Friday, August 21, 2020

ಭದ್ರಾವತಿ ಆಕ್ಸಿಜನ್ ಪ್ಲಾಂಟ್‌ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಭೇಟಿ : ಪರಿಶೀಲನೆ

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಒಳಭಾಗದಲ್ಲಿರುವ ಎಂಎಸ್‌ಡಿ ಆಕ್ಸಿಜನ್ ಉತ್ಪಾದನಾ ಘಟಕ ಹಾಗೂ ಹೊರಭಾಗದಲ್ಲಿ ಎಂಪಿಎಂ ಕಾರ್ಖಾನೆ ರಸ್ತೆಯಲ್ಲಿರುವ ದಿ ಸದರನ್ ಗ್ಯಾಸ್ ಲಿಮಿಟೆಡ್‌ಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಕ್ಸಿಜನ್ ಕೊರತೆ ಎದುರಾಗದಂತೆ ಮುನ್ನಚ್ಚರಿಕೆ ಹಿನ್ನಲೆಯಲ್ಲಿ ಉತ್ಪಾದನೆ ಕುರಿತು ಅಧಿಕಾರಿಗಳಿಂದ ಮಾಹಿತಿ

ಭದ್ರಾವತಿ, ಆ. ೨೧: ಜಿಲ್ಲೆಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಆಕ್ಸಿಜನ್ ಕೊರತೆ ಉಂಟಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಒಳಭಾಗದಲ್ಲಿರುವ ಎಂಎಸ್‌ಪಿಎಲ್ ಆಕ್ಸಿಜನ್ ಉತ್ಪಾದನಾ ಘಟಕ ಹಾಗೂ ಹೊರಭಾಗದಲ್ಲಿ ಎಂಪಿಎಂ ಕಾರ್ಖಾನೆ ರಸ್ತೆಯಲ್ಲಿರುವ ದಿ ಸದರನ್ ಗ್ಯಾಸ್ ಲಿಮಿಟೆಡ್‌ಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕರಿಂದ ಇದುವರೆಗೂ ಹೆಚ್ಚಿನ ಸಹಕಾರ ಲಭಿಸಿದೆ. ಮುಂದೆ ಸಹ ಇದೆ ರೀತಿ ಸಹಕಾರ ನಿರೀಕ್ಷಿಸಲಾಗುತ್ತಿದೆ. ಜಿಲ್ಲೆಯಲ್ಲಿ ಆಕ್ಸಿಜನ ಕೊರತೆ ಇಲ್ಲ. ಆದರೂ ಸಹ ಮುನ್ನಚ್ಚರಿಕೆ ಕ್ರಮವಾಗಿ ತುರ್ತು ಅನಿವಾರ್ಯ ಸಂದರ್ಭದಲ್ಲಿ ಆಕ್ಸಿಜನ ಕೊರತೆ ಉಂಟಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಆಕ್ಸಿಜನ್ ಪ್ಲಾಂಟ್‌ಗಳ ವೀಕ್ಷಣೆ ನಡೆಸಿದ್ದು, ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ ಎಂದರು. 
ಆಕ್ಸಿಜನ್ ಉತ್ಪಾದನಾ ಕಂಪನಿಗಳಿಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಈ ನಿಟ್ಟಿನಲ್ಲಿ ಕಂಪನಿಯವರಿಗೆ ಭರವಸೆ ನೀಡುತ್ತಿದ್ದು, ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸೋಂಕು ವಾಪಕವಾಗಿ ಹರಡುತ್ತಿದ್ದು, ಕಂಪನಿಗಳು ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು. 


