Saturday, October 17, 2020

ಕೋವಿಡ್ ಸಂಕಷ್ಟದ ನಡುವೆಯೂ ರು.೪೦೦ ಕೋ. ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ

ಶೀಘ್ರದಲ್ಲಿಯೇ ಕಾಮಗಾರಿಗಳ ಆರಂಭ : ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ವಿವರಣೆ


ಶನಿವಾರ ಶಾಸಕ ಗೃಹ ಕಛೇರಿಯಲ್ಲಿ ನಡೆದ  ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು. 
ಭದ್ರಾವತಿ, ಅ. ೧೭: ಕ್ಷೇತ್ರದಲ್ಲಿ ಒಟ್ಟು ಸುಮಾರು ೪೦೦ ಕೋ. ರು. ವೆಚ್ಚದ ಹಲವು ಅಭಿವೃದ್ದಿ ಕಾರ್ಯಗಳಿಗೆ ಮಂಜೂರಾತಿ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಕಾಮಗಾರಿಗಳು ಶೀಘ್ರದಲ್ಲಿಯೇ ಆರಂಭಗೊಳ್ಳಲಿವೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು.
    ಕೋವಿಡ್-೧೯ ಸಂಕಷ್ಟದ ಸಮಯದಲ್ಲೂ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಬೆಂಗಳೂರಿನಲ್ಲಿ ಕೋವಿಡ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ನಂತರ ಗುಣಮುಖರಾಗಿದ್ದು, ಬಿಡುಗಡೆಗೊಂಡ ನಂತರ ಬೆಂಗಳೂರಿನಲ್ಲಿಯೇ ಉಳಿದುಕೊಂಡು ಎಲ್ಲಾ ಇಲಾಖೆಗಳಲ್ಲಿ ಸುಮಾರು ೧ ವರ್ಷದಿಂದ ಬಾಕಿ ಉಳಿದಿದ್ದ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಹಾಗು ಸಂಬಂಧಪಟ್ಟ ಸಚಿವರು, ಸಂಸದರನ್ನು ಭೇಟಿ ಮಾಡಿ ಮಂಜೂರಾತಿ ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ ಎಂದರು.
    ಬಹುಮುಖ್ಯವಾಗಿ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನ ಯೋಜನೆಗಳಿಗೆ ಹೆಚ್ಚಿನ ಗಮನ ನೀಡಲಾಗಿದೆ. ಈ ನಡುವೆ ಭದ್ರಾ ನದಿಗೆ ತಡೆ ಗೋಡೆ ನಿರ್ಮಾಣ, ವಸತಿ ನಿರ್ಮಾಣ, ಭದ್ರಾ ಜಲಾಶಯ ಮುಂಭಾಗ ಮಿನಿ ಉದ್ಯಾನವನ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೂ ಮಂಜೂರಾತಿ ಪಡೆಯಲಾಗಿದೆ ಎಂದರು.
