Friday, October 30, 2020

ಪ್ರಧಾನ ಅಂಚೆ ಕಛೇರಿಯಲ್ಲಿ ಜಾಗೃತಿ ಸಪ್ತಾಹ : ಆಶು ಭಾಷಣ ಸ್ಪರ್ಧೆ

ಭದ್ರಾವತಿ ಪ್ರಧಾನ ಅಂಚೆ ಕಛೇರಿಯಲ್ಲಿ ಜಾಗೃತಿ ಸಪ್ತಾಹದ ಅಂಗವಾಗಿ ನೌಕರರ ಜಾಗೃತಿ ಕುರಿತ ವಿಶೇಷ ಆಶು ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು.
ಭದ್ರಾವತಿ: ನಗರದ ಪ್ರಧಾನ ಅಂಚೆ ಕಛೇರಿಯಲ್ಲಿ ಜಾಗೃತಿ ಸಪ್ತಾಹದ ಅಂಗವಾಗಿ ನೌಕರರ ಜಾಗೃತಿ ಕುರಿತ ವಿಶೇಷ ಆಶು ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು.
     ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದ ಅಧಿಕಾರಿ ಎಚ್.ಆರ್ ಶ್ರೀಧರೇಶ್ ಭಾರದ್ವಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಸದ್ಗುಣಗಳಿಂದ ನಾಗರೀಕ ಸಮಾಜದ ಪ್ರಜ್ಞಾವಂತ ಪ್ರಜೆಗಳಾಗಿ ಬದುಕುವ ಜೊತೆಗೆ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ನೌಕರರ ಜವಾಬ್ದಾರಿ ಕುರಿತು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಅಂಚೆ ಪಾಲಕ ವಿ. ಶಶಿಧರ್ ಮಾತನಾಡಿ, ಅಂಚೆ ಕಛೇರಿಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಜೊತೆಗೆ ಸಮಾಜದಲ್ಲಿ ಅಂಚೆ ಇಲಾಖೆಯ ಮಹತ್ವ ವಿವರಿಸಿದರು.  
     ಪಾಲಿಟೆಕ್ನಿಕ್ ಹಿರಿಯ ಶ್ರೇಣಿ ಉಪನ್ಯಾಸಕ ಬಾಲಸುಬ್ರಮಣ್ಯ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಸುಮಾರು ೩೫ ಮಂದಿ ಅಂಚೆ ನೌಕರರು ಪಾಲ್ಗೊಂಡಿದ್ದರು. ನೌಕರರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
     ನಿತ್ಯಾನಂದ ನಾಯಕ್ ಪ್ರಾರ್ಥಿಸಿದರು. ನಾಗರಾಜ್ ಪೂಜಾರ್ ಸ್ವಾಗತಿಸಿದರು. ಉದಯ ಆಚಾರ್ ನಿರೂಪಿಸಿದರು.

ಅಗ್ನಿಶಾಮಕ, ಗೃಹರಕ್ಷಕದಳ ಸಿಬ್ಬಂದಿಗಳಿಂದ ಸ್ವಚ್ಛತಾ ಕಾರ್ಯ

ಭದ್ರಾವತಿ ನಗರಸಭೆ ಸಹಯೋಗದೊಂದಿಗೆ ಗುರುವಾರ ಹೊಸಬುಳ್ಳಾಪುರದ ಅಗ್ನಿಶಾಮಕ ಠಾಣೆ ಆವರಣದ ಸುತ್ತಲೂ ಹಾಗು ಹಿಂಭಾಗದ ರಸ್ತೆ, ಚರಂಡಿಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ಭದ್ರಾವತಿ: ನಗರಸಭೆ ಸಹಯೋಗದೊಂದಿಗೆ ಗುರುವಾರ ಹೊಸಬುಳ್ಳಾಪುರದ ಅಗ್ನಿಶಾಮಕ ಠಾಣೆ ಆವರಣದ ಸುತ್ತಲೂ ಹಾಗು ಹಿಂಭಾಗದ ರಸ್ತೆ, ಚರಂಡಿಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
     ಠಾಣೆಯ ಹಿಂಭಾಗದ ರಸ್ತೆ ಮತ್ತು ಚರಂಡಿಗಳಲ್ಲಿ ಆಳೆತ್ತರಕ್ಕೆ ಬೆಳೆದು ನಿಂತ ಗಿಡ ಗಂಟೆಗಳನ್ನು ತೆಗೆದು ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು. ಅಗ್ನಿಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್ ನೇತೃತ್ವದಲ್ಲಿ ಅಗ್ನಿಶಾಮಕ ಹಾಗೂ ಗೃಹರಕ್ಷಕದಳ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Wednesday, October 28, 2020

ಯಂತ್ರ ಶ್ರೀ ಯೋಧರ ತರಬೇತಿ ಕಾರ್ಯಾಗಾರ .

