Saturday, August 29, 2020

ಆ.೩೦ರಂದು ರಕ್ತದಾನ ಶಿಬಿರ

ಭದ್ರಾವತಿ, ಆ. ೨೯: ಪಾಪ್ಯುಲರ್ ಫ್ರಂಟ್  ಆಫ್  ಇಂಡಿಯಾ ತಾಲೂಕು ಶಾಖೆ ವತಿಯಿಂದ ಆ.೩೦ರಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
        ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೩ ಗಂಟೆ ವರೆಗೆ ಹಳೇನಗರದ ಜಾಮಿಯಾ ಶಾದಿಮಹಲ್ ಸಭಾಂಗಣದಲ್ಲಿ ಶಿಬಿರ ನಡೆಯಲಿದ್ದು, ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪಿಎಫ್‌ಐ ತಾಲೂಕು ಶಾಖೆ ಅಧ್ಯಕ್ಷ ಮುಹಮ್ಮದ್ ಸಾಧಿಕ್‌ವುಲ್ಲಾ ಕೋರಿದ್ದಾರೆ.




ಸೆ.೧ರಂದು ಸಂಗಮೇಶ್ವರ್ ಬಾಗಿನ ಸಮರ್ಪಣೆ

ಭದ್ರಾವತಿ, ಆ. ೨೯: ಈ ಬಾರಿ ಸಹ ಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಈ ಹಿನ್ನಲೆಯಲ್ಲಿ ಸೆ.೧ರಂದು ಕ್ಷೇತ್ರದ ಶಾಸಕ ಬಿ.ಕೆ ಸಂಗಮೇಶ್ವರ್ ಬಾಗಿನ ಸಮರ್ಪಿಸಲಿದ್ದಾರೆ.
   ಬಿಆರ್‌ಪಿ ಭದ್ರಾ ಜಲಾಶಯದಲ್ಲಿ ಗಂಗಾ ಪೂಜೆಯೊಂದಿಗೆ ಬೆಳಿಗ್ಗೆ ೧೧.೩೦ಕ್ಕೆ ಬಾಗಿನ ಸಮರ್ಪಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.


ಆ.೩೧ರಂದು ದೇವರಾಜ ಅರಸು, ರಾಮಕೃಷ್ಣ ಹೆಗಡೆ ಜನ್ಮದಿನಾಚರಣೆ

ಭದ್ರಾವತಿ, ಆ. ೨೯: ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಆ.೩೧ರಂದು ಸಂಜೆ ೪ ಗಂಟೆಗೆ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಹಾಗು ರಾಮಕೃಷ್ಣ ಹೆಗಡೆಯವರ ಜನ್ಮದಿನಾಚರಣೆ ಹಮ್ಮಿಕೊಳ್ಳಲಾಗಿದೆ.
      ಜನ್ನಾಪುರ ಜಯಶ್ರೀ ಕಲ್ಯಾಣ ಮಂಟಪ ಮುಂಭಾಗದ ಶ್ರೀ ಸರಸ್ಪತಿ ಕಾಂಪ್ಲೆಕ್ಸ್ ಮಹಡಿಯಲ್ಲಿರುವ ಸಂಘದ ಕಛೇರಿಯಲ್ಲಿ ನಡೆಯಲಿರುವ  ಕಾರ್ಯಕ್ರಮವನ್ನು ನಗರಸಭೆ ಪೌರಾಯುಕ್ತ ಮನೋಹರ್ ಉದ್ಘಾಟಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಟ್ರಸ್ಟ್ ಛೇರ‍್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಕೋರಿದ್ದಾರೆ.


