Friday, October 23, 2020

ಮದ್ಯದಂಗಡಿಗಳಲ್ಲಿ ಹೆಚ್ಚಿನ ದರ ವಿರೋಧಿಸಿ ಹೋರಾಟ

ಪೂರಕ ಸ್ಪಂದನೆ : ೯ನೇ ದಿನಕ್ಕೆ ಹೋರಾಟ ತಾತ್ಕಾಲಿಕ ಅಂತ್ಯ

ಜನತಾದಳ(ಸಂಯುಕ್ತ) ವತಿಯಿಂದ  ಭದ್ರಾವತಿ ತಾಲೂಕು ಕಚೇರಿ ಮುಂಭಾಗ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ ಮದ್ಯದಂಗಡಿಗಳಲ್ಲಿ ಅಧಿಕ ದರಕ್ಕೆ ಮದ್ಯ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹ  ಶುಕ್ರವಾರ ತಾತ್ಕಾಲಿಕವಾಗಿ ಅಂತ್ಯಗೊಂಡಿದ್ದು, ಈ ಸಂದರ್ಭದಲ್ಲಿ ತಹಸೀಲ್ದಾರ್ ಎನ್.ಜೆ ನಾಗರಾಜ್‌ರವರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ: ಜನತಾದಳ(ಸಂಯುಕ್ತ) ವತಿಯಿಂದ  ತಾಲೂಕು ಕಚೇರಿ ಮುಂಭಾಗ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ ಮದ್ಯದಂಗಡಿಗಳಲ್ಲಿ ಅಧಿಕ ದರಕ್ಕೆ ಮದ್ಯ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹ  ಶುಕ್ರವಾರ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ.
    ತಾಲೂಕಿನ ಸಿಎಲ್-೨ ಮತ್ತು ಎಂಎಸ್‌ಐಎಲ್ ಮದ್ಯದಂಗಡಿಗಳಲ್ಲಿ ಸರ್ಕಾರ ನಿಗದಿಪಡಿಸಿರುವ ದರಗಿಂತ ಹೆಚ್ಚಿನ ದರ ವಸೂಲಾತಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಅ.೧೫ ರಿಂದ ಹೋರಾಟ ಆರಂಭಿಸಲಾಗಿತ್ತು. ಹೋರಾಟಕ್ಕೆ ತಾಲ್ಲೂಕು ಆಡಳಿತ ಹಾಗೂ ಅಬಕಾರಿ ಇಲಾಖೆ ಪೂರಕವಾಗಿ ಸ್ಪಂದಿಸಿದ್ದು, ಶೇ.೮೦ರಷ್ಟು ಮದ್ಯದಂಗಡಿಗಳಲ್ಲಿ ಹೆಚ್ಚಿನ ದರ ವಸೂಲಾತಿ ಮಾಡದಂತೆ ಫಲಕಗಳನ್ನು ಹಾಕಲಾಗಿದೆ. ಈ ಹಿನ್ನಲೆಯಲ್ಲಿ  ಹೋರಾಟವನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಲಾಗಿದೆ.
    ಉಜ್ಜನಿಪುರದ ಎಂಎಸ್‌ಐಎಲ್ ಮದ್ಯದಂಗಡಿ ತೆರವುಗೊಳಿಸುವುದು, ಮೈಕ್ರೋ ಫೈನಾನ್ಸ್‌ಗಳಿಂದ ಮಹಿಳೆಯರಿಗೆ ಉಂಟಾಗುತ್ತಿರುವ ಕಿರುಕುಳ ತಪ್ಪಿಸುವುದು, ಅಬಕಾರಿ ಕಾಯ್ದೆಗಳಿಗೆ ಚ್ಯುತಿ ಬರುವಂತೆ ಹಾಗು ಹೋರಾಟಗಾರರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಅಬಕಾರಿ ನಿರೀಕ್ಷಕ ಧರ್ಮಪ್ಪರನ್ನು ತಕ್ಷಣ ಕರ್ತವ್ಯದಿಂದ ಅಮಾನತುಗೊಳಿಸುವುದು ಸೇರಿದಂತೆ ಇನ್ನೂ ಹಲವು ಬೇಡಿಕೆಗಳು ಬಾಕಿ ಉಳಿದಿದ್ದು, ಈ ಹಿನ್ನಲೆಯಲ್ಲಿ ನ.೪ರಂದು ತಾಲೂಕು ಕಚೇರಿ ಮುಂಭಾಗದಿಂದ ಜಿಲ್ಲಾಧಿಕಾರಿ ಕಛೇರಿ ಮತ್ತು ಜಿಲ್ಲಾ ಅಬಕಾರಿ ಉಪ ಆಯುಕ್ತರ ಕಛೇರಿವರೆಗೂ ಪಾದಯಾತ್ರೆ ನಡೆಸಲಾಗುವುದು. ಹೋರಾಟಕ್ಕೆ ಸಹಕರಿಸಿದ ಪಕ್ಷದ ರಾಜಾಧ್ಯಕ್ಷ ಮಹಿಮಾ ಜೆ. ಪಟೇಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್‌ಕುಮಾರ್ ಸೇರಿದಂತೆ ಎಲ್ಲಾ ಮುಖಂಡರಿಗೆ, ಕಾರ್ಯಕರ್ತರಿಗೆ, ತಾಲೂಕು ಆಡಳಿತಕ್ಕೆ, ಅಬಕಾರಿ ಇಲಾಖೆ ಹಾಗು ಪೊಲೀಸ್ ಇಲಾಖೆಗೆ ಶಶಿಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.
    ಹೋರಾಟ ಅಂತ್ಯಗೊಳಿಸುವ ಸಂಬಂಧ ತಹಸೀಲ್ದಾರ್ ಡಾ. ಎನ್.ಜೆ ನಾಗರಾಜ್, ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆರವರಿಗೆ ಮನವಿ ಸಲ್ಲಿಸಲಾಯಿತು.
    ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್, ಸಂದೇಶ್‌ಕುಮಾರ್, ಚಂದ್ರಶೇಖರ್, ಅಬ್ದುಲ್ ಖದೀರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
   