     ಮಂಜೂರಾತಿ ಪಡೆದ ಅಭಿವೃದ್ಧಿ ಕಾಮಗಾರಿಗಳ ವಿವರಗಳು:
    ರು.೨ ಕೋ. ವೆಚ್ಚದಲ್ಲಿ ಕೋಡಿಹಳ್ಳಿ ಬಳಿ ಚರಂಡಿ ನಿರ್ಮಾಣ,  ರು. ೫ ಕೋ. ವೆಚ್ಚದಲ್ಲಿ ಸೀತಾರಾಂಪುರದಿಂದ ತಳ್ಳಿಕಟ್ಟೆ, ಕುಮರಿ ನಾರಾಯಣಪುರ ಮಾರ್ಗವಾಗಿ ೫.೫ ಕಿ.ಮೀ ರಸ್ತೆ ನಿರ್ಮಾಣ,  ರು. ೫ ಕೋ. ವೆಚ್ಚದಲ್ಲಿ ವೀರಾಪುರದಿಂದ ಕೊಮಾರನಹಳ್ಳಿ, ಜಯನಗರ ಕಾಚಗೊಂಡನಹಳ್ಳಿಗೆ ಸಂಪರ್ಕಿಸುವ ೫ ಕಿ.ಮೀ ರಸ್ತೆ ನಿರ್ಮಾಣ, ರು.೪.೨೭ ಲಕ್ಷ ರು. ವೆಚ್ಚದಲ್ಲಿ ಡೈರಿ ಸರ್ಕಲ್ ಬಳಿಯಿಂದ ಮಜ್ಜಿಗೇನಹಳ್ಳಿ, ಕೆರೆಕೋಡಿ ಸರ್ಕಲ್, ಬಿಳಕಿ ರಸ್ತೆ ಮೂಲಕ ನವುಲೆ ಬಸಾಪುರ ಮಾರ್ಗದ ೪.೮ ಕಿ.ಮೀ ರಸ್ತೆ ನಿರ್ಮಾಣ, ರು. ೨ ಕೋ. ವೆಚ್ಚದಲ್ಲಿ ನೆರೆ ಹಾವಳಿಯಿಂದಾಗಿ ಹಾಳಾದ ಕಾಗೆಕೋಡಮಗ್ಗಿ, ತಿಮ್ಲಾಪುರ, ಹೊಸೂರು, ಅರಳಿಹಳ್ಳಿ, ರೆಡ್ಡಿ ಕ್ಯಾಂಪ್ ರಸ್ತೆ ದುರಸ್ತಿ ಕಾಮಗಾರಿಗೆ ಅನುಮೋದನೆ ಪಡೆಯಲಾಗಿದೆ ಎಂದುರು.
    ಸುಮಾರು ರು. ೪೫ ಕೋ. ವೆಚ್ಚದಲ್ಲಿ ಗೋಣಿಬೀಡಿನಿಂದ ಕಂಬದಾಳು ಹೊಸೂರು ಮೂಲಕ ೪೫ ಕೆರೆಗಳಿಗೆ ನೀರು ತುಂಬಿಸುವ ಬೃಹತ್ ಯೋಜನೆ,  ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಈ ಹಿಂದೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ತಡೆ ಹಿಡಿದಿದ್ದ ೮ ಕೋ. ರು. ನುದಾನ, ರು. ೯.೯೯ ಕೋ. ವೆಚ್ಚದಲ್ಲಿ ಗೊಂದಿ ಸೇತುವೆಯಿಂದ ಕರಕುಚ್ಚಿ ಮಾರ್ಗದ ನಾಲೆಗೆ ಸೇತುವೆ ನಿರ್ಮಾಣ, ರು. ೨ ಕೋ. ವೆಚ್ಚದಲ್ಲಿ ಭದ್ರಾ ಜಲಾಶಯ ಮುಂಭಾಗದಲ್ಲಿ ಮಿನಿ ಉದ್ಯಾನವನ ನಿರ್ಮಾಣ, ರು.೪.೫ ಕೋ. ವೆಚ್ಚದಲ್ಲಿ ದೊಣಬಘಟ್ಟ ಏತ ನೀರಾವರಿ ಯೋಜನೆ, ರು.೨೧.೦೬ ಕೋ. ವೆಚ್ಚದಲ್ಲಿ ನಗರಸಭೆ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಬಾಕಿ ಉಳಿದಿರುವ ಯುಜಿಡಿ ಕಾಮಗಾರಿ,  ರು.೨೫.೪೦ ಕೋ. ವೆಚ್ಚದಲ್ಲಿ ದೊಣಬಘಟ್ಟದಿಂದ ಬಾಬಳ್ಳಿ, ಹೊಳೆಹೊನ್ನೂರು ಸೇತುವೆ ನಿರ್ಮಾಣ, ರು.