Wednesday, October 28, 2020

ಮನೆಯ ಬೀಗ ಮುರಿದು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳವು

ಭದ್ರಾವತಿ, ಅ. ೨೮: ತಾಲೂಕಿನ ಕೊಮಾರನಹಳ್ಳಿ ಗ್ರಾಮದ ಮನೆಯೊಂದರ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿರುವ ಘಟನೆ ನಡೆದಿದೆ.
    ಸತ್ಯನಾರಾಯಣ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯವರು ಅ.೨೫ರಂದು ರಾತ್ರಿ ಧರ್ಮಸ್ಥಳಕ್ಕೆ ಮನೆಗೆ ಬೀಗ ಹಾಕಿಕೊಂಡು ತೆರಳಿದ್ದರು. ಅ.೨೭ರಂದು ರಾತ್ರಿ ಪುನಃ ಹಿಂದಿರುಗಿದ್ದು, ಈ ಸಂದರ್ಭದಲ್ಲಿ ಮನೆಯ ಬೀಗ ಮುರಿದಿರುವುದು ಕಂಡು ಬಂದಿದೆ.
     ಮನೆಯ ಬೀರುವಿನಲ್ಲಿದ್ದ ಸುಮಾರು ೧೬,೪೦೦ ರು. ಮೌಲ್ಯದ ೫ ಗ್ರಾಂ ತೂಕದ ೨ ಬಂಗಾರದ ಉಂಗುರ, ಸುಮಾರು ೧೨,೮೦೦ ರು. ಮೌಲ್ಯದ ೪ ಗ್ರಾಂ ತೂಕದ ಬ್ರಾಸ್‌ಲೈಟ್, ಸುಮಾರು ೯,೬೦೦ ರು. ಮೌಲ್ಯದ ೩ ಗ್ರಾಂ ತೂಕದ ತಾಳಿದಾರದ ತಂತಿ, ಸುಮಾರು ೨೫,೬೦೦ ರು. ಮೌಲ್ಯದ ೮ ಗ್ರಾಂ ತೂಕದ ಜುಮುಕಿ ಓಲೆ, ಸುಮಾರು ೧೭,೨೦೦ ರು. ಮೌಲ್ಯದ ೫.೨೫ ಗ್ರಾಂ ತೂಕದ ಒಂದು ಜೊತೆ ಹ್ಯಾಂಗಿಂಗ್ ಸೆಟ್ ಮತ್ತು ಸುಮಾರು ೨೫,೬೦೦ ರು. ಮೌಲ್ಯದ ೧೩ ಗ್ರಾಂ ತೂಕದ ೧ ಬಂಗಾರದ ಬಳೆ ಸೇರಿದಂತೆ ಒಟ್ಟು ೧.೪೦ ಲಕ್ಷ ರು. ಮೌಲ್ಯದ ೪೩.೨೫ ಗ್ರಾಂ ತೂಕದ ಆಭರಣಗಳನ್ನು ಮತ್ತು ೭ ಸಾವಿರ ರು. ನಗದು ಹಾಗು ಸುಮಾರು ೩೦ ಸಾವಿರ ರು. ಮೌಲ್ಯದ ಲ್ಯಾಪ್‌ಟಾಪ್ ಮತ್ತು ಸುಮಾರು ೨ ರು. ಮೌಲ್ಯದ ಡಾಂಗಲ್ ಕಳವು ಮಾಡಲಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

No comments:

Post a Comment