Sunday, July 5, 2020

ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎ.ಜಿ ರಾಜಶೇಖರ್ ವರ್ಗಾವಣೆ

ಭದ್ರಾವತಿ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ(ಸಿಆರ್‌ಪಿ)ಯಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಎ.ಜಿ ರಾಜಶೇಖರ್‌ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ನಗರದ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಮತ್ತು ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕಛೇರಿ ವತಿಯಿಂದ ಸನ್ಮಾನಿಸಿ ಅಭಿನಂದಿಸುವ ಮೂಲಕ ಬೀಳ್ಕೊಡುಗೆ ನೀಡಲಾಯಿತು. 
ಭದ್ರಾವತಿ, ಜು. ೫: ಕೆಇಎಸ್ ಗ್ರೇಡ್-೨ರ ಶ್ರೇಣಿಯ ಎ.ಜಿ ರಾಜಶೇಖರ್ ನಗರದಲ್ಲಿ ಸುಮಾರು ೪ ವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ(ಸಿಆರ್‌ಪಿ)ಯಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿದ್ದಾರೆ. 
ಎ.ಜಿ ರಾಜಶೇಖರ್ ಸಂಪನ್ಮೂಲ ಅಧಿಕಾರಿಯಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದು, ಇದಕ್ಕೂ ಮೊದಲು ಬೆಳ್ತಂಗಡಿಯಲ್ಲಿ ಸುಮಾರು ೩ ವರ್ಷ, ನಂತರ ಚಿಕ್ಕಮಗಳೂರು ಉಪನಿರ್ದೇಶಕರ ಕಛೇರಿಯಲ್ಲಿ ಸೇವೆ ಸಲ್ಲಿಸಿದ್ದರು. ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು, ಕಲಿಕಾ ಸಾಮಗ್ರಿಗಳನ್ನು ಒದಗಿಸುವಲ್ಲಿ ಹಾಗೂ ಶಿಕ್ಷಕರ ಕುಂದು-ಕೊರತೆಗಳನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 
ಇದೀಗ ಕಡೂರು ಜಿಗಣೆಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾಗಿ ವರ್ಗಾವಣೆಗೊಂಡಿದ್ದಾರೆ. ಇವರ ಸೇವೆಯನ್ನು ಸ್ಮರಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ನಗರದ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಮತ್ತು ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕಛೇರಿ ವತಿಯಿಂದ ಸನ್ಮಾನಿಸಿ ಅಭಿನಂದಿಸುವ ಮೂಲಕ ಬೀಳ್ಕೊಡುಗೆ ನೀಡಲಾಯಿತು. 

ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಜಿ ಚನ್ನಬಸಪ್ಪ ನಿಧನ

ಪ್ರೊ. ಬಿ.ಜಿ ಚನ್ನಬಸಪ್ಪ  
ಭದ್ರಾವತಿ, ಜು. ೫: ನಗರದ ನಿವಾಸಿ, ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ.ಜಿ ಚನ್ನಬಸಪ್ಪ(೮೨) ಭಾನುವಾರ ಬೆಳಿಗ್ಗೆ ನಿಧನ ಹೊಂದಿದರು. 
ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಬಿಟ್ಟಗಲಿದ್ದಾರೆ. ಮೃತರ ಅಂತ್ಯ ಕ್ರಿಯೆ ಸಂಜೆ ಚನ್ನಗಿರಿ ಕಾಲೂಕಿನ ಬೊಮ್ಮೆನಹಳ್ಳಿ ಗ್ರಾಮದಲ್ಲಿ ನಡೆಯಿತು. 
೧೯೬೪ರಲ್ಲಿ ಕುಡ್ಲೂರು ತರಳಬಾಳು ವಿದ್ಯಾಸಂಸ್ಥೆ ಸಿರಿಗೆರೆ ಶ್ರೀ ಮಹೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ್ದು, ನಂತರ ನಗರದ ಸಿಲ್ವರ್ ಜ್ಯೂಬಿಲಿ ಪ್ರೌಢಶಾಲೆಯಲ್ಲಿ ೧೯೬೫ರಲ್ಲಿ ಸಹ ಶಿಕ್ಷಕರಾಗಿ ಸರ್ಕಾರಿ ವೃತ್ತಿಗೆ ಸೇರ್ಪಡೆಗೊಂಡರು. ೧೯೬೯ರ ವರೆಗೆ ಚಳ್ಳಕೆರೆ ತಾಲೂಕಿನ ಪುರಸಭಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ, ೧೯೭೧ ರಿಂದ ೧೯೭೫ರ ವರೆಗೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, ನಂತರ ೧೯೭೬ರಿಂದ ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದ್ದು, ಸುಮಾರು ೨೧ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. 
ಚನ್ನಬಸಪ್ಪ ಕೇವಲ ಪ್ರಾಧ್ಯಾಪಕ ಮಾತ್ರವಲ್ಲದೆ ಕ್ರೀಡಾ ಸಲಹೆಗಾರ, ತರಬೇತಿದಾರರಾಗಿ ಹಾಗೂ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು. ಇವರು ತಮ್ಮ ೭೦ನೇ ವಯಸ್ಸಿನಲ್ಲಿ ಜೀವನ ಚರಿತ್ರೆ ಪುಸ್ತಕ ಹೊರತಂದಿದ್ದರು. 
ಇವರ ನಿಧನಕ್ಕೆ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಮಾಜಿ ಶಾಸಕ ಎಂ.ಜೆ ಅಪ್ಪಾಜಿ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸಿದ್ದಲಿಂಗಯ್ಯ, ನಗರಸಭಾ ಸದಸ್ಯ ಕೆ.ಎನ್ ಭೈರಪ್ಪಗೌಡ, ಬಿಎಲ್‌ಡಿ ಬ್ಯಾಂಕ್ ನಿರ್ದೇಶಕ ಎಚ್.ಎನ್ ಲೋಹಿತೇಶ್ವರಪ್ಪ, ಬನಿ ಮಹಾದೇವಪ್ಪ, ಜಿ. ಸುರೇಶಯ್ಯ, ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಚಂದ್ರಶೇಖರಯ್ಯ, ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ, ಬಸವೇಶ್ವರ ಹಾಗೂ ಭದ್ರಾ ವಿದ್ಯಾ ಸಂಸ್ಥೆ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

