Thursday, July 16, 2020

ಕೆರೆಗಳ ಬೌಂಡರಿ ನಿಗದಿಪಡಿಸಲು ಇಬ್ಬರು ಸರ್ವೆಯರ್ ನೇಮಕಗೊಳಿಸಲು ಮನವಿ

ಇಬ್ಬರು ಸರ್ವೆಯವರನ್ನು ನಿಯೋಜಿಸಿ ನಗರಸಭೆ ವ್ಯಾಪ್ತಿಯ ಕೆರೆಗಳ ಬೌಂಡರಿ ನಿಗದಿಪಡಿಸಬೇಕೆಂದು ಒತ್ತಾಯಿಸಿ ಗುರುವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗುರುವಾರ ಭದ್ರಾವತಿಯಲ್ಲಿ ತಹಸೀಲ್ದಾರ್ ಶಿವಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಜು. ೧೬: ಇಬ್ಬರು ಸರ್ವೆಯವರನ್ನು ನಿಯೋಜಿಸಿ ನಗರಸಭೆ ವ್ಯಾಪ್ತಿಯ ಕೆರೆಗಳ ಬೌಂಡರಿ ನಿಗದಿಪಡಿಸಬೇಕೆಂದು ಒತ್ತಾಯಿಸಿ ಗುರುವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗುರುವಾರ ತಹಸೀಲ್ದಾರ್ ಶಿವಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
  ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೭೦ಕ್ಕೂ ಅಧಿಕ ಕೆರೆಗಳಿದ್ದು, ಸುಮಾರು ೨೫ ವರ್ಷಗಳಿಂದ ಬೌಂಡರಿ ನಿಗದಿಪಡಿಸದೇ ಇರುವುದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿರುವುದಿಲ್ಲ. ಪ್ರಸ್ತುತ ನಗರಸಭೆ ಪೌರಾಯುಕ್ತ ಮನೋಹರ್ ಕೆರೆಗಳ ಅಭಿವೃದ್ಧಿಗೆ ಉತ್ಸುಕರಾಗಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಅಂತರ್ಜಲಮಟ್ಟ ಹೆಚ್ಚಿಸಿ ದನಗಾಹಿಗಳಿಗೆ, ರೈತರಿಗೆ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ತಾಲೂಕು ಆಡಳಿತ ನಗರಸಭೆ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಮೀನುಗಾರಿಕೆ ಇಲಾಖೆ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಇವುಗಳ ಸಹಯೋಗದೊಂದಿಗೆ ಬೌಂಡರಿ ನಿಗದಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಿ ಕೊಡಬೇಕೆಂದು ಕೋರಲಾಗಿದೆ.
  ತಕ್ಷಣ ಇಬ್ಬರು ಸರ್ವೆಯವರನ್ನು ನೇಮಿಸಿ ಬೌಂಡರಿ ನಿಗದಿ ಪಡಿಸುವಂತೆ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಸರ್.ಎಂ. ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಛೇರ‍್ಮನ್ ಆರ್. ವೇಣುಗೋಪಾಲ್ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದರು.

Wednesday, July 15, 2020

ಒಂದೇ ದಿನ ೫ ಸೋಂಕು ಪತ್ತೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಹುಡ್ಕೋ ಕಾಲೋನಿಯಲ್ಲಿ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್, ಕಾಗದನಗರ ಪೊಲೀಸ್ ಠಾಣಾಧಿಕಾರಿ ಸೇರಿದಂತೆ ನಗರಸಭೆ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. 
ಭದ್ರಾವತಿ, ಜು. ೧೫: ಉಕ್ಕಿನ ನಗರದಲ್ಲಿ ಪುನಃ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಬುಧವಾರ ಒಂದೇ ದಿನ ೫ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 
ನಗರಸಭೆ ವ್ಯಾಪ್ತಿಯ ಕನಕನಗರದಲ್ಲಿ ೨೩ ವರ್ಷದ ಯುವತಿಗೆ, ಹುಡ್ಕೋ ಕಾಲೋನಿ ೬೫ ವರ್ಷ ವೃದ್ಧನಿಗೆ, ಸಿರಿಯೂರು ತಾಂಡದ ೩೬ ವರ್ಷದ ಪುರುಷನಿಗೆ, ಗೋಲ್ಡನ್ ಜ್ಯೂಬಿಲಿ ೫೨ ವರ್ಷದ ವ್ಯಕ್ತಿಗೆ ಹಾಗೂ ತಾಲೂಕಿನ ಹೊಳೆಹೊನ್ನೂರಿನ ೩೩ ವರ್ಷದ ಯುವಕನಿಗೆ ಸೋಂಕು ತಗುಲಿದೆ. 
ಕೊರೋನಾ ಸೋಂಕು ಕಾಣಿಸಿಕೊಂಡಿರುವ ಪ್ರದೇಶದ ವ್ಯಾಪ್ತಿಯಲ್ಲಿ ನಗರಸಭೆ ವತಿಯಿಂದ ಸ್ಯಾನಿಟೈಸರ್ ಕೈಗೊಳ್ಳಲಾಗಿದ್ದು, ಕಂಟೈನ್ಮೆಂಟ್ ವಲಯವನ್ನಾಗಿಸಿ ಸೀಲ್ ಡೌನ್ ಘೋಷಿಸಲಾಗಿದೆ. 
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್, ಕಾಗದನಗರ ಪೊಲೀಸ್ ಠಾಣಾಧಿಕಾರಿ ಸೇರಿದಂತೆ ನಗರಸಭೆ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳು ಸೋಂಕು ಪತ್ತೆಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಕೆ. ರಾಜಶೇಖರ್ ದ್ವಿತೀಯ ಪಿಯುಸಿಯಲ್ಲಿ ೭ನೇ ಸ್ಥಾನ : ಸನ್ಮಾನ, ಅಭಿನಂದನೆ

