ಹೆಸರಿಗೆ ತಕ್ಕಂತೆ ಭವ್ಯ ಜಲಾಶಯ
ಭದ್ರಾ ಜಲಾಶಯ
* ಅನಂತಕುಮಾರ್
ಭದ್ರಾವತಿ: ನಾಡಿನ ಜೀವನದಿ ಕಾವೇರಿಯಂತೆ ಭದ್ರೆಗೂ ಒಂದು ಅಸ್ತಿತ್ವವಿದ್ದು, ಭದ್ರೆ ತನ್ನ ಇತಿಹಾಸದ ಗರ್ಭದೊಳಗೆ ಅಡಗಿಸಿಟ್ಟುಕೊಂಡಿರುವ ಭವ್ಯಪರಂಪರೆ ಇದೀಗ ಅನಾವರಣಗೊಳ್ಳುವ ಕಾಲ ಸನ್ನಿಹಿತವಾಗುತ್ತಿದೆ.
ನಗರದ ಹಿರಿಯ ರಂಗದಾಸೋಹಿ, ಶಿಲ್ಪ ಕಲಾವಿದ ಹಾಗೂ ವರ್ಣ ವಿನ್ಯಾಸಕರಾಗಿರುವ ಎಸ್.ಜಿ ಶಂಕರಮೂರ್ತಿಯವರು ಭದ್ರೆ ತನ್ನ ಇತಿಹಾಸದ ಗರ್ಭದೊಳಗೆ ಅಡಗಿಸಿಟ್ಟುಕೊಂಡಿರುವ ಭವ್ಯಪರಂಪರೆ ಅನಾವರಣಕ್ಕೆ ಮುಂದಾಗಿದ್ದಾರೆ. ಭದ್ರೆ ಎಂಬುದು ಕೇವಲ ನದಿಯಲ್ಲ, ಅದು ಒಂದು ಐತಿಹಾಸಿಕ ಸ್ಥಳದ ಹೆಗ್ಗುರುತು.
ಪೌರಾಣಿಕ ಇತಿಹಾಸ :
ಕ್ರಿ.ಶ ೧೨೧೬ರ ಕಾಲಘಟ್ಟದಲ್ಲಿ ಆಳ್ವಿಕೆ ನಡೆಸಿದ್ದ ವೀರನರಸಿಂಹ ಭೂಪತೆ (ವಿಷ್ಣುವರ್ಧನ ಹಾಗು ಶಾಂತಲೆಯ ಮರಿ ಮೊಮ್ಮೊಗ) ವೆಂಕಿ ಮಹರ್ಷಿಯವರು ಭದ್ರಾ ನದಿ ದಡದಲ್ಲಿ ತಪ್ಪಸ್ಸು ನಡೆಸಿದ್ದ ಹಿನ್ನಲೆಯಲ್ಲಿ ಅಂದು ವಂಕಿ ತಾಣವಾಗಿದ್ದ ಸ್ಥಳದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ನಿರ್ಮಾಣ ಮಾಡಿ, ೧೨೨೬ನೇ ವ್ಯಯನಾಮ ಸಂವತ್ಸರದಂದು ಲೋಕಾರ್ಪಣೆ ಮಾಡಿ ವಂಕಿಪುರ ಎಂದು ನಾಮಕರಣ ಮಾಡುವ ಮೂಲಕ ಭದ್ರೆಯ ಆರಾಧನೆಗೂ ಮುನ್ನುಡಿ ಬರೆದಿದ್ದನು ಎನ್ನಲಾಗಿದೆ. ಈ ಕುರಿತ ಮಾಹಿತಿ ಪೌರಾಣಿಕ ಇತಿಹಾಸದಲ್ಲಿ ದಾಖಲಾಗಿದೆ ಎಂಬುದು ಊರಿನ ಹಿರಿಯರ ಉಲ್ಲೇಖವಾಗಿದೆ.