Saturday, July 4, 2020

ಕೊರೋನಾ ಸೋಂಕು ಪತ್ತೆ : ಶ್ರೀಸಾಮಾನ್ಯರಿಗೆ ಸಂಕಷ್ಟ

ಭದ್ರಾವತಿ ಹೊಸಮನೆ  ೧೨ನೇ ವಾರ್ಡ್ ಮುತ್ತು ಮಾರಿಯಮ್ಮ ದೇವಸ್ಥಾನ ಸಮೀಪ ಸೀಲ್‌ಡೌನ್ ಮಾಡಲಾಗಿರುವ ವ್ಯಾಪ್ತಿಯಲ್ಲಿನ ನಿವಾಸಿಗಳಿಗೆ ಆನಂದ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ಶನಿವಾರ ಸುಮಾರು ೧೦ ದಿನಗಳಿಗೆ ಸಾಕಾಗುವಷ್ಟು ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. 
ಭದ್ರಾವತಿ, ಜು. ೪: ನಗರದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಡುವೆ ಸೋಂಕು ಪತ್ತೆಯಾದ ಸ್ಥಳದ ಸುತ್ತಮುತ್ತ ಸೀಲ್‌ಡೌನ್ ಮಾಡಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗುತ್ತಿದೆ. 
ಈಗಾಗಲೇ ಕಾಗದನಗರ, ಸುರಗಿತೋಪು, ಹಳೇನಗರ, ಹೊಸಮನೆ, ಗಾಂಧಿನಗರ ಸೇರಿದಂತೆ ಹಲವೆಡೆ ಸೀಲ್‌ಡೌನ್ ಮಾಡಲಾಗಿದ್ದು, ಸ್ಥಳೀಯರಿಗೆ ನಗರಸಭೆ ಸಿಬ್ಬಂದಿಗಳು ದಿನನಿತ್ಯದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದಾರೆ. 
ಈ ನಡುವೆ ಹೊಸಮನೆ ೧೨ನೇ ವಾರ್ಡ್ ಮುತ್ತು ಮಾರಿಯಮ್ಮ ದೇವಸ್ಥಾನ ಸಮೀಪ ಸೀಲ್‌ಡೌನ್ ಮಾಡಲಾಗಿರುವ ವ್ಯಾಪ್ತಿಯಲ್ಲಿನ ನಿವಾಸಿಗಳಿಗೆ ಆನಂದ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ಶನಿವಾರ ಸುಮಾರು ೧೦ ದಿನಗಳಿಗೆ ಸಾಕಾಗುವಷ್ಟು ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. 
ಸಂಸ್ಥೆಯ ಅಧ್ಯಕ್ಷ, ವಾರ್ಡ್ ಸದಸ್ಯ ಜಿ. ಆನಂದಕುಮಾರ್, ಬಿಜೆಪಿ ಪಕ್ಷದ ಮುಖಂಡರಾದ ಮಂಗೋಟೆ ರುದ್ರೇಶ್, ಮೋಹನ್ ಮತ್ತು ಬಿ.ಎಸ್ ಶ್ರೀನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಭದ್ರಾವತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರೊಂದಿಗೆ ಹೊಸಮನೆ ಹಿಂದೂ ಮಹಾಸಭಾ ವಿನಾಯಕ ಸೇವಾ ಸಮಿತಿ ಸಮೀಪ ಸೀಲ್‌ಡೌನ್ ಮಾಡಲಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಕುಂದು ಕೊರತೆಗಳನ್ನು ವಿಚಾರಿಸಿದರು. 
ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರೊಂದಿಗೆ ಹೊಸಮನೆ ಹಿಂದೂ ಮಹಾಸಭಾ ವಿನಾಯಕ ಸೇವಾ ಸಮಿತಿ ಸಮೀಪ ಸೀಲ್‌ಡೌನ್ ಮಾಡಲಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಕುಂದು ಕೊರತೆಗಳನ್ನು ವಿಚಾರಿಸಿದರು. 

ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಕಳೆದ ಬಾರಿಗಿಂತ ೧೬ ಅಡಿ ಏರಿಕೆ

೨೭ ಟಿಎಂಸಿ ನೀರು ಸಂಗ್ರಹ : ಈ ಬಾರಿ ರೈತರ ಕನಸು ನನಸಾಗುವುದೇ..?