ಭದ್ರಾವತಿಯಲ್ಲಿ ಬುಧವಾರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಅತಿ ಹೆಚ್ಚು ಅಂಕಗಳನ್ನು ಪಡೆದು ಜಿಲ್ಲೆಗೆ ೭ನೇ ಸ್ಥಾನ ಕಾಯ್ದುಕೊಂಡಿರುವ ಜಾವಳ್ಳಿ ಶ್ರೀ ಅರೋಬಿಂದೋ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ,ಕೆ. ರಾಜ್‌ಶೇಖರ್ ಅವರನ್ನು ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಸನ್ಮಾನಸಿ ಅಭಿನಂದಿಸಲಾಯಿತು.
ಭದ್ರಾವತಿ, ಜು. ೧೫: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಅತಿ ಹೆಚ್ಚು ಅಂಕಗಳನ್ನು ಪಡೆದು ಜಿಲ್ಲೆಗೆ ೭ನೇ ಸ್ಥಾನ ಕಾಯ್ದುಕೊಂಡಿರುವ ಜಾವಳ್ಳಿ ಶ್ರೀ ಅರೋಬಿಂದೋ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕೆ. ರಾಜ್‌ಶೇಖರ್ ಅವರನ್ನು ಅಖಿಲ ಭಾರತ ವೀರಶೈವ ಮಹಾಸಭಾ ಅಭಿನಂದಿಸಿದೆ. 
ಗಾಂಧಿನಗರ ನಿವಾಸಿ ನ್ಯಾಯವಾದಿ ಎನ್.ಎಸ್ ಕುಮಾರ್ ಹಾಗೂ ಸಿ.ಎಸ್ ವಿಶಾಲಾಕ್ಷಿ ದಂಪತಿ ಪುತ್ರ  ಕೆ. ರಾಜ್‌ಶೇಖರ್ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೬೦೦ಕ್ಕೆ ೫೮೬ ಅಂಕಗಳೊಂದಿಗೆ ಶೇ.೯೭.೬೭ ಫಲಿತಾಂಶ ಪಡೆದುಕೊಂಡಿದ್ದು, ಉತ್ತಮ ಸಾಧನೆ ಮಾಡಿದ್ದಾರೆ. ಇವರನ್ನು ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಬಿಳಿಕಿ ಹಿರೇಮಠ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. 
       ಮಹಾಸಭಾ ಅಧ್ಯಕ್ಷ ಸಿದ್ದಲಿಂಗಯ್ಯ, ಉಪಾಧ್ಯಕ್ಷ ವಾಗೀಶ್, ಜಿಲ್ಲಾ ನಿದೇ೯ಶಕರಾದ ಜಿ.ಸಿ ಸುಕುಮಾರ್ ಹಾಗೂ ಯುವ ಮುಖಂಡರಾದ ಎಚ್. ಮಂಜುನಾಥ್, ಆನಂದ್ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಸೀಲ್‌ಡೌನ್ ಪ್ರದೇಶಗಳ ವ್ಯಾಪ್ತಿಯ ನಿವಾಸಿಗಳಿಗೆ ದಿನಸಿ ಸಾಮಗ್ರಿ ವಿತರಣೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ವಿದ್ಯಾಮಂದಿರ ಸೀಲ್ ಡೌನ್  ಪ್ರದೇಶದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ನಿವಾಸಿಗಳಿಗೆ ನಗರಸಬೆ ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್ ದಿನಸಿ ಸಾಮಗ್ರಿಗಳನ್ನು ವಿತರಿಸಿದರು. ಸಿಬ್ಬಂದಿ ಗೋವಿಂದ, ಮುಖಂಡ ಕಾಂತರಾಜ್ ಸೇರಿ ಇನ್ನಿತರರು ಉಪಸ್ಥಿತರಿದ್ದರು. 
ಭದ್ರಾವತಿ, ಜು. ೧೫: ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಸೀಲ್ ಡೌನ್ ಘೋಷಿಸಲಾದ ಪ್ರದೇಶಗಳ ವ್ಯಾಪ್ತಿಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ನಿವಾಸಿಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. 
ದಾನಿಗಳ ನೆರವಿನಿಂದ ಸೀಲ್‌ಡೌನ್ ಪ್ರದೇಶಗಳಾದ ಘೋಷಿತ ಕೊಳಚೆ ಪ್ರದೇಶ ಸುರಗಿತೋಪು, ವಿದ್ಯಾಮಂದಿರ ಹಾಗೂ ಕಡದಕಟ್ಟೆ ಸೇರಿದಂತೆ ಇನ್ನಿತರೆಡೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ವಿತರಿಸಿದರು.  ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೧೦ಕ್ಕೂ ಅಧಿಕ ಸೀಲ್ ಡೌನ್ ಪ್ರದೇಶಗಳಿದ್ದು, ಆಯಾ ವ್ಯಾಪ್ತಿಯ ರಾಜಕೀಯ ಪಕ್ಷಗಳ ಪ್ರಮುಖರು, ದಾನಿಗಳು ನಿವಾಸಿಗಳ ಸಂಕಷ್ಟಗಳಿಗೆ ನಗರಸಭೆಯೊಂದಿಗೆ ಸ್ಪಂದಿಸುತ್ತಿದ್ದಾರೆ.