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿ  ಕೃಷಿ ಯಂತ್ರಧಾರೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ  ಯಂತ್ರ ಶ್ರೀ ಯೋಧರ ತರಬೇತಿ ಕಾರ್ಯಾಗಾರ ನಡೆಯಿತು.
ಭದ್ರಾವತಿ, ಅ. ೨೮:  ತಾಲೂಕಿನ ಕೂಡ್ಲಿಗೆರೆ ಹೋಬಳಿ  ಕೃಷಿ ಯಂತ್ರಧಾರೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ  ಯಂತ್ರ ಶ್ರೀ ಯೋಧರ ತರಬೇತಿ ಕಾರ್ಯಾಗಾರ ನಡೆಯಿತು.
    ಯೋಜನಾಧಿಕಾರಿ ಸುಧೀರ ಜೈನ್ ಕಾರ್ಯಾಗಾರ ಉದ್ಘಾಟಿಸಿದರು. ರೈತರಿಗೆ ಕಡಿಮೆ ಖರ್ಚಿನಲ್ಲಿ ಭತ್ತದ ಬೇಸಾಯ ಯಂತ್ರದ ಮೂಲಕ ಅನುಷ್ಠಾನಗೊಳಿಸುವ ಬಗ್ಗೆ, ಭತ್ತದ ಬೀಜೋಪಚಾರ, ಟ್ರೇಗಳಲ್ಲಿ ಸಸಿಮಡಿ ತಯಾರಿ ಹಾಗೂ ಯಂತ್ರದ ಮೂಲಕ ಭತ್ತ ನಾಟಿ ಸೇರಿದಂತೆ ಇನ್ನಿತರ ಮಾಹಿತಿ ನೀಡಲಾಯಿತು.
     ಕೃಷಿ ಯಂತ್ರಧಾರೆ ಯೋಜನಾಧಿಕಾರಿ ನಿಂಗಪ್ಪ ಅಗಸರ ಯಂತ್ರಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಭದ್ರಾವತಿ, ತರೀಕೆರೆ, ಕೊಪ್ಪ, ಶೃಂಗೇರಿ ಮತ್ತು ಎನ್.ಆರ್ ಪುರ ತಾಲೂಕಿನ ಆಯ್ದ ೨೦ ಮಂದಿ ಯಂತ್ರ ಶ್ರೀ ಯೋಧರು ಭಾಗವಹಿಸಿದರು. ಯಂತ್ರದ ಮೂಲಕ ಭತ್ತದ ಬೆಳೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಕೃಷಿಕರಾದ ತಾಲೂಕಿನ ದೊಡ್ಡೇರಿ ಶ್ರೀರಾಮು ಮತ್ತು ಬಾಳೆಕಟ್ಟೆ ಅನಸೂಯಮ್ಮ ಪಾಲ್ಗೊಂಡಿದ್ದರು. ವಿವಿಧ ತಾಲೂಕಿನ ಕೃಷಿ ಅಧಿಕಾರಿಗಳು, ಕೃಷಿ ಯಂತ್ರಧಾರೆ ಪ್ರಬಂಧಕರು ಭಾಗವಹಿಸಿದ್ದರು.  ಗೋವಿಂದಪ್ಪ ನಿರೂಪಿಸಿದರು.  ಪ್ರಸನ್ನ ಕುಮಾರ ಸ್ವಾಗತಿಸಿದರು. ಉಮೇಶ ವಂದಿಸಿದರು.

