Tuesday, July 28, 2020

ಬಿಜೆಪಿ ಶಕ್ತಿ ಕೇಂದ್ರದಿಂದ ರುದ್ರಭೂಮಿಯಲ್ಲಿ ವನಮಹೋತ್ಸವ

ಭದ್ರಾವತಿಯಲ್ಲಿ ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆ ಅಂಗವಾಗಿ ಭಾರತೀಯ ಜನತಾ ಪಕ್ಷದ ಹುತ್ತಾ ಮಹಾ ಶಕ್ತಿ ಕೇಂದ್ರದವತಿಯಿಂದ ಮಂಗಳವಾರ ಹಿಂದೂ ರುದ್ರಭೂಮಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. 
ಭದ್ರಾವತಿ, ಜು. ೨೯: ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆ ಅಂಗವಾಗಿ ಭಾರತೀಯ ಜನತಾ ಪಕ್ಷದ ನಗರದ ಹುತ್ತಾ ಮಹಾ ಶಕ್ತಿ ಕೇಂದ್ರದವತಿಯಿಂದ ಮಂಗಳವಾರ ಹಿಂದೂ ರುದ್ರಭೂಮಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. 
ಎಂಪಿಎಂ ಕಬ್ಬು ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಕವಲಗುಂದಿ ರಾಜಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಚನ್ನೇಶ್, ಮುಖಂಡರಾದ ವಿ. ಕದಿರೇಶ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ರೈಲ್ವೆ ಸಲಹಾ ಸಮಿತಿ ಸದಸ್ಯ ಎನ್. ವಿಶ್ವನಾಥರಾವ್, ಕೆ.ಆರ್ ಸತೀಶ್, ಮೂರ್ತಿ, ಸತೀಶ್‌ಕುಮಾರ್, ಅನ್ನಪೂರ್ಣ ಸಾವಂತ್, ಶೋಭಾ ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು. 

ಮದ್ಯದಂಗಡಿ ವಿರುದ್ಧ ಕ್ರಮಕ್ಕೆ ಆಗ್ರಹ


ಭದ್ರಾವತಿ ನಗರಸಭೆ ವ್ಯಾಪ್ತಿಯ ಉಜ್ಜನಿಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಿಂಭಾಗ ಹೊಸ ಆನೆಕೊಪ್ಪ ಗ್ರಾಮದಲ್ಲಿ ತೆರೆಯಲಾಗಿರುವ ಎಂಎಸ್‌ಐಎಲ್ ಮದ್ಯಂಗಡಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಬೇರೆಡೆಗೆ ಸ್ಥಳಾಂತರಿಸುವಂತೆ ಸಂಯುಕ್ತ ಜನತಾದಳ ರಾಜ್ಯ ಯುವ ಮುಖಂಡ ಶಶಿಕುಮಾರ್ ಎಸ್ ಗೌಡ ತಹಸೀಲ್ದಾರ್‌ಗೆ  ಆಗ್ರಹಿಸಿದ್ದಾರೆ.
ಭದ್ರಾವತಿ, ಜು. ೨೮: ನಗರಸಭೆ ವ್ಯಾಪ್ತಿಯ ಉಜ್ಜನಿಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಿಂಭಾಗ ಹೊಸ ಆನೆಕೊಪ್ಪ ಗ್ರಾಮದಲ್ಲಿ ತೆರೆಯಲಾಗಿರುವ ಎಂಎಸ್‌ಐಎಲ್ ಮದ್ಯಂಗಡಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಬೇರೆಡೆಗೆ ಸ್ಥಳಾಂತರಿಸುವಂತೆ ಸಂಯುಕ್ತ ಜನತಾದಳ ರಾಜ್ಯ ಯುವ ಮುಖಂಡ ಶಶಿಕುಮಾರ್ ಎಸ್ ಗೌಡ ತಹಸೀಲ್ದಾರ್‌ಗೆ  ಆಗ್ರಹಿಸಿದ್ದಾರೆ. 
ಅವರು ಮಂಗಳವಾರ ಉಪತಹಸೀಲ್ದಾರ್ ರಂಗಮ್ಮ ಅವರಿಗೆ ಮನವಿ ಸಲ್ಲಿಸಿದ್ದು, ತಾಲೂಕಿನಲ್ಲಿ ಮದ್ಯದಂಗಡಿಗಳಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಕೆಲವು ದಿನಗಳ ಹಿಂದೆ ಹೊಸ ಆನೆಕೊಪ್ಪ ಗ್ರಾಮಸ್ಥರು ಮದ್ಯದಂಗಡಿ ಎದುರು ಪ್ರತಿಭಟನೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿದ್ದಾರೆ.
ಈ ಮದ್ಯದಂಗಡಿಯಿಂದ ಪ್ರತಿದಿನ ಇಲ್ಲಿನ ನಿವಾಸಿಗಳಿಗೆ ಕಿರಿಕಿರಿಯಾಗುತ್ತಿದೆ. ಎಂಆರ್‌ಪಿ ದರಗಿಂತ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಮದ್ಯ ಸೇವೆನೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಲಾಗಿದೆ. ಈ ಹಿನ್ನಲೆಯಲ್ಲಿ ಈ ಮದ್ಯದಂಗಡಿ ವಿರುದ್ಧ ಅಬಕಾರಿಗಳು ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಆ.೧೦ರಂದು ತಾಲೂಕು ಕಛೇರಿ ಮುಂಭಾಗ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ. 