ಭದ್ರಾವತಿ, ಜು. ೪: ಕಳೆದ ಬಾರಿ ಜುಲೈ ತಿಂಗಳು ಅರಂಭಗೊಂಡರೂ ಸಹ ಮಳೆ ಬರುವ ಲಕ್ಷಣಗಳು ಕಂಡು ಬಾರದೆ ರೈತರು ಆತಂಕಗೊಂಡಿದ್ದರು. ಆದರೆ ಈ ಬಾರಿ ಮೇ ತಿಂಗಳಿನಿಂದಲೇ ಮಳೆ ಆರಂಭಗೊಂಡಿದ್ದು, ಶನಿವಾರ ಭದ್ರಾ ಜಲಾಶಯದ ನೀರಿನ ಮಟ್ಟ ೧೪೦ ಅಡಿ ತಲುಪಿದೆ. 
ಹವಾಮಾನ ವೈಫರಿತ್ಯದಿಂದಾಗಿ ಈ ಬಾರಿ ಮಳೆಯಾಗಿದ್ದು, ಕಳೆದ ಬಾರಿ ಜುಲೈ ಅಂತ್ಯದ ನಂತರ ರಾಜ್ಯದೆಲ್ಲೆಡೆ ಧಾರಕಾರ ಮಳೆಯಾಗುವ ಜೊತೆಗೆ ನೆರೆ ಹಾವಳಿ ಸಂಭವಿಸಿ ಸಾಕಷ್ಟು ನಷ್ಟ ಅನುಭವಿಸುವಂತಾಗಿತ್ತು. ಗರಿಷ್ಠ ೧೮೬ ಅಡಿ ಎತ್ತರದ ಜಲಾಶಯದಲ್ಲಿ ಕಳೆದ ಬಾರಿಗೆ ಹೋಲಿಕೆ ಮಾಡಿದರೆ  ಈ ಬಾರಿ ೧೬ ಅಡಿ ಹೆಚ್ಚಾಗಿದ್ದು, ೨೭ ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ಬಾರಿ ೧೭.೫ ಅಡಿ ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ಬಾರಿ ಸಹ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ರೈತರ ಆತಂಕ ಸ್ವಲ್ಪಮಟ್ಟಿಗೆ ದೂರವಾಗಿದೆ. 
ಪ್ರತಿ ಬಾರಿ ಒಂದಲ್ಲ ಒಂದು ಕಾರಣಕ್ಕೆ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದು, ಉತ್ತಮವಾಗಿ ಮಳೆಯಾಗಿ ಜಲಾಶಯ ಭರ್ತಿಯಾದರೂ ಸಹ ಹಲವು ಸಮಸ್ಯೆಗಳು ರೈತರನ್ನು ಕಾಡುತ್ತಿವೆ. ಈ ಬಾರಿ ಮಹಾಮಾರಿ ಕೊರೋನಾ ವೈರಸ್ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸಿದ ನಂತರ ಶ್ರೀಸಾಮಾನ್ಯರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಾಗಿದ್ದು, ಇದೀಗ ಯುವ ಸಮೂಹ ಸಹ ಕೃಷಿ ಕಡೆ ಮುಖ ಮಾಡುತ್ತಿದೆ. ಲಾಭ-ನಷ್ಟ ಏನೇ ಇರಲಿ ಕೃಷಿಯಿಂದಲೇ ಬದುಕು ಕಟ್ಟಿಕೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿ ರೈತರ ಭವಿಷ್ಯ ಎಲ್ಲರ ಕಡೆ ಗಮನ ಸೆಳೆದಿದೆ. 
