Friday, August 21, 2020

ಭದ್ರಾವತಿ ಆಕ್ಸಿಜನ್ ಪ್ಲಾಂಟ್‌ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಭೇಟಿ : ಪರಿಶೀಲನೆ

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಒಳಭಾಗದಲ್ಲಿರುವ ಎಂಎಸ್‌ಡಿ ಆಕ್ಸಿಜನ್ ಉತ್ಪಾದನಾ ಘಟಕ ಹಾಗೂ ಹೊರಭಾಗದಲ್ಲಿ ಎಂಪಿಎಂ ಕಾರ್ಖಾನೆ ರಸ್ತೆಯಲ್ಲಿರುವ ದಿ ಸದರನ್ ಗ್ಯಾಸ್ ಲಿಮಿಟೆಡ್‌ಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಕ್ಸಿಜನ್ ಕೊರತೆ ಎದುರಾಗದಂತೆ ಮುನ್ನಚ್ಚರಿಕೆ ಹಿನ್ನಲೆಯಲ್ಲಿ ಉತ್ಪಾದನೆ ಕುರಿತು ಅಧಿಕಾರಿಗಳಿಂದ ಮಾಹಿತಿ

ಭದ್ರಾವತಿ, ಆ. ೨೧: ಜಿಲ್ಲೆಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಆಕ್ಸಿಜನ್ ಕೊರತೆ ಉಂಟಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಒಳಭಾಗದಲ್ಲಿರುವ ಎಂಎಸ್‌ಪಿಎಲ್ ಆಕ್ಸಿಜನ್ ಉತ್ಪಾದನಾ ಘಟಕ ಹಾಗೂ ಹೊರಭಾಗದಲ್ಲಿ ಎಂಪಿಎಂ ಕಾರ್ಖಾನೆ ರಸ್ತೆಯಲ್ಲಿರುವ ದಿ ಸದರನ್ ಗ್ಯಾಸ್ ಲಿಮಿಟೆಡ್‌ಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕರಿಂದ ಇದುವರೆಗೂ ಹೆಚ್ಚಿನ ಸಹಕಾರ ಲಭಿಸಿದೆ. ಮುಂದೆ ಸಹ ಇದೆ ರೀತಿ ಸಹಕಾರ ನಿರೀಕ್ಷಿಸಲಾಗುತ್ತಿದೆ. ಜಿಲ್ಲೆಯಲ್ಲಿ ಆಕ್ಸಿಜನ ಕೊರತೆ ಇಲ್ಲ. ಆದರೂ ಸಹ ಮುನ್ನಚ್ಚರಿಕೆ ಕ್ರಮವಾಗಿ ತುರ್ತು ಅನಿವಾರ್ಯ ಸಂದರ್ಭದಲ್ಲಿ ಆಕ್ಸಿಜನ ಕೊರತೆ ಉಂಟಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಆಕ್ಸಿಜನ್ ಪ್ಲಾಂಟ್‌ಗಳ ವೀಕ್ಷಣೆ ನಡೆಸಿದ್ದು, ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ ಎಂದರು. 
ಆಕ್ಸಿಜನ್ ಉತ್ಪಾದನಾ ಕಂಪನಿಗಳಿಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಈ ನಿಟ್ಟಿನಲ್ಲಿ ಕಂಪನಿಯವರಿಗೆ ಭರವಸೆ ನೀಡುತ್ತಿದ್ದು, ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸೋಂಕು ವಾಪಕವಾಗಿ ಹರಡುತ್ತಿದ್ದು, ಕಂಪನಿಗಳು ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು. 


     ಇದಕ್ಕೂ ಮೊದಲು ವಿಐಎಸ್‌ಎಲ್ ಅಥಿತಿ ಗೃಹದಲ್ಲಿ ಜಿಲ್ಲೆಯ ವಿವಿದೆಡೆ ಇರುವ ಆಕ್ಸಿಜನ್ ಪ್ಲಾಂಟ್‌ಗಳ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಂಪೂರ್ಣ ಮಾಹಿತಿ ಪಡೆದುಕೊಂಡರು. 
ಎಂಎಸ್‌ಪಿಎಲ್ ಗ್ಯಾಸ್ ಲಿಮಿಟೆಡ್: 
ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಕಬ್ಬಿಣ ಮತ್ತು ಉಕ್ಕು ಉತ್ಪಾದನೆಯ ವಿವಿಧ ಘಟಕಗಳಿಗೆ ಆಕ್ಸಿಜನ್ ಪೂರೈಕೆ ಮಾಡಲು ಎರಡು ಆಕ್ಸಿಜನ್ ಘಟಕಗಳಿದ್ದು, ಈ ಪೈಕಿ ಒಂದು ಕಾರ್ಖಾನೆಗೆ ಸೇರಿದೆ.  ಇದರ ಜೊತೆಗೆ ೨೦೦೬ರಲ್ಲಿ ಎಂಎಸ್‌ಪಿಎಲ್ ಗ್ಯಾಸ್ ಲಿಮಿಟೆಡ್ ಖಾಸಗಿ ಕಂಪನಿಗೆ ಕಾರ್ಖಾನೆ ಒಳಭಾಗದಲ್ಲಿ ಮತ್ತೊಂದು ಘಟಕ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಇಲ್ಲಿ ಅನಿಲ ರೂಪದಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಕಾರ್ಖಾನೆಯಲ್ಲಿ ಉತ್ಪಾದನೆ ಇಲ್ಲದೆ ವಿವಿಧ ಘಟಕಗಳು ಮುಚ್ಚಲ್ಪಟ್ಟಿವೆ. ಈ ಹಿನ್ನಲೆಯಲ್ಲಿ ೨ ವರ್ಷಗಳಿಂದ ಈ ಕಂಪನಿ ಸಹ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಪ್ರಸ್ತುತ ಸುಮಾರು ೩೦೦ ಸಿಲಿಂಡರ್‌ಗಳು ಸಂಗ್ರಹದಲ್ಲಿದ್ದು, ಈ ಸಿಲಿಂಡರ್‌ಗಳನ್ನು ವೈದ್ಯಕೀಯ ಬಳಕೆಗೆ ದ್ರವರೂಪಕ್ಕೆ ಬದಲಿಸಬೇಕಾಗಿದೆ. ಅಗತ್ಯಬಿದ್ದಲ್ಲಿ ಈ ಕಾರ್ಖಾನೆಯನ್ನು ಪುನಃ ಆರಂಭಿಸಲು ಸಂಬಂಧಪಟ್ಟ ಘಟಕದ ಆಡಳಿತ ಮಂಡಳಿಯ ಅನುಮತಿ ಪಡೆಯಬೇಕಾಗಿದೆ. ಜೊತೆಗೆ ಸಿಲಿಂಡರ್‌ಗಳನ್ನು ಸಾಗಾಣೆ ಮಾಡಲು ವಾಹನ ಪರವಾನಗಿ ನೀಡಬೇಕಾಗಿದೆ. 
ದಿ ಸದರನ್ ಗ್ಯಾಸ್ ಲಿಮಿಟೆಡ್ : 
ಈ ಘಟಕವನ್ನು ವಿಐಎಸ್‌ಎಲ್ ಕಾರ್ಖಾನೆಯ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಎಂಪಿಎಂ ಕಾರ್ಖಾನೆಯ ಸಮೀಪದಲ್ಲಿ ಸ್ಥಾಪಿಸಲಾಗಿದೆ. ಸುಮಾರು ೫ ದಶಕಗಳಿಗೂ ಹಳೇಯದಾದ ಘಟಕ ಇದಾಗಿದ್ದು, ಇದರ ಕೇಂದ್ರ ಕಛೇರಿ ಗೋವಾದಲ್ಲಿದೆ. ಈ ಘಟಕ ಸ್ಥಳೀಯವಾಗಿ ಅಗತ್ಯವಿರುವ ಆಕ್ಸಿಜನ್ ಗ್ಯಾಸ್ ಪೂರ‍್ಯಕೆಯಲ್ಲಿ ತೊಡಗಿಸಿಕೊಂಡಿದೆ. ಇಲ್ಲಿ ಆಕ್ಸಿಜನ್ ದ್ರವ ರೂಪದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ವೈದ್ಯಕೀಯ ಬಳಕೆಗೆ ಸೂಕ್ತವಾಗಿದೆ. 
ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ಜಿ.ಪಂ. ಸದಸ್ಯ ಕೆ.ಇ ಕಾಂತೇಶ್, ತಹಸೀಲ್ದಾರ್ ಎಚ್.ಸಿ ಯೋಗೇಶ್, ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಕೆ.ಎಲ್ ಶ್ರೀನಿವಾಸ್ ರಾವ್, ಹಿರಿಯ ಅಧಿಕಾರಿ ಬಿ. ವಿಶ್ವನಾಥ್, ಸ್ಥಳೀಯ ಮುಖಂಡರಾದ ಜಿ. ಧರ್ಮಪ್ರಸಾಧ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ಎಂ. ಪ್ರಭಾಕರ್, ಗಣೇಶ್‌ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

     ೧೨ ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಸಂಗ್ರಹ ಘಟಕ: 

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಪ್ರಸ್ತುತ ೧೨ ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಂಡು ಕಾರ್ಯಾಂಭಗೊಳ್ಳಲಿದೆ. ಇದೀಗ ಅಗತ್ಯವಿರುವ ಆಕ್ಸಿಜನ್ ಬಳ್ಳಾರಿಯಿಂದ ಪೂರೈಕೆಯಾಗುತ್ತಿದ್ದು, ಹೆಚ್ಚಿನ ಅಗತ್ಯ ಕಂಡು ಬಂದಲ್ಲಿ ವಿಐಎಸ್‌ಎಲ್ ಎಂಎಸ್‌ಪಿಎಲ್ ಹಾಗೂ ಸದರನ್ ಗ್ಯಾಸ್ ಲಿಮಿಟೆಡ್‌ಗಳಿಂದ ಪೂರೈಕೆ ಮಾಡಿಕೊಳ್ಳಲಾಗುವುದು. 
                                                                - ಕೆ.ಬಿ ಶಿವಕುಮಾರ್, ಜಿಲ್ಲಾಧಿಕಾರಿ, ಶಿವಮೊಗ್ಗ

No comments:

Post a Comment