Monday, July 27, 2020

ಭದ್ರಾವತಿಯಲ್ಲಿ ಒಂದೇ ದಿನ ೧೭ ಸೋಂಕು ಪತ್ತೆ

ಭದ್ರಾವತಿ, ಜು. ೨೭: ತಾಲೂಕಿನಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸೋಮವಾರ ಒಂದೇ ದಿನ ೧೭ ಪ್ರಕರಣಗಳು ದಾಖಲಾಗಿವೆ.
ಉಜ್ಜನಿಪುರದಲ್ಲಿ ೬೫ ವರ್ಷದ ಮಹಿಳೆ ಮತ್ತು ೩೪ ವರ್ಷದ ಪುರುಷ,  ಹಳೇನಗರ ಮರಾಠ ಬೀದಿಯಲ್ಲಿ ೬೨ ವರ್ಷದ ವ್ಯಕ್ತಿ ಮತ್ತು ೫೫ ವರ್ಷದ ಮಹಿಳೆ, ಬೊಮ್ಮನಕಟ್ಟೆಯಲ್ಲಿ ೪೫ ವರ್ಷದ ವ್ಯಕ್ತಿ, ಹುತ್ತಾ ಕಾಲೋನಿ ೩೭ ವರ್ಷದ ಪುರುಷ, ಅಂಬೇಡ್ಕರ್ ನಗರದಲ್ಲಿ ೪೪ ವರ್ಷದ ವ್ಯಕ್ತಿ, ಗಾಂಧಿನಗರದಲ್ಲಿ ೫೫ ವರ್ಷದ ಮಹಿಳೆ, ಜೈ ಭೀಮ ನಗರದಲ್ಲಿ ೫೭ ವರ್ಷದ ಮಹಿಳೆ, ಸೀಗೆಬಾಗಿಯಲ್ಲಿ ೪೧ ವರ್ಷದ ಪುರುಷ, ಹೊಳೆ ನೇರಳೆಕೆರೆ ೬೫ ವರ್ಷದ ವ್ಯಕ್ತಿ, ದೊಣಬಘಟ್ಟ ತಡಸದಲ್ಲಿ ೪೨ ವರ್ಷದ ಮಹಿಳೆ, ಹೊಳೆಹೊನ್ನೂರಿನಲ್ಲಿ ೨೪ ವರ್ಷದ ಯುವತಿ, ಬಿಆರ್’ಪಿ ಗ್ಯಾರೇಜ್ ಕ್ಯಾಂಪ್’ನಲ್ಲಿ 25 ಹಾಗೂ 65 ವರ್ಷದ ಇಬ್ಬರು ಪುರುಷರು ಮತ್ತು ಹುಣಸೆ ಕಟ್ಟಿ  ಜಂಕ್ಷನ್’ನಲ್ಲಿ 26 ವರ್ಷದ ಯುವಕ  ಒಟ್ಟು ೧೭ ಮಂದಿ ಸೋಂಕಿಗೆ ಒಳಗಾಗಿದ್ದಾರೆ. 
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ,  ಆರೋಗ್ಯ ನಿರೀಕ್ಷಕಿ ಲತಾಮಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದೆ. 

