Friday, August 28, 2020

ಶಿಕ್ಷಕರು ಮಕ್ಕಳಿಗೆ ವಚನಗಳ ಮೌಲ್ಯಗಳನ್ನು ತಿಳಿಸಿ ಕೊಡಿ : ಟಿ.ಎನ್ ಸೋಮಶೇಖರಯ್ಯ

ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೋಠಿ ವಂಶಸ್ಥರು ಇವರ ಸಹಯೋಗದೊಂದಿಗೆ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ  'ವಚನ ಸಾಹಿತ್ಯ ಮತ್ತು ಜೀವನ ಮೌಲ್ಯ' ಎಂಬ ವಿಷಯ ಕುರಿತ ಮ. ಮಲ್ಲಿಕಾರ್ಜುನ ಕೋಠಿ ದತ್ತಿನಿಧಿ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್  ಸೋಮಶೇಖರಯ್ಯ  ಉದ್ಘಾಟಿಸಿದರು.
ಭದ್ರಾವತಿ, ಆ. ೨೮: ಶಿಕ್ಷಕರು ಮಕ್ಕಳಿಗೆ ವಚನಗಳ ಮೌಲ್ಯಗಳನ್ನು ತಿಳಿಸಿಕೊಡುವ ಜೊತೆಗೆ ಅವುಗಳನ್ನು ಹೆಚ್ಚಾಗಿ ಅಭ್ಯಾಸ ಮಾಡುವಂತೆ ಪ್ರೇರೇಪಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಕರೆ ನೀಡಿದರು.
      ಅವರು ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೋಠಿ ವಂಶಸ್ಥರು ಇವರ ಸಹಯೋಗದೊಂದಿಗೆ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ  'ವಚನ ಸಾಹಿತ್ಯ ಮತ್ತು ಜೀವನ ಮೌಲ್ಯ' ಎಂಬ ವಿಷಯ ಕುರಿತ ಮ. ಮಲ್ಲಿಕಾರ್ಜುನ ಕೋಠಿ ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
        ವಚನಗಳು ಪ್ರತಿಯೊಬ್ಬರ ಬದುಕಿಗೆ ಅವಶ್ಯಕವಾಗಿದ್ದು, ಎಲ್ಲರೂ ಉತ್ತಮ ಮಾರ್ಗದಲ್ಲಿ ಸಾಗಲು ಸಹಕಾರಿಯಾಗಿವೆ. ಈ ಹಿನ್ನಲೆಯಲ್ಲಿ ಮಕ್ಕಳು ಅವುಗಳನ್ನು ಅಭ್ಯಸಿಸುವ ಜೊತೆಗೆ ಅವುಗಳ ಮೌಲ್ಯಗಳನ್ನು ಅರಿತುಕೊಳ್ಳಬೇಕೆಂದರು.
     ಸರ್ಕಾರ ಜಾರಿಗೆ ತಂದಿರುವ ವಿದ್ಯಾಗಮ ಕಾರ್ಯಕ್ರಮ ಮಹತ್ವಪೂರ್ಣವಾಗಿದ್ದು, ಈ ಕಾರ್ಯಕ್ರಮ ಇದೀಗ ಹಳ್ಳಿ, ಹಳ್ಳಿಗಳಲ್ಲಿ, ತಾಲೂಕು ಮಟ್ಟದಲ್ಲಿ ಯಶಸ್ಸು ಕಾಣುತ್ತಿದೆ. ಪ್ರಸ್ತುತ ಕೋವಿಡ್-೧೯ರ ಹಿನ್ನಲೆಯಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಆ ಮೂಲಕ ಕೋವಿಡ್-೧೯ ನಿರ್ಮೂಲನೆಗೆ ಮುಂದಾಗಬೇಕೆಂದರು.
    ಕಸಾಪ ಮಾಜಿ ಕೋಶಾಧ್ಯಕ್ಷ ಕತ್ತಲಗೆರೆ ತಿಮ್ಮಪ್ಪ ಉಪನ್ಯಾಸ ನೀಡಿ, ಭಾರತ ದೇಶ ವಿಭಿನ್ನ ಸಂಸ್ಕೃತಿಯನ್ನು ಹೊಂದಿದೆ. ಜೊತೆಗೆ ಜಗತ್ತಿಗೆ ಗುರುವಾಗಬಲ್ಲ ಎಲ್ಲಾ ಶಕ್ತಿಯನ್ನು ಸಹ ಹೊಂದಿದೆ. ಮೌಲ್ಯಗಳು ಭಾಷೆಯನ್ನು ಮೀರಿ ಬೆಳೆಯುತ್ತಿವೆ ಎಂದರು.
    ಕಸಾಪ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.  ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ, ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿ, ಕಾರ್ಯದರ್ಶಿ ವೈ.ಕೆ ಹನುಮಂತಯ್ಯ ಉಪಸ್ಥಿತರಿದ್ದರು.
   ಕಾರ್ಯದರ್ಶಿ ಚನ್ನಪ್ಪ ಸಿ. ಚನ್ನಪ್ಪ ನಿರೂಪಿಸಿದರು. ಮುಖ್ಯೋಪಾಧ್ಯಾಯ ಪರಮೇಶ್ವರಪ್ಪ ಸ್ವಾಗತಿಸಿದರು. ಶಿಕ್ಷಕ ಎ. ತಿಪ್ಪೇಸ್ವಾಮಿ ವಂದಿಸಿದರು.

No comments:

Post a Comment