೧೮ ಕೋ. ಹೆಚ್ಚುವರಿ ಅನುದಾನದಲ್ಲಿ ಸಿದ್ದರೂಢನಗರದ ಅಭಿವೃದ್ಧಿ, ರು.೧.೨೦ ಕೋ. ವೆಚ್ಚದಲ್ಲಿ ಮಾರುತಿನಗರದ ಬಳಿ ಇರುವ ಸೇತುವೆ ಅಗಲೀಕರಣ ಮತ್ತು ರು. ೭೦ ಲಕ್ಷ ವೆಚ್ಚದಲ್ಲಿ ಹೊಳೆಹೊನ್ನೂರು ಕಾಗೆಕೋಡಮಗ್ಗಿ ಬಳಿಯಲ್ಲಿ ರಸ್ತೆ ಅಭಿವೃದ್ಧಿಗೆ ಅನುಮೋದನೆ ಪಡೆಯಲಾಗಿದೆ ಎಂದರು.
    ರು. ೬೦ ಲಕ್ಷ ವೆಚ್ಚದಲ್ಲಿ ಬಾರಂದೂರು ಕುಂಬಾರಗುಂಡಿ, ಬೊಮ್ಮೇನಹಳ್ಳಿಗೆ ಸಂಪರ್ಕಿಸುವ ಕಾಂಕ್ರಿಟ್ ರಸ್ತೆ ಕಾಮಗಾರಿ, ರು.೬೫ ಲಕ್ಷ ವೆಚ್ಚದಲ್ಲಿ ಕೊಮಾರನಹಳ್ಳಿ ಕೆರೆ ಅಭಿವೃದ್ಧಿ, ರು. ೩೫ ಲಕ್ಷ ವೆಚ್ಚದಲ್ಲಿ ಸಿರಿಯೂರು-ಕಲ್ಲಹಳ್ಳಿ-ಹಾಗಲಮನೆ ರಸ್ತೆಯಲ್ಲಿ ಕಿರು ಸೇತುವೆ ಮರು ನಿರ್ಮಾಣ,
    ರು. ೨ ಕೋ. ವೆಚ್ಚದಲ್ಲಿ ನಗರಸಭೆ ವ್ಯಾಪ್ತಿಯ ಜಯಶ್ರೀ ಸರ್ಕಲ್, ಜನ್ನಾಪುರ, ಮಲ್ಲೇಶ್ವರ ಸಮುದಾಯ ಭವನ, ಜಿಂಕ್‌ಲೈನ್ ಮಾರ್ಗವಾಗಿ ಪಿಡಬ್ಲ್ಯೂಡಿ ಇಲಾಖೆಯಿಂದ ರಸ್ತೆ ಅಭಿವೃದ್ಧಿ,  ಒಟ್ಟು ರು. ೬೦ ಲಕ್ಷ ವೆಚ್ಚದಲ್ಲಿ ನರಸೀಪುರ ಮತ್ತು ಕಾರೇಹಳ್ಳಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ರು.೨೦ ಲಕ್ಷ ವೆಚ್ಚದಲ್ಲಿ ಎರೆಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ, ರು.೧ ಕೋ. ವೆಚ್ಚದಲ್ಲಿ ನೀರಾವರಿ ಇಲಾಖೆಯಿಂದ ಭದ್ರಾ ಕಾಲೋನಿ, ಕಬಳಿಕಟ್ಟೆ, ಗುಂಡಪ್ಪ ಕ್ಯಾಂಪ್‌ವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗು ರು. ೧೦ ಕೋ. ವೆಚ್ಚದಲ್ಲಿವಿಶ್ವಸ್ವರೂಪಿಣಿ ಮಾರಿಯಮ್ಮ ದೇವಾಸ್ಥಾನದ ಬಳಿ ಭದ್ರಾ ನದಿಗೆ ತಡೆಗೋಡೆ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಅನುಮೋದನೆ ಪಡೆಯಲಾಗಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಮುಖಂಡರಾದ ಬಾಲಕೃಷ್ಣ, ಬಿ.ಟಿ ನಾಗರಾಜ್, ಅಣ್ಣೋಜಿರಾವ್, ಚನ್ನಪ್ಪ, ರಮೇಶ್‌ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

No comments:

Post a Comment