Friday, August 28, 2020

ಶಿಕ್ಷಕರು ಮಕ್ಕಳಿಗೆ ವಚನಗಳ ಮೌಲ್ಯಗಳನ್ನು ತಿಳಿಸಿ ಕೊಡಿ : ಟಿ.ಎನ್ ಸೋಮಶೇಖರಯ್ಯ

ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೋಠಿ ವಂಶಸ್ಥರು ಇವರ ಸಹಯೋಗದೊಂದಿಗೆ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ  'ವಚನ ಸಾಹಿತ್ಯ ಮತ್ತು ಜೀವನ ಮೌಲ್ಯ' ಎಂಬ ವಿಷಯ ಕುರಿತ ಮ. ಮಲ್ಲಿಕಾರ್ಜುನ ಕೋಠಿ ದತ್ತಿನಿಧಿ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್  ಸೋಮಶೇಖರಯ್ಯ  ಉದ್ಘಾಟಿಸಿದರು.
ಭದ್ರಾವತಿ, ಆ. ೨೮: ಶಿಕ್ಷಕರು ಮಕ್ಕಳಿಗೆ ವಚನಗಳ ಮೌಲ್ಯಗಳನ್ನು ತಿಳಿಸಿಕೊಡುವ ಜೊತೆಗೆ ಅವುಗಳನ್ನು ಹೆಚ್ಚಾಗಿ ಅಭ್ಯಾಸ ಮಾಡುವಂತೆ ಪ್ರೇರೇಪಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಕರೆ ನೀಡಿದರು.
      ಅವರು ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೋಠಿ ವಂಶಸ್ಥರು ಇವರ ಸಹಯೋಗದೊಂದಿಗೆ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ  'ವಚನ ಸಾಹಿತ್ಯ ಮತ್ತು ಜೀವನ ಮೌಲ್ಯ' ಎಂಬ ವಿಷಯ ಕುರಿತ ಮ. ಮಲ್ಲಿಕಾರ್ಜುನ ಕೋಠಿ ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
        ವಚನಗಳು ಪ್ರತಿಯೊಬ್ಬರ ಬದುಕಿಗೆ ಅವಶ್ಯಕವಾಗಿದ್ದು, ಎಲ್ಲರೂ ಉತ್ತಮ ಮಾರ್ಗದಲ್ಲಿ ಸಾಗಲು ಸಹಕಾರಿಯಾಗಿವೆ. ಈ ಹಿನ್ನಲೆಯಲ್ಲಿ ಮಕ್ಕಳು ಅವುಗಳನ್ನು ಅಭ್ಯಸಿಸುವ ಜೊತೆಗೆ ಅವುಗಳ ಮೌಲ್ಯಗಳನ್ನು ಅರಿತುಕೊಳ್ಳಬೇಕೆಂದರು.
     ಸರ್ಕಾರ ಜಾರಿಗೆ ತಂದಿರುವ ವಿದ್ಯಾಗಮ ಕಾರ್ಯಕ್ರಮ ಮಹತ್ವಪೂರ್ಣವಾಗಿದ್ದು, ಈ ಕಾರ್ಯಕ್ರಮ ಇದೀಗ ಹಳ್ಳಿ, ಹಳ್ಳಿಗಳಲ್ಲಿ, ತಾಲೂಕು ಮಟ್ಟದಲ್ಲಿ ಯಶಸ್ಸು ಕಾಣುತ್ತಿದೆ. ಪ್ರಸ್ತುತ ಕೋವಿಡ್-೧೯ರ ಹಿನ್ನಲೆಯಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಆ ಮೂಲಕ ಕೋವಿಡ್-೧೯ ನಿರ್ಮೂಲನೆಗೆ ಮುಂದಾಗಬೇಕೆಂದರು.
    ಕಸಾಪ ಮಾಜಿ ಕೋಶಾಧ್ಯಕ್ಷ ಕತ್ತಲಗೆರೆ ತಿಮ್ಮಪ್ಪ ಉಪನ್ಯಾಸ ನೀಡಿ, ಭಾರತ ದೇಶ ವಿಭಿನ್ನ ಸಂಸ್ಕೃತಿಯನ್ನು ಹೊಂದಿದೆ. ಜೊತೆಗೆ ಜಗತ್ತಿಗೆ ಗುರುವಾಗಬಲ್ಲ ಎಲ್ಲಾ ಶಕ್ತಿಯನ್ನು ಸಹ ಹೊಂದಿದೆ. ಮೌಲ್ಯಗಳು ಭಾಷೆಯನ್ನು ಮೀರಿ ಬೆಳೆಯುತ್ತಿವೆ ಎಂದರು.
    ಕಸಾಪ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.  ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ, ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿ, ಕಾರ್ಯದರ್ಶಿ ವೈ.ಕೆ ಹನುಮಂತಯ್ಯ ಉಪಸ್ಥಿತರಿದ್ದರು.
   ಕಾರ್ಯದರ್ಶಿ ಚನ್ನಪ್ಪ ಸಿ. ಚನ್ನಪ್ಪ ನಿರೂಪಿಸಿದರು. ಮುಖ್ಯೋಪಾಧ್ಯಾಯ ಪರಮೇಶ್ವರಪ್ಪ ಸ್ವಾಗತಿಸಿದರು. ಶಿಕ್ಷಕ ಎ. ತಿಪ್ಪೇಸ್ವಾಮಿ ವಂದಿಸಿದರು.