Thursday, October 22, 2020

ಹೆಚ್ಚಿನ ದರಕ್ಕೆ ಮದ್ಯ ಮಾರಾಟ ವಿರುದ್ಧ ಏಕಾಂಗಿ ಹೋರಾಟ

ಬೇಡಿಕೆ ಈಡೇರದಿದ್ದಲ್ಲಿ ನ.೨ರಿಂದ ಅಮರಣಾಂತರ ಉಪವಾಸ ಸತ್ಯಾಗ್ರಹ 


ಜನಾತದಳ(ಸಂಯುಕ್ತ) ವತಿಯಿಂದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ಅ.೧೫ರಿಂದ ಭದ್ರಾವತಿ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ನಡೆಸುತ್ತಿರುವ ಹೋರಾಟ ಬುಧವಾರ ೭ ದಿನಗಳನ್ನು ಪೂರೈಸಿದ್ದು, ಏಕಾಂಗಿಯಾಗಿ ಹೋರಾಟ ಮುಂದುವರೆಸಿದ್ದಾರೆ.
ಭದ್ರಾವತಿ: ತಾಲೂಕಿನ ಮದ್ಯದಂಗಡಿಗಳಲ್ಲಿ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಹಾಗು ಬಡ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋ ಪೈನಾನ್ಸ್‌ಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜನಾತದಳ(ಸಂಯುಕ್ತ) ವತಿಯಿಂದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ಅ.೧೫ರಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ನಡೆಸುತ್ತಿರುವ ಹೋರಾಟ ಗುರುವಾರ ೮ನೇ ದಿನಕ್ಕೆ ಕಾಲಿಟ್ಟಿದೆ. 
    ಕಳೆದ ೪-೫ ದಿನಗಳಿಂದ ಏಕಾಂಗಿಯಾಗಿ ಹೋರಾಟ ನಡೆಸುತ್ತಿರುವ ಶಶಿಕುಮಾರ್‌ರವರು, ತಾಲೂಕಿನ ಸಿಎಲ್ ೨ ಮದ್ಯದಂಗಡಿ ಮತ್ತು ಎಂಎಸ್‌ಐಎಲ್ ಮದ್ಯದಂಗಡಿಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಎಂಆರ್‌ಪಿ ದರ ಪಡೆಯದೆ ಹೆಚ್ಚಿನ ದರ ಪಡೆಯಲಾಗುತ್ತಿದೆ. ಈ ಸಂಬಂಧ ಹಲವಾರು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಅಲ್ಲದೆ ಉಜ್ಜನಿಪುರ ಆನೆಕೊಪ್ಪದಲ್ಲಿರುವ ಎಂಎಸ್‌ಐಎಲ್ ಮದ್ಯದಂಗಡಿಯಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ಈ ಮದ್ಯದಂಗಡಿ ಸ್ಥಳಾಂತರಿಸುವಂತೆ ಒತ್ತಾಯಿಸಲಾಗಿದೆ. ಅಲ್ಲದೆ ನಿವಾಸಿಗಳು ಅರ್ನಿಷ್ಟಾವಧಿ ಧರಣಿ ಸತ್ಯಾಗ್ರಹ ಸಹ ನಡೆಸಿರುತ್ತಾರೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. 
       ಇದೆ ರೀತಿ ಮೈಕ್ರೋ ಫೈನಾನ್ಸ್‌ಗಳು ಸಾಲ ಪಡೆದಿರುವ ಬಡ ಮಹಿಳೆಯರಿಗೆ ತೊಂದರೆ ಕೊಡುತ್ತಿದ್ದು, ಕೊರೋನಾ ಸಂಕಷ್ಟದ ಸಮಯದಲ್ಲಿ ಒಂದೆಡೆ ಉದ್ಯೋಗವಿಲ್ಲದೆ, ಮತ್ತೊಂದೆಡೆ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿರುವ ಸಂದರ್ಭದಲ್ಲಿ ಸರ್ಕಾರದ ಆದೇಶವಿದ್ದರೂ ಸಹ ಬಲವಂತವಾಗಿ ಕಂತು ಪಾವತಿಸಿಕೊಳ್ಳಲಾಗುತ್ತಿದೆ. ಈ ಸಂಬಂಧ ಸಹ ಹಳೇನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕಳೆದ ೭ ದಿನಗಳಿಂದ ಹೋರಾಟ ನಡೆಸಲಾಗುತ್ತಿದ್ದು, ಈ ನಡುವೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿರುವ ಅಬಕಾರಿ ನಿರೀಕ್ಷಕ ಧರ್ಮಪ್ಪರವರು ದೌರ್ಜನ್ಯದಿಂದ ವರ್ತಿಸುವ ಜೊತೆಗೆ ಹೋರಾಟಗಾರರನ್ನು ಅವಮಾನಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇವರನ್ನು ತಕ್ಷಣ ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿದರು. 
