Saturday, September 19, 2020

ಎಂಎಸ್‌ಎಂಇ ನಿರ್ದೇಶಕರಾಗಿ ಉದ್ಯಮಿ ಎಚ್.ಸಿ ರಮೇಶ್ ನೇಮಕ

ಭದ್ರಾವತಿ ಬಿಜೆಪಿ ಮುಖಂಡ, ಉದ್ಯಮಿ ಎಚ್.ಸಿ ರಮೇಶ್‌ರವರನ್ನು ಕೇಂದ್ರ ಸರ್ಕಾರದ ಮೈಕ್ರೋ ಸ್ಮಾಲ್ ಮೀಡಿಯಂ ಎಂಟರ್ ಪ್ರೈಸಸ್(ಎಂ.ಎಸ್.ಎಂ.ಇ) ಸಂಸ್ಥೆಗೆ ನಿರ್ದೇಶಕರನ್ನಾಗಿ ನೇಮಕಗೊಳಿಸಿದ್ದು, ಅವರಿಗೆ ಸಂಸ್ಥೆಯ ಅಧ್ಯಕ್ಷ ಹರಿನಾರಾಯಣ ರಾಜ್‌ಬಾರ್  ಆದೇಶ ಪತ್ರ ವಿತರಿಸಿದರು.
ಭದ್ರಾವತಿ, ಸೆ. ೧೯: ಬಿಜೆಪಿ ಮುಖಂಡ, ಉದ್ಯಮಿ ಎಚ್.ಸಿ ರಮೇಶ್‌ರವರನ್ನು ಕೇಂದ್ರ ಸರ್ಕಾರದ ಮೈಕ್ರೋ ಸ್ಮಾಲ್ ಮೀಡಿಯಂ ಎಂಟರ್ ಪ್ರೈಸಸ್(ಎಂ.ಎಸ್.ಎಂ.ಇ) ಸಂಸ್ಥೆಗೆ ನಿರ್ದೇಶಕರನ್ನಾಗಿ ನೇಮಕಗೊಳಿಸಲಾಗಿದೆ. 
ಕೇಂದ್ರ ಸಚಿ ನಿತಿನ್ ಗಡ್ಕರ್‌ರವರ ಆದೇಶದ ಮೇರೆಗೆ ಸಂಸ್ಥೆಯ ಅಧ್ಯಕ್ಷ, ಉತ್ತರ ಪ್ರದೇಶದ ಲೋಕಸಭಾ ಸದಸ್ಯ ಹರಿನಾರಾಯಣ ರಾಜ್‌ಬಾರ್ ೩ ವರ್ಷಗಳ ಅವಧಿಗೆ ರಮೇಶ್‌ರವರನ್ನು ನಿರ್ದೇಶಕರನ್ನಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. 
ಎಚ್.ಸಿ ರಮೇಶ್‌ರವರು ನಗರದ ಹಿರಿಯ ಕ್ರೀಡಾಪಟು ರಾಷ್ಟ್ರ ಪ್ರಶಸ್ತಿ ವಿಜೇತ ಎಚ್.ಸಿ ಚನ್ನಯ್ಯರವರ ಪುತ್ರರಾಗಿದ್ದು, ಆರಂಭದಿಂದಲೂ ವಿದ್ಯಾರ್ಥಿ ಸಂಘಟನೆಯಲ್ಲಿ ತೊಡಗಿಸಿಕೊಂಡು ನಂತರ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಇವರು ಪಕ್ಷಕ್ಕೆ ಸಲ್ಲಿಸಿರುವ ಪ್ರಾಮಾಣಿಕ ಸೇವೆ ಹಾಗು ಉದ್ಯಮ ಕ್ಷೇತ್ರದಲ್ಲಿ ಹೊಂದಿರುವ ಅನುಭವ ಪರಿಗಣಿಸಿ ನಿರ್ದೇಶಕರನ್ನಾಗಿ ನೇಮಕಗೊಳಿಸಲಾಗಿದೆ ಎನ್ನಲಾಗಿದೆ. 
ನಿರ್ದೇಶಕರಾಗಿ ನೇಮಕಗೊಳ್ಳಲು ಕಾರಣಕರ್ತರಾಗಿರುವ ಕೇಂದ್ರ ಸಚಿವರಿಗೆ, ಪಕ್ಷದ ವರಿಷ್ಠರಿಗೆ, ಕಾರ್ಯಕರ್ತರಿಗೆ ಎಚ್.ಸಿ ರಮೇಶ್ ಕೃತಜ್ಞತೆ ಸಲ್ಲಿಸಿದ್ದಾರೆ. 
ಸೆ.೨೦ರಂದು ಎಚ್.ಸಿ ರಮೇಶ್ ನಗರಕ್ಕೆ ಆಗಮನ: 
ಎಂಎಸ್‌ಎಂಇ ನಿರ್ದೇಶಕರಾಗಿ ನೇಮಕಗೊಂಡಿರುವ ಎಚ್.ಸಿ ರಮೇಶ್‌ರವರಿಗೆ ನಗರದ ಸ್ನೇಹಿತರು, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದ್ದಾರೆ. ಸೆ.೨೦ರಂದು ಎಚ್.ಸಿ ರಮೇಶ್‌ರವರು ನಗರಕ್ಕೆ ಆಗಮಿಸುತ್ತಿದ್ದು, ಈ ಹಿನ್ನಲೆಯಲ್ಲಿ ಅವರನ್ನು ನಗರದ ತರೀಕೆರೆ ರಸ್ತೆ ಮಹಾತ್ಮಗಾಂಧಿ ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತಿಸಲು ಸಿದ್ದತೆಗಳು ನಡೆದಿವೆ. 
ಮಹಾತ್ಮಗಾಂಧಿ ವೃತ್ತದಿಂದ ನಂತರ ಮೆರವಣಿಗೆ ನಡೆಯಲಿದ್ದು, ನ್ಯೂಟೌನ್ ಲಯನ್ಸ್  ಕ್ಲಬ್‌ನಲ್ಲಿ ಸಂಜೆ ೫.೩೦ಕ್ಕೆ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಆರೋಗ್ಯವಂತ ಮಗು ದೇಶದ ಆಸ್ತಿ : ಪೋಷಣ್ ಮಾಸಾಚರಣೆಗೆ ಚಾಲನೆ

ಭದ್ರಾವತಿಯಲ್ಲಿ ಭದ್ರಾ ಕಾಲೋನಿ ಮತ್ತು ಬೊಮ್ಮನಕಟ್ಟೆ ವ್ಯಾಪ್ತಿಯ ಅಂಗನವಾಡಿ ಸಹಾಯಕಿಯರಿಗಾಗಿ ಬೊಮ್ಮನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 'ಪೋಷಣ್ ಮಾಸಾಚರಣೆ' ಕಾರ್ಯಕ್ರಮಕ್ಕೆ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಾವಿತ್ರಿ ಚಾಲನೆ ನೀಡಿದು.  
ಭದ್ರಾವತಿ, ಸೆ. ೧೯: ಆರೋಗ್ಯವಂತ ಮಗು ದೇಶದ ಆಸ್ತಿಯಾಗಿದ್ದು, ಈ ಹಿನ್ನಲೆಯಲ್ಲಿ ಮಗುವಿಗೆ ಪೌಷ್ಠಿಕ ಆಹಾರದ ಅಗತ್ಯವಿದೆ ಎಂದು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಾವಿತ್ರಿ ಹೇಳಿದರು.
    ಭದ್ರಾ ಕಾಲೋನಿ ಮತ್ತು ಬೊಮ್ಮನಕಟ್ಟೆ ವ್ಯಾಪ್ತಿಯ ಅಂಗನವಾಡಿ ಸಹಾಯಕಿಯರಿಗಾಗಿ ಬೊಮ್ಮನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 'ಪೋಷಣ್ ಮಾಸಾಚರಣೆ' ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ತಾಯಂದಿರು ಗರ್ಭಾವಸ್ಥೆಯಲ್ಲಿ ಇರುವಾಗಲೇ ಪೌಷ್ಟಿಕ ಆಹಾರ ಸೇವಿಸಬೇಕು. ಇದು ಮಗುವಿನ ಬೆಳವಣಿಗೆಗೆ ಸಹಕಾರಿಯಾಗಲಿದೆ  ಎಂದರು.
      ಶಾಲೆಯ ಶಿಕ್ಷಕ ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಹಣ ವ್ಯಯ ಮಾಡುತ್ತಿದ್ದು, ಸಾರ್ವಜನಿಕರು ಇಂತಹ ಯೋಜನೆಗಳ ಸದುಪಯೋಗಪಡೆದುಕೊಳ್ಳಲು ಸಹಕಾರಿಯಾಗುವ ನಿಟ್ಟಿನಲ್ಲಿ ಅಂಗನವಾಡಿ ಸಹಾಯಕಿಯರು ಕಾರ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದರು.
      ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್, ಮಧ್ಯಾಹ್ನದ ಊಟ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರತಿಭಾವಂತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಎಂದರು.
     ಶಾಲೆಯ ಶಿಕ್ಷಕರಾದ ವಿಶ್ವನಾಥ್, ಉಷಾರಾಣಿ, ಸುಜಾತ, ಪ್ರಮೀಳಾ, ಸುಶ್ಮಿತಾ, ವಿಜಯಕುಮಾರಿ, ಶಾಬಾನ, ಭದ್ರಾ ಕಾಲೋನಿ ಮತ್ತು ಬೊಮ್ಮನಕಟ್ಟೆ ವ್ಯಾಪ್ತಿಯ ಅಂಗನವಾಡಿ ಸಹಾಯಕಿಯರು ಉಪಸ್ಥಿತರಿದ್ದರು.

Friday, September 18, 2020

ಸಿಲಿಂಡರ್ ಸೋರಿಕೆ ಮಾರುತಿ ಓಮ್ನಿ ಬೆಂಕಿಗಾಹುತಿ

ಭದ್ರಾವತಿ: ತಾಲ್ಲೂಕಿನ ಬಿ.ಆರ್.ಪಿ ಸಮೀಪದ ಸಿಂಗನ ಮನೆ ಗ್ರಾಮದಲ್ಲಿ ಮಾರುತಿ ಓಮ್ನಿ ವಾಹನ ಬೆಂಕಿಗಾಹುತಿಯಾಗಿರುವ ಘಟನೆ ಶುಕ್ರವಾರ ಸಂಜೆ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
       ಸಿಂಗನ ಮನೆ ಗ್ರಾಮದ  ಸತೀಶ್ ಎಂಬುವರ ಮನೆಯ ಮುಂಭಾಗದಲ್ಲಿ ಮಾರುತಿ ಓಮ್ನಿ ವಾಹನಕ್ಕೆ ಸಿಲೆಂಡರ್ ಡಂಪ್ ಮಾಡುವಾಗ ಈ ದುರ್ಘಟನೆ ಸಂಭವಿಸಿದ್ದು, ಮಾರುತಿ ಓಮ್ನಿ ವಾಹನಕ್ಕೆ ಹತ್ತಿದ ಬೆಂಕಿಯ ಜ್ವಾಲೆ ಮನೆಯ ಕಿಟಕಿ ಹಾಗೂ ಟೈಲ್ಸ್ ಗಳನ್ನು  ಆಹುತಿ ಪಡೆದಿದೆ.
     ಅಗ್ನಿಶಾಮಕ ಠಾಣಾಧಿಕಾರಿ ಎನ್.ವಸಂತಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕೆ.ಎಸ್.ರಮೇಶ್, ಸುರೇಶಾಚಾರ್, ಡಿ.ಎನ್.ಸುರೇಶ್  ಮತ್ತು  ಎಂ.ಸಿ.ಮಹೇಂದ್ರ ರವರುಗಳು ಬೆಂಕಿ ನಿಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
      ಘಟನೆ ಕುರಿತಂತೆ ಸ್ಥಳಕ್ಕೆ ಭೇಟಿ ನೀಡಿದ ಭದ್ರಾವತಿ ಗ್ರಾಮಾಂತರ ಠಾಣೆಯ ಪಿಎಸ್ಐ ದೆವರಾಜ್ ರವರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶಾಸಕ ಬಿ.ಕೆ ಸಂಗಮೇಶ್ವರ್ ನಿವಾಸ ಸೀಲ್‌ಡೌನ್

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಸಹೋದರ ಬಿ.ಕೆ ಮೋಹನ್ ನಿವಾಸ ಸೀಲ್‌ಡೌನ್ ಮಾಡಿರುವುದು.
ಭದ್ರಾವತಿ, ಸೆ. ೧೮: ನಗರದ ಹೊಸಮನೆ ಎನ್‌ಎಂಸಿ ಬಡಾವಣೆಯಲ್ಲಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಸಹೋದರ ಬಿ.ಕೆ ಮೋಹನ್‌ರವರ ನಿವಾಸಗಳನ್ನು ಶುಕ್ರವಾರ ಸೀಲ್‌ಡೌನ್ ಮಾಡಲಾಗಿದೆ.
        ಸಂಗಮೇಶ್ವರ್ ಮತ್ತು ಮೋಹನ್‌ರವರ ಮನೆಗಳಲ್ಲಿ ಕೆಲಸ ಮಾಡುವ ೪ ಜನ ಕೆಲಸಗಾರರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಸೀಲ್‌ಡೌನ್ ಮಾಡಲಾಗಿದೆ.
       ಮನೆಗಳ ಮುಂದೆ ಬ್ಯಾರಿಗೇಡ್ ಅಳವಡಿಸಲಾಗಿದ್ದು, ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಅಲ್ಲದೆ ಎರಡು ಮನೆಗಳ ಕುಟುಂಬಸ್ಥರನ್ನು ಮನೆಯಲ್ಲಿಯೇ ನಿಗಾದಲ್ಲಿರಲು ಸೂಚಿಸಲಾಗಿದೆ.  
      ಈ ಹಿಂದೆ ಶಾಸಕರಿಗೆ ಮನವಿ ಸಲ್ಲಿಸಲು ಆಗಮಿಸಿದ್ದ ಅಂಗಡಿವಾಡಿ ಕಾರ್ಯಕರ್ತೆಯೊಬ್ಬರಿಗೆ ಸೋಂಕು ಇರುವುದು ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಅಂದು ಶಾಸಕ ನಿವಾಸವನ್ನು ಸ್ಯಾನಿಟೈಜರ್ ಮಾಡಲಾಗಿತ್ತು.

ಶಾಲಾ-ಕಾಲೇಜುಗಳಲ್ಲಿ ಸಸಿ ನೆಡುವ ಮೂಲಕ ವಿಷ್ಣು ಜನ್ಮ ದಿನಾಚರಣೆ

ಭದ್ರಾವತಿಯಲ್ಲಿ ಡಾ. ವಿಷ್ಣುವರ್ಧನ್ ೭೦ನೇ ಜನ್ಮದಿನದ ಅಂಗವಾಗಿ ಶುಕ್ರವಾರ ಡಾ. ವಿಷ್ಣು ಸೇವಾ ಸಮಿತಿ ವತಿಯಿಂದ ನಗರದ ವಿವಿಧ ಶಾಲಾ-ಕಾಲೇಜುಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  
ಭದ್ರಾವತಿ, ಸೆ. ೧೮:  ಚಲನಚಿತ್ರ ನಟ, ಸಾಹಸ ಸಿಂಹ ದಿವಂಗತ ಡಾ. ವಿಷ್ಣುವರ್ಧನ್ ೭೦ನೇ ಜನ್ಮದಿನದ ಅಂಗವಾಗಿ ಶುಕ್ರವಾರ ಡಾ. ವಿಷ್ಣು ಸೇವಾ ಸಮಿತಿ ವತಿಯಿಂದ ನಗರದ ವಿವಿಧ ಶಾಲಾ-ಕಾಲೇಜುಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  
     ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧೆಡೆ ಸಸಿ ನೆಡಲಾಯಿತು.
      ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖಯ್ಯ, ಉಪ ವಲಯ ಅರಣ್ಯಾಧಿಕಾರಿ ದಿನೇಶ್‌ಕುಮಾರ್, ಜ್ಯೂನಿಯರ್ ವಿಷ್ಣುವರ್ಧನ್, ಕಲಾವಿದ ಅಪೇಕ್ಷ ಮಂಜುನಾಥ್, ಸಿಆರ್‌ಪಿ ಸಿ. ಚನ್ನಪ್ಪ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಎಲ್. ದೇವರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ವಿಷ್ಣು ಸೇನೆ ವತಿಯಿಂದ ನಗರಸಭೆ ವ್ಯಾಪ್ತಿಯ ಹೊಸಮನೆ ಮುಖ್ಯ ರಸ್ತೆಯಲ್ಲಿ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಜನ್ಮ ದಿನ ಆಚರಿಸಲಾಯಿತು
       ಹೊಸಮನೆಯಲ್ಲಿ ವಿಷ್ಣು ಜನ್ಮ ದಿನಾಚರಣೆ:
      ವಿಷ್ಣು ಸೇನೆ ವತಿಯಿಂದ ನಗರಸಭೆ ವ್ಯಾಪ್ತಿಯ ಹೊಸಮನೆ ಮುಖ್ಯ ರಸ್ತೆಯಲ್ಲಿ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಜನ್ಮ ದಿನ ಆಚರಿಸಲಾಯಿತು.
      ವಿಷ್ಣು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ಹಂಚಲಾಯಿತು. ಮುಖಂಡರಾದ ವೆಂಕಟೇಶ್, ಶಿವು, ವಿನಯ್, ಅವಿ, ಕಂಠ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಪಾಪನಾಯಕ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹಿಸಿ ಮನವಿ

ಶಿವಮೊಗ್ಗ ಮಹಾನಗರ ಪಾಲಿಕೆಯ ಚಿತಾಗಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೊರೋನಾ ಸೋಂಕಿಗೆ ತುತ್ತಾಗಿ ಮೃತಪಟ್ಟಿರುವ ಪಾಪನಾಯಕ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಭದ್ರಾವತಿ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ತಹಸೀಲ್ದಾರ್ ಡಿ.ಜೆ ನಾಗರಾಜ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಸೆ. ೧೮: ಶಿವಮೊಗ್ಗ ಮಹಾನಗರ ಪಾಲಿಕೆಯ ಚಿತಾಗಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೊರೋನಾ ಸೋಂಕಿಗೆ ತುತ್ತಾಗಿ ಮೃತಪಟ್ಟಿರುವ ಪಾಪನಾಯಕ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ತಹಸೀಲ್ದಾರ್ ಡಿ.ಜೆ ನಾಗರಾಜ್‌ಗೆ ಮನವಿ ಸಲ್ಲಿಸಲಾಯಿತು.
       ಪಾಪನಾಯಕ ಬಡ ಕುಟುಂಬದ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಅವರ ಪತ್ನಿ ಸವಿತಾರವರಿಗೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನೀಡಬೇಕು. ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಮೃತಪಟ್ಟ ಕೊರೋನಾ ವಾರಿಯರ್ಸ್‌ಗೆ ನೀಡುವಂತೆ ೩೦ ಲಕ್ಷ ರು. ಪರಿಹಾರ ನೀಡಬೇಕೆಂದು ಒತ್ತಾಯಿಸಲಾಯಿತು. ಯುವಕರ ಸಂಘದ ಅಧ್ಯಕ್ಷ ಕೃಷ್ಣ ನಾಯಕ ನೇತೃತ್ವ ವಹಿಸಿದ್ದರು.

ಜನ್ನಾಪುರ, ಸರ್ಕಾರಿ ಹಿರೇಕೆರೆ ಅಭಿವೃದ್ಧಿಗೆ ಬದ್ಧ : ಎಸ್.ಎಸ್ ಜ್ಯೋತಿ ಪ್ರಕಾಶ್

ಭದ್ರಾವತಿಯಲ್ಲಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್‌ರವರನ್ನು ಸನ್ಮಾನಿಸಿ ಅಭಿನಂದಿಸುವ ಮೂಲಕ ಕೆರೆಗಳು, ಉದ್ಯಾನವನಗಳ ಅಭಿವೃದ್ಧಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಸೆ. ೧೮: ನಗರಸಭೆ ವ್ಯಾಪ್ತಿಯ ಜನ್ನಾಪುರ ಕೆರೆ ಹಾಗು ತಮ್ಮಣ್ಣ ಕಾಲೋನಿ ಬಳಿ ಇರುವ ಸರ್ಕಾರಿ ಹಿರೇಕೆರೆ ಅಭಿವೃದ್ಧಿಪಡಿಸುವುದಾಗಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್ ಭರವಸೆ ನೀಡಿದರು.
     ಅವರು ನಗರದ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಮನವಿ ಸ್ವೀಕರಿಸಿ ಮಾತನಾಡಿದರು.
       ಜನ್ನಾಪುರ ಸರ್ವೆ ನಂ.೭೦ರ ಸುಮಾರು ೪೫ ಎಕರೆ ೨೦ ಗುಂಟೆ ವಿಸ್ತೀರ್ಣವುಳ್ಳ ಜನ್ನಾಪುರ ಕೆರೆ, ಸರ್ವೆ ನಂ. ೧೧೨ರ ಸುಮಾರು ೫೦ ಎಕರೆ ೨೦ ಗುಂಟೆ ವಿಸ್ತೀರ್ಣವುಳ್ಳ ತಮ್ಮಣ್ಣ ಕಾಲೋನಿ ಸಮೀಪದಲ್ಲಿರುವ ಸುಮಾರು ೮೦೦ ವರ್ಷಗಳ ಇತಿಹಾಸ ಹೊಂದಿರುವ ಸರ್ಕಾರಿ ಹಿರೇಕೆರೆಗಳ ಸಮೀಕ್ಷೆ ನಡೆಸಿ ಸರ್ವೆ ಕಾರ್ಯ ಕೈಗೊಂಡು ಬೌಂಡರಿ ನಿಗದಿಪಡಿಸಿ ಒತ್ತುವರಿ ತೆರವುಗೊಂಡ ನಂತರ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಇದೆ ರೀತಿ ನಗರಸಭೆ ವ್ಯಾಪ್ತಿಯಲ್ಲಿರುವ ಉದ್ಯಾನವನಗಳನ್ನು ಸಹ ಅಭಿವೃದ್ಧಿಪಡಿಸಲಾಗುವುದು ಎಂದರು.
    ಇದಕ್ಕೂ ಮೊದಲು ಪ್ರಾಧಿಕಾರದ ನೂತನ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್‌ರವರನ್ನು ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಛೇರ‍್ಮನ್ ಆರ್. ವೇಣುಗೋಪಾಲ್ ಸನ್ಮಾನಿಸಿ ಅಭಿನಂದಿಸಿದರು.
      ತಾಲೂಕಿನ ಎಲ್ಲಾ ಕೆರೆಗಳನ್ನು ಅಭಿವೃದ್ಧಿಪಡಿಸುವಂತೆ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಇದೆ ರೀತಿ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್, ಸ್ವಚ್ಛತೆ ಸೇರಿದಂತೆ ಮೂಲ ಸೌಲಭ್ಯಗಳಿಗಾಗಿ, ಆರೋಗ್ಯ, ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿಗಾಗಿ ಸಹ ಕಳೆದ ಸುಮಾರು ೩ ದಶಕಗಳಿಂದ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಈ ಹಿನ್ನಲೆಯಲ್ಲಿ  ಪೂರಕವಾಗಿ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಸಮಸ್ಯೆಗಳ ವಿರುದ್ಧ ಸಹ  ನಿರ್ಮಾಣ, ಆರೋಗ್ಯ ಮನವಿ
      ದಲಿತ ಮುಖಂಡ ಬೋವಿ ಕಾಲೋನಿಯ ಆರ್. ತಮ್ಮಯ್ಯ, ಪ್ರಾಧಿಕಾರದ ಸದಸ್ಯರಾದ ಬಿ.ಜಿ ರಾಮಲಿಂಗಯ್ಯ, ವಿ. ಕದಿರೇಶ್, ಎಸ್. ದೇವರಾಜ್, ಉಮಾಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.