Wednesday, September 30, 2020

ಅ.೪ರಂದು ಜೆ.ಎಚ್ ಪಟೇಲ್ ೯೧ನೇ ಜನ್ಮದಿನ

ಭದ್ರಾವತಿ, ಸೆ. ೩೦: ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್ ಪಟೇಲ್‌ರವರ ೯೧ನೇ ಜನ್ಮದಿನ ಅ.೪ರಂದು ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
      ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್ ಪಟೇಲ್‌ರವರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದ ದಿವ್ಯಸಾನಿಧ್ಯ ಸರ್ವಧರ್ಮಪೀಠದ ನಿರಂಜನ ದೇಶಿ ಕೇಂದ್ರ ಸ್ವಾಮೀಜಿ ವಹಿಸಲಿದ್ದು, ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಅಭಿಮಾನಿಗಳು, ಹಿತೈಷಿಗಳು, ಸ್ನೇಹಿತರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಜೆಡಿಯು ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್ ಕುಮಾರ್ ಕೋರಿದ್ದಾರೆ.

ಸಿಐಐ ಪಿಎಸ್‌ಇ ಕೌನ್ಸಿಲ್‌ಗೆ ಅನಿಲ್‌ಕುಮಾರ್ ಚೌಧರಿ

ಅನಿಲ್‌ಕುಮಾರ್ ಚೌಧರಿ  
ಭದ್ರಾವತಿ, ಸೆ. ೩೦: ದಿ ಕಾನ್‌ಫೆಡೆರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿಸ್(ಸಿಐಐ) ಪಿಎಸ್‌ಇ ಕೌನ್ಸಿಲ್‌ಗೆ ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅನಿಲ್‌ಕುಮಾರ್ ಚೌಧರಿ ನಾಮನಿರ್ದೇಶನಗೊಂಡಿದ್ದಾರೆ.
     ೨೦೦೭ರಲ್ಲಿ ಸ್ಥಾಪನೆಯಾದ ಸಿಐಐ ಪಿಎಸ್‌ಇ ಸರ್ಕಾರ  ಮತ್ತು  ಸಾರ್ವಜನಿಕ ವಲಯದ ಉದ್ಯಮಗಳ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬಹುದೊಡ್ಡ ಕೌನ್ಸಿಲ್ ಆಗಿದ್ದು, ಉದ್ಯಮಗಳ ನಿಯಮ ಹಾಗು ಸಲಹೆಗಳನ್ನು ನೀಡಲಿದೆ. ಪ್ರಸ್ತುತ ೧೦ ಮಹಾರತ್ನಾಸ್, ೧೪ ನವರತ್ನಾಸ್ ಮತ್ತು ೭೨  ಮಿನಿ ರತ್ನಾಸ್ ಕಂಪನಿಗಳ ಒಟ್ಟು ೯೬ ಸದಸ್ಯರನ್ನು ಒಳಗೊಂಡಿದೆ.
       ಆತ್ಮನಿರ್ಭರ್ ಭಾರತ್ ಯೋಜನೆಯನ್ನು ಸಹಕಾರಗೊಳಿಸಲು ಕೌನ್ಸಿಲ್ ಶೀಘ್ರದಲ್ಲಿಯೇ ಹಲವು ಯೋಜನೆಗಳನ್ನು ರೂಪಿಸಿಕೊಳ್ಳಲಿದೆ. ಈ ಹಿನ್ನಲೆಯಲ್ಲಿ ಉಕ್ಕು ಪ್ರಾಧಿಕಾರದಲ್ಲಿ ಹೆಚ್ಚಿನ ಸೇವಾನುಭವ ಹೊಂದಿರುವ ಅನಿಲ್‌ಕುಮಾರ್ ಚೌಧರಿಯವರ ನಾಮನಿರ್ದೇಶನ ಹೆಚ್ಚು ಗಮನ ಸೆಳೆದಿದೆ ಎಂದು ವಿಐಎಸ್‌ಎಲ್ ಆಡಳಿತ ಮಂಡಳಿ ತಿಳಿಸಿದೆ.

ಆರೋಗ್ಯವಂತ, ಸದೃಢ ಮಕ್ಕಳ ಬೆಳವಣಿಗೆಗೆ ಪೋಷಣ್ ಅಭಿಯಾನ ಸಹಕಾರಿ : ಸುರೇಶ್

ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಭದ್ರಾವತಿ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ವಿನಾಯಕ ಸೇವಾ ಸಮಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ವಿ. ಕದಿರೇಶ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ, ಸೆ. ೩೦: ಮಗು ಜನಿಸುವ ಆರಂಭಕ್ಕೂ ಮೊದಲೇ ಗರ್ಭಿಣಿ ತಾಯಿ ಹಾಗು ಮಗುವಿನ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದ್ದು, ಇದರಿಂದಾಗಿ ಆರೋಗ್ಯವಂತ ಹಾಗು ಸದೃಢವಾದ ಮಕ್ಕಳ ಬೆಳವಣಿಗೆ ಸಾಧ್ಯವಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್ ತಿಳಿಸಿದರು.
          ಅವರು ಬುಧವಾರ ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ವಿನಾಯಕ ಸೇವಾ ಸಮಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಾಸ್ತಾವಿಕವಾಗಿ ಮಾತನಾಡಿದರು.
       ಪ್ರತಿ ವರ್ಷ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಪೋಷಣ್ ಅಭಿಯಾನ ಕೈಗೊಳ್ಳುವ ಮೂಲಕ ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ಆರೋಗ್ಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಪೌಷ್ಠಿಕತೆ ಎದುರಾಗದಂತೆ ಎಚ್ಚರ ವಹಿಸುವುದು ಈ ಅಭಿಯಾನದ ಗುರಿಯಾಗಿದೆ. ಈ ಬಾರಿ ೪ ಉದ್ದೇಶಗಳೊಂದಿಗೆ  ಸರ್ಕಾರದ ಇತರೆ ಇಲಾಖೆಗಳ, ಸ್ಥಳೀಯ ಸಂಸ್ಥೆಗಳ ಹಾಗು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಅಭಿಯಾನ ಯಶಸ್ವಿಗೆ ಇಲಾಖೆ ಮುಂದಾಗಿದೆ ಎಂದರು.
      ತಾಲೂಕಿನಾದ್ಯಂತ ಸುಮಾರು ೨೬೦ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಲ್ಲಿ ಈ ಬಾರಿ ಪೌಷ್ಠಿಕಾಂಶ ನೀಡುವ ಸಸಿಗಳನ್ನು ನೆಡುವ ಮೂಲಕ ಭವಿಷ್ಯದಲ್ಲಿ ಆ ಸಸಿಗಳು ಬೆಳವಣಿಗೆ ಹೊಂದಿ ಮಹಿಳೆಯರು ಮತ್ತು ಮಕ್ಕಳ ನೆರವಿಗೆ ಬರುವಂತಾಗಬೇಕೆಂಬ ಉದ್ದೇಶ ಹೊಂದಲಾಗಿದೆ. ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಠಿಕತೆ ಎದುರಾಗದಂತೆ ಅಂಗನವಾಡಿ ಕೇಂದ್ರಗಳಲ್ಲಿಯೇ ಪೌಷ್ಠಿಕ ಆಹಾರಗಳನ್ನು ಸಿದ್ದಪಡಿಸುವ ತರಬೇತಿ ಸಹ ನೀಡಲಾಗುತ್ತಿದೆ. ಅಲ್ಲದೆ ಪೌಷ್ಠಿಕ ಆಹಾರ ಪದಾರ್ಥಗಳನ್ನು ಗರ್ಭಿಣಿ ಹಾಗು ಬಾಣಂತಿ ಮಹಿಳೆಯರಿಗೆ ಇಲಾಖೆ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಈ ಯೋಜನೆ ಯಶಸ್ವಿಗೊಳಿಸಲು ಸಹಕರಿಯಾಗುವಂತೆ ಮೊಬೈಲ್‌ಗಳನ್ನು ಸಹ ನೀಡಲಾಗಿದೆ. ಈ ಅಭಿಯಾನಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಿದ್ದು, ಆಗ ಮಾತ್ರ ಯಶಸ್ವಿಯಾಗಲಿದೆ ಎಂದರು.


ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಭದ್ರಾವತಿ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ವಿನಾಯಕ ಸೇವಾ ಸಮಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಮಕ್ಕಳಿಂದಲೇ ಅಭಿಯಾನ ಕುರಿತು ಹೆಚ್ಚಿನ ಮಾಹಿತಿ ಹಾಗು ಜಾಗೃತಿ ಮೂಡಿಸಲಾಯಿತು.
       ತಾಲೂಕು ಪಂಚಾಯಿತಿ ಹಿರಿಯ ಸದಸ್ಯ ಧರ್ಮೇಗೌಡ ಮಾತನಾಡಿ, ಪ್ರಸ್ತುತ ಹಮ್ಮಿಕೊಂಡಿರುವ ಅಭಿಯಾನ ಮಹತ್ವಪೂರ್ಣವಾಗಿದೆ. ದೇಶದ ಭವಿಷ್ಯದ ಸದೃಢ ಪ್ರಜೆಯನ್ನು ರೂಪಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಮಹಿಳೆಯರ ಮತ್ತು ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ವಹಿಸುತ್ತಿರುವುದು ಪ್ರಸ್ತುತ ಉತ್ತಮ ಬೆಳವಣಿಗೆಯಾಗಿದೆ ಎಂದರು.    
          ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣೆಶೇಖರ್, ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ವಿ. ಕದಿರೇಶ್, ತಾ.ಪಂ. ಸದಸ್ಯ ಕೆ. ಮಂಜುನಾಥ್, ನಗರಸಭಾ ಸದಸ್ಯರಾದ ಬದರಿನಾರಾಯಣ, ಮಣಿ ಎ.ಎನ್.ಎಸ್, ರೇಣುಕಾ ಸುದೀಪ್‌ಕುಮಾರ್, ಸಹಾಯಕ ಶಿಶು ಅಬಿವೃದ್ಧಿ ಯೋಜನಾಧಿಕಾರಿ ಸಾವಿತ್ರಿ  ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳಿಂದಲೇ  ಅಭಿಯಾನ ಕುರಿತು ಹೆಚ್ಚಿನ ಮಾಹಿತಿ ಹಾಗು ಜಾಗೃತಿ ಮೂಡಿಸಲಾಯಿತು.
ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Tuesday, September 29, 2020

ತುಂಗಾಬಾಯಿ ನಿಧನ

ತುಂಗಾಬಾಯಿ
ಭದ್ರಾವತಿ ಸೆ. ೨೯: ನಗರದ ಹೊಸಮನೆ ನಿವಾಸಿ  ತುಂಗಾಬಾಯಿ(೭೦) ಮಂಗಳವಾರ ಅನಾರೋಗ್ಯದಿಂದ ನಿಧನ ಹೊಂದಿದರು.
         ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿದ್ದರು. ಮೃತರು ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅ.೫ರಂದು ಎಂ.ಜೆ ಅಪ್ಪಾಜಿ ಒಂದು ನೆನಪು

ಭದ್ರಾವತಿ, ಸೆ. ೨೯: ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಸ್ಮರಣಾರ್ಥ ಅಪ್ಪರ್ ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಅ.೫ರಂದು ಸಂಜೆ ೫.೩೦ಕ್ಕೆ ಎಂ.ಜೆ ಅಪ್ಪಾಜಿಯವರ ಒಂದು ನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
          ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಶಾರದ ಅಪ್ಪಾಜಿ, ಎಂ.ಎ ಅಜಿತ್ ಹಾಗು ಒಕ್ಕಲಿಗರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿರುವರು. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಅ.೨ರಂದು ಗಾಂಧಿ ಜಯಂತಿ

ಭದ್ರಾವತಿ, ಸೆ. ೨೯: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಅ.೨ರಂದು ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ಹಮ್ಮಿಕೊಳ್ಳಲಾಗಿದೆ.
         ನ್ಯೂಟೌನ್ ಶಾರದ ಮಂದಿರದಲ್ಲಿ ಬೆಳಿಗ್ಗೆ ೯ ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಪ್ರತಿ ವರ್ಷದಂತೆ ಈ ಬಾರಿ ಸಹ ಪವಿತ್ರ ಗ್ರಂಥಗಳಾದ ಭಗವದ್ಗೀತೆ, ಬೈಬಲ್ ಮತ್ತು ಕುರಾನ್ ಪಠಣ ನಡೆಯಲಿದೆ. 'ಕೊರೋನಾ ವಾರಿಯರ್ಸ್ ಅಂಡ್ ಸ್ವಚ್ಛ ಹಿ ಸ್ವಾಸ್ಥ್ಯ' ಕುರಿತು ಕಿರುನಾಟಕ, ಗಾಂಧಿಜೀಯವರ ಜೀವನ ಚರಿತ್ರೆ ಕುರಿತು ರಸಪ್ರಶ್ನೆ ಹಾಗು ಗಾಂಧಿಜೀ ಮತ್ತು ದೇಶಭಕ್ತಿ ಗೀತೆಗಳ ಗಾಯನ ನಡೆಯಲಿದೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್ ಪ್ರವೀಣ್‌ಕುಮಾರ್ ಕೋರಿದ್ದಾರೆ.

ಧರ್ಮಸ್ಥಳ ಸಂಘದಿಂದ ವನಮಹೋತ್ಸವ

ಭದ್ರಾವತಿಯಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಗರಸಭೆ ವ್ಯಾಪ್ತಿಯ ಹೊಸಮನೆ ಅಶ್ವಥ್‌ನಗದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.
      ಭದ್ರಾವತಿ, ಸೆ. ೨೯: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಗರಸಭೆ ವ್ಯಾಪ್ತಿಯ ಹೊಸಮನೆ ಅಶ್ವಥ್‌ನಗದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.
      ಯೋಜನೆ ವತಿಯಿಂದ ಪರಿಸರ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ತಾಲೂಕು ಯೋಜನಾಧಿಕಾರಿ ಕೆ. ಪ್ರಸಾದ್, ಮೇಲ್ವಿಚಾರಕಿ ನೇತ್ರಾಬಾಯಿ, ಕೃಷಿ ವಿಭಾಗದ ಮೇಲ್ವಿಚಾರಕ ಗೋವಿಂದಪ್ಪ, ಈ ಭಾಗದ ಒಕ್ಕೂಟದ ಅಧ್ಯಕ್ಷೆ ಕಾವೇರಮ್ಮ ಸೇರಿದಂತೆ ಸೇವಾ ಪ್ರತಿನಿಧಿಗಳು, ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.