   ಒಂದು ವೇಳೆ ಬೇಡಿಕೆ ಈಡೇರದಿದ್ದಲ್ಲಿ ನ.೨ರಿಂದ ಅಮರಣಾಂತರ ಉಪವಾಸ ಸತ್ಯಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದರು. 

ಮನವಿಗೆ ಪೂರಕವಾಗಿ ಸ್ಪಂದಿಸದೆ ದೌರ್ಜನ್ಯ : ಅಬಕಾರಿ ನಿರೀಕ್ಷಕರನ್ನು ಅಮಾನತುಗೊಳಿಸಲು ಆಗ್ರಹ

ಅಬಕಾರಿ ಇಲಾಖೆ ನಿರೀಕ್ಷಕರ ದೌರ್ಜನ್ಯ ಖಂಡಿಸಿ ತಕ್ಷಣ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಗುರುವಾರ ಭದ್ರಾವತಿಯಲ್ಲಿ ಹೊಸ ಸೇತುವೆ ರಸ್ತೆಯಲ್ಲಿರುವ ಅಬಕಾರಿ ನಿರೀಕ್ಷಕರ ಕಛೇರಿ ಮುಂಭಾಗ ಕರ್ನಾಟಕ ಜನಸೈನ್ಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
 ಭದ್ರಾವತಿ: ನಗರದ ಅಬಕಾರಿ ಇಲಾಖೆ ನಿರೀಕ್ಷಕರ ದೌರ್ಜನ್ಯ ಖಂಡಿಸಿ ತಕ್ಷಣ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಗುರುವಾರ ಹೊಸ ಸೇತುವೆ ರಸ್ತೆಯಲ್ಲಿರುವ ಅಬಕಾರಿ ನಿರೀಕ್ಷಕರ ಕಛೇರಿ ಮುಂಭಾಗ ಕರ್ನಾಟಕ ಜನಸೈನ್ಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
       ಜನ್ನಾಪುರದಲ್ಲಿರುವ ಮದ್ಯದಂಗಡಿಯೊಂದರಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆ ಬಗೆಹರಿಸುವಂತೆ ಅಬಕಾರಿ ನಿರೀಕ್ಷಕ ಧರ್ಮಪ್ಪರವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಮನವಿಗೆ ಪೂರಕವಾಗಿ ಸ್ಪಂದಿಸಬೇಕಾದ ನಿರೀಕ್ಷಕರು ಮನವಿ ಸಲ್ಲಿಸಿದವರ ವಿರುದ್ಧ ದೌರ್ಜನ್ಯದಿಂದ ವರ್ತಿಸುತ್ತಿದ್ದಾರೆ. ಕನಿಷ್ಠ ಗೌರವ ನೀಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ಹಿನ್ನಲೆಯಲ್ಲಿ ನ್ಯೂಟೌನ್ ಪೊಲೀಸ್ ದೂರು ಸಹ ನೀಡಲಾಗಿದೆ.
   ಅಬಕಾರಿ ಕಾಯ್ದೆಗಳನ್ನು ಉಲ್ಲಂಘಿಸಿ ಸಾರ್ವಜನಿಕರೊಂದಿಗೆ ದೌರ್ಜನ್ಯದಿಂದ ವರ್ತಿಸುತ್ತಿರುವ ಧರ್ಮಪ್ಪರವರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.
    ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ನಗರಸಭೆ ಸದಸ್ಯರಾದ ಆರ್. ಕರುಣಾಮೂರ್ತಿ, ಎಂ.ಎ ಅಜಿತ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ವಿ ಗಿರೀಶ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಮುಖಂಡರಾದ ಅನಂತರಾಮು, ರುದ್ರೇಶ್, ಸಂತೋಷ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೊರೋನಾಗೆ ಎಂಪಿಎಂ ಹಣಕಾಸು ಅಧಿಕಾರಿ ಬಲಿ

ವಿಶ್ವನಾಥ ಮಲಗನ್
ಭದ್ರಾವತಿ: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ  ಮುಖ್ಯ ಹಣಕಾಸು ಅಧಿಕಾರಿ ವಿಶ್ವನಾಥ ಮಲಗನ್(೫೯) ಗುರುವಾರ ನಿಧನ ಹೊಂದಿದರು.
     ಪತ್ನಿ, ಓರ್ವ ಪುತ್ರ ಹೊಂದಿದ್ದರು. ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ಇವರ ಅಂತ್ಯಕ್ರಿಯೆ ನೆರವೇರಿತು. ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಕಳೆದ ೨ ವಾರದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
     ಸರ್ಕಾರ ಜಾರಿಗೊಳಿಸಿದ ೨೦೧೭ ಸ್ವಯಂ ನಿವೃತ್ತಿ ಯೋಜನೆಯಡಿ ಸ್ವಯಂ ನಿವೃತ್ತಿ ಹೊಂದಿದ್ದರು. ನಂತರ ನಿಯೋಜನೆ ಮೇಲೆ ಹುದ್ದೆಯಲ್ಲಿ ಮುಂದುವರೆದಿದ್ದರು. ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಹಣ ಕೊಡಿಸುವ ಕಾರ್ಯದಲ್ಲಿ ಹೆಚ್ಚಿನ ಶ್ರಮ ವಹಿಸಿದ್ದರು. ಅಲ್ಲದೆ ಹಣಕಾಸಿನ ಇಲಾಖೆಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದರು.
   ಮೃತರ ನಿಧನಕ್ಕೆ ಎಂಪಿಎಂ ಕಾರ್ಖಾನೆಯ ವಿವಿಧ ಕಾರ್ಮಿಕ ಸಂಘಟನೆಗಳು, ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.


Saturday, October 17, 2020

ಕೋವಿಡ್ ಸಂಕಷ್ಟದ ನಡುವೆಯೂ ರು.೪೦೦ ಕೋ. ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ

ಶೀಘ್ರದಲ್ಲಿಯೇ ಕಾಮಗಾರಿಗಳ ಆರಂಭ : ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ವಿವರಣೆ


ಶನಿವಾರ ಶಾಸಕ ಗೃಹ ಕಛೇರಿಯಲ್ಲಿ ನಡೆದ  ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು. 
ಭದ್ರಾವತಿ, ಅ. ೧೭: ಕ್ಷೇತ್ರದಲ್ಲಿ ಒಟ್ಟು ಸುಮಾರು ೪೦೦ ಕೋ. ರು. ವೆಚ್ಚದ ಹಲವು ಅಭಿವೃದ್ದಿ ಕಾರ್ಯಗಳಿಗೆ ಮಂಜೂರಾತಿ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಕಾಮಗಾರಿಗಳು ಶೀಘ್ರದಲ್ಲಿಯೇ ಆರಂಭಗೊಳ್ಳಲಿವೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು.
    ಕೋವಿಡ್-೧೯ ಸಂಕಷ್ಟದ ಸಮಯದಲ್ಲೂ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಬೆಂಗಳೂರಿನಲ್ಲಿ ಕೋವಿಡ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ನಂತರ ಗುಣಮುಖರಾಗಿದ್ದು, ಬಿಡುಗಡೆಗೊಂಡ ನಂತರ ಬೆಂಗಳೂರಿನಲ್ಲಿಯೇ ಉಳಿದುಕೊಂಡು ಎಲ್ಲಾ ಇಲಾಖೆಗಳಲ್ಲಿ ಸುಮಾರು ೧ ವರ್ಷದಿಂದ ಬಾಕಿ ಉಳಿದಿದ್ದ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಹಾಗು ಸಂಬಂಧಪಟ್ಟ ಸಚಿವರು, ಸಂಸದರನ್ನು ಭೇಟಿ ಮಾಡಿ ಮಂಜೂರಾತಿ ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ ಎಂದರು.
    ಬಹುಮುಖ್ಯವಾಗಿ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನ ಯೋಜನೆಗಳಿಗೆ ಹೆಚ್ಚಿನ ಗಮನ ನೀಡಲಾಗಿದೆ. ಈ ನಡುವೆ ಭದ್ರಾ ನದಿಗೆ ತಡೆ ಗೋಡೆ ನಿರ್ಮಾಣ, ವಸತಿ ನಿರ್ಮಾಣ, ಭದ್ರಾ ಜಲಾಶಯ ಮುಂಭಾಗ ಮಿನಿ ಉದ್ಯಾನವನ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೂ ಮಂಜೂರಾತಿ ಪಡೆಯಲಾಗಿದೆ ಎಂದರು.
     ಮಂಜೂರಾತಿ ಪಡೆದ ಅಭಿವೃದ್ಧಿ ಕಾಮಗಾರಿಗಳ ವಿವರಗಳು:
    ರು.೨ ಕೋ. ವೆಚ್ಚದಲ್ಲಿ ಕೋಡಿಹಳ್ಳಿ ಬಳಿ ಚರಂಡಿ ನಿರ್ಮಾಣ,  ರು. ೫ ಕೋ. ವೆಚ್ಚದಲ್ಲಿ ಸೀತಾರಾಂಪುರದಿಂದ ತಳ್ಳಿಕಟ್ಟೆ, ಕುಮರಿ ನಾರಾಯಣಪುರ ಮಾರ್ಗವಾಗಿ ೫.೫ ಕಿ.ಮೀ ರಸ್ತೆ ನಿರ್ಮಾಣ,  ರು. ೫ ಕೋ. ವೆಚ್ಚದಲ್ಲಿ ವೀರಾಪುರದಿಂದ ಕೊಮಾರನಹಳ್ಳಿ, ಜಯನಗರ ಕಾಚಗೊಂಡನಹಳ್ಳಿಗೆ ಸಂಪರ್ಕಿಸುವ ೫ ಕಿ.ಮೀ ರಸ್ತೆ ನಿರ್ಮಾಣ, ರು.೪.೨೭ ಲಕ್ಷ ರು. ವೆಚ್ಚದಲ್ಲಿ ಡೈರಿ ಸರ್ಕಲ್ ಬಳಿಯಿಂದ ಮಜ್ಜಿಗೇನಹಳ್ಳಿ, ಕೆರೆಕೋಡಿ ಸರ್ಕಲ್, ಬಿಳಕಿ ರಸ್ತೆ ಮೂಲಕ ನವುಲೆ ಬಸಾಪುರ ಮಾರ್ಗದ ೪.೮ ಕಿ.ಮೀ ರಸ್ತೆ ನಿರ್ಮಾಣ, ರು. ೨ ಕೋ. ವೆಚ್ಚದಲ್ಲಿ ನೆರೆ ಹಾವಳಿಯಿಂದಾಗಿ ಹಾಳಾದ ಕಾಗೆಕೋಡಮಗ್ಗಿ, ತಿಮ್ಲಾಪುರ, ಹೊಸೂರು, ಅರಳಿಹಳ್ಳಿ, ರೆಡ್ಡಿ ಕ್ಯಾಂಪ್ ರಸ್ತೆ ದುರಸ್ತಿ ಕಾಮಗಾರಿಗೆ ಅನುಮೋದನೆ ಪಡೆಯಲಾಗಿದೆ ಎಂದುರು.
    ಸುಮಾರು ರು. ೪೫ ಕೋ. ವೆಚ್ಚದಲ್ಲಿ ಗೋಣಿಬೀಡಿನಿಂದ ಕಂಬದಾಳು ಹೊಸೂರು ಮೂಲಕ ೪೫ ಕೆರೆಗಳಿಗೆ ನೀರು ತುಂಬಿಸುವ ಬೃಹತ್ ಯೋಜನೆ,  ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಈ ಹಿಂದೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ತಡೆ ಹಿಡಿದಿದ್ದ ೮ ಕೋ. ರು. ನುದಾನ, ರು. ೯.೯೯ ಕೋ. ವೆಚ್ಚದಲ್ಲಿ ಗೊಂದಿ ಸೇತುವೆಯಿಂದ ಕರಕುಚ್ಚಿ ಮಾರ್ಗದ ನಾಲೆಗೆ ಸೇತುವೆ ನಿರ್ಮಾಣ, ರು. ೨ ಕೋ. ವೆಚ್ಚದಲ್ಲಿ ಭದ್ರಾ ಜಲಾಶಯ ಮುಂಭಾಗದಲ್ಲಿ ಮಿನಿ ಉದ್ಯಾನವನ ನಿರ್ಮಾಣ, ರು.೪.೫ ಕೋ. ವೆಚ್ಚದಲ್ಲಿ ದೊಣಬಘಟ್ಟ ಏತ ನೀರಾವರಿ ಯೋಜನೆ, ರು.೨೧.೦೬ ಕೋ. ವೆಚ್ಚದಲ್ಲಿ ನಗರಸಭೆ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಬಾಕಿ ಉಳಿದಿರುವ ಯುಜಿಡಿ ಕಾಮಗಾರಿ,  ರು.೨೫.೪೦ ಕೋ. ವೆಚ್ಚದಲ್ಲಿ ದೊಣಬಘಟ್ಟದಿಂದ ಬಾಬಳ್ಳಿ, ಹೊಳೆಹೊನ್ನೂರು ಸೇತುವೆ ನಿರ್ಮಾಣ, ರು.೧೮ ಕೋ. ಹೆಚ್ಚುವರಿ ಅನುದಾನದಲ್ಲಿ ಸಿದ್ದರೂಢನಗರದ ಅಭಿವೃದ್ಧಿ, ರು.೧.೨೦ ಕೋ. ವೆಚ್ಚದಲ್ಲಿ ಮಾರುತಿನಗರದ ಬಳಿ ಇರುವ ಸೇತುವೆ ಅಗಲೀಕರಣ ಮತ್ತು ರು. ೭೦ ಲಕ್ಷ ವೆಚ್ಚದಲ್ಲಿ ಹೊಳೆಹೊನ್ನೂರು ಕಾಗೆಕೋಡಮಗ್ಗಿ ಬಳಿಯಲ್ಲಿ ರಸ್ತೆ ಅಭಿವೃದ್ಧಿಗೆ ಅನುಮೋದನೆ ಪಡೆಯಲಾಗಿದೆ ಎಂದರು.
    ರು. ೬೦ ಲಕ್ಷ ವೆಚ್ಚದಲ್ಲಿ ಬಾರಂದೂರು ಕುಂಬಾರಗುಂಡಿ, ಬೊಮ್ಮೇನಹಳ್ಳಿಗೆ ಸಂಪರ್ಕಿಸುವ ಕಾಂಕ್ರಿಟ್ ರಸ್ತೆ ಕಾಮಗಾರಿ, ರು.೬೫ ಲಕ್ಷ ವೆಚ್ಚದಲ್ಲಿ ಕೊಮಾರನಹಳ್ಳಿ ಕೆರೆ ಅಭಿವೃದ್ಧಿ, ರು. ೩೫ ಲಕ್ಷ ವೆಚ್ಚದಲ್ಲಿ ಸಿರಿಯೂರು-ಕಲ್ಲಹಳ್ಳಿ-ಹಾಗಲಮನೆ ರಸ್ತೆಯಲ್ಲಿ ಕಿರು ಸೇತುವೆ ಮರು ನಿರ್ಮಾಣ,
    ರು. ೨ ಕೋ. ವೆಚ್ಚದಲ್ಲಿ ನಗರಸಭೆ ವ್ಯಾಪ್ತಿಯ ಜಯಶ್ರೀ ಸರ್ಕಲ್, ಜನ್ನಾಪುರ, ಮಲ್ಲೇಶ್ವರ ಸಮುದಾಯ ಭವನ, ಜಿಂಕ್‌ಲೈನ್ ಮಾರ್ಗವಾಗಿ ಪಿಡಬ್ಲ್ಯೂಡಿ ಇಲಾಖೆಯಿಂದ ರಸ್ತೆ ಅಭಿವೃದ್ಧಿ,  ಒಟ್ಟು ರು. ೬೦ ಲಕ್ಷ ವೆಚ್ಚದಲ್ಲಿ ನರಸೀಪುರ ಮತ್ತು ಕಾರೇಹಳ್ಳಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ರು.೨೦ ಲಕ್ಷ ವೆಚ್ಚದಲ್ಲಿ ಎರೆಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ, ರು.೧ ಕೋ. ವೆಚ್ಚದಲ್ಲಿ ನೀರಾವರಿ ಇಲಾಖೆಯಿಂದ ಭದ್ರಾ ಕಾಲೋನಿ, ಕಬಳಿಕಟ್ಟೆ, ಗುಂಡಪ್ಪ ಕ್ಯಾಂಪ್‌ವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗು ರು. ೧೦ ಕೋ. ವೆಚ್ಚದಲ್ಲಿವಿಶ್ವಸ್ವರೂಪಿಣಿ ಮಾರಿಯಮ್ಮ ದೇವಾಸ್ಥಾನದ ಬಳಿ ಭದ್ರಾ ನದಿಗೆ ತಡೆಗೋಡೆ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಅನುಮೋದನೆ ಪಡೆಯಲಾಗಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಮುಖಂಡರಾದ ಬಾಲಕೃಷ್ಣ, ಬಿ.ಟಿ ನಾಗರಾಜ್, ಅಣ್ಣೋಜಿರಾವ್, ಚನ್ನಪ್ಪ, ರಮೇಶ್‌ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಪತ್ರಿಕಾ ವಿತರಕ ಭಾನುಪ್ರಕಾಶ್ ನಿಧನ


ಭಾನುಪ್ರಕಾಶ್
ಭದ್ರಾವತಿ, ಅ. ೧೭: ನಗರದ ಹೊಸಮನೆ ನಿವಾಸಿ, ದಿನ ಪತ್ರಿಕೆಗಳ ವಿತರಕ ಭಾನುಪ್ರಕಾಶ್(೭೦) ಶುಕ್ರವಾರ ರಾತ್ರಿ ನಿಧನ ಹೊಂದಿದರು.
      ಪತ್ನಿ, ಒಂದು ಹೆಣ್ಣು, ಇಬ್ಬರು ಗಂಡು ಮಕ್ಕಳು, ಮೊಮ್ಮಕ್ಕಳನ್ನು ಹೊಂದಿದ್ದರು. ಸುಮಾರು ೨೦ಕ್ಕೂ ಹೆಚ್ಚು ವರ್ಷಗಳಿಂದ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರ ನಿಧನಕ್ಕೆ ಪತ್ರಿಕಾವಿತರಕರು ಸಂತಾಪ ಸೂಚಿಸಿದ್ದಾರೆ.

ನಿವೃತ್ತ ಸೈನಿಕರನ್ನು ಗುರುತಿಸುವ ಕಾರ್ಯ ಶ್ಲಾಘನೀಯ : ಸುಬೇದಾರ್ ಎಲ್.ಡಿ ಅಶೋಕ್

ಗ್ರಾಮ ದೇವತೆ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ನಾಡಹಬ್ಬಕ್ಕೆ ಚಾಲನೆ

ಭದ್ರಾವತಿ ನಗರಸಭೆ ವತಿಯಿಂದ ೯ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಸರಳ ದಸರಾ ಮಹೋತ್ಸವಕ್ಕೆ ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ, ಸುಬೇದಾರ್ ಎಲ್.ಡಿ ಅಶೋಕ್ ಚಾಲನೆ ನೀಡಿದರು.
ಭದ್ರಾವತಿ, ಅ. ೧೭:  ದೇಶ ರಕ್ಷಣೆಯಲ್ಲಿ ತೊಡಗಿ ನಿವೃತ್ತಿ ಹೊಂದಿರುವ ಸೈನಿಕರನ್ನು ಗುರುತಿಸುವ ಜೊತೆಗೆ ದಸರಾ ಉದ್ಘಾಟನೆಗೆ ಆಹ್ವಾನಿಸುವ ಮೂಲಕ ಅವರಿಗೆ ಗೌರವ ನೀಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ ಎಂದು ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ, ಸುಬೇದಾರ್ ಎಲ್.ಡಿ ಅಶೋಕ್ ಪ್ರಶಂಸೆ ವ್ಯಕ್ತಪಡಿಸಿದರು.
        ಅವರು ಶನಿವಾರ ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ನಗರಸಭೆ ವತಿಯಿಂದ ೯ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಸರಳ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
       ಮಾಜಿ ಸೈನಿಕರನ್ನು ನಿರ್ಲಕ್ಷಿಸುತ್ತಿರುವ ಇಂದಿನ ಸಂದರ್ಭದಲ್ಲಿ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಅವರನ್ನು ಗುರುತಿಸುವ ಮೂಲಕ ದಸರಾ ಉದ್ಘಾಟನೆಗೆ ಅವಕಾಶ ಮಾಡಿಕೊಟ್ಟಿರುವುದು ತಾಲೂಕಿನ ಎಲ್ಲಾ ಮಾಜಿ ಸೈನಿಕರಿಗೆ ಸಲ್ಲುವ ಗೌರವಾಗಿದೆ. ಪ್ರತಿಯೊಬ್ಬರ ರಕ್ಷಣೆ ಇಂದು ಅಗತ್ಯವಾಗಿದ್ದು, ನಾಡಹಬ್ಬ ದಸರಾ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
       ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ತಾಯಿ ಚಾಮುಂಡೇಶ್ವರಿ ದೇವಿ ಎಲ್ಲರನ್ನು ರಕ್ಷಿಸುವ ಜೊತೆಗೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಹೆಚ್ಚಿನ ರೀತಿಯಲ್ಲಿ ನಡೆಯುವಂತಾಗಲಿ ಎಂದು ಪ್ರಾರ್ಥಿಸಿದರು.
       ವೇದಿಕೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಡಾ. ನಾಗೇಂದ್ರ ಹೊನ್ನಾಳಿ, ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ತಹಸೀಲ್ದಾರ್ ಡಾ. ಎನ್.ಜೆ ನಾಗರಾಜ್, ಸುಬೇದಾರ್ ಬೋರೇಗೌಡ, ಹಲ್ದಾರ್‌ಗಳಾದ ವಿನೋದ್‌ಪೂಜಾರಿ, ಪ್ರಸಾದ್, ನಾಯಕ್ ರಾಜೇಶ್, ಮಾಜಿ ಸೈನಿಕ ಗುಳ್‌ಗುಳೇ, ಮುಖಂಡರಾದ ನರಸಿಂಹಚಾರ್, ರಮಾಕಾಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ನಗರಸಭೆ ಪೌರಾಯುಕ್ತ ಮನೋಹರ್ ಸ್ವಾಗತಿಸಿದರು. ಕಂದಾಯಾಧಿಕಾರಿ ರಾಜ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ದಸರಾ ಉದ್ಘಾಟನೆಗೆ ಆಗಮಿಸಿದ ಸುಬೇದಾರ್ ಎಲ್.ಡಿ ಅಶೋಕ್‌ರವರನ್ನು ಸ್ವಾಗತಿಸಲಾಯಿತು. ಶ್ರೀ ಹಳದಮ್ಮ ದೇವಸ್ಥಾನದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.


ಭದ್ರಾವತಿ ನಗರಸಭೆ ವತಿಯಿಂದ ೯ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಸರಳ ದಸರಾ ಮಹೋತ್ಸವದಲ್ಲಿ ಕೊರೋನಾ ವಾರಿಯರ್ಸ್‌ಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
   ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಮಹಿಳಾ ಸಂಘಟನೆಗಳ ಪ್ರಮುಖರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಕೊರೋನಾ ವಾರಿಯರ್ಸ್‌ಗಳಾದ ಹಳೇನಗರ ಪೊಲೀಸ್ ಠಾಣಾಧಿಕಾರಿ ಶ್ರೀನಿವಾಸ್, ಹಿರಿಯ ಆರೋಗ್ಯ ನಿರೀಕ್ಷಕ ನಿಲೇಶ್‌ರಾಜ್ ಸೇರಿದಂತೆ ಅಂಗನವಾಡಿ ಹಾಗು ಆಶಾಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.