ನಗರದ ವಿವಿಧೆಡೆ ಜಾಗೃತಿ ಮೂಡಿಸುತ್ತಿರುವ ರಂಗ ಕಲಾವಿದರು, ವಿದ್ಯಾರ್ಥಿಗಳು
ಭದ್ರಾವತಿ ನಗರಸಭೆ ಮುಂಭಾಗ ಸೋಮವಾರ ಕೊರೋನಾ ವೈರಸ್ ನಿರ್ಮೂಲನೆ ಹಾಗೂ ಇದರ ವಿರುದ್ಧ ಹೋರಾಟ ನಡೆಸುತ್ತಿರುವವರಿಗೆ ಅಭಿನಂದನೆ ಕುರಿತ ಬೀದಿ ನಾಟಕ ಪ್ರದರ್ಶನ ಗಮನ ಸೆಳೆಯಿತು.
ಭದ್ರಾವತಿ: ಒಂದೆಡೆ ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ನಿರ್ಮೂಲನೆ ಕುರಿತು ಜಾಗೃತಿ, ಮತ್ತೊಂದೆಡೆ ಇದರ ವಿರುದ್ಧ ಹಗಲಿರುಳು ಹೋರಾಟ ನಡೆಸುತ್ತಿರುವವರಿಗೆ ಅಭಿನಂದನೆ ಸಲ್ಲಿಸುವ ಪರಿ ಕಲಾವಿದರು ಅದ್ಭುತವಾಗಿ ಅಭಿನಯದ ಮೂಲಕ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದ ಘಟನೆ ಸೋಮವಾರ ನಡೆಯಿತು.ಕಾಗದ ನಗರದ ವಿಕಸಂ ಕಲಾ ತಂಡ ಹಾಗೂ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ರೋವರ್ಸ್ ಮತ್ತು ರೇಂಜರ್‍ಸ್ ವಿದ್ಯಾರ್ಥಿಗಳು ಪೊಲೀಸ್ ಮತ್ತು ಆರೋಗ್ಯ ಇಲಾಖೆ, ಪತ್ರಕರ್ತರ ಸಂಘ, ಗುರು ಆರ್ಟ್ಸ್, ಚಿಗುರು ಕಲಾ ತಂಡದ ಸಹಕಾರದೊಂದಿಗೆ ಬೀದಿ ನಾಟಕ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು.
ನಗರ ಸಭೆ ಮುಂಭಾಗ ಮೊದಲ ಪ್ರದರ್ಶನಕ್ಕೆ ಪೌರಾಯುಕ್ತ ಮನೋಹರ್ ಚಾಲನೆ ನೀಡಿದರು. ಕೆ.ಬಿ ರೇವಣ್ಣ(ಪೊಲೀಸ್), ಎಸ್.ಐ ವರುಣ್‌ಕುಮಾರ್(ವೈದ್ಯ), ಎಂ. ಸಹನ(ಮಾಧ್ಯಮ ಪ್ರತಿನಿಧಿ), ಪೂಜಾ(ಆಶಾ ಕಾರ್ಯಕರ್ತೆ), ಆರ್. ಸಹನ(ನರ್ಸ್), ಚಿನ್ಮಯಿ(ಆಶಾ ಕಾರ್ಯಕರ್ತೆ), ಕೆ. ವಿನೋದ್(ಪೌರ ಕಾರ್ಮಿಕ), ಎಂ. ಸಚಿನ್(ಪೌರ ಕಾರ್ಮಿಕ), ಎಸ್. ರಾಕೇಶ್(ಪೌರ ಕಾರ್ಮಿಕ), ರುಮಾನ(ಪೌರ ಕಾರ್ಮಿಕ), ಆರ್. ಮನೋಜ್(ಪೌರ ಕಾರ್ಮಿಕ), ಕೆ.ಎಂ ರವಿಕಿರಣ್(ಪೌರ ಕಾರ್ಮಿಕ), ಎಚ್.ಎಸ್ ಅಭಿಷೇಕ್(ಪೌರ ಕಾರ್ಮಿಕ), ಮೋಹನ್(ಕೊರೋನಾ ವೈರಸ್), ಪುಟ್ಟಣ್ಣ(ಯಮ) ಪಾತ್ರಧಾರಿಗಳಾಗಿ ಅಭಿನಯಿಸಿದರು.
ಸಹ ಪ್ರಾಧ್ಯಾಪಕ ಎಸ್. ವರದರಾಜ್ ಮೇಲ್ವಚಾರಕರಾಗಿ, ವಿಕಸಂ ಕಲಾ ತಂಡದ ಕೆ.ಎಸ್ ರವಿಕುಮಾರ್ ನಿರ್ದೇಶಕರಾಗಿ, ಗುರು ಆರ್ಟ್ಸ್‌ನ ಬಿ. ಗುರು ವಿನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. ತಮಟೆ ಜಗದೀಶ್, ಜಿ. ದಿವಾಕರ್, ಜಿ. ರವಿಕುಮಾರ್ ಮತ್ತು ಡಿ.ಆರ್ ಹರೀಶ ವಿವಿಧ ವಾದ್ಯಗಳೊಂದಿಗೆ ಹಾಡುಗಾರಿಕೆ ನಡೆಸಿಕೊಟ್ಟರು.
೨ನೇ ಪ್ರದರ್ಶನ ರಂಗಪ್ಪ ವೃತ್ತದ ಜೆಎಂಎಫ್‌ಸಿ ನ್ಯಾಯಾಲಯದ ಮುಂಭಾಗ ಹಾಗೂ ೩ನೇ ಪ್ರದರ್ಶನ ಅಂಬೇಡ್ಕರ್ ವೃತ್ತದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ನಡೆಯಿತು.
ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ ಉಮಾಶಂಕರ್, ಪ್ರಾಧ್ಯಾಪಕರಾದ ಡಾ. ಬಿ.ಎಂ. ನಾಸಿರ್‌ಖಾನ್, ಡಾ. ಸಿ.ಎಸ್ ಷಣ್ಮುಖಪ್ಪ, ಡಾ. ಶಿವರುದ್ರಪ್ಪ, ನಗರಸಭೆ ಕಂದಾಯಾಧಿಕಾರಿ ರಾಜ್‌ಕುಮಾರ್, ಪರಿಸರ ಅಭಿಯಂತರ ರುದ್ರೇಗೌಡ, ಅಖಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ದೈಹಿಕ ಶಿಕ್ಷಕ ಶಿವಲಿಂಗೇಗೌಡ, ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕ ನಿಲೇಶ್‌ರಾಜ್, ವಸಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.