಣ ಸೊಗಡಿನ ಜಾನಪದ ಕಲೆಗಳಿಗೆ ಬಾಲ್ಯದಿಂದಲೇ ಆಕರ್ಷಣೆಗೊಂಡು ವಿದ್ಯಾಭ್ಯಾಸದ ಜೊತೆಜೊತೆಗೆ ಜಾನಪದ ಕಲೆಗಳನ್ನು ಮೈಗೂಡಿಸಿಕೊಂಡು ರಾಜ್ಯ. ರಾಷ್ಟ್ರ. ಹಾಗೂ ಅಂತರಾಷ್ಟ್ರೀಯ ಕಾರ್ಯಕ್ರರ್ಮಗಳಲ್ಲಿ ಡೊಳ್ಳು ಕುಣಿತ, ಸುಗ್ಗಿ ಕುಣಿತ, ಕೋಲಾಟ ಪ್ರಕಾರಗಳನ್ನು ಪ್ರದರ್ಶನಮಾಡಿ ಕೀರ್ತಿ ತಂದಿದ್ದಾರೆ. 
   ಸರ್ಕಾರಿ ಶಾಲೆಗಳ ಸಹಸ್ರಾರು ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಜಾನಪದ ಕಲೆಗಳನ್ನು ಕಲಿಸುವುದರ ಮೂಲಕ ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 
  ಇವರ ಸಾಧನೆ ಗುರುತಿಸಿ ಶಿಕ್ಷಣ ಇಲಾಖೆಯಿಂದ ೨೦೦೮-೦೯ನೇ ಸಾಲಿನಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗು ೨೦೧೮-೧೯ನೇ ಸಾಲಿನ "ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ" ನೀಡಿ ಗೌರವಿಸಲಾಗಿದೆ.  ೨೦೦೮-೦೯ರಲ್ಲಿ ಡಾ. ರಾಜ್‌ಕುಮಾರ್ ರಾಜ್ಯೋತ್ಸವ ಪ್ರಶಸ್ತಿಯನ್ನು ರೇವಣಪ್ಪ ಪಡೆದುಕೊಂಡಿದ್ದಾರೆ. ಇವರ ಜಾನಪದ ಕಲಾಸೇವೆಯನ್ನು ಗುರುತಿಸಿ ತಮಿಳುನಾಡಿನ ಊಟಿಯಲ್ಲಿ ನಡೆದ "ಇಂಟರ್‌ನ್ಯಾಷನಲ್ ಪೀಸ್ ಯುನಿವರ್ಸಿಟಿ", ಜರ್ಮನ್ ೨೦೨೨-೨೩ ಸಾಲಿನಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿರುತ್ತಾರೆ. 
   ವಿಶೇಷವೆಂದರೆ ಶಿವಮೊಗ್ಗದ ಮಲವಗೊಪ್ಪದ "ಕೇಂದ್ರ ಕಾರಾಗೃಹ"ದಲ್ಲಿ ಬಂದಿನಿವಾಸಿಗಳಿಗೆ ೧೦ ದಿನಗಳ ವರೆಗೆ ನಡೆದ ಜಾನಪದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಭೇತಿ ನೀಡಿ ಬಂದಿನಿವಾಸಿಗಳ ಹೃದಯದಲ್ಲಿ ರೇವಣಪ್ಪರವರು ಅಚ್ಚಳಿಯದೆ ಉಳಿದಿರುತ್ತಾರೆ.  ಇವರ ಪತ್ನಿ ಎಂ. ರೇಣುಕರವರು  ಸಹ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದು, ಮಕ್ಕಳಾದ ರೋಚನ್ ಆರ್ ದೊಡ್ಡನೆ ಮತ್ತು ರೋಹನ್ ಆರ್ ದೊಡ್ಡನೆರವರು ವಿದ್ಯಾಭ್ಯಾಸ ಮಾಡುತ್ತಿದಾರೆ. 
   ರೇವಣಪ್ಪರವರು ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಅಲ್ಲದೆ ಕನ್ನಡ ಸಾಹಿತ್ಯ ಪರಿಷತ್ ಹಾಗು ಇನ್ನಿತರ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಣ ಹಾಗು ಜಾನಪದ ಕ್ಷೇತ್ರದಲ್ಲಿ ಇವರ ಕೊಡುಗೆ ಅನನ್ಯವಾಗಿದೆ. 
   ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಹಿರಿಯ ಸದಸ್ಯ ಬಿ.ಕೆ ಮೋಹನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ರಾಜ್ಯ ಪದಾಧಿಕಾರಿ ಭಾರತಿ ಗೋವಿಂದಸ್ವಾಮಿ, ಗಂಗಾಮತಸ್ಥ ಸಮಾಜದ ಪ್ರಧಾನ ಕಾರ್ಯದರ್ಶಿ ಬಿ.ಆರ್ ಯಲ್ಲಪ್ಪ, ಶಿಕ್ಷಕರ ಸಂಘದ ಮುಖಂಡ ಬಸವಂತರಾವ್ ದಾಳೆ, ಕೆಡಿಪಿ ಸದಸ್ಯ ರಾಜೇಂದ್ರ, ದಲಿತ ನೌಕರರ ಮುಖಂಡ ಎನ್. ಮಂಜುನಾಥ್, ಶಿಕ್ಷಕರಾದ ಯು. ಮಹಾದೇವಪ್ಪ, ದಯಾನಂದ್ ಸಾಗರ್, ದಲಿತ ಮುಖಂಡ ಸುನಿಲ್ ಕೋರಿ, ಸಮನ್ವಯ ಸಮಿತಿ ರಾಜ್ಯ, ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