ಮನೆಯ ಬೀಗ ಮುರಿದು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳವು

ಭದ್ರಾವತಿ, ಅ. ೨೮: ತಾಲೂಕಿನ ಕೊಮಾರನಹಳ್ಳಿ ಗ್ರಾಮದ ಮನೆಯೊಂದರ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿರುವ ಘಟನೆ ನಡೆದಿದೆ.
    ಸತ್ಯನಾರಾಯಣ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯವರು ಅ.೨೫ರಂದು ರಾತ್ರಿ ಧರ್ಮಸ್ಥಳಕ್ಕೆ ಮನೆಗೆ ಬೀಗ ಹಾಕಿಕೊಂಡು ತೆರಳಿದ್ದರು. ಅ.೨೭ರಂದು ರಾತ್ರಿ ಪುನಃ ಹಿಂದಿರುಗಿದ್ದು, ಈ ಸಂದರ್ಭದಲ್ಲಿ ಮನೆಯ ಬೀಗ ಮುರಿದಿರುವುದು ಕಂಡು ಬಂದಿದೆ.
     ಮನೆಯ ಬೀರುವಿನಲ್ಲಿದ್ದ ಸುಮಾರು ೧೬,೪೦೦ ರು. ಮೌಲ್ಯದ ೫ ಗ್ರಾಂ ತೂಕದ ೨ ಬಂಗಾರದ ಉಂಗುರ, ಸುಮಾರು ೧೨,೮೦೦ ರು. ಮೌಲ್ಯದ ೪ ಗ್ರಾಂ ತೂಕದ ಬ್ರಾಸ್‌ಲೈಟ್, ಸುಮಾರು ೯,೬೦೦ ರು. ಮೌಲ್ಯದ ೩ ಗ್ರಾಂ ತೂಕದ ತಾಳಿದಾರದ ತಂತಿ, ಸುಮಾರು ೨೫,೬೦೦ ರು. ಮೌಲ್ಯದ ೮ ಗ್ರಾಂ ತೂಕದ ಜುಮುಕಿ ಓಲೆ, ಸುಮಾರು ೧೭,೨೦೦ ರು. ಮೌಲ್ಯದ ೫.೨೫ ಗ್ರಾಂ ತೂಕದ ಒಂದು ಜೊತೆ ಹ್ಯಾಂಗಿಂಗ್ ಸೆಟ್ ಮತ್ತು ಸುಮಾರು ೨೫,೬೦೦ ರು. ಮೌಲ್ಯದ ೧೩ ಗ್ರಾಂ ತೂಕದ ೧ ಬಂಗಾರದ ಬಳೆ ಸೇರಿದಂತೆ ಒಟ್ಟು ೧.೪೦ ಲಕ್ಷ ರು. ಮೌಲ್ಯದ ೪೩.೨೫ ಗ್ರಾಂ ತೂಕದ ಆಭರಣಗಳನ್ನು ಮತ್ತು ೭ ಸಾವಿರ ರು. ನಗದು ಹಾಗು ಸುಮಾರು ೩೦ ಸಾವಿರ ರು. ಮೌಲ್ಯದ ಲ್ಯಾಪ್‌ಟಾಪ್ ಮತ್ತು ಸುಮಾರು ೨ ರು. ಮೌಲ್ಯದ ಡಾಂಗಲ್ ಕಳವು ಮಾಡಲಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೋವಿಡ್-೧೯ ಅರಿವು, ಪ್ರತಿಜ್ಞಾ ವಿಧಿ ಸ್ವೀಕಾರ

ಕೊರೋನಾ ವೈರಸ್ ನಿಯಂತ್ರಿಸುವ ಉದ್ದೇಶದಿಂದ ಭದ್ರಾವತಿ ಅಗ್ನಿಶಾಮಕ ಠಾಣೆಯಲ್ಲಿ ಜಾಗೃತಿ ಅರಿವು ಮತ್ತು ಪ್ರತಿಜ್ಞಾ ವಿಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಅ. ೨೮: ನಗರದ ಅಗ್ನಿಶಾಮಕ ಠಾಣೆಯಲ್ಲಿ ಕೊರೋನಾ ವೈರಸ್ ನಿಯಂತ್ರಿಸುವ  ಉದ್ದೇಶದಿಂದ ಜಾಗೃತಿ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
      ಅಗ್ನಿಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್ ಸಿಬ್ಬಂದಿಗಳಿಗೆ ಕೊರೋನಾ ಜಾಗೃತಿ ಅರಿವಿನ ಮಹತ್ವ ತಿಳಿಸಿಕೊಡುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಹೆಚ್ಚಿನ ಗಮನ ನೀಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾರ್ವಜನಿಕರಿಗೂ ಅರಿವು ಮೂಡಿಸಬೇಕೆಂದು ಕರೆ ನೀಡಿದರು.