ನಂದಿನ ಹಾಲಿನ ಉತ್ಪನ್ನಗಳ ಮಾರಾಟ ಕೇಂದ್ರ ಉದ್ಘಾಟನೆ

ಭದ್ರಾವತಿ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿ ನೂತನವಾಗಿ ಶ್ರೀ ಕಮಲ್ ಎಂಟರ್‌ಪ್ರೈಸಸ್ ವತಿಯಿಂದ ಆರಂಭಗೊಂಡಿರುವ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟ ಕೇಂದ್ರವನ್ನು ಸೋಮವಾರ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
ಭದ್ರಾವತಿ, ಜು. ೨೭: ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿ ನೂತನವಾಗಿ ಶ್ರೀ ಕಮಲ್ ಎಂಟರ್‌ಪ್ರೈಸಸ್ ವತಿಯಿಂದ ಆರಂಭಗೊಂಡಿರುವ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟ ಕೇಂದ್ರವನ್ನು ಸೋಮವಾರ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
ನಂದಿನಿ ಹಾಲಿನ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ, ಮಜ್ಜಿಗೆ ಹಾಗೂ ಸಿಹಿ ತಿನಿಸುಗಳ ಅಧಿಕೃತ ಮಾರಾಟಗಾರರಾಗಿದ್ದು, ಸುತ್ತಮುತ್ತಲಿನ ಚಿಲ್ಲರೆ ವ್ಯಾಪಾರಿಗಳು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ. 
ಮಾರಾಟ ಕೇಂದ್ರದ ಮಾಲೀಕ ಪಿ.ಸಿ ಜೈನ್, ಪ್ರಮುಖರಾದ ಅಮಿತ್‌ಕುಮಾರ್ ಜೈನ್, ಬಿ. ಮೂರ್ತಿ, ಎಂ. ರವಿ, ಮಿಥುನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಸೈನಿಕರ ಸೇವೆ ಎಂದಿಗೂ ಅಮರ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ಮಾಜಿ ಸೈನಿಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ  ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು. 
ಭದ್ರಾವತಿ, ಜು. ೨೭: ವೀರ ಸೈನಿಕರ ದೇಶ ಸೇವೆ ಎಂದಿಗೂ ಅಮರ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು. 
ಅವರು ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಜನ್ನಾಪುರ ಜಯಶ್ರೀ ವೃತ್ತದ ಬಳಿ ಹಮ್ಮಿಕೊಳ್ಳಲಾಗಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