ಕರ್ತವ್ಯನಿರತ ಶಿಕ್ಷಕ ಕುಮಾರ್ ನಿಧನ

ಕುಮಾರ್ 
ಭದ್ರಾವತಿ, ಜು. ೧೫: ಕರ್ತವ್ಯದಲ್ಲಿ ತೊಡಗಿದ್ದ ನಗರದ ನ್ಯೂಟೌನ್ ಈಶ್ವರಮ್ಮ ಪ್ರೌಢಶಾಲೆ ಶಿಕ್ಷಕ ಕುಮಾರ್(೪೮) ಬುಧವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಜನ್ನಾಪುರ ನಿವಾಸಿಯಾಗಿದ್ದು, ಪತ್ನಿ, ಓರ್ವ ಪುತ್ರಿ ಸೇರಿ ಅಪಾರ ಬಂಧು-ಬಳಗ ಬಿಟ್ಟಗಲಿದ್ದಾರೆ. ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಮೌಲ್ಯಮಾಪನ ನಡೆಸುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿದೆ. ಮೃತರ ತಂದೆ ನಾಗರಾಜ್ ಜನ್ನಾಪುರ ಶ್ರೀ ಮಹಾಗಣಪತಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೃತರ ನಿಧನಕ್ಕೆ  ಶ್ರಿ ಸತ್ಯಸಾಯಿ ಬಾಬಾ ಸಮಗ್ರ ಶಿಕ್ಷಣ ಸಂಸ್ಥೆ, ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ತಾಲೂಕು ಕನ್ನಡ ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಸೇರಿದಂತೆ ಶಿಕ್ಷಕ ವೃಂದದವರು ಸಂತಾಪ ಸೂಚಿಸಿದ್ದಾರೆ. 