೮.೫ ಅಡಿ ಎತ್ತರದ ಭದ್ರೆ ವಿಗ್ರಹ:
ಭದ್ರೆಯ ಇತಿಹಾಸ ಅನಾವರಣಗೊಳಿಸುವ ಕಾಲ ಇದೀಗ ಕೂಡಿ ಬಂದಿದ್ದು, ನಗರಸಭೆ ಆಡಳಿತ ಭದ್ರೆ ವಿಗ್ರಹ ಪ್ರತಿಷ್ಠಾಪನೆಗೆ ಮುಂದಾಗಿದೆ. ದೈವ ಸ್ವರೂಪಿಣಿ ಭದ್ರೆಯ ವಿಗ್ರಹದ ಅಡಿಭಾಗದಲ್ಲಿ ವೀರನರಸಿಂಹ ಭೂಪತೆ ಭದ್ರಾಪಾನ ಮಾಡುವ ಸುಂದರ ವಿಗ್ರಹ ಎಸ್.ಜಿ ಶಂಕರಮೂರ್ತಿರವರ ಕಲಾ ಕೌಶಲ್ಯತೆಯಲ್ಲಿ ಆಕರ್ಷಕವಾಗಿ ನಿರ್ಮಾಣಗೊಳ್ಳುತ್ತಿದೆ. ಸುಮಾರು ೮.೫ ಅಡಿ ಎತ್ತರದ ವಿಗ್ರಹ ನಗರಸಭೆ ಮುಂಭಾಗದ ಉದ್ಯಾನವನದಲ್ಲಿ ಪ್ರತಿಷ್ಠಾಪನೆಗೊಳ್ಳಲಿದ್ದು, ಆ ಮೂಲಕ ಗರ್ಭದೊಳಗೆ ಅಡಗಿರುವ ಇತಿಹಾಸ ಅನಾವರಣಗೊಳ್ಳಲಿದೆ.
ಭದ್ರೆ ವಿಗ್ರಹ ನಿರ್ಮಾಣದಲ್ಲಿ ತೊಡಗಿರುವ ಹಿರಿಯ ಶಿಲ್ಪ ಕಲಾವಿದ, ರಂಗದಾಸೋಹಿ ಜಿ.ಎಸ್ ಶಂಕರಮೂರ್ತಿ ದಂಪತಿ.
ಭದ್ರಾ ಜಲಾಶಯ:
ಪಶ್ಚಿಮಘಟ್ಟಗಳ ಪರ್ವತ ಶ್ರೇಣಿಯಲ್ಲಿ ಹುಟ್ಟಿ ಬೆಟ್ಟಗುಡ್ಡಗಳ ನಡುವೆ ಹರಿಯುವ ಭದ್ರೆ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರಿನ ಕೂಡಲಿಯಲ್ಲಿ ತುಂಗಾನದಿಯೊಂದಿಗೆ ಸೇರಿ ಮುಂದೆ ಹರಿದು ತುಂಗಾಭದ್ರಾ ಜಲಾಶಯ ಸೇರುತ್ತದೆ. ಈ ನದಿಗೆ ೧೯೬೫ರಲ್ಲಿ ಸುಮಾರು ೪೩ ಕೋಟಿ ರು. ವೆಚ್ಚದಲ್ಲಿ ಪ್ರಸ್ತುತ ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ನಿರ್ಮಾಣಗೊಂಡ ಜಲಾಶಯ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ರೈತರಿಗೆ ವರದಾನವಾಗಿದೆ. ಒಟ್ಟು ೧,೬೨,೮೧೮ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.
ಭದ್ರಾ ಜಲಾಶಯ ೧೮೬ ಅಡಿ ಎತ್ತರವಿದ್ದು, ಸುಮಾರು ೭೧ ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ವಿದೇಶಿ ತಂತ್ರಜ್ಞಾನದ ಅತ್ಯಾಧುನಿಕ ಸ್ವಯಂ ಚಾಲಿತ ೪ ಕ್ರೆಸ್ಟ್‌ಗೇಟ್‌ಗಳನ್ನು ಒಳ ಗೊಂಡಿದೆ. ಅಣೆಕಟ್ಟೆಯ ಮೇಲ್ಭಾಗದಲ್ಲಿ ಎರಡು ಕಾರುಗಳು ಒಟ್ಟಿಗೆ ಚಲಿಸುವಷ್ಟು ವಿಶಾಲ ಸ್ಥಳಾವಕಾಶವಿದೆ. ಎಡ-ಬಲ ಎರಡು ಬೃಹತ್ ನಾಲೆಗಳನ್ನು ಒಳಗೊಂಡಿದೆ. ಎಡದಂಡೆ ನಾಲೆ ಮೂಲಕ ಶಿವಮೊಗ್ಗ ಹಾಗೂ ಭದ್ರಾವತಿ ತಾಲ್ಲೂಕಿನ ಸುಮಾರು ೮,೩೦೦ ಹೆಕ್ಟೇರು ಪ್ರದೇಶಕ್ಕೆ ಹಾಗೂ ಬಲದಂಡೆ ನಾಲೆ ಮೂಲಕ ತರೀಕೆರೆ ಹಾಗೂ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಲಕ್ಷಾಂತರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.
ಜಲಾಶಯದ ನೀರನ್ನು ಕೇವಲ ನೀರಾವರಿಗೆ ಮಾತ್ರವಲ್ಲದೆ ಕುಡಿಯುವ ನೀರು, ಕೈಗಾರಿಕೆ ಹಾಗೂ ವಿದ್ಯುತ್ ಉತ್ಪಾದನೆಗೂ ಬಳಸಿಕೊಳ್ಳಲಾಗುತ್ತಿದೆ. ಸುಮಾರು ೩೯ ಮೆಗವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಕಳೆದ ಹಲವಾರುಗಳಿಂದ ವರ್ಷಗಳಿಂದ ಬಯಲುಸೀಮೆ ಹಾಗೂ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶ ದಿಂದ ಭದ್ರಾ ಮೇಲ್ಡಂಡೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಯೋಜನೆ ಇನ್ನೂ ಪ್ರಗತಿಯಲ್ಲಿದೆ.
೨೮ ಬಾರಿ ಪೂರ್ಣ ಪ್ರಮಾಣದಲ್ಲಿ ಭರ್ತಿ:
ಜಲಾಶಯ ನಿರ್ಮಾಣಗೊಂಡ ಇದುವರೆಗೂ ಒಟ್ಟು ೨೮ ಬಾರಿ ಪೂರ್ಣ ಪ್ರಮಾಣದಲ್ಲಿ ಭತ್ತಿಯಾಗಿದ್ದು, ೧೯೬೯ರಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿತ್ತು. ನಂತರ ೧೯೯೦ ರಿಂದ ೯೪ರ ವರೆಗೆ ೫ ಬಾರಿ, ೨೦೦೫ ರಿಂದ ೨೦೧೧ರ ವರೆಗೆ ೬ ಬಾರಿ, ೨೦೧೩ ಮತ್ತು ೨೦೧೪ರಲ್ಲಿ ಹಾಗೂ ೨೦೧೮ ಮತ್ತು ೨೦೧೯ರಲ್ಲಿ ಜಲಾಶಯ ಭರ್ತಿಯಾಗಿದ್ದು, ಹಲವು ಬಾರಿ ೧೭೦ ಅಡಿಗೂ ಅಧಿಕ ನೀರು ಸಂಗ್ರಹವಾದರೂ ಸಹ ಭರ್ತಿಯಾಗಿಲ್ಲ.
ಹಲವು ವಿಶೇಷತೆಗಳು:
ದೇಶದಲ್ಲಿ ೨ನೇ ಅತಿ ಎತ್ತರದ ಜಲಾಶಯ ಇದಾಗಿದ್ದು, ೧೮೬ ಅಡಿ ಎತ್ತರ ಹೊಂದಿದೆ. ಜಲಾಶಯದ ನೀರು ಬಿದಿರು ಹಸಿರಿನಿಂದ ಕಂಗೊಳಿಸುವುದು ವಿಶೇಷವಾಗಿದ್ದು, ಜಲಾಶಯದ ವ್ಯಾಪ್ತಿಯನ್ನು ಕಳಲೆ ಔಷಧಿ ಸಸಿಗಳು ಆವರಿಸಿಕೊಂಡಿವೆ. ಈ ಹಿನ್ನಲೆಯಲ್ಲಿ ಕ್ರಿಮಿಕೀಟಗಳಿಂದ ಮುಕ್ತಿಹೊಂದಿದ ಪರಿಶುದ್ಧ ನೀರು ಇದಾಗಿದೆ. ಭದ್ರಾ ಆಭಯಾರಣ್ಯದಲ್ಲಿ ೧೪೭ ಕಿ.ಮೀ. ವರೆಗೆ, ೫೨ ಕಿ.ಮೀ ಎನ್.ಆರ್ ಪುರದ ವರೆಗೆ, ೭೦ ಕಿ.ಮೀ. ಚಿಕ್ಕಮಗಳೂರುವರೆಗೆ, ೩೨ ಕಿ.ಮೀ. ಮುದ್ದಿನಕೊಪ್ಪದವರೆಗೆ ಜಲಾಶಯದ ನೀರು ವಿಸ್ತರಿಸಿಕೊಂಡಿದೆ.