ಶಾಸಕರಿಂದ ಒತ್ತುವರಿ ನೆಪದಲ್ಲಿ ರೈತರ ಮೇಲೆ ದೌರ್ಜನ್ಯ

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಆರೋಪ

ಭದ್ರಾವತಿಯಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಈ ಹಿಂದೆ ಸ್ಮಶಾನ ಭೂಮಿ ಜಾಗಕ್ಕೆ ಸಂಬಂಧಿಸಿದಂತೆ ನಡೆದಿರುವ ಗಲಾಟೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಗ್ರಾಮಸ್ಥರು ಹಾಗು ಬೆಂಬಲಿಗರೊಂದಿಗೆ ಸ್ಥಳಕ್ಕೆ ನ್ಯಾಯ ಕೇಳಲು ಹೋದಾಗ ವಿನಾಕಾರಣ ಗಲಾಟೆ ನಡೆಯುವಂತೆ ಪ್ರಚೋದಿಸಲಾಗಿದ್ದು, ಈ ಹಿನ್ನಲೆಯಲ್ಲಿ ಉಂಟಾಗಿರುವ ಗಲಾಟೆಯಲ್ಲಿ ನಮ್ಮ ಪಾತ್ರವಿಲ್ಲ. ನಮ್ಮ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದ್ದು, ತಾಲೂಕಿನ ಎಲ್ಲಾ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಸಂಗಮೇಶ್ವರ್ ಅಣತಿಯಂತೆ ನಡೆದುಕೊಳ್ಳುತ್ತಿದ್ದು, ಭಯಭೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ವಾತಾವರಣದಿಂದ ಅಧಿಕಾರಿಗಳು ಹೊರಬರುವಂತಾಗಬೇಕು. ತಮ್ಮ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂತಾಗಬೇಕು.
                                             -ಎಂ.ಜೆ ಅಪ್ಪಾಜಿ, ಮಾಜಿ ಶಾಸಕರು, ಭದ್ರಾವತಿ
ಭದ್ರಾವತಿ, ಆ. ೨೮: ವಿನಾಕಾರಣ ಕ್ಷೇತ್ರದ ನಿವಾಸಿಗಳಲ್ಲಿ ಗೊಂದಲ ಉಂಟು ಮಾಡಿ ದಾರಿ ತಪ್ಪಿಸುವ ಕಾರ್ಯದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮುಂದಾಗಿದ್ದು, ಮೊದಲು ಚುನಾವಣೆ ಸಂದರ್ಭದಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಗಮನ ಹರಿಸಲಿ ಎಂದು ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಆಗ್ರಹಿಸಿದರು.
         ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಈ ಹಿಂದೆ ಕ್ಷೇತ್ರದ ಶಾಸಕನಾಗಿದ್ದ ಸಂದರ್ಭದಲ್ಲಿ ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾವರಘಟ್ಟ ಸ್ಮಶಾನ ಭೂಮಿಗೆ ಜಾಗ ಮಂಜೂರಾತಿ ಮಾಡಿಸಲಾಗಿತ್ತು. ಇದೀಗ ಈ ಜಾಗಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರಲ್ಲಿ ಗೊಂದಲ ಉಂಟು ಮಾಡಲಾಗುತ್ತಿದೆ. ಒತ್ತುವರಿ ನೆಪದಲ್ಲಿ ಅಮಾಯಕ ರೈತರ ಜಮೀನು ಕಸಿದುಕೊಂಡು ದೌರ್ಜನ್ಯ ವೆಸಲಾಗುತ್ತಿದ್ದು, ಗ್ರಾಮಸ್ಥರಿಗೆ ನಿವೇಶನ ಹಂಚುವ ಸುಳ್ಳು ಭರವಸೆ ನೀಡಲಾಗಿದೆ ಎಂದು ಆರೋಪಿಸಿದರು.
       ಸ್ಮಶಾನ ಜಾಗದ ಸಮೀಪದಲ್ಲಿ ಸುಮಾರು ೩೫ ಮಂದಿ ರೈತರಿದ್ದು, ಈ ಪೈಕಿ ಕೇವಲ ಇಬ್ಬರು ರೈತರ ೨೦ ಗುಂಟೆ ಹಾಗು ೭ ಗುಂಟೆ ಜಮೀನನ್ನು ಮಾತ್ರ ಒತ್ತುವರಿ ನೆಪದಲ್ಲಿ ತೆರವುಗೊಳಿಸಲಾಗಿದೆ. ಉಳಿದ ರೈತರ ಜಮೀನನ್ನು ತೆರವುಗೊಳಿಸದೆ ತಾರತಮ್ಯ ವೆಸಗಲಾಗಿದ್ದು, ಈ ತಾರತಮ್ಯ ನೀತಿಯನ್ನು ಖಂಡಿಸುವ ಜೊತೆಗೆ ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಎಂಪಿಎಂ ಹಾಗು ವಿಐಎಸ್‌ಎಲ್ ಕಾರ್ಖಾನೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಡಲಾಗಿದ್ದ ಭರವಸೆಗಳನ್ನು ಶಾಸಕರು ಈಡೇರಿಸಿಕೊಡಲು ಮುಂದಾಗಬೇಕೆಂದರು.
      ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದು, ತಾಲೂಕು ಆಡಳಿತ ಜನರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ. ಆಡಳಿತ ಯಂತ್ರ ಸಂಪೂರ್ಣವಾಗಿ ವಿಫಲವಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯತನ ಧೋರಣೆಯನ್ನು ವಿರೋಧಿಸಿ ಆ.೩೧ರಂದು ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
       ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಿ.ಪಂ. ಸದಸ್ಯರಾದ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್, ತಾ.ಪಂ. ಅಧ್ಯಕ್ಷೆ ಡಿ. ಲಕ್ಷ್ಮೀದೇವಿ, ಮುಖಂಡರಾದ ಆರ್. ಕರುಣಾಮೂರ್ತಿ, ಕರಿಯಪ್ಪ, ಬದರಿನಾರಾಯಣ, ಜೆ.ಎನ್ ಚಂದ್ರಹಾಸ, ಜಿ.ಡಿ ನಟರಾಜ್, ಎಂ.ಎಸ್ ಸುಧಾಮಣಿ, ವಿಶಾಲಾಕ್ಷಿ, ಮೈಲಾರಪ್ಪ, ಲೋಕೇಶ್ವರ್‌ರಾವ್, ಚನ್ನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Thursday, August 27, 2020