ಭಾರತೀಯ ಯೋಧರು ಸುಮಾರು ೧೮೦೦ ಮೀಟರ್ ಎತ್ತರದ ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ತಾನ ಸೈನಿಕರ ವಿರುದ್ಧ ಹೋರಾಟ ನಡೆಸಿ ವಿಜಯ ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ದೇಶಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿ ಹೋರಾಟ ನಡೆಸುವ ಯೋಧರಿಗೆ ಭಾರತ ಮಾತೆ ಮತ್ತಷ್ಟು ಶಕ್ತಿಯನ್ನು ನೀಡುವ ಮೂಲಕ ದೇಶವನ್ನು ಅತಿಕ್ರಮಣ ಮಾಡುವವರ ವಿರುದ್ಧ ಹೋರಾಟ ಮುಂದುವರೆಸಬೇಕಾಗಿದೆ. ಪ್ರಸ್ತುತ ಚೀನಾ ಸಹ ದೇಶದ ಗಡಿ ಭಾಗವನ್ನು ಅತಿಕ್ರಮಣ ಮಾಡುತ್ತಿದ್ದು, ಚೀನಾ ದೇಶದ ವಿರುದ್ಧ ಸಹ ನಮ್ಮ ಸೈನಿಕರು ಹೋರಾಟ ನಡೆಸುತ್ತಿದ್ದು, ಈಗಾಗಲೇ ಅನೇಕ ಸೈನಿಕರು ಹುತಾತ್ಮರಾಗಿದ್ದಾರೆ. ಇವರ ಬಲಿದಾನ ಎಂದಿಗೂ ವ್ಯರ್ಥವಾಗಬಾರದು. ಈ ನಿಟ್ಟಿನಲ್ಲಿ ಆಡಳಿತ ನಡೆಸುವ ಸರ್ಕಾರ ಸೇರಿದಂತೆ ದೇಶದ ಎಲ್ಲಾ ಪ್ರಜೆಗಳು ಸೈನಿಕರ ಹೋರಾಟಕ್ಕೆ ಮತ್ತಷ್ಟು ಬಲ ತುಂಬಬೇಕೆಂದರು. 
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಶೋಕ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ನಮ್ಮ ದೇಶದ ಯೋಧರ ಹೋರಾಟ ರೋಮಾಂಚನಕಾರಿಯಾಗಿದ್ದು, ಸುಮಾರು ೬೦ ದಿನ ನಡೆದ ಈ ಯುದ್ಧದಲ್ಲಿ ಹುತಾತ್ಮರಾದ ಯೋಧರನ್ನು ನಾವೆಲ್ಲರೂ ಸ್ಮರಿಸಿಕೊಂಡು ಗೌರವ ಸೂಚಿಸಬೇಕಾಗಿವುದು ಕರ್ತವ್ಯವಾಗಿದೆ ಎಂದರು. 
ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಪ್ರೀತಿ ಕಾರ್ಗಿಲ್ ಯುದ್ಧ ಕುರಿತು ವಿವರಿಸಿದರು. ಮಾಜಿ ಸೈನಿಕರ ಪತ್ನಿಯರು ನೂತನವಾಗಿ ರಚಿಸಿಕೊಂಡಿರುವ ಮಹಿಳಾ ಸೇವಾ ಸಂಘದ ಅಧ್ಯಕ್ಷೆ ಶಶಿಕಲಾ ವೀರ ಯೋಧರ ಕುರಿತು ಮಾತನಾಡಿದರು. 
ನಗರಸಭೆ ಪೌರಾಯುಕ್ತ ಮನೋಹರ್, ಸಂಘದ ಕಾರ್ಯದರ್ಶಿ ವಿನೊದ್ ಪೂಜಾರಿ, ಉಪಾಧ್ಯಕ್ಷ ಬೋರೇಗೌಡ, ಯುವ  ಮುಖಂಡ ಬಿ.ಎಸ್ ಗಣೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ನಿರ್ದೇಶಕ ಗಿರಿ ಕಾರ್ಯಕ್ರಮ ನಿರೂಪಿಸಿದರು. ನಗರದ ವಿವಿಧೆಡೆಗಳಿಂದ ಮಾಜಿ ಸೈನಿಕರು ಪಾಲ್ಗೊಂಡಿದ್ದರು.  