ಭದ್ರಾ ನದಿಗೆ ಯಾವುದೇ ಉಪನದಿಗಳಿಲ್ಲ. ಜಲಾಶಯದಲ್ಲಿ ಅಲ್ಲಲ್ಲಿ ಹಸಿರು ಗುಡ್ಡಗಳಿದ್ದು, ಪ್ರತಿ ವರ್ಷ ಆನೇಕ ಜಾತಿಯ ಪಕ್ಷಿಗಳು ದೇಶ-ವಿದೇಶಗಳಿಂದ ಇಲ್ಲಿಗೆ ವಲಸೆ ಬಂದು ಸುಮಾರು ೫-೬ ತಿಂಗಳುಗಳು ಇದ್ದು, ಪುನಃ ಹಿಂದಿರುಗುತ್ತವೆ. ಈ ಪಕ್ಷಿಗಳ ವೀಕ್ಷಣೆಗಾಗಿಯೇ ಗುಡ್ಡಗಳಲ್ಲಿ ಪ್ರವಾಸಿಗರಿಗೆ ವೀಕ್ಷಣಾ ಧಾಮಗಳನ್ನು ನಿರ್ಮಿಸಲಾಗಿದ್ದು, ಅಲ್ಲದೆ ಬೋಟಿಂಗ್ ವ್ಯವಸ್ಥೆ ಸಹ ಕಲ್ಪಿಸಲಾಗಿದೆ.
ಕಳೆದ ಕೆಲವು ವರ್ಷಗಳ ಹಿಂದೆ ಜಲಾಶಯಕ್ಕೆ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಕೈಗೊಳ್ಳಲಾಗಿದ್ದು, ರಾತ್ರಿ ವೇಳೆ ವೈಭವಯುತವಾಗಿ ಕಂಗೊಳಿಸುತ್ತದೆ. ಒಟ್ಟಾರೆ ಜಲಾಶಯ ಹಲವು ವಿಶೇಷತೆಗಳಿಂದ ಕೂಡಿದೆ.
ಕೆಆರ್‌ಎಸ್ ಮಾದರಿ ಉದ್ಯಾನವನ:
ಜಲಾಶಯ ಮುಂಭಾಗ ವಿಶಾಲವಾದ ಸ್ಥಳವಕಾಶವಿದ್ದು, ಈ ಸ್ಥಳದಲ್ಲಿ ಕೆಆರ್‌ಎಸ್ ಮಾದರಿ ಉದ್ಯಾನವನ ನಿರ್ಮಾಣ ಮಾಡುವಂತೆ ಹಲವಾರು ವರ್ಷಗಳಿಂದ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರಕ್ಕೆ ಒತ್ತಾಯಿಸಿಕೊಂಡು ಬರುತ್ತಿದ್ದಾರೆ. ಆದರೆ ಇದುವರೆಗೂ ಕಾರ್ಯಗತಗೊಂಡಿಲ್ಲ. ಅಲ್ಲದೆ ತಾಲೂಕಿನ ಅನ್ನದಾತ ಭಾರತರತ್ನ ಸರ್.ಎಂ ವಿಶ್ವೇಶ್ವರಾಯರವರ ಅತಿ ಎತ್ತರದ ಪ್ರತಿಮೆ ಸಹ ನಿರ್ಮಾಣಬೇಕೆಂಬ ಒತ್ತಾಯ ಕೇಳಿ ಬರುತ್ತಿದ್ದು, ಆದರೆ ಈ ಬಗ್ಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.