Friday, November 13, 2020

ನಗರಸಭೆಗೆ ೧೦೦ ಕೋ. ರು. ವಿಶೇಷ ಅನುದಾನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹ

ಸಂಸದ ಬಿ.ವೈ ರಾಘವೇಂದ್ರರಿಗೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ನೇತೃತ್ವದಲ್ಲಿ ಮನವಿ

ಭದ್ರಾವತಿ ನಗರಸಭೆಗೆ ೧೦೦ ಕೋ. ರು. ವಿಶೇಷ ಅನುದಾನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಸಂಸದ ಬಿ.ವೈ ರಾಘವೇಂದ್ರರಿಗೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ನ. ೧೩: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಂಸದ ಬಿ.ವೈ ರಾಘವೇಂದ್ರರಿಗೆ ನಗರದ ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
    ನಗರಸಭೆ ಅಸ್ತಿತ್ವಕ್ಕೆ ಬಂದು ೨೫ ವರ್ಷಗಳು ಕಳೆದಿದ್ದು, ಈ ಹಿನ್ನಲೆಯಲ್ಲಿ ಸರ್.ಎಂ ವಿಶ್ವೇಶ್ವರಯ್ಯನವರಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ನಗರಸಭೆ ಜನ್ನಾಪುರ ಎನ್‌ಟಿಬಿ ಶಾಖಾ ಕಛೇರಿ ರ‍್ತೆಯಲ್ಲಿರುವ ನಗರಸಭೆ ಖಾಲಿ ನಿವೇಶನದಲ್ಲಿ ಸರ್.ಎಂ ವಿಶ್ವೇಶ್ವರಯ್ಯ ಸಾಂಸ್ಕೃತಿಕ ಭವನ ನಿರ್ಮಿಸಲು ೩ ಕೋ.ರು. ಹಾಗು ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು ೧೦೦ ಕೋ. ರು. ವಿಶೇಷ ಅನುದಾನ ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಲಾಗಿದೆ.
    ನಗರಸಭೆ ವ್ಯಾಪ್ತಿಯ ೬೯ ಕೆರೆಗಳನ್ನು ಅಭಿವೃದ್ಧಿ ಪಡಿಸಲು ವಿಶೇಷ ಅನುದಾನ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಸುಮಾರು ೫೦೦ ಮನೆಗಳನ್ನು ನಿರ್ಮಿಸಲು ಮಂಜೂರಾತಿ, ನಗರಸಭೆಗೆ ಆದಾಯ ಬರುವ ದೃಷ್ಟಿಯಿಂದ ಅನಧಿಕೃತ ಕಟ್ಟಡ ಹಾಗು ನಿವೇಶನಗಳನ್ನು ಸಕ್ರಮಗೊಳಿಸುವುದು ಮತ್ತು ಎಂಪಿಎಂ ನಗರಾಡಳಿತ ಇಲಾಖೆ ವ್ಯಾಪ್ತಿಗೆ ಒಳಪಡುವ ಕಾಗದನಗರದ ