Saturday, September 26, 2020

ಸೆ.೨೮ರ ಕರ್ನಾಟಕ ಬಂದ್‌ಗೆ ಕರಾವೇ ಬೆಂಬಲ

ಬಿ.ವಿ ಗಿರೀಶ್
ಭದ್ರಾವತಿ, ಸೆ. ೨೬: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರಲು ಮುಂದಾಗಿರುವ ಜನ ವಿರೋಧಿ ಹಾಗು ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಸೆ.೨೮ರಂದು ಹಮ್ಮಿಕೊಳ್ಳಲಾಗಿರುವ 'ಕರ್ನಾಟಕ ಬಂದ್'ಗೆ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ಬೆಂಬಲ ನೀಡಲಿದೆ ಎಂದು ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್ ತಿಳಿಸಿದ್ದಾರೆ.
          ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿದಂತೆ ಇನ್ನಿತರ ತಿದ್ದುಪಡಿ ಕಾಯ್ದೆಗಳು ರೈತರು, ಬಡವರು, ಕೂಲಿ ಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳಲಿವೆ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಬಹುತೇಕ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಇದಕ್ಕೆ ಪೂರಕವಾಗಿ ವೇದಿಕೆ ಸಹ ಬೆಂಬಲ ಸೂಚಿಸಲಿದೆ.
       ಕಾಯ್ದೆಗಳನ್ನು ವಿರೋಧಿಸಿ ಸೆ.೨೮ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪನೆ ಮಾಡಿ ನಂತರ ಕಾಲ್ನಡಿಗೆ ಮೂಲಕ ತಾಲೂಕು ಕಛೇರಿ ತಲುಪಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು. ವಿವಿಧ ಸಂಘ-ಸಂಸ್ಥೆಗಳು, ರೈತರು, ಕಾರ್ಮಿಕರು, ಮಹಿಳಾ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು, ಸಾರ್ವಜನಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಗಿರೀಶ್ ಕೋರಿದ್ದಾರೆ.

Friday, September 25, 2020

ಕರ್ನಾಟಕ ಬಂದ್‌ಗೆ ಮಾದಿಗ ಸಮಾಜ ಬೆಂಬಲ : ಎಸ್. ಮಂಜುನಾಥ್

ಎಸ್. ಮಂಜುನಾಥ್, ರಾಜ್ಯಾಧ್ಯಕ್ಷರು, ಮಾದಿಗ ಸಮಾಜ
ಭದ್ರಾವತಿ, ಸೆ. ೨೫: ಕೇಂದ್ರ ಹಾಗು ರಾಜ್ಯ ಸರ್ಕಾರಗಳು ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತರಲು ಮುಂದಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದ್ದು, ಈ ಸಂಬಂಧ ಸೆ.೨೮ರಂದು ಹಮ್ಮಿಕೊಳ್ಳಲಾಗಿರುವ ಕರ್ನಾಟಕ ಬಂದ್‌ಗೆ ಕರ್ನಾಟಕ ರಾಜ್ಯ ಮಾದಿಗ ಸಮಾಜ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ರಾಜ್ಯಾಧ್ಯಕ್ಷ ಎಸ್. ಮಂಜುನಾಥ್ ತಿಳಿಸಿದ್ದಾರೆ.
        ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುಚ್ಛಕ್ತಿ ಕಾಯ್ದೆ ತಿದ್ದುಪಡಿ ಈ ೩ ಮಸೂದೆಗಳನ್ನು ಚರ್ಚೆಗೆ ಅವಕಾಶ ನೀಡದೇ ಸುಗ್ರೀವಾಜ್ಞೆ ಮೂಲಕ ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಈ ಮಸೂದೆಗಳ ವಿರುದ್ಧ ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳು ಹೋರಾಟಕ್ಕೆ ಮುಂದಾಗಿವೆ. ಈ ಹೋರಾಟಕ್ಕೆ ಮಾದಿಗ ಸಮಾಜ ಸಹ ಪೂರಕವಾಗಿ ಬೆಂಬಲ ನೀಡಲಿದೆ.
     ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಬಡವರ ಜಮೀನು ಶ್ರೀಮಂತರ ಪಾಲಾಗುವಂತೆ, ರೆಸಾರ್ಟ್, ಲೇಔಟ್, ಬಡಾವಣೆ ಸೇರಿದಂತೆ ಇನ್ನಿತರ ವಾಣಿಜ್ಯ ಕೇಂದ್ರಗಳಾಗಿ ಪರಿವರ್ತಿಸುವ ಹುನ್ನಾರ ನಡೆಸಲಾಗುತ್ತಿದೆ. ಬಂಡವಾಳ ಶಾಯಿಗಳು ನಿಗದಿಪಡಿಸಿದ ಬೆಲೆಗೆ ರೈತರು ಉತ್ಪನ್ನಗಳನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವಂತೆ ಹಾಗು ರೈತರು ಮತ್ತು ಬಡವರು ಹಸಿವಿನಿಂದ ನರಳುವಂತೆ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ರೈತರು ನಡೆಸುತ್ತಿರುವ ಹೋರಾಟಕ್ಕೆ ಬಹುತೇಕ ಸಂಘಟನೆಗಳು, ರಾಜಕೀಯ ಪಕ್ಷಗಳು, ಸಾಹಿತಿಗಳು, ಚಿಂತಕರು, ಪ್ರಗತಿಪರರು ಸೇರಿದಂತೆ ಸಮಸ್ತ ನಾಗರೀಕರು ಬೆಂಬಲ ಸೂಚಿಸಿದ್ದಾರೆ.
       ಮಾದಿಗ ಸಮಾಜ ಸಹ ಎಂದೆಂದಿಗೂ ರೈತರು, ಬಡವರ ಪರವಿದ್ದು, ಹೋರಾಟದಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಬೆಂಬಲ ನೀಡಲಿದ್ದು, ೨೮ರಂದು ಹಮ್ಮಿಕೊಳ್ಳಲಾಗಿರುವ ಕರ್ನಾಟಕ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಲಿದೆ. ಸಮಸ್ತ ನಾಗರೀಕರು ಬಂದ್ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಮಂಜುನಾಥ್ ಕೋರಿದ್ದಾರೆ.

ಹೊಸ ಸೇತುವೆ ಸಂಚಾರಕ್ಕೆ ಮುಕ್ತ : ಪ್ರತಿ ಬಾರಿ ಲಕ್ಷಾಂತರ ರು. ಹಾನಿ

ಕಳೆದ ೩ ದಿನಗಳಿಂದ ಸೇತುವೆ ಮೇಲೆ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದು.
ಭದ್ರಾವತಿ, ಸೆ. ೨೫: ನಗರದ ಹೃದಯ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ಇರುವ ಹೊಸ ಸೇತುವೆ ಮೇಲೆ ಕಳೆದ ೩ ದಿನಗಳಿಂದ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದ್ದು, ಪ್ರತಿ ಬಾರಿಯಂತೆ ಈ ಬಾರಿ ಸಹ ಈ ಸೇತುವೆ ನೀರಿನಲ್ಲಿ ಮುಳುಗಡೆಗೊಂಡ ಪರಿಣಾಮ ಬೃಹತ್ ಕೊಳವೆಗಳು ನೀರಿನಲ್ಲಿ ಕೊಚ್ಚಿ ಹೋಗುವ ಜೊತೆಗೆ ತಡೆಗೋಡೆಗೆ ಹಾನಿ ಉಂಟಾಗಿದೆ.
      ಸುಮಾರು ೪ ದಶಕಗಳಷ್ಟು ಹಳೇಯದಾದ ಈ ಸೇತುವೆ ನಿರ್ಮಾಣ ಇಂದಿಗೂ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಸೇತುವೆಯಿಂದ ಸ್ವಲ್ಪ ದೂರದಲ್ಲಿರುವ ಸುಮಾರು ೧೬೦ ವರ್ಷಗಳಷ್ಟು ಹಳೇಯದಾದ ಭದ್ರಾ ಸೇತುವೆ ಇಂದಿಗೂ ಮಾದರಿಯಾಗಿ ಕಂಡು ಬರುತ್ತಿದೆ.
     ಹಳೇನಗರ ಮತ್ತು ಹೊಸನಗರ ಎರಡು ಭಾಗಗಳಿಗೆ ಸಂಪರ್ಕ ಕೊಂಡಿಗಳಾಗಿರುವ ಈ ಎರಡು ಸೇತುವೆಗಳ ನಡುವೆ ಬಹಳಷ್ಟು ವ್ಯತ್ಯಾಸಗಳಿವೆ. ಭದ್ರಾ ಸೇತುವೆ ಮೇಲಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಿಸಿರುವ ಹೊಸಸೇತುವೆ ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಮುಳುಗಡೆಯಾಗುತ್ತಿದ್ದು, ಪ್ರತಿ ಬಾರಿ ಸೇತುವೆ ಹಾನಿಗೊಳಗಾಗುತ್ತಿದೆ. ಅಲ್ಲದೆ ಸಂಚಾರಕ್ಕೆ ತೊಂದರೆ ಎದುರಾಗುತ್ತಿದೆ.
      ಬಹಳ ವರ್ಷಗಳಿಂದ ಈ ಸೇತುವೆ ಎತ್ತರಿಸಬೇಕೆಂಬ ಬೇಡಿಕೆ ಇದ್ದು, ಮುಖ್ಯಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಂಬಂಧಪಟ್ಟ ಸಚಿವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೆ ಇದುವರೆಗೂ ಕಾರ್ಯಕರ್ತಗೊಂಡಿಲ್ಲ. ಈ ನಡುವೆ ಭದ್ರಾ ಸೇತುವೆ ಶಿಥಿಲಗೊಂಡಿರುವ ಪರಿಣಾಮ ಕಳೆದ ೩ ವರ್ಷಗಳಿಂದ ಈ ಸೇತುವೆಗೆ ಬದಲಿ ನಿರ್ಮಿಸಲಾಗುತ್ತಿದೆ. ಆದರೆ ಹೊಸ ಸೇತುವೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೊಸ ಸೇತುವೆ ಎತ್ತರಿಸುವ ಅಥವಾ ತಡೆಗೋಡೆಗೆ ಹಾನಿಯಾಗದಂತೆ, ಸಂಚಾರಕ್ಕೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕೈಗೊಳ್ಳುವ ಚಿಂತನೆ ಸಹ ನಡೆದಿಲ್ಲ. ಪ್ರತಿ ಬಾರಿ ಸೇತುವೆ ನೀರಿನಲ್ಲಿ ಮುಳುಗಡೆಗೊಂಡಾಗ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡುವ ಜನಪ್ರತಿನಿಧಿಗಳು, ಅಧಿಕಾರಿಗಳು ನಂತರ ಮೌನಕ್ಕೆ ಶರಣಾಗುತ್ತಿರುವುದು ವಿಷಾದನೀಯ ಬೆಳವಣಿಗೆಯಾಗಿದೆ.

ಭದ್ರಾವತಿ ಹೃದಯ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ಇರುವ ಹೊಸ ಸೇತುವೆ ಕಳೆದ ೫ ದಿನಗಳ ಹಿಂದೆ ನೀರಿನಲ್ಲಿ ಮುಳುಗಡೆಯಾಗಿದ್ದ ದೃಶ್ಯ.
     ಪ್ರತಿ ಬಾರಿ ಸೇತುವೆಯ ಎರಡು ಬದಿಯ ತಡೆಗೋಡೆಗಳು, ಬೃಹತ್ ಕೊಳವೆಗಳು, ಕೇಬಲ್‌ಗಳು, ವಿದ್ಯುತ್ ಕಂಬಗಳು ನೀರಿನಲ್ಲಿ ಕೊಚ್ಚಿ ಹೋಗಿ  ಹಾನಿ ಉಂಟಾಗುತ್ತಿದ್ದು,  ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರು. ನಷ್ಟ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಶೀಘ್ರವೇ ಕ್ರಮ ಕೈಗೊಳ್ಳುವ ಮೂಲಕ ಉಂಟಾಗುತ್ತಿರುವ ನಷ್ಟ ತಪ್ಪಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
೩ ದಿನಗಳಿಂದ ಸಂಚಾರಕ್ಕೆ ಮುಕ್ತ:
       ಈ ಬಾರಿ ಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟ ಹಿನ್ನಲೆಯಲ್ಲಿ ೨ ದಿನಗಳ ಕಾಲ ಸೇತುವೆ ಸಂಪೂರ್ಣವಾಗಿ ಮುಳುಗಡೆಗೊಂಡಿತ್ತು. ಹಂತ ಹಂತವಾಗಿ ನೀರು ಇಳಿಮುಖವಾದ ನಂತರ ಸೇತುವೆ ಮೇಲೆ ಸಿಕ್ಕಿಹಾಕಿಕೊಂಡಿದ್ದ ನೀರಿನಲ್ಲಿ ಬುಡ ಸಮೇತ ಕಿತ್ತು ಕೊಂಡು ಬಂದಿರುವ ಮರ ಸೇರಿದಂತೆ ಇನ್ನಿತರ ವಸ್ತುಗಳನ್ನು ತೆರವುಗೊಳಿಸಲಾಗಿದೆ.
     ತಡೆಗೋಡೆ ಕೊಚ್ಚಿಕೊಂಡು ಹೋಗಿರುವ ಭಾಗಗಳಲ್ಲಿ ಬ್ಯಾರಿಗೇಡ್‌ಗಳನ್ನು ಅಳವಡಿಸಲಾಗಿದ್ದು, ನದಿಯಲ್ಲಿ ಬಿದ್ದಿರುವ ಬೃಹತ್ ಕೊಳವೆ, ಕೇಬಲ್‌ಗಳನ್ನು ತೆರವುಗೊಳಿಸಲಾಗುತ್ತಿದೆ. ಈ ನಡುವೆ  ಬಸ್ಸು, ಲಾರಿ ಸೇರಿದಂತೆ ಭಾರಿ ವಾಹನಗಳ ಸಂಚಾರ ಹೊರತುಪಡಿಸಿ ಉಳಿದ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಲಾಗಿದೆ.

ಬ್ರಾಹ್ಮಣ ಸಭಾ ನೂತನ ಅಧ್ಯಕ್ಷರಾಗಿ ಎಂ.ಎಸ್ ಜನಾರ್ಧನ ಅಯ್ಯಂಗಾರ್

ಎಂ.ಎಸ್ ಜನಾರ್ಧನ ಅಯ್ಯಂಗಾರ್
ಭದ್ರಾವತಿ, ಸೆ. ೨೫: ತಾಲೂಕು ಬ್ರಾಹ್ಮಣ ಸಭಾ ನೂತನ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ನೂತನ ಅಧ್ಯಕ್ಷರಾಗಿ ಎಂ.ಎಸ್ ಜನಾರ್ಧನ ಅಯ್ಯಂಗಾರ್ ಆಯ್ಕೆಯಾಗಿದ್ದಾರೆ.
      ಉಪಾಧ್ಯಕ್ಷರಾಗಿ ಡಿ. ಸತ್ಯನಾರಾಯಣರಾವ್, ರಮಾಕಾಂತ(ಪುಟ್ಟಣ್ಣ), ಪ್ರಧಾನ ಕಾರ್ಯದರ್ಶಿಯಾಗಿ ಜಿ. ರಮೇಶ್, ಸಂಘಟನಾ ಕಾರ್ಯದರ್ಶಿಯಾಗಿ ನಾಗರಾಜ ಉಪಾಧ್ಯಾಯ, ವಿದ್ಯಾಶಂಕರ್, ಕಾರ್ಯದರ್ಶಿಯಾಗಿ ಬಿ.ಆರ್ ಇಂದ್ರಸೇನ, ಕೇಶವಮೂರ್ತಿ, ಖಜಾಂಚಿಯಾಗಿ ಕೆ. ಮಂಜುನಾಥ್, ನಿರ್ದೇಶಕರಾಗಿ ಬಿ.ಆರ್ ಪ್ರಭಾಕರ ಜೋಯ್ಸ್, ಪಿ.ಕೆ ಮಂಜುನಾಥರಾವ್, ಪವನ್‌ಕುಮಾರ್ ಉಡುಪ, ಎ.ಎನ್ ಕೃಷ್ಣಸ್ವಾಮಿ, ಶೇಷಾದ್ರಿ, ಎಸ್.ವಿ ನರಸಿಂಹಸ್ವಾಮಿ, ಸುಬ್ರಮಣ್ಯ(ಎ.ಐ.ಆರ್), ಎಚ್.ಎನ್ ಭಾಸ್ಕರ್, ಎಂ.ಎನ್ ಶ್ರೀಧರ್, ಕೃಷ್ಣಸ್ವಾಮಿ ನಾಡಿಗ್, ರಾಜಶೇಖರ್(ಬಿಆರ್‌ಪಿ), ವೆಂಕಟೇಶ್‌ಕುಮಾರ್(ಬಿ.ಆರ್.ಪಿ), ಸ್ವರ್ಣ ನಾಗೇಂದ್ರ ಮತ್ತು ಶಾಂತ ಪ್ರಭಾಕರ ಜೋಯ್ಸ್ ಹಾಗು ಕಾನೂನು ಸಲಹೆಗಾರರಾಗಿ ಮಾರುತಿ ಮತ್ತು ಲೆಕ್ಕ ಪರಿಶೋಧಕರಾಗಿ ರಮೇಶ್ ಬಾಬು ಆಯ್ಕೆಯಾಗಿದ್ದಾರೆ.

Thursday, September 24, 2020

ಸೆ.೨೭ರಂದು ‘ಎಂ.ಜೆ ಅಪ್ಪಾಜಿ ಒಂದು ನೆನಪು’ ಶ್ರದ್ದಾಂಜಲಿ ಕಾರ್ಯಕ್ರಮ

ಭದ್ರಾವತಿ, ಸೆ. ೨೪: ಲೋಯರ್ ಹುತ್ತಾ, ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅಭಿಮಾನಿಗಳ ಬಳಗ ವತಿಯಿಂದ ಸೆ.೨೭ರಂದು ಬೆಳಿಗ್ಗೆ ೧೧ ಗಂಟೆಗೆ ಲೋಯರ್ ಹುತ್ತಾ ಬಿ.ಎಚ್ ರಸ್ತೆ ಶ್ರೀ ಭದ್ರೇಶ್ವರ ಸಮುದಾಯ ಭವನದಲ್ಲಿ 'ಎಂ.ಜೆ ಅಪ್ಪಾಜಿ ಒಂದು ನೆನಪು' ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
       ಮಾಜಿ ಶಾಸಕ ವೈ.ಎಸ್.ವಿ ದತ್ತಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಶಾಸಕಿ ಶಾರದಾಪೂರ್‍ಯಾನಾಯ್ಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ ಮಂಜುನಾಥಗೌಡ, ಜೆಡಿಎಸ್ ರಾಜ್ಯ ಮುಖಂಡ ಎಂ. ಶ್ರೀಕಾಂತ್, ಹಿರಿಯ ಮುಖಂಡರಾದ ಕೆ. ಕರಿಯಪ್ಪ, ಆರ್. ಕರುಣಾಮೂರ್ತಿ, ಅಪ್ಪಾಜಿ ಪುತ್ರ ಎಂ.ಎ ಅಜಿತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
      ಕಾರ್ಯಕ್ರಮಕ್ಕೆ ಅಭಿಮಾನಿಗಳು, ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು, ರೈತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮಾಜಿ ನಗರಸಭಾ ಸದಸ್ಯ ಎಸ್.ಪಿ ಮೋಹನ್‌ರಾವ್ ಕೋರಿದ್ದಾರೆ.

ಕೇಂದ್ರ ಸರ್ಕಾರದ ವರ್ತನೆಗೆ ಆಮ್ ಆದ್ಮಿ ಆಕೋಶ


ಭದ್ರಾವತಿಯಲ್ಲಿ ಆಮ್ ಆದ್ಮಿ ಪಾರ್ಟಿ ವತಿಯಿಂದ ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಮಂಡನೆ ಹಾಗು ೮ ಜನ ಸಂಸದರನ್ನು ಅಮಾನತುಗೊಳಿಸಿರುವ ಕೇಂದ್ರ ಸರ್ಕಾರದ ವರ್ತನೆ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಗುರುವಾರ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಸೆ. ೨೪: ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಮಂಡನೆ ಹಾಗು ೮ ಜನ ಸಂಸದರನ್ನು ಅಮಾನತುಗೊಳಿಸಿರುವ ಕೇಂದ್ರ ಸರ್ಕಾರದ ವರ್ತನೆ ವಿರುದ್ಧ ಆಮ್ ಆದ್ಮಿ ಪಾರ್ಟಿ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಿದೆ.
      ಲೋಕಸಭೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ ಸರ್ಕಾರ ರಾಜ್ಯಸಭೆಯಲ್ಲಿ ಬಹುಮತವಿಲ್ಲದ ಕಾರಣ ಸಂಸತ್ತಿನ ಸಂಪ್ರದಾಯಗಳನ್ನು ಮುರಿದು, ರೈತ ವಿರೋಧಿ ಮಸೂದೆಗಳನ್ನು ಅಸಂವಿಧಾನಿಕವಾಗಿ ಅಂಗೀಕರಿಸಿದೆ. ಅಸಂವಿಧಾನಿಕ ಪ್ರಕ್ರಿಯೆಯಿಂದಾಗಿ ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಗೆ ಧಕ್ಕೆ ಬಂದಿದೆ ಎಂದು ವಿಷಾದಿಸಲಾಗಿದೆ.
       ಅಲ್ಲದೆ ಈ ಅಸಂವಿಧಾನಿಕ ನಡೆಯನ್ನು ವಿರೋಧಿಸಿದ ಆಮ್ ಆದ್ಮಿ ಪಕ್ಷದ ಸಂಸದ ಸೇರಿದಂತೆ ೮ ಮಂದಿ ಸಂಸದರನ್ನು ಒಂದು ವಾರದವರೆಗೆ ಅಮಾನತು ಮಾಡಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದು ವಿರೋಧಿಗಳ ಬಾಯಿ ಮುಚ್ಚಿಸಲು ಸರ್ಕಾರದ ಸರ್ವಾಧಿಕಾರಿ ವರ್ತನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
        ಯಾವುದೇ ಕಾರಣಕ್ಕೂ ಮಸೂದೆ ಕಾನೂನು ರೂಪ ಪಡೆಯಲು ಅವಕಾಶ ನೀಡಬಾರದು. ಪ್ರಜಾ ಪ್ರಭುತ್ವ, ಸಂವಿಧಾನ ಮೌಲ್ಯ ಎತ್ತಿ ಹಿಡಿಯಬೇಕೆಂದು ಮನವಿ ಮಾಡಲಾಗಿದೆ.
       ಪಕ್ಷದ ತಾಲೂಕು ಅಧ್ಯಕ್ಷ ಡಿ.ಎಂ ಚಂದ್ರಪ್ಪ, ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಪ್ರಮುಖರಾದ ಮುಳ್ಕೆರೆ ಲೋಕೇಶ್, ಪ್ರದೀಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ ಧೋರಣೆಗಳಿಗೆ ಖಂಡನೆ

ಸೆ.೨೮ರ ಕರ್ನಾಟಕ ಬಂದ್‌ಗೆ ಕಾಂಗ್ರೆಸ್ ಬೆಂಬಲ

ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಸೆ.೨೮ರಂದು ಕರೆ ನೀಡಲಾಗಿರುವ ಬಂದ್‌ಗೆ ಪೂರಕ ಬೆಂಬಲ ನೀಡುವ ಸಂಬಂಧ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ಪತ್ರಿಕಾಗೋಷ್ಠಿ ನಡೆಯಿತು.
ಭದ್ರಾವತಿ, ಸೆ. ೨೪: ಜನ ವಿರೋಧಿ, ರೈತ ವಿರೋಧಿ ಧೋರಣೆಗಳನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ರೈತರಿಗೆ ಮಾರಕವಾಗಿರುವ ಕಾಯ್ದೆಗಳನ್ನು ಜಾರಿಗೊಳಿಸಲು ಮುಂದಾಗುತ್ತಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಸೆ.೨೮ರಂದು ಹಮ್ಮಿಕೊಳ್ಳಲಾಗಿರುವ ಕರ್ನಾಟಕ ಬಂದ್‌ಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡುತ್ತದೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರು ಸ್ಪಷ್ಟಪಡಿಸಿದರು.
      ಅವರು ಗುರುವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತರಲು ಮುಂದಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.
      ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುಚ್ಛಕ್ತಿ ಕಾಯ್ದೆ ತಿದ್ದುಪಡಿ ೩ ಮಸೂದೆಗಳನ್ನು ಚರ್ಚೆಗೆ ಅವಕಾಶ ನೀಡದೇ ಸುಗ್ರೀವಾಜ್ಞೆ ಮೂಲಕ ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಈ ಮಸೂದೆಗಳ ವಿರುದ್ಧ ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳು ಹೋರಾಟಕ್ಕೆ ಮುಂದಾಗಿವೆ. ಹೋರಾಟಕ್ಕೆ ಪೂರಕವಾಗಿ ಕಾಂಗ್ರೆಸ್ ಸಹ ಬೆಂಬಲ ನೀಡಲಿದೆ ಎಂದರು.
       ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಬಡವರ ಜಮೀನು ಶ್ರೀಮಂತರ ಪಾಲಾಗುವಂತೆ ಮಾಡಲಾಗುತ್ತಿದೆ. ರೆಸಾರ್ಟ್, ಲೇಔಟ್, ಬಡಾವಣೆ ಸೇರಿದಂತೆ ಇನ್ನಿತರ ವಾಣಿಜ್ಯ ಕೇಂದ್ರಗಳಾಗಿ ರೈತರ ಕೃಷಿ ಭೂಮಿಯನ್ನು ಮಾರ್ಪಾಡು ಮಾಡಲಾಗುತ್ತಿದೆ.  ಆಹಾರ ಭದ್ರತೆ ಕಾಯ್ದೆಯಡಿಯಲ್ಲಿ ಜಾರಿಗೆ ತರಲಾಗಿದ್ದ ಪಡಿತರ ವ್ಯವಸ್ಥೆಯನ್ನೂ ಸಹ ಸರ್ಕಾರ ಕಿತ್ತುಕೊಂಡು ಬಡವರು ಹಾಗು ರೈತರನ್ನು ನಿರ್ನಾಮ ಮಾಡಲು ಹೊರಟಿದೆ ಎಂದು ಆರೋಪಿಸಿದರು.
       ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರೈತರ ಹಿತಕಾಯುವಲ್ಲಿ ಮುಂದಾಗಿದೆ. ರೈತರು ಬೆಳೆದ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿ ಪಡಿಸಿ ಉತ್ತಮ ಬೆಲೆಗೆ ಮಾರಾಟ ಮಾಡುವಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಪ್ರಸ್ತುತ ತಿದ್ದುಪಡಿ ಕಾಯ್ದೆಯಿಂದಾಗಿ ರೈತರು ಸಮಿತಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶ ತಪ್ಪಿಹೋಗಿದೆ. ಬಂಡವಾಳ ಶಾಯಿಗಳು ನಿಗದಿಪಡಿಸಿದ ಬೆಲೆಗೆ ರೈತರು ಉತ್ಪನ್ನಗಳನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ರೈತರು ಪ್ರಶ್ನಿಸುವ ಅಧಿಕಾರ ಕಳೆದುಕೊಂಡಂತಾಗಿದೆ ಎಂದು ದೂರಿದರು.
      ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ರಾಮಚಂದ್ರ, ಎಪಿಎಂಸಿ ಅಧ್ಯಕ್ಷ ಲವೇಶ್‌ಗೌಡ, ಮುಖಂಡರಾದ ಮಹಮದ್ ಸನಾವುಲ್ಲಾ, ರಾಘವೇಂದ್ರ, ಆಂಜನಪ್ಪ, ಪುಟ್ಟೇಗೌಡ, ಜಯರಾಜ್, ಅಮೀರ್‌ಜಾನ್, ಚನ್ನಪ್ಪ, ಅರುಣ್, ರೂಪಾ ನಾರಾಯಣ, ಅಣ್ಣೋಜಿರಾವ್, ಗೋಪಿ, ನಂಜಪ್ಪ, ರಾಜು, ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.