Sunday, July 26, 2020

ಸಿಂಗಮನೆ ಗ್ರಾಮ ಪಂಚಾಯಿತಿ ಚವಳಿ ಕ್ಯಾಂಪ್‌ನಲ್ಲಿ ಕೊರೋನಾ ಸೋಂಕು ಪತ್ತೆ

ಭದ್ರಾವತಿ ತಾಲೂಕಿನ ಸಿಂಗನ ಮನೆ ಗ್ರಾಮ ಪಂಚಾಯಿತಿ ಚವಳಿ ಕ್ಯಾಂಪ್‌ನಲ್ಲಿ ಬಟ್ಟೆ ವ್ಯಾಪಾರಿಯೊಬ್ಬರಿಗೆ ಕೊರೋನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಗ್ರಾ.ಪಂ. ವತಿಯಿಂದ ಸ್ಯಾನಿಟೈಜರ್ ಕೈಗೊಳ್ಳಲಾಯಿತು. 
ಭದ್ರಾವತಿ, ಜು. ೨೬: ತಾಲೂಕಿನ ಸಿಂಗನ ಮನೆ ಗ್ರಾಮ ಪಂಚಾಯಿತಿಯಲ್ಲಿ ಕೊರೋನಾ ಸೋಂಕು ಪ್ರಕರಣವೊಂದು ಭಾನುವಾರಪತ್ತೆಯಾಗಿದೆ. 
ಕಳೆದ ಕೆಲವು ದಿನಗಳ ಹಿಂದೆ ಇದೆ ಗೋಣಿಬೀಡು ಗ್ರಾಮದಲ್ಲಿ ಸೋಂಕು ಪತ್ತೆಯಾಗಿತ್ತು. ಇದೀಗ ಚವಳಿ ಕ್ಯಾಂಪ್‌ನಲ್ಲಿ ಸೋಂಕು ಪತ್ತೆಯಾಗಿದೆ. ತಮಿಳುನಾಡಿಗೆ ಹೋಗಿ ಬಂದಿರುವ ಬಟ್ಟೆ ವ್ಯಾಪಾರಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಸೋಂಕು ಪತ್ತೆಯಾದ ಮನೆಯ ಸುತ್ತಮುತ್ತ ಕಂಟೈನ್ಮೆಂಟ್ ವಲಯವನ್ನಾಗಿಸಿದ್ದು, ಗ್ರಾಮ ಪಂಚಾಯಿತಿ ಆಡಳಿತ ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮವಾಗಿ ಸ್ಯಾನಿಟೈಜರ್ ಮಾಡಿ ಸೀಲ್‌ಡೌನ್‌ಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದೆ. 
ವಿಐಎಸ್‌ಎಲ್ ಕೋವಿಡ್-೧೯ ಕಾರ್ಯಾರಂಭ: 
ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆಯನ್ನು ಕೆಲವು ದಿನಗಳ ಹಿಂದೆ ೫೦ ಹಾಸಿಗೆಯುಳ್ಳ ಕೋವಿಡ್-೧೯ ಚಿಕಿತ್ಸಾ ಕೇಂದ್ರವನ್ನಾಗಿ ಪರಿವರ್ತಿಸಲಾಗಿತ್ತು. ಕಳೆದ ೨ ದಿನಗಳಿಂದ ಚಿಕಿತ್ಸಾ ಕೇಂದ್ರ ಕಾರ್ಯಾರಂಭಗೊಂಡಿದ್ದು, ವೈದ್ಯರು, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 