ಸ್ಯಾನಿಟೈಸರ್ ಸಿಂಪಡಿಸಲು ಅನುಮತಿ ಕೋರಿ ಮನವಿ

ಭದ್ರಾವತಿ ನಗರದೆಲ್ಲೆಡೆ ಕೋವಿಡ್-೧೯ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸ್ಯಾನಿಟೈಸರ್ ಸಿಂಪಡಿಸಲು ಅನುಮತಿ ನೀಡಬೇಕೆಂದು ಸೋಷಿಯಲ್ ಡೆಮಾಕೆಟ್ರಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಲಾಗಿದೆ. 
ಭದ್ರಾವತಿ, ಜು. ೧೫: ನಗರದೆಲ್ಲೆಡೆ ಕೋವಿಡ್-೧೯ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸ್ಯಾನಿಟೈಸರ್ ಸಿಂಪಡಿಸಲು ಅನುಮತಿ ನೀಡಬೇಕೆಂದು ಸೋಷಿಯಲ್ ಡೆಮಾಕೆಟ್ರಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಲಾಗಿದೆ. 
ನಗರಸಭೆ ವ್ಯಾಪ್ತಿ ವಾರ್ಡ್ ೫ ಮತ್ತು ೭ರ ವ್ಯಾಪ್ತಿಯಲ್ಲಿ ಸೋಂಕು ಹರಡದಂತೆ ಜು.೧೭ ಮತ್ತು ೧೯ರಂದು ಎರಡು ದಿನ ಸ್ಯಾನಿಟೈಸರ್ ಸಿಂಪಡಿಸಲು ಅನುಮತಿ ಜೊತೆಗೆ ಸೂಕ್ತ ಮಾರ್ಗದರ್ಶ ನೀಡುವಂತೆ ಮನವಿ ಮಾಡಲಾಗಿದೆ. 
ಸೋಷಿಯಲ್ ಡೆಮಾಕೆಟ್ರಿಕ್ ಪಾರ್ಟಿ ಆಫ್ ಇಂಡಿಯಾದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಕನ್ಸರ್ವೆನ್ಸಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ : ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮನವಿ

ಭದ್ರಾವತಿ ನಗರಸಭೆ ವ್ಯಾಪ್ತಿಯ ೬ನೇ ವಾರ್ಡಿನಲ್ಲಿ ಕನ್ಸರ್ವೆನ್ಸಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸುತ್ತಿದ್ದು, ಈ ಹಿನ್ನಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬುಧವಾರ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಜು. ೧೫: ನಗರಸಭೆ ವ್ಯಾಪ್ತಿಯ ೬ನೇ ವಾರ್ಡಿನಲ್ಲಿ ಕನ್ಸರ್ವೆನ್ಸಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸುತ್ತಿದ್ದು, ಈ ಹಿನ್ನಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬುಧವಾರ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಲಾಯಿತು. 
ನಗರಸಭೆಗೆ ಸೇರಿದ ಸಾರ್ವಜನಿಕರ ಉಪಯೋಗಕ್ಕೆ ಇರುವ ಕನ್ಸರ್ವೆನ್ಸಿ ಜಾಗದಲ್ಲಿ ಹಳೇನಗರ ಹನುಮಂತಪ್ಪ ಕಾಲೋನಿ ನಿವಾಸಿ ಚಂದ್ರಮ್ಮ ಎಂಬುವರು ಕಾನೂನು ಬಾಹಿರವಾಗಿ ಮನೆ ನಿರ್ಮಿಸಿಕೊಳ್ಳುತ್ತಿದ್ದು, ಅಲ್ಲದೆ ಮನೆ ನಿರ್ಮಾಣಕ್ಕೆ ಯಾವುದೇ ಪರವಾನಿಗೆ ಸಹ ತೆಗೆದುಕೊಂಡಿರುವುದಿಲ್ಲ. ಈ ನಡುವೆ ಮನೆಯ ಎರಡು ನಲ್ಲಿ ಸಂಪರ್ಕಗಳನ್ನು ಅಕ್ರಮವಾಗಿ ಪಡೆದುಕೊಂಡಿರುತ್ತಾರೆ. ನಿವೇಶನ ಅಳತೆಯಲ್ಲೂ ಸಾಕಷ್ಟು ವ್ಯತ್ಯಾಸಗಳಿದ್ದು, ಈ ಹಿನ್ನಲೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಂಡು ಕನ್ಸರ್ವೆನ್ಸಿ ಜಾಗ ತೆರವುಗೊಳಿಸಬೇಕೆಂದು ಒತ್ತಾಯಿಸಲಾಗಿದೆ. 
ಕರ್ನಾಟಕ ಜನ ಸೈನ್ಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಹನುಮಮ್ಮ, ತಾಲೂಕು ಅಧ್ಯಕ್ಷ ಕೆ. ಮಂಜುನಾಥ್, ಮುಖಂಡರಾದ ರಾಘವೇಂದ್ರ, ಗಣಪತಿರಾವ್, ಯಶೋಧ, ದೊಡ್ಮನೆ ನಾರಾಯಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.