ನಗರಸಭೆ ವ್ಯಾಪ್ತಿ ಕೆರೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಸಚಿವರಿಗೆ ಮನವಿ

ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸುವುದು, ನಗರಸಭೆಗೆ ರು.೧೦೦ ಕೋ. ವಿಶೇಷ ಅನುದಾನ ಬಿಡುಗಡೆಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನಗರದ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್ ಈಶ್ವರಪ್ಪರವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
      ಭದ್ರಾವತಿ, ಅ. ೨೮: ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸುವುದು, ನಗರಸಭೆಗೆ ರು.೧೦೦ ಕೋ. ವಿಶೇಷ ಅನುದಾನ ಬಿಡುಗಡೆಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನಗರದ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್ ಈಶ್ವರಪ್ಪರವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
    ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಅಭಿವೃದ್ಧಿ ಪಡಿಸುವ ರೀತಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿರುವ ಸುಮಾರು ೬೯ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು.  ಕೆರೆಗಳಲ್ಲಿ ಅಂತರ್ಜಲ ಹೆಚ್ಚಿಸಿ ದನಗಾಹಿಗಳಿಗೆ, ರೈತರಿಗೆ ಅನುಕೂಲ ಕಲ್ಪಿಸಿಕೊಡಲು ತಕ್ಷಣ ಯೋಜನೆ ರೂಪಿಸುವಂತೆ ಒತ್ತಾಯಿಸಲಾಗಿದೆ.
      ನಗರಸಭೆ ಅಸ್ತಿತ್ವಕ್ಕೆ ಬಂದು ೨೫ ವರ್ಷಗಳು ತುಂಬಿರುವ ಹಿನ್ನಲೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು ರು.೧೦೦ ಕೋ. ವಿಶೇಷ ಅನುದಾನ ಬಿಡುಗಡೆಗೊಳಿಸುವುದು. ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಖಾಲಿ ನಿವೇಶನದಲ್ಲಿ ಹೈಟೆಕ್  ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲು ರು. ೩ ಕೋ. ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ.
    ನಗರದ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಪುನಶ್ಚೇತನಗೊಳಿಸಲು ಕಾರ್ಖಾನೆಗೆ ಸೇರಿದ ನಗರಾಡಳಿತ ಪ್ರದೇಶವನ್ನು ಖಾಸಗಿಯವರಿಗೆ ವಹಿಸಿಕೊಡುವ ವಿಚಾರ ತಿಳಿದು ಬಂದಿದ್ದು, ಈ ವ್ಯಾಪ್ತಿಯ ೪,೫,೬ ಮತ್ತು ೮ನೇ ವಾರ್ಡ್ ಹಾಗೂ ಆನೆಕೊಪ್ಪ ಕೊಳಚೆ ಪ್ರದೇಶದ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳನ್ನು ಖಾಸಗಿಯವರಿಗೆ ಹಸ್ತಾಂತರ ಮಾಡದೆ ನಗರಸಭೆಗೆ ವಹಿಸಿಕೊಡುವಂತೆ ಕೋರಲಾಗಿದೆ.
    ಟ್ರಸ್ಟ್  ಛೇರ‍್ಮನ್ ಆರ್. ವೇಣುಗೋಪಾಲ್‌ರವರು ಸುಮಾರು ೪೦ ವರ್ಷಗಳಿಂದ ನಿರಂತರವಾಗಿ ಹೋರಾಟಗಳನ್ನು ನಡೆಸಿಕೊಂಡು ಬರುವ ಮೂಲಕ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಅವರ ಸುಧೀರ್ಘ ಹೋರಾಟದ ಸವಿನೆನಪಿಗಾಗಿ ಪೌರಕಾರ್ಮಿಕರೊಡನೆ ಸ್ನೇಹ ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಚಿವರು ಈ ಕಾರ್ಯಕ್ರಮ ಉದ್ಘಾಟಿಸುವ ಮೂಲಕ ಸುಮಾರು ೨೫ ವರ್ಷಗಳಿಂದ ನಡೆಯದಿರುವ ನಗರಸಭೆ ಪ್ರಗತಿಪರಿಶೀಲನಾ ಸಭೆ ನಡೆಸಬೇಕೆಂದು ಮನವಿ ಮಾಡಲಾಗಿದೆ.
     ಟ್ರಸ್ಟ್ ಪ್ರಮುಖರಾದ ಛೇರ‍್ಮನ್ ಆರ್. ವೇಣುಗೋಪಾಲ್, ಕಾರ್ಯದರ್ಶಿ ವಿ. ಅಂಜನ, ಡಿ. ದೇವರಾಜ ಅರಸ್ ಜನಸ್ಪಂದನ ವೇದಿಕೆ ಕಾರ್ಯಧ್ಯಕ್ಷೆ ರಮಾವೆಂಕಟೇಶ್, ಶೋಭ, ಭವಾನಿ ಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಜಾಗೃತಿಯೊಂದಿಗೆ ಪ್ರಾಮಾಣಿಕರಾಗಿ ಸಂಸ್ಥೆ, ಸಮಾಜ, ದೇಶದೆಡೆಗೆ ನಿಷ್ಠೆ ತೋರಿಸಿ : ಕೆ.ಎಲ್.ಎಸ್ ರಾವ್