     ಇದಕ್ಕೂ ಮೊದಲು ವಿಐಎಸ್‌ಎಲ್ ಅಥಿತಿ ಗೃಹದಲ್ಲಿ ಜಿಲ್ಲೆಯ ವಿವಿದೆಡೆ ಇರುವ ಆಕ್ಸಿಜನ್ ಪ್ಲಾಂಟ್‌ಗಳ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಂಪೂರ್ಣ ಮಾಹಿತಿ ಪಡೆದುಕೊಂಡರು. 
ಎಂಎಸ್‌ಪಿಎಲ್ ಗ್ಯಾಸ್ ಲಿಮಿಟೆಡ್: 
ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಕಬ್ಬಿಣ ಮತ್ತು ಉಕ್ಕು ಉತ್ಪಾದನೆಯ ವಿವಿಧ ಘಟಕಗಳಿಗೆ ಆಕ್ಸಿಜನ್ ಪೂರೈಕೆ ಮಾಡಲು ಎರಡು ಆಕ್ಸಿಜನ್ ಘಟಕಗಳಿದ್ದು, ಈ ಪೈಕಿ ಒಂದು ಕಾರ್ಖಾನೆಗೆ ಸೇರಿದೆ.  ಇದರ ಜೊತೆಗೆ ೨೦೦೬ರಲ್ಲಿ ಎಂಎಸ್‌ಪಿಎಲ್ ಗ್ಯಾಸ್ ಲಿಮಿಟೆಡ್ ಖಾಸಗಿ ಕಂಪನಿಗೆ ಕಾರ್ಖಾನೆ ಒಳಭಾಗದಲ್ಲಿ ಮತ್ತೊಂದು ಘಟಕ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಇಲ್ಲಿ ಅನಿಲ ರೂಪದಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಕಾರ್ಖಾನೆಯಲ್ಲಿ ಉತ್ಪಾದನೆ ಇಲ್ಲದೆ ವಿವಿಧ ಘಟಕಗಳು ಮುಚ್ಚಲ್ಪಟ್ಟಿವೆ. ಈ ಹಿನ್ನಲೆಯಲ್ಲಿ ೨ ವರ್ಷಗಳಿಂದ ಈ ಕಂಪನಿ ಸಹ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಪ್ರಸ್ತುತ ಸುಮಾರು ೩೦೦ ಸಿಲಿಂಡರ್‌ಗಳು ಸಂಗ್ರಹದಲ್ಲಿದ್ದು, ಈ ಸಿಲಿಂಡರ್‌ಗಳನ್ನು ವೈದ್ಯಕೀಯ ಬಳಕೆಗೆ ದ್ರವರೂಪಕ್ಕೆ ಬದಲಿಸಬೇಕಾಗಿದೆ. ಅಗತ್ಯಬಿದ್ದಲ್ಲಿ ಈ ಕಾರ್ಖಾನೆಯನ್ನು ಪುನಃ ಆರಂಭಿಸಲು ಸಂಬಂಧಪಟ್ಟ ಘಟಕದ ಆಡಳಿತ ಮಂಡಳಿಯ ಅನುಮತಿ ಪಡೆಯಬೇಕಾಗಿದೆ. ಜೊತೆಗೆ ಸಿಲಿಂಡರ್‌ಗಳನ್ನು ಸಾಗಾಣೆ ಮಾಡಲು ವಾಹನ ಪರವಾನಗಿ ನೀಡಬೇಕಾಗಿದೆ. 
ದಿ ಸದರನ್ ಗ್ಯಾಸ್ ಲಿಮಿಟೆಡ್ : 
ಈ ಘಟಕವನ್ನು ವಿಐಎಸ್‌ಎಲ್ ಕಾರ್ಖಾನೆಯ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಎಂಪಿಎಂ ಕಾರ್ಖಾನೆಯ ಸಮೀಪದಲ್ಲಿ ಸ್ಥಾಪಿಸಲಾಗಿದೆ. ಸುಮಾರು ೫ ದಶಕಗಳಿಗೂ ಹಳೇಯದಾದ ಘಟಕ ಇದಾಗಿದ್ದು, ಇದರ ಕೇಂದ್ರ ಕಛೇರಿ ಗೋವಾದಲ್ಲಿದೆ. ಈ ಘಟಕ ಸ್ಥಳೀಯವಾಗಿ ಅಗತ್ಯವಿರುವ ಆಕ್ಸಿಜನ್ ಗ್ಯಾಸ್ ಪೂರ‍್ಯಕೆಯಲ್ಲಿ ತೊಡಗಿಸಿಕೊಂಡಿದೆ. ಇಲ್ಲಿ ಆಕ್ಸಿಜನ್ ದ್ರವ ರೂಪದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ವೈದ್ಯಕೀಯ ಬಳಕೆಗೆ ಸೂಕ್ತವಾಗಿದೆ. 
ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ಜಿ.ಪಂ. ಸದಸ್ಯ ಕೆ.ಇ ಕಾಂತೇಶ್, ತಹಸೀಲ್ದಾರ್ ಎಚ್.ಸಿ ಯೋಗೇಶ್, ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಕೆ.ಎಲ್ ಶ್ರೀನಿವಾಸ್ ರಾವ್, ಹಿರಿಯ ಅಧಿಕಾರಿ ಬಿ. ವಿಶ್ವನಾಥ್, ಸ್ಥಳೀಯ ಮುಖಂಡರಾದ ಜಿ. ಧರ್ಮಪ್ರಸಾಧ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ಎಂ. ಪ್ರಭಾಕರ್, ಗಣೇಶ್‌ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

     ೧೨ ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಸಂಗ್ರಹ ಘಟಕ: 

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಪ್ರಸ್ತುತ ೧೨ ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಂಡು ಕಾರ್ಯಾಂಭಗೊಳ್ಳಲಿದೆ. ಇದೀಗ ಅಗತ್ಯವಿರುವ ಆಕ್ಸಿಜನ್ ಬಳ್ಳಾರಿಯಿಂದ ಪೂರೈಕೆಯಾಗುತ್ತಿದ್ದು, ಹೆಚ್ಚಿನ ಅಗತ್ಯ ಕಂಡು ಬಂದಲ್ಲಿ ವಿಐಎಸ್‌ಎಲ್ ಎಂಎಸ್‌ಪಿಎಲ್ ಹಾಗೂ ಸದರನ್ ಗ್ಯಾಸ್ ಲಿಮಿಟೆಡ್‌ಗಳಿಂದ ಪೂರೈಕೆ ಮಾಡಿಕೊಳ್ಳಲಾಗುವುದು. 
                                                                - ಕೆ.ಬಿ ಶಿವಕುಮಾರ್, ಜಿಲ್ಲಾಧಿಕಾರಿ, ಶಿವಮೊಗ್ಗ

Thursday, August 20, 2020

ವಿಇಎಸ್ ವಿದ್ಯಾಸಂಸ್ಥೆಯಲ್ಲಿ ಅರಸು ಜನ್ಮದಿನಾಚರಣೆ

ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಗುರುವಾರ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜನ್ಮದಿನಾಚರಣೆ ಸರಳವಾಗಿ ನಡೆಯಿತು.
ಭದ್ರಾವತಿ, ಆ. ೨೦: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ನಗರದ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಹಿಂದುಳಿದ ವರ್ಗಗಳ ನೇತಾರ, ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ ೧೦೫ನೇ ಜನ್ಮ ದಿನಚರಣೆ ಗುರುವಾರ ಸರಳವಾಗಿ ನಡೆಯಿತು.
      ವಿದ್ಯಾಸಂಸ್ಥೆಯಲ್ಲಿ ಪ್ರತಿವರ್ಷ ಅರಸುರವರ ಜನ್ಮದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಸಹ ಕೊರೋನಾ ಹಿನ್ನಲೆಯಲ್ಲಿ ಮಾಸ್ಕ್ ಧರಿಸುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಅರಸುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಲಾಯಿತು. ವಿದ್ಯಾಸಂಸ್ಥೆ ಶಿಕ್ಷಕರು, ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಬಿಜೆಪಿ ರಾಜ್ಯ ಸರ್ಕಾರದ ಜನವಿರೋಧಿ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ಆಕ್ರೋಶ

ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ : ರಾಜ್ಯಪಾಲರಿಗೆ ಮನವಿ

ಭದ್ರಾವತಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯ ಹಾಗು ಜನವಿರೋಧಿ ಕಾಯ್ದೆಗಳ ವಿರುದ್ಧ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಆ. ೨೦: ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯ ಹಾಗು ಜನವಿರೋಧಿ ಕಾಯ್ದೆಗಳ ವಿರುದ್ಧ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
      ರೈತ ವಿರೋಧಿ ಭೂಸುಧಾರಣಾ ತಿದ್ದುಪಡಿ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿಗಳನ್ನು ತಕ್ಷಣ ಹಿಂಪಡೆಯಬೇಕೆಂದು ಹಾಗು ಕೊರೋನಾ ನಿಯಂತ್ರಣದಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರದ ವಿಷಯದಲ್ಲಿ ಉಚ್ಛನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಆಗ್ರಹಿಸಿದರು.
     ಪ್ರತಿಭಟನೆಯಲ್ಲಿ ಮುಖಂಡರಾದ ಸಿ.ಎಂ ಖಾದರ್, ಬಿ.ಟಿ ನಾಗರಾಜ್, ಬಿ.ಪಿ ರಾಘವೇಂದ್ರ, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ ಸೇರಿದಂತೆ ಇನ್ನಿತರರು ಮಾತನಾಡಿದರು. ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ನೇತೃತ್ವ ವಹಿಸಿದ್ದರು.
     ಮುಖಂಡರಾದ ಅಣ್ಣೋಜಿರಾವ್, ಪ್ರಕಾಶ್‌ರಾವ್ ದುರೆ, ದಶರಥ ಗಿರಿ, ಬಿ. ಗಂಗಾಧರ್, ಇಸ್ಮಾಯಿಲ್ ಖಾನ್, ಅತ್ತಿಗುಂದ ಗೋಪಾಲಪ್ಪ, ಎಂ. ಶಿವಕುಮಾರ್, ಯುವ ಘಟಕದ ಅಧ್ಯಕ್ಷ ಜಿ. ವಿನೋದ್‌ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳರಾಮಚಂದ್ರ, ರೂಪಾನಾರಾಯಣ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಡಿ. ದೇವರಾಜ ಅರಸು ೧೦೫ನೇ ಜನ್ಮದಿನಾಚರಣೆ

ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜನ್ಮದಿನಾಚರಣೆ ಗುರುವಾರ ಭದ್ರಾವತಿ ತಾಲೂಕು ಪಂಚಾಯಿತಿ ಆವರಣದಲ್ಲಿ ಸರಳವಾಗಿ ನಡೆಯಿತು.
ಭದ್ರಾವತಿ, ಆ. ೨೦: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಛೇರಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ನೇತಾರ, ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ ೧೦೫ನೇ ಜನ್ಮ ದಿನಚರಣೆ ಗುರುವಾರ ಸರಳವಾಗಿ ನಡೆಯಿತು.
    ತಹಸೀಲ್ದಾರ್ ಎಚ್.ಸಿ ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಅರಸುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಗರಸಭೆ ಪೌರಾಯುಕ್ತ ಮನೋಹರ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ, ಕಾರ್ಯನಿರ್ವಹಣಾಧಿಕಾರಿ ಡಾ. ಜಿ. ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಹಿಂದುಳಿದ ವರ್ಗಗಳ ಇಲಾಖೆ ವಿಸ್ತರಣಾಧಿಕಾರಿ ಚಿದಾನಂದ, ಅಲ್ಪ ಸಂಖ್ಯಾತ ಮುಖಂಡ ಸಿ.ಎಂ. ಖಾದರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ಹಿಂದು ವರ್ಗಗಳ ಮುಖಂಡ ಟಿ. ವೆಂಕಟೇಶ್, ಹಿಂದುಳಿದ ವರ್ಗಗಳ ಇಲಾಖೆ ಹಾಗು ತಾಲೂಕು ಕಛೇರಿ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಇಲಾಖೆಯ ರಮೇಶ್ ಸ್ವಾಗತಿಸಿದರು.

Wednesday, August 19, 2020

ಮನೆ ಕಳ್ಳತನ ಪ್ರಕರಣ : ಇಬ್ಬರ ಸೆರೆ

ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸುವಲ್ಲಿ  ಭದ್ರಾವತಿ ಗ್ರಾಮಾಂತರ ವೃತ್ತ ನಿರೀಕ್ಷಕ ಈ.ಓ ಮಂಜುನಾಥ್ ನೇತೃತ್ವದ ತಂಡ ಯಶಸ್ವಿಯಾಗಿದೆ.
ಭದ್ರಾವತಿ, ಆ. ೧೯: ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸುವಲ್ಲಿ  ಗ್ರಾಮಾಂತರ ವೃತ್ತ ನಿರೀಕ್ಷಕ ಈ.ಓ ಮಂಜುನಾಥ್ ನೇತೃತ್ವದ ತಂಡ ಯಶಸ್ವಿಯಾಗಿದೆ.
     ತಾಲೂಕಿನ ತಡಸ ಗ್ರಾಮದ ನಿವಾಸಿಗಳಾದ ಸೈಯದ್ ವಾರೀಸ್ ಮತ್ತು ಆಸೀಫ್ ಎಂಬುವರನ್ನು ಬಂಧಿಸಲಾಗಿದೆ. ಬಂಧಿತರಿಂದ ೪೯ ಸಾವಿರ ರು. ನಗದು ಹಣ, ೧೫ ಸಾವಿರ ರು. ಬೆಲೆ ಬಾಳುವ ೬ ಗ್ರಾಂ. ತೂಕದ ಬಂಗಾರದ ಕಿವಿವಾಲೆ ಹಾಗು ೪ ಸಾವಿರ ರು. ಮೌಲ್ಯದ ಮೊಬೈಲ್ ಸೇರಿದಂತೆ ಒಟ್ಟು ೬೮ ಸಾವಿರ ರು. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
    ಬಂಧಿತರಿಬ್ಬರು ಆ.೨ರಂದು ಗ್ರಾಮದ ಸಮೀವುಲ್ಲಾ ಎಂಬುವರ ಮನೆಯ ಕಿಟಕಿ ಗಾಜು ಒಡೆದು ನಗದು ಹಣ, ಬಂಗಾರದ ವಾಲೆ ಮತ್ತು ಮೊಬೈಲ್  ಕಳ್ಳತನ ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
     ಜಿಲ್ಲಾ ರಕ್ಷಣಾಧಿಕಾರಿಗಳು, ಹೆಚ್ಚುವರಿ ರಕ್ಷಣಾಧಿಕಾರಿಗಳು, ಪೊಲೀಸ್ ಉಪಾಧೀಕ್ಷಕ ಸುಧಾಕರ ಎಸ್ ನಾಯಕರವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಈ.ಓ ಮಂಜುನಾಥ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
   ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ದೇವರಾಜ್, ಸಿಬ್ಬಂದಿಗಳಾದ ನಾಗರಾಜ, ಆದರ್ಶಶೆಟ್ಟಿ, ಉದಯಕುಮಾರ್, ಚಂದ್ರಶೇಖರ್ ಪಾಲ್ಗೊಂಡಿದ್ದರು.

ಸರ್ಕಾರದ ಮಾರ್ಗಸೂಚಿಯಂತೆ ಗಣೇಶೋತ್ಸವ ಆಚರಣೆ ಆಚರಿಸಿ

ಭದ್ರಾವತಿಯಲ್ಲಿ ಗಣೇಶೋತ್ಸವ ಆಚರಣೆ ಹಿನ್ನಲೆಯಲ್ಲಿ ಪೊಲೀಸ್ ನಗರ ವೃತ್ತ ನಿರೀಕ್ಷಕ ನಂಜಪ್ಪ ನೇತೃತ್ವದಲ್ಲಿ ಶಾಂತಿ ಸಭೆ ಜರುಗಿತು.
ಭದ್ರಾವತಿ, ಆ. ೧೯: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಈ ಬಾರಿ ಗಣೇಶೋತ್ಸವ ಸರ್ಕಾರದ ಮಾರ್ಗಸೂಚಿಯಂತೆ ಸರಳವಾಗಿ ಶಾಂತಿಯುತವಾಗಿ ಆಚರಿಸುವಂತೆ ಕೋರಲಾಯಿತು.
        ಪೊಲೀಸ್ ನಗರವೃತ್ತ ನಿರೀಕ್ಷಕ ನಂಜಪ್ಪ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಸರ್ಕಾರ ಈ ಬಾರಿ ಗಣೇಶೋತ್ಸವ ಆಚರಿಸಲು ಹಲವು ಷರತ್ತುಗಳೊಂದಿಗೆ ಮಾರ್ಗಸೂಚಿ ಪ್ರಕಟಿಸಿದ್ದು, ಅದರಂತೆ ಯಾವುದೇ ರೀತಿಯಲ್ಲೂ ಮಾರ್ಗಸೂಚಿ ಉಲ್ಲಂಘನೆಯಾಗದಂತೆ   ಸಂಘಟನೆಗಳ ಆಯೋಜಕರು ಎಚ್ಚರವಹಿಸಬೇಕೆಂದು ಸೂಚಿಸಲಾಯಿತು.
     ಜಿಲ್ಲೆಯಲ್ಲಿ ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿಗಳ ಪ್ರತಿಷ್ಠಾಪನೆಗೆ ಜಿಲ್ಲಾಡಳಿತ ಅವಕಾಶ ನೀಡಿದ್ದು, ಎಲ್ಲರೂ ಮಾರ್ಗಸೂಚಿಗಳನ್ನು ತಿಳಿದುಕೊಳ್ಳುವ ಜೊತೆಗೆ ಶಾಂತಿ-ಸುವ್ಯವಸ್ಥೆ ಕಾಪಾಡಬೇಕೆಂದು ಕೋರಲಾಯಿತು.
      ಸಭೆಯಲ್ಲಿ ಪಾಲ್ಗೊಂಡಿದ್ದ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮಾತನಾಡಿ, ಈ ಬಾರಿ ಸಂಘಟನೆ ವತಿಯಿಂದ ಶಿವಮೊಗ್ಗದಲ್ಲಿ ಯಾವ ರೀತಿ ಆಚರಿಸುತ್ತಾರೋ ಅದೇ ರೀತಿ ನಗರದಲ್ಲೂ ಅಚರಿಸುವುದಾಗಿ ತಿಳಿಸಿದರು.
      ಮುಖಂಡರಾದ ವಿ. ಕದಿರೇಶ್, ಜಿ. ಆನಂದಕುಮಾರ್, ಮಂಗೋಟೆ ರುದ್ರೇಶ್, ಗಿರೀಶ್ ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಿಹಿ ಹಂಚಿಕೆಯೊಂದಿಗೆ ವಿಶ್ವ ಛಾಯಾಗ್ರಹಣ ದಿನ ಆಚರಣೆ

ಭದ್ರಾವತಿ ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಬುಧವಾರ ೧೮೧ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಸರಳವಾಗಿ ನಡೆಯಿತು.
ಭದ್ರಾವತಿ, ಆ. ೧೯: ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಬುಧವಾರ ೧೮೧ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಸರಳವಾಗಿ ನಡೆಯಿತು.
       ಕೊರೋನಾ ಸೋಂಕು ಕಾಣಿಸಿಕೊಂಡಾಗಿನಿಂದಲೂ ಛಾಯಾಗ್ರಾಹಕರು ಉದ್ಯೋಗವಿಲ್ಲದೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಈ ನಡುವೆ ಸಂಘಟನೆ ಸದಸ್ಯರ ಹಿತಕಾಪಾಡುವಲ್ಲಿ  ಸಾಕಷ್ಟು ಶ್ರಮಿಸುತ್ತಿದೆ. ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸ್ಥಳೀಯ ಆಡಳಿತಗಳಿಗೆ, ಜಿಲ್ಲಾದಿಕಾರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ. ಪ್ರಸ್ತುತ ಎದುರಾಗಿರುವ ಸಂದಿಗ್ದ ಪರಿಸ್ಥಿತಿ ಕೊನೆಯಾಗುವವರೆಗೂ ಜೀವನ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ.
     ಈ ನಡುವೆಯೂ ಸದಸ್ಯರೆಲ್ಲರೂ ಒಂದೆಡೆ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಸೇರಿ ಸಿಹಿ ಹಂಚುವ ಮೂಲಕ ಸರಳವಾಗಿ ವಿಶ್ವ ಛಾಯಾಗ್ರಹಣ ದಿನ ಆಚರಿಸಿದರು. ಸಂಘದ ಅಧ್ಯಕ್ಷ ರಾಮಕೃಷ್ಣ ನೇತೃತ್ವ ವಹಿಸಿದ್ದರು.