ಜಲಾಶಯ ೧೮೬ ಅಡಿ ಗರಿಷ್ಠ ಮಟ್ಟ ತಲುಪಿದರೂ ಸಹ ಎಡ ಮತ್ತು ಬಲ ದಂಡೆ ನಾಲೆಗಳ ಕೊನೆಯ ಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಜಲಾಶಯದ ನೀರು ಪೋಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಹೆಚ್ಚಿನ ಗಮನ ಹರಿಸಿ ನೀರು ಪೋಲಾಗದಂತೆ ಎಚ್ಚರ ವಹಿಸಬೇಕಾಗಿದೆ. 
ಕಡಿಮೆ ಅವಧಿಯ ಬೆಳೆ ಬೆಳೆಯಲು ಸೂಕ್ತ ಸಮಯ: 
ಪ್ರಸ್ತುತ ತಾಲೂಕಿನಲ್ಲಿ ಮೆಕ್ಕೆ ಜೋಳ ಭಿತ್ತನೆ ಕಾರ್ಯ ಜೂನ್ ಅಂತ್ಯಕ್ಕೆ ಪೂರ್ಣಗೊಂಡಿದ್ದು, ಗರಿಷ್ಠ ೩-೪ ದಿನಗಳ ವರೆಗೆ ಮಾತ್ರ ಭಿತ್ತನೆ ಮಾಡಬಹುದಾಗಿದೆ. ಮೆಕ್ಕೆ ಜೋಳ ಬೆಳೆಗೆ ಇದೀಗ ಸೂಕ್ತ ವಾತಾವರಣವಿದ್ದು, ಮಳೆ ಬಿಟ್ಟು ಬಿಟ್ಟು ಬರುತ್ತಿರುವ ಕಾರಣ ಯಾವುದೇ ಸಮಸ್ಯೆ ಇಲ್ಲ ಎಂದು ಕೃಷಿ ಸಹಾಯಕ ನಿರ್ದೇಶಕ ಶಶಿಧರ್ ತಿಳಿಸಿದ್ದಾರೆ. 
ಭತ್ತದ ಬೆಳೆ ನಾಟಿ ಕಾರ್ಯಕ್ಕೆ ಇನ್ನೂ ಸಮಯವಿದ್ದು, ಜಲಾಶಯದಲ್ಲಿ ನೀರು ಕಳೆದ ಬಾರಿಗಿಂತ ಹೆಚ್ಚು ಸಂಗ್ರಹವಿದ್ದರೂ ಕಾಡಾ ಸಮಿತಿ ಕೈಗೊಳ್ಳುವ ನಿರ್ಧಾರದ ಮೇಲೆ ರೈತರು ಬೆಳೆ ಬೆಳೆಯಬೇಕಾಗಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಮಳೆ ಕೊರತೆ ಕಂಡು ಬಂದಲ್ಲಿ ಇದಕ್ಕೆ ಅನುಗುಣವಾಗಿ ರೈತರು ಭತ್ತದ ಬೆಳೆ ಬೆಳೆಯಲು ಸೂಚಿಸಲಾಗುವುದು. ಕಡಿಮೆ ಅವಧಿ ೧೧೦ದಿನಗಳ ಬೆಳೆಗೆ ಸಂಬಂಧಿಸಿದ ಭತ್ತದ ಬೀಜ ೧೦೦೧ ಮತ್ತು ೧೦೧೦ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಇಲಾಖೆಯಲ್ಲಿ ಭತ್ತ, ರಾಗಿ ಮತ್ತು ತೊಗರಿ ಬೀಜ ದಾಸ್ತಾನು ಇದ್ದು, ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಉಳಿದಂತೆ ಗೊಬ್ಬರ ಸಹ ಸಾಕಷ್ಟು ಪ್ರಮಾಣದಲ್ಲಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದರು. 