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಆಡಳಿತ ಕಛೇರಿ ಇಸ್ಪಾತ್ ಭವನದ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕಾರ್ಯಪಾಲಕ ನಿರ್ದೇಶಕ ಕೆ.ಎಸ್.ಎಸ್ ರಾವ್  ಸರ್.ಎಂ ವಿಶ್ವೇಶ್ವರಾಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಾಗೃತಿ ತಿಳುವಳಿಕೆ ಸಪ್ತಾಹಕ್ಕೆ ಚಾಲನೆ ನೀಡಿದರು.
ಭದ್ರಾವತಿ, ಅ. ೨೮: ಪ್ರತಿಯೊಬ್ಬರು ಜಾಗರೂಕರಾಗಿ, ಪ್ರಾಮಾಣಿಕರಾಗಿ ತಮ್ಮ ಕೆಲಸ, ಸಂಸ್ಥೆ, ಸಮಾಜ ಹಾಗೂ ದೇಶದೆಡೆಗೆ ನಿಷ್ಠೆ ತೋರಬೇಕೆಂದು ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆ.ಎಲ್.ಎಸ್ ರಾವ್ ಹೇಳಿದರು.
    ಅವರು ಕಾರ್ಖಾನೆಯ ಆಡಳಿತ ಕಛೇರಿ ಇಸ್ಪಾತ್ ಭವನದ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ  ಸರ್.ಎಂ ವಿಶ್ವೇಶ್ವರಾಯರವರ ಪ್ರತಿಮೆಗೆ ಮಾಲಾರ್ಪಣೆಮಾಡುವ ಮೂಲಕ ಜಾಗೃತಿ ತಿಳುವಳಿಕೆ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.
       ಯಾರೂ ಸಹ ವಿಜಿಲೆನ್ಸ್ ವಿಭಾಗದ ಬಗ್ಗೆ ಭಯಪಡುವ ಅಗತ್ಯವಿಲ್ಲ.  ಈ ವಿಭಾಗ ಮುನ್ನಚ್ಚರಿಕೆ ಕ್ರಮಗಳ ಕುರಿತು ನಮಗೆ ಮಾರ್ಗದರ್ಶನ ನೀಡುತ್ತದೆ. ನಾವು ವೆಚ್ಚ ಕಡಿಮೆಗೊಳಿಸುವ ಮೂಲಕ ನಮ್ಮ ಕೆಲಸದೆಡೆಗೆ ಪ್ರತಿಶತ ೧೦೦ರಷ್ಟು ಗುರಿ ಸಾಧಿಸುವ ಜೊತೆಗೆ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಬೇಕೆಂದರು.
      ವಿಜಿಲೆನ್ಸ್ ಮತ್ತು ಎಸಿವಿಓ ವಿಭಾಗದ ಉಪ ಮಹಾಪ್ರಬಂಧಕ ಆರ್. ಜಯಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ಪ್ರತಿನಿತ್ಯ ಜಾಗೃತರಾಗಿ ಮುನ್ನಡೆಯುವ ಜೊತೆಗೆ ನಿಷ್ಠೆ ಮತ್ತು ಪ್ರಾಮಾಣಿಕತೆ ಪ್ರತಿಯೊಂದು ಹಂತದಲ್ಲೂ ಕಾಯ್ದಿರಿಸಿಕೊಳ್ಳಬೇಕು. ಈ ಬಾರಿ ಸಪ್ತಾಹದ ಧ್ಯೇಯ ವಾಕ್ಯ 'ಜಾಗೃತ ಭಾರತ, ಸಮೃದ್ಧ ಭಾರತ' ಎಂಬುದಾಗಿದೆ. ಮುಂಜಾಗ್ರತೆ ಕ್ರಮಗಳನ್ನು ಮತ್ತು ಇ-ಆಡಳಿತ ಸಾಧನಗಳನ್ನು ಬಳಸಿ ಸಂಸ್ಥೆಯೆಡೆಗೆ ತಮ್ಮ ನಿಷ್ಠೆಯನ್ನು ಕಾಯ್ದುಕೊಂಡು ಸಂಸ್ಥೆಯ ಜೊತೆಗೆ ದೇಶದ ಸಮೃದ್ಧಿಯನ್ನು ಹೆಚ್ಚಿಸಬೇಕೆಂದರು.
