ನಿವೃತ್ತ ಕಾರ್ಮಿಕರ ಬೇಡಿಕೆ ಈಡೇರಿಸಲು ಮನವಿ
ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಅಧಿಕಾರಿಗಳೊಂದಿಗೆ ಸೋಮವಾರ ಸಂಸದ ಬಿ.ವೈ ರಾಘವೇಂದ್ರ ಚರ್ಚೆ ನಡೆಸಿದರು.
ಭದ್ರಾವತಿ, ಆ. ೧೦: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಅಧಿಕಾರಿಗಳೊಂದಿಗೆ ಸೋಮವಾರ ಸಂಸದ ಬಿ.ವೈ ರಾಘವೇಂದ್ರ ಚರ್ಚಿಸಿದರು. ಖಾಯಂ ಹಾಗು ನಿವೃತ್ತ ಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಡಳಿತ ಮಂಡಳಿಗೆ ಮನವಿ ಮಾಡಿದರು.
ನಿವೃತ್ತ ಕಾರ್ಮಿಕರು ವಾಸಿಸುತ್ತಿರುವ ಮನೆಗಳಿಗೆ ಬಾಡಿಗೆ ಹೆಚ್ಚಳ ಮಾಡಿರುವುದನ್ನು ಕಡಿತಗೊಳಿಸುವುದು. ಅಲ್ಲದೆ ೨೦೧೮ರ ನಂತರ ನಿವೃತ್ತಿ ಹೊಂದಿರುವ ಕಾರ್ಮಿಕರಿಂದ ಪಡೆಯಲಾಗಿರುವ ಹೆಚ್ಚಿನ ಮೊತ್ತದ ಭದ್ರತಾ ಠೇವಣಿಯನ್ನು ಶೇ.೫೦ರಷ್ಟು ಕಡಿತಗೊಳಿಸುವುದು ಸೇರಿದಂತೆ ಇತ್ಯಾದಿ ಬೇಡಿಕೆ ಈಡೇರಿಸಲು ಕೋರಿದರು.
ಪ್ರಸ್ತುತ ಕಾರ್ಖಾನೆಯ ಉತ್ಪಾದನೆಯಲ್ಲಿ ಯಾವುದೇ ರೀತಿ ವ್ಯತ್ಯಯವಾಗದಂತೆ ಮುನ್ನಡೆಸಿಕೊಂಡು ಹೋಗಲು ಅಗತ್ಯವಿರುವ ಸುಮಾರು ೧೯.೫ ಕೋ. ರು. ಹಣ ಬಿಡುಗಡೆಗೆ ಸಂಬಂಧಿಸಿದಂತೆ ಈಗಾಗಲೇ ಉಕ್ಕು ಪ್ರಾಧಿಕಾರದ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಹಿನ್ನಲೆಯಲ್ಲಿ ಖಾಯಂ ಕಾರ್ಮಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಕಾರ್ಖಾನೆಯ ಕಾರ್ಮಿಕ ಮುಖಂಡರಿಗೆ ಸಂಸದರು ಭರವಸೆ ನೀಡಿದರು.
ಎಂಪಿಎಂ ಕಾರ್ಖಾನೆ ಪುನಾರಂಭ :
ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯನ್ನು ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಪುನಃ ಆರಂಭಿಸುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಅಲ್ಲದೆ ಈ ಹಿಂದೆ ೨೦೧೦-೧೧ನೇ ಸಾಲಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದ್ದ ಸುಮಾರು ೩೫೦೦ ಕಬ್ಬು ಬೆಳೆಗಾರರಿಗೆ ಬರಬೇಕಾದ ಪ್ರತಿ ಟನ್‌ಗೆ ಹೆಚ್ಚುವರಿ ೧೦೦ ರು. ಕೊಡುವ ಪ್ರಸ್ತಾವನೆ ಸಹ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಬೆಳೆಗಾರರ ಬಾಕಿ ಹಣ ಬಿಡುಗಡೆಯಾಗಲಿದೆ ಎಂದು ಸಂಸದರು ಕಾರ್ಮಿಕ ಮುಖಂಡರಿಗೆ ತಿಳಿಸಿದರು.
ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಕೆ.ಎಲ್ ಶ್ರೀನಿವಾಸ್ ರಾವ್, ನಗರಾಡಳಿತಾಧಿಕಾರಿ ವಿಶ್ವನಾಥ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಕಾರ್ಯದರ್ಶಿ ಅಮೃತ್, ನಿವೃತ್ತ ಕಾರ್ಮಿಕ ಮುಖಂಡರುಗಳಾದ ಹನುಮಂತರಾವ್ ರಾಮಲಿಂಗಯ್ಯ, ನರಸಿಂಹಮೂರ್ತಿ, ಎಸ್.ಎನ್ ಬಾಲಕೃಷ್ಣ, ಜೆ.ಎನ್ ಚಂದ್ರಹಾಸ, ಬಿಜೆಪಿ ಮುಖಂಡರಾದ ಜಿ. ಧರ್ಮಪ್ರಸಾದ್, ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ವಿ. ಕದಿರೇಶ್, ಮಂಗೋಟೆ ರುದ್ರೇಶ್, ಕೆ. ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.