ಸೂಡ ಸದಸ್ಯರಾಗಿ ವಿ. ಕದಿರೇಶ್, ಬಿ.ಜೆ ರಾಮಲಿಂಗಯ್ಯ ನೇಮಕ

ವಿ. ಕದಿರೇಶ್

ಭದ್ರಾವತಿ, ಆ. ೨೭: ಬಿಜೆಪಿ ಪಕ್ಷದ ನಗರದ ಇಬ್ಬರು ಹಿರಿಯ ಮುಖಂಡರನ್ನು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ(ಸೂಡ) ಸದಸ್ಯರನ್ನಾಗಿ ಸರ್ಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ.
   ಹೊಸಮನೆ ನಿವಾಸಿ, ಹಿರಿಯ ಮುಖಂಡ ವಿ. ಕದಿರೇಶ್‌ರವರನ್ನು ಸದಸ್ಯರನ್ನಾಗಿ ನೇಮಕಗೊಳಿಸಲಾಗಿದ್ದು, ಇವರು ೨ ದಶಕಗಳಿಗೂ ಹೆಚ್ಚು ಕಾಲದಿಂದ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ವಿನಾಯಕ ಸೇವಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಸುಮಾರು ೪ ಬಾರಿ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು, ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ವಿವಿಧ ಹುದ್ದೆಗಳನ್ನು ಅಲಂಕಸಿದ್ದಾರೆ. ಈ ಹಿಂದೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೀಗ ಸರ್ಕಾರ ಸೂಡ ಸದಸ್ಯರನ್ನಾಗಿ ನೇಮಕಗೊಳಿಸಿರುವುದು ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗು ಅಭಿಮಾನಿಗಳಲ್ಲಿ ಸಂತಸವನ್ನುಂಟು ಮಾಡಿದೆ.


ಬಿ.ಜೆ ರಾಮಲಿಂಗಯ್ಯ
  ಇನ್ನೊಬ್ಬ ಹಿರಿಯ ಮುಖಂಡ ಬಿ.ಜೆ ರಾಮಲಿಂಗಯ್ಯನವರನ್ನು ಸಹ ಸದಸ್ಯರನ್ನಾಗಿ ನೇಮಕಗೊಳಿಸಲಾಗಿದ್ದು, ಇವರು ವಿಐಎಸ್‌ಎಲ್ ನಿವೃತ್ತ ಉದ್ಯೋಗಿಯಾಗಿದ್ದಾರೆ. ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಲ್ಲದೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಆ.೨೮ರಂದು ‘ವಚನ ಸಾಹಿತ್ಯ ಮತ್ತು ಜೀವನ ಮೌಲ್ಯ’ ದತ್ತಿ ಕಾರ್ಯಕ್ರಮ

ಭದ್ರಾವತಿ, ಆ. ೨೭: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೋಠಿ ವಂಶಸ್ಥರು ಇವರ ಸಹಯೋಗದೊಂದಿಗೆ ಆ.೨೮ರಂದು 'ವಚನ ಸಾಹಿತ್ಯ ಮತ್ತು ಜೀವನ ಮೌಲ್ಯ' ಎಂಬ ವಿಷಯ ಕುರಿತು ಮ.ಮಲ್ಲಿಕಾರ್ಜುನ ಕೋಠಿ ದತ್ತಿನಿಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
  ನ್ಯೂಟೌನ್ ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರದಲ್ಲಿ ಮಧ್ಯಾಹ್ನ ೨.೩೦ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಉದ್ಘಾಟಿಸಲಿದ್ದು, ತಾಲೂಕು ಕಸಾಪ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.
   ಕಸಾಪ ಮಾಜಿ ಕೋಶಾಧ್ಯಕ್ಷ ಕತ್ತಲಗೆರೆ ತಿಮ್ಮಪ್ಪ ಉಪನ್ಯಾಸ ನೀಡಲಿದ್ದು, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ, ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿ ಮತ್ತು ಉಪಾಧ್ಯಕ್ಷ ಡಾ. ನಾಸಿರ್ ಖಾನ್ ಉಪಸ್ಥಿತರಿರುವರು. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕಾರ್ಯದರ್ಶಿ ಸಿ. ಚನ್ನಪ್ಪ ಕೋರಿದ್ದಾರೆ.