ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ
ಭದ್ರಾವತಿ ನ್ಯೂಟೌನ್, ವಿಐಎಸ್‌ಎಲ್ ಭದ್ರ್ರಾ ಅತಿಥಿಗೃಹದಲ್ಲಿ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ, ಮುಖ್ಯ ಮಹಾಪ್ರಬಂಧಕ(ಸ್ಥಾವರ) ಕೆ.ಎಸ್ ಸುರೇಶ್, ಮಹಾಪ್ರಬಂಧಕ(ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರ, ಇಸ್ಪಾತ್ ಮಹಿಳಾ ಸಮಾಜ ಉಪಾಧ್ಯಕ್ಷೆ ಶೋಭ ಶಿವಶಂಕರನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಬದುಕು, ತತ್ವಾದರ್ಶಗಳು ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡು ಸಮಾಜದಲ್ಲಿ ನಿರಂತರವಾಗಿ ಸುಧಾರಣೆ ತರಲು ಪ್ರಯತ್ನಿಸಬೇಕೆಂದು ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಹೇಳಿದರು.
ಅವರು ಕಾರ್ಖಾನೆಯ ನ್ಯೂಟೌನ್, ವಿಐಎಸ್‌ಎಲ್ ಭದ್ರ್ರಾ ಅತಿಥಿಗೃಹದಲ್ಲಿ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಗಾಂಧಿಯವರ ಬದುಕು ಅವಿಸ್ಮರಣೀಯವಾಗಿದೆ. ಈ ದೇಶದ ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದೆ ಎಂದರು. ಅಲ್ಲದೆ ದೇಶದ ಎರಡನೇ ಪ್ರಧಾನಮಂತ್ರಿ ಲಾಲ್ ಬಹದ್ಧೂರ್ ಶಾಸ್ತ್ರಿಯವರ ಬದುಕು ಸಹ ವೈಶಿಷ್ಟ್ಯಪೂರ್ಣವಾಗಿದ್ದು, ಅವರ ಜೀವನಾದರ್ಶಗಳು ನಮಗೆ ದಾರಿದೀಪವಾಗಲೆಂದು ಆಶಿಸಿದರು.
ಧಾರ್ಮಿಕ ಗ್ರಂಥಗಳ ಆಯ್ದ ಭಾಗಗಳನ್ನು ಭಗವದ್ಗೀತೆ ಅಧಿತ್ರಿ ರಾಘವೇಂದ್ರ (ಕೆ.ಎಸ್. ರಾಘವೇಂದ್ರರವರ ಸುಪುತ್ರಿ), ಬೈಬಲ್ ಶಾಜಿ ಅಬ್ರಹಾಂ ಮತ್ತು ಕುರಾನ್ ರಿಯಾ ಅಂಜುಮ್ ಹಾಗೂ ರಿನಾಜ್ ಅಂಜುಮ್ (ರಿಜ್ವಾನ್ ಬೇಗ್‌ರವರ ಪುತ್ರಿಯರು) ಪಠಿಸಿದರು. ಸೈಲ್ ಶಭಾಷ್ ಯೋಜನೆಯಡಿ ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಉದ್ಯೋಗಿಗಳಿಗೆ ಪ್ರಶಂಸಾಪತ್ರವನ್ನು ನೀಡಿ ಗೌರವಿಸಲಾಯಿತು.
ಮುಖ್ಯ ಮಹಾಪ್ರಬಂಧಕ(ಸ್ಥಾವರ) ಕೆ.ಎಸ್ ಸುರೇಶ್, ಮಹಾಪ್ರಬಂಧಕ(ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರ, ಇಸ್ಪಾತ್ ಮಹಿಳಾ ಸಮಾಜ ಉಪಾಧ್ಯಕ್ಷೆ ಶೋಭ ಶಿವಶಂಕರನ್, ವಿಐಎಸ್‌ಎಲ್ ಉದ್ಯೋಗಿಗಳು, ವಿಐಎಸ್‌ಎಲ್ ಕಾರ್ಮಿಕ ಸಂಘ ಮತ್ತು ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳು, ಗುತ್ತಿಗೆ ಕಾರ್ಮಿಕರು, ಇಸ್ಪಾತ್ ಮಹಿಳಾ ಸಮಾಜದ ಸದಸ್ಯರು ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