ಸರ್ಕಾರಿ ನೌಕರರ ಹಿತರಕ್ಷಣೆಯೊಂದಿಗೆ ಶೈಕ್ಷಣಿಕ ಅಭಿವೃದ್ಧಿಗೆ ಗಮನ

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿಗೆ ಅಭಿನಂದನೆ 

ಭದ್ರಾವತಿ ತಾಲೂಕಿನ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿಯವರನ್ನು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅಭಿನಂದಿಸಿದರು. 
ಭದ್ರಾವತಿ, ಜು. ೨೬: ರಾಜ್ಯಾದ್ಯಂತ ಸರ್ಕಾರಿ ನೌಕರರ ಹಿತ ಕಾಪಾಡುವಲ್ಲಿ ಹೆಚ್ಚಿನ ಆಸಕ್ತಿ ವಹಿಸುವ ಜೊತೆಗೆ ಭದ್ರಾವತಿ ತಾಲೂಕಿನ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿಯವರನ್ನು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅಭಿನಂದಿಸಿದರು. 
ನಗರದ ಹೊಸಸೇತುವೆ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾ ಸಂಸ್ಥೆಯ ಸಮಗ್ರ ಮೂಲಭೂತ ಸೌಕರ್ಯಗಳ ಅವಶ್ಯಕತೆಗಳಿಗೆ ರಾಜ್ಯ ಸರ್ಕಾರದಿಂದ ೧ ಕೋ. ರು, ಅನುದಾನ ಬಿಡುಗಡೆ ಮಾಡಿಸುವವಲ್ಲಿ ಸಿ.ಎಸ್ ಷಡಾಕ್ಷರಿಯವರು ಯಶಸ್ವಿಯಾಗಿದ್ದು, ಅಲ್ಲದೆ ವಿದ್ಯಾಸಂಸ್ಥೆಗೆ ಸೇರಿದ ನಗರಸಭೆ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿರುವ ೩ ಎಕರೆ ಜಮೀನನ್ನು ಸುಮಾರು ೧ ಕೋ. ರು. ಗಳಿಗೆ ಸುಮಾರು ೧೦ ವರ್ಷಗಳ ಹಿಂದೆ ಮಾರಾಟ ಮಾಡಲು ಯತ್ನಿಸಿದ್ದ ಪ್ರಕ್ರಿಯೆಯನ್ನು ತಡೆದು ಭವಿಷ್ಯದ ಶೈಕ್ಷಣಿಕ ಅಭಿವೃಧ್ಧಿ ಚಟುವಟಿಗಳಿಗೆ ಉಳಿಸಿಕೊಳ್ಳುವ ಜೊತೆಗೆ ಸರ್ಕಾರಿ ನೌಕರರ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಹಿನ್ನಲೆಯಲ್ಲಿ ತಾಲೂಕಿನ ಸರ್ಕಾರದ ವಿವಿಧ ಇಲಾಖೆಗಳ ಸಂಘಟನೆಯ ಪದಾಧಿಕಾರಿಗಳು ಷಡಾಕ್ಷರಿಯವರನ್ನು ಅಭಿನಂದಿಸಿ ಗೌರವಿಸಿದರು. 
ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯ ಸಂಸ್ಥಾಪಕ ಸದಸ್ಯರುಗಳಾದ ಕೆ. ಶಾಮಣ್ಣ, ಡಾ.ಜಿ.ಎಂ ನಟರಾಜ್, ಬಿ.ಎಲ್ ರಂಗಸ್ವಾಮಿ ಹಾಗು ವಿವಿಧ ಇಲಾಖೆಗಳ ಪದಾಧಿಕಾರಿಗಳಾದ ಎಸ್.ಕೂಬಾನಾಯ್ಕ, ಬಿ. ಸಿದ್ದಬಸಪ್ಪ, ಲೋಹಿತೇಶ್ವರಪ್ಪ, ಬಸವಂತರಾವ್ ದಾಳೆ, ಎನ್. ಧನಂಜಯ, ಯು.ಮಹಾದೇವಪ್ಪ, ಎಂ.ಎಸ್.ಮಲ್ಲಿಕಾರ್ಜುನ , ರೇವಣಪ್ಪ, ನಿಸ್ಸಾರ್ ಖಾನ್, ಜಗದೀಶ್, ರಾಜಾನಾಯ್ಕ್, ದೇವೇಂದ್ರ ನಾಯ್ಕ್, ಎನ್.ಡಿ ಮಂಜುನಾಥ್, ಶಿವಕುಮಾರ್, ಜಯಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.