     ಸ್ಥಾವರ ವಿಭಾಗದ ಮುಖ್ಯ ಮಹಾಪ್ರಬಂಧಕ ಸುರಜಿತ್ ಮಿಶ್ರಾ,  ಸಿಬ್ಬಂದಿ ಮತ್ತು ಆಡಳಿತ ವಿಭಾಗದ ಮಹಾಪ್ರಬಂಧಕ ಪಿ.ಪಿ. ಚಕ್ರವರ್ತಿ, ಅಧಿಕಾರಿಗಳ ಸಂಘದ ಅಧ್ಯಕ್ಷ ಎ.ಆರ್. ವೀರಣ್ಣ, ಕಾರ್ಮಿಕರ ಸಂಘದ ಅಧ್ಯಕ್ಷ  ಜೆ. ಜಗದೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಮಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಅಧಿಕಾರಿಗಳಾದ  ಡಿ. ಲೋಕೇಶ್ವರ, ಸುರಜೀತ್ ಮಿಶ್ರಾ ಮತ್ತು ಟಿ. ರವಿಚಂದ್ರನ್ ಕನ್ನಡ, ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಪ್ರತಿಙ ವಿಧಿ ಬೋಧಿಸಿದರು.
    ಪಿ.ಎಚ್.ಆರ್ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದ ಮಹಾಪ್ರಬಂಧಕ ಎಲ್. ಪ್ರವೀಣ್‌ಕುಮಾರ್, ಪ್ರಾಜೆಕ್ಟ್ ಮತ್ತು ಮೈನ್ಸ್ ವಿಭಾಗದ ಮಹಾಪ್ರಬಂಧಕ ಮೋಹನ್ ರಾಜ್ ಶೆಟ್ಟಿ ಮತ್ತು ವಿಐಎಸ್‌ಎಲ್ ಆಸ್ಪತ್ರೆ ಜಂಟಿ ನಿರ್ದೇಶಕ ಡಾ. ಎಂ.ವೈ ಸುರೇಶ್‌ರವರು ರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ವಿಜಿಲೆನ್ಸ್ ಕಮಿಷನರ್‌ರವರ ಸಂದೇಶಗಳನ್ನು ವಾಚಿಸಿದರು.
      ಕೋವಿಡ್-೧೯ ಮಾರ್ಗಸೂಚಿ ಅನುಸಾರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಮಾಸ್ಕ್ ಧರಿಸುವಿಕೆ ಬಗ್ಗೆ ಅರಿವು ಮೂಡಿಸುವ ಹಿನ್ನಲೆಯಲ್ಲಿ ಕನ್ನಡ, ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ  ಸ್ಪರ್ಧೆ ಮತ್ತು ಗ್ರೀಟಿಂಗ್ ಕಾರ್ಡ್ ರಚಿಸುವ ಸ್ಪರ್ಧೆಯನ್ನು ಅಧಿಕಾರಿಗಳು, ಕಾಯಂ ಮತ್ತು ಗುತ್ತಿಗೆ ಕಾರ್ಮಿಕರಿಗೆ ಆಯೋಜಿಸಲಾಗಿತ್ತು. ಹೌಸ್ ಕೀಪಿಂಗ್ ಸ್ಪರ್ಧೆಯನ್ನು ೨ ವಿಭಾಗಗಳಲ್ಲಿ ಉತ್ಪಾದಕಾ ಮತ್ತು ಸೇವಾ ಇಲಾಖೆಗಳಿಗೆ ಆಯೋಜಿಸಲಾಗಿತ್ತು.
     ವೈದ್ಯಕೀಯ ಮತ್ತು ಆರೋಗ್ಯ ಸೇವೆ ವಿಭಾಗದ ಜಂಟಿ ನಿರ್ದೇಶಕಿ ಡಾ|| ಎಸ್.ಕವಿತಾ  ಪ್ರಾರ್ಥಿಸಿದರು. ವಿಜಿಲೆನ್ಸ್ ವಿಭಾಗದ ಹಿರಿಯ ವ್ಯವಸ್ಥಾಪಕ ವಿಕಾಸ್ ಬಸೇರ್ ನಿರೂಪಿಸಿದರು.  ಟೆಕ್ನಿಷಿಯನ್‌ಕೇದಾರ್‌ನಾಥ್ ವಂದಿಸಿದರು.