Friday, July 3, 2020

ವಿಐಎಸ್‌ಎಲ್ ಆಸ್ಪತ್ರೆ ಸದ್ಬಳಕೆಗೆ ಮುಂದಾದ ಜಿಲ್ಲಾಡಳಿತ

ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ನೇತೃತ್ವದ ತಂಡ ಪರಿಶೀಲನೆ 

 ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಸೇರಿದ ವಿಐಎಸ್‌ಎಲ್ ಆಸ್ಪತ್ರೆ ಸದ್ಬಳಕೆ ಮಾಡಿಕೊಳ್ಳಲು ಇದೀಗ ಜಿಲ್ಲಾಡಳಿತ ಮುಂದಾಗಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ನೇತೃತ್ವದ ತಂಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. 
ಭದ್ರಾವತಿ, ಜು. ೩: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಸೇರಿದ ವಿಐಎಸ್‌ಎಲ್ ಆಸ್ಪತ್ರೆ ಸದ್ಬಳಕೆ ಮಾಡಿಕೊಳ್ಳಲು ಇದೀಗ ಜಿಲ್ಲಾಡಳಿತ ಮುಂದಾಗಿದೆ. 
ಸುಮಾರು ೬೦ ವರ್ಷಗಳಿಗೂ ಹಳೇಯದಾದ ಬೃಹತ್ ಆಸ್ಪತ್ರೆ ಇದಾಗಿದ್ದು, ಈ ಹಿಂದೆ ದೊಡ್ಡಾಸ್ಪತ್ರೆ ಎಂದೇ ಪ್ರಸಿದ್ದಿ ಹೊಂದಿತ್ತು. ವಿಶಾಲವಾದ ಸ್ಥಳಾವಕಾಶ, ಸುಸಜ್ಜಿತ ಕಟ್ಟಡ ಹೊಂದಿರುವ ಆಸ್ಪತ್ರೆ ವಿಐಎಸ್‌ಎಲ್ ಮತ್ತು ಎಂಪಿಎಂ ೨ ಕಾರ್ಖಾನೆಗಳ ಸಾವಿರಾರು ಕಾರ್ಮಿಕರಿಗೆ ಹಾಗೂ ಕುಟುಂಬ ವರ್ಗದವರ ಆರೋಗ್ಯ ಸೇವೆ ಒದಗಿಸುವಲ್ಲಿ ಯಶಸ್ವಿಯಾಗಿತ್ತು.  

      ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳು ಕಳೆದ ಸುಮಾರು ೨ ದಶಕಗಳಿಂದ ಅವನತಿ ದಾರಿ ಹಿಡಿದಿರುವ ಕಾರಣ ಕಾರ್ಮಿಕ ಕುಟುಂಬಗಳು ಬೇರೆಡೆಗೆ ವಲಸೆ ಹೋಗಿದ್ದು, ಈ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ  ಆರೋಗ್ಯ ಸೇವೆಗಳು ಕ್ಷೀಣಗೊಂಡಿವೆ. ಪ್ರಸ್ತುತ ಕೊರೋನಾ ವೈರಸ್ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಜಿಲ್ಲಾ ಮಟ್ಟದಲ್ಲಿ ಈಗಾಗಲೇ ಮೆಗ್ಗಾನ್ ಆಸ್ಪತ್ರೆಯಲ್ಲಿ ಪತ್ಯೇಕವಾಗಿ ಕೋವಿಡ್-೧೯ ಆಸ್ಪತ್ರೆ ತೆರೆಯಲಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದೀಗ ಜಿಲ್ಲಾಡಳಿತ ತಾಲೂಕು ಮಟ್ಟದಲ್ಲಿಯೇ ಚಿಕಿತ್ಸೆಗೆ ಆಸ್ಪತ್ರೆಗಳನ್ನು ಗುರುತಿಸುವ ಕಾರ್ಯ ಕೈಗೊಂಡಿದೆ. ಈ ಹಿನ್ನಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ನೇತೃತ್ವದ ತಂಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪೂರ್ವ ಸಿದ್ದತೆಗಳನ್ನು ಕೈಗೊಳಲಾಗಿದೆ. 
ಜಿಲ್ಲಾ ಆರೋಗ್ಯಾಧಿಕಾರಿಗಳು, ತಹಸೀಲ್ದಾರ್ ಶಿವಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಕಂದಾಯಾಧಿಕಾರಿ ಪ್ರಶಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಎಲ್ಲರ ಸಹಕಾರದಿಂದ ಸೇವಾ ಕಾರ್ಯ ಯಶಸ್ವಿ : ಎನ್.ಎಸ್ ಶ್ರೀಧರ್

ಭದ್ರಾವತಿ ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಶುಕ್ರವಾರ ಬಿ.ಎಂ ಶಾಂತಕುಮಾರ್ ಅಧಿಕಾರ ಸ್ವೀಕರಿಸಿದರು. 
ಭದ್ರಾವತಿ, ಜು. ೩: ಎಲ್ಲರೂ ಸಹಕಾರ ನೀಡಿದಾಗ ಮಾತ್ರ ಸೇವಾ ಕಾರ್ಯಗಳು ಯಶಸ್ವಿಗೊಳ್ಳುತ್ತವೆ ಎಂದು ಸಹಾಯಕ ಜಿಲ್ಲಾ ಗೌರ‍್ನರ್ ಎನ್.ಎಸ್ ಶ್ರೀಧರ್ ತಿಳಿಸಿದರು. 
ಅವರು ಶುಕ್ರವಾರ ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸ್ವೀಕಾರ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು. 
ಯಾವುದೇ ಕಾರ್ಯ ಪೂರ್ಣಗೊಳ್ಳಬೇಕಾದರೆ ಪ್ರತಿಯೊಬ್ಬರ ಸಹಕಾರ ಅತಿ ಅವಶ್ಯಕ ಎಂಬುದನ್ನು ಮುಂಚೂಣಿ ನಾಯಕರು ಅರಿತುಕೊಳ್ಳಬೇಕು. ಸ್ವಯಂ ಪ್ರೇರಣೆಯಿಂದ ಸೇವೆಗೆ ಮುಂದಾಗಬೇಕೆಂದರು. 
ನಿಕಟ ಪೂರ್ವ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ ಪ್ರಸಕ್ತ ಸಾಲಿನ ನೂತನ ಅಧ್ಯಕ್ಷ ಬಿ.ಎಂ ಶಾಂತಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿ ತಮ್ಮ ಅಧಿಕಾರದ ಅವಧಿಯಲ್ಲಿನ ಸೇವಾ ಕಾರ್ಯಗಳನ್ನು ಸ್ಮರಿಸಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. 
ನಿಕಟ ಪೂರ್ವ ಕಾರ್ಯದರ್ಶಿ ಅಡವೀಶಯ್ಯ ತಮ್ಮ ಅವಧಿಯ ಕಾರ್ಯ ಚಟುವಟಿಕೆಗಳ ವರದಿ ಮಂಡಿಸಿದರು. ಝೋನಲ್ ಟ್ರೈನರ್ ರವೀಂದ್ರನಾಥ್ ಐತಾಳ್, ಝೋನಲ್ ಲೆಫ್ಟಿನೆಂಟ್ ಡಾ. ಕೆ ನಾಗರಾಜ್ ಮಾತನಾಡಿದರು. 
ನೂತನ ಕಾರ್ಯದರ್ಶಿ ಎಂ.ಎನ್ ಗಿರೀಶ್, ಆನ್ಸ್ ಕ್ಲಬ್ ಅಧ್ಯಕ್ಷೆ ಕುಸುಮ ತೀರ್ಥಯ್ಯ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ನಗರದ ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ ಅವರಿಗೆ ಗೌರವ ಸದಸ್ಯತ್ವದೊಂದಿಗೆ ಅಭಿನಂದಿಸಲಾಯಿತು. 
ಕಾರ್ಯದರ್ಶಿ ಬಿ. ಮಂಜುನಾಥ್, ಖಜಾಂಚಿ ಅಮಿತ್ ಕುಮಾರ್ ಜೈನ್, ವಿವಿಧ ವಿಭಾಗಗಳ ನಿರ್ದೇಶಕರಾದ ಕೂಡ್ಲಿಗೆರೆ ಎಸ್ ಹಾಲೇಶ್, ಪ್ರಭಾಕರ ಬೀರಯ್ಯ, ಧರ್ಮೇಂದ್ರ, ವಿವಿಧ ವಿಭಾಗಗಳ ಛೇರ‍್ಮನ್‌ಗಳಾದ ಆರ್.ಸಿ ಬೆಂಗಳೂರಿ, ಟಿ.ಎಸ್ ದುಷ್ಯಂತ್‌ರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರಾಘವೇಂದ್ರ ಉಪಧ್ಯಾಯ ಕಾರ್ಯಕ್ರಮ ನಿರೂಪಸಿದರು.   

ಉಕ್ಕಿನ ನಗರದಲ್ಲಿ ಒಟ್ಟು ೨೩ ಸೋಂಕಿತರು, ಒಂದೇ ದಿನ ೪ ಪ್ರಕರಣ ಪತ್ತೆ

ತಾಲೂಕು ಕಛೇರಿ, ಶಾಸಕರ ಗೃಹ ಕಛೇರಿಗೂ ಸ್ಯಾನಿಟೈಸರ್

ಭದ್ರಾವತಿ ನಗರಸಭೆ ವ್ಯಾಪ್ತಿಯ ಘೋಷಿತ ಕೊಳಚೆ ಪ್ರದೇಶ ಸುರಗಿತೋಪಿನಲ್ಲಿ ಗುರುವಾರ ಯುವಕನೊಬ್ಬ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ೪ ರಸ್ತೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಭದ್ರಾವತಿ, ಜು. ೩: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗುವಂತಾಗಿದೆ. ಇದುವರೆಗೂ ಒಟ್ಟು ೨೩ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಶುಕ್ರವಾರ ಒಂದೇ ದಿನ ೪ ಪ್ರಕರಣಗಳು ಪತ್ತೆಯಾಗಿವೆ. 
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ, ಆರೋಗ್ಯ ಹಾಗೂ ಪೊಲೀಸ್ ಇಲಾಖೆಗಳು ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಕಾಣಿಸಿಕೊಂಡ ಆರಂಭದಿಂದಲೂ ನಿರಂತರವಾಗಿ ಕಾರ್ಯಾಚರಣೆ ಕೈಗೊಂಡಿದ್ದರೂ ಸಹ ಇದೀಗ ಸೋಂಕಿನ ಪ್ರಕರಣ ೨೩ಕ್ಕೆ ತಲುಪಿದೆ. ೩-೪ ದಿನಗಳ ಹಿಂದೆ ಒಂದೇ ದಿನ ೮ ಸೋಂಕಿನ ಪ್ರಕರಣ ದಾಖಲಾಗಿದ್ದವು. 
ಶುಕ್ರವಾರ ಪುನಃ ೪ ಪ್ರಕರಣ ದಾಖಲಾಗಿವೆ. ಹೊಳೆಹೊನ್ನೂರಿನಲ್ಲಿ ೧೯ ವರ್ಷದ ಯುವಕನಿಗೆ, ವಿಶ್ವೇಶ್ವರಯ್ಯ ನಗರದಲ್ಲಿ ಬೆಂಗಳೂರಿನಿಂದ ಬಂದಿರುವ ೨೨ ಹಾಗೂ ೨೦ ವರ್ಷದ ಇಬ್ಬರು ಸಹೋದರಿಯರಿಗೆ ಮತ್ತು ಕಡದಕಟ್ಟೆಯಲ್ಲಿ ಬೆಂಗಳೂರಿನಿಂದ ಬಂದಿರುವ ೨೮ ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ನಗರಸಭೆ ಆಡಳಿತ ಸೋಂಕು ಪತ್ತೆಯಾಗಿರುವ ಸ್ಥಳದ ೧೦೦ ಹಾಗೂ ೨೦೦ ಮೀಟರ್ ವಿಸ್ತೀರ್ಣದಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಸ್ಯಾನಿಟೈಸರ್ ಮಾಡಿಸಿ ಕಂಟೈನ್‌ಮೆಂಟ್ ವಲಯವನ್ನಾಗಿಸಿ ಸೀಲ್ ಡೌನ್‌ಗೆ ಮುಂದಾಗಿದೆ. 
ಸುರಗಿತೋಪು ಸೀಲ್‌ಡೌನ್: 
ನಗರಸಭೆ ವ್ಯಾಪ್ತಿಯ ಘೋಷಿತ ಕೊಳಚೆ ಪ್ರದೇಶ ಸುರಗಿತೋಪಿನಲ್ಲಿ ಗುರುವಾರ ಯುವಕನೊಬ್ಬ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ೪ ರಸ್ತೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಕೊಳಚೆ ಪ್ರದೇಶವಾಗಿರುವ ಹಿನ್ನಲೆಯಲ್ಲಿ ನಗರಸಭೆ ಆಡಳಿತ ಹೆಚ್ಚಿನ ಮುಂಜಾಗ್ರತೆ ವಹಿಸಲಾಗಿದೆ. 
ತಾಲೂಕು ಕಛೇರಿ, ಶಾಸಕರ ಗೃಹ ಕಛೇರಿಗೂ ಸ್ಯಾನಿಟೈಸರ್: 
ತಾಲೂಕಿನ ಕೂಡ್ಲಿಗೆರೆ ನಾಡಕಛೇರಿ ಅಧಿಕಾರಿಯೊಬ್ಬರ ಪತ್ನಿಗೆ ಸೋಂಕು ತಗುಲಿದೆ ಎನ್ನುವ ಮಾಹಿತಿ ಗುರುವಾರ ಎಲ್ಲೆಡೆ ಹರದಾಡುತ್ತಿತ್ತು. ಈ ನಡುವೆ ನಾಡಕಛೇರಿ ಅಧಿಕಾರಿ ನಗರದ ತಾಲೂಕು ಕಛೇರಿಗೂ ಭೇಟಿ ನೀಡಿರುವ ಮಾಹಿತಿ ಹಿನ್ನಲೆಯಲ್ಲಿ ನಗರಸಭೆವತಿಯಿಂದ ತಾಲೂಕು ಕಛೇರಿಗೆ ಸ್ಯಾನಿಟೈಸರ್ ಮಾಡಿಸಲಾಗಿದೆ. 
ಕಳೆದ ೪-೫ ದಿನಗಳ ಹಿಂದೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಲು ಆಶಾ ಕಾರ್ಯಕರ್ತೆಯರು ಹೊಸಮನೆ ಎನ್‌ಎಂಸಿ ರಸ್ತೆಯಲ್ಲಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಗೃಹ ಕಛೇರಿಗೆ ಭೇಟಿ ನೀಡಿದ್ದರು. ಈ ಪೈಕಿ ಆಶಾ ಕಾರ್ಯಕರ್ತೆಯೊಬ್ಬರಿಗೆ ಸೋಂಕು ಹರಡಿರುವುದು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಶಾಸಕರ ಗೃಹ ಕಛೇರಿಗೂ ನಗರಸಭೆ ವತಿಯಿಂದ ಸ್ಯಾನಿಟೈಸರ್ ಮಾಡಿಸಲಾಗಿದೆ.