ಭದ್ರಾವತಿ ಬಿ.ಎಚ್ ರಸ್ತೆ ಹಾಲಪ್ಪ ವೃತ್ತದಲ್ಲಿ ಗೌರಿ-ಗಣೇಶ ಮೂರ್ತಿಗಳ ಖರೀದಿ ಭರ್ಜರಿಯಾಗಿ ನಡೆಯುತ್ತಿರುವುದು.
ಭದ್ರಾವತಿ, ಆ. ೨೧: ಈ ಬಾರಿ ಗೌರಿ-ಗಣೇಶ ಹಬ್ಬ ಆಚರಣೆ ಹಿನ್ನಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶ್ರೀ ವಿನಾಯಕ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಅನುಮತಿ ನೀಡಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಈ ಬಾರಿ ಎಲ್ಲೆಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂಬ ಮಾಹಿತಿ ಯಾರಿಗೂ ಸರಿಯಾಗಿ ಲಭ್ಯವಾಗುತ್ತಿಲ್ಲ.
ಕಳೆದ ೪ ದಿನಗಳ ಹಿಂದೆಯಷ್ಟೆ ಹಲವು ಷರತ್ತುಗಳೊಂದಿಗೆ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಅನುಮತಿ ನೀಡಿರುವುದರಿಂದ ಹಲವು ಸಂಘಟನೆಗಳು ಗೊಂದಲಕ್ಕೆ ಒಳಗಾಗಿವೆ. ಅದರಲ್ಲೂ ಒಂದೇ ಒಂದು ದಿನ ಪ್ರತಿಷ್ಠಾಪಿಸುವ ಗೋಜಿಗೆ ಯಾವ ಸಂಘಟನೆಗಳು ಮುಂದಾಗುತ್ತಿಲ್ಲ. ಬೆಳಿಗ್ಗೆ ಪ್ರತಿಷ್ಠಾಪನೆ ಮಾಡಿ ಸಂಜೆ ವಿಸರ್ಜನೆ ಮಾಡುವ ಬದಲು ಈ ಬಾರಿ ಆಚರಣೆಯಿಂದ ಹಿಂದೆ ಸರಿಯುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬದ್ಧವಾಗಿರುವಂತೆ ಕಂಡು ಬರುತ್ತಿದೆ.
ಕಾಲಾವಕಾಶ ಕಡಿಮೆ ಇರುವುದರಿಂದ ಯಾವುದೇ ಪೂರ್ವ ಸಿದ್ದತೆಗಳನ್ನು ಕೈಗೊಳ್ಳಲು ಸಂಘಟನೆಗಳಿಗೆ ಸಾಧ್ಯವಾಗಿಲ್ಲ. ಅಲ್ಲದೆ ವಿವಿಧ ಇಲಾಖೆಗಳಿಂದ ಪ್ರತಿಷ್ಠಾಪನೆಗೆ ಅನುಮತಿ ಬೇಕಾಗಿದೆ. ಒಂದೇ ಕಡೆ ಎಲ್ಲಾ ಇಲಾಖೆಗಳ ಅನುಮತಿ ಲಭಿಸುವ ವ್ಯವಸ್ಥೆ ಈ ಬಾರಿ ಕೈಗೊಂಡಿಲ್ಲ. ಪ್ರತಿ ವರ್ಷ ತಾಲೂಕಿನಲ್ಲಿ ಸುಮಾರು ೩೦೦ ರಿಂದ ೪೦೦ ಮೂರ್ತಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಅದರಲ್ಲೂ ಪೊಲೀಸ್ ಇಲಾಖೆ ಆಯಾ ಪ್ರದೇಶಗಳ ವ್ಯಾಪ್ತಿಯಲ್ಲಿ ಸಾಮಾನ್ಯ, ಸೂಕ್ಷ್ಮ, ಅತಿ ಸೂಕ್ಷ್ಮ ಎಂಬ ಗುಂಪುಗಳಾಗಿ ಗುರುತಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಹಬ್ಬ ಆಚರಣೆಗೆ ಮುಂದಾಗುವಂತೆ ನೋಡಿಕೊಳ್ಳುತ್ತಿತ್ತು. ಆದರೆ ಈ ಬಾರಿ ಯಾವುದೇ ಮಾಹಿತಿ ಇಲಾಖೆಗೆ ಲಭ್ಯವಾಗುತ್ತಿಲ್ಲ.
ಈ ನಡುವೆ ಮನೆ ಮನೆಗಳಲ್ಲಿ ವಿನಾಯಕ ಮೂರ್ತಿ ಪ್ರತಿಷ್ಠಾಪಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಮಾರುಕಟ್ಟೆಯಲ್ಲಿ ಮೂರ್ತಿಗಳ ಖರೀದಿ ಭರ್ಜರಿಯಾಗಿ ನಡೆಯುತ್ತಿದೆ. ಶುಕ್ರವಾರ ಸಂಜೆಯೇ ಮನೆಗಳಿಗೆ ಮೂರ್ತಿಗಳನ್ನು ಕೊಂಡೊಯ್ಯುತ್ತಿರುವುದು ಕಂಡು ಬಂದಿತು.
ಭರ್ಜರಿ ವ್ಯಾಪಾರ:
ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಕಳೆದ ೩ ದಿನಗಳಿಂದ ಜನದಟ್ಟಣೆ ಅಧಿಕವಾಗುತ್ತಿದೆ. ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯುತ್ತಿದ್ದು, ಬಹುತೇಕ ಕಡೆಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸದೆ ಖರೀದಿಯಲ್ಲಿ ತೊಡಗಿರುವುದು ಕಂಡು ಬಂದಿತು.
No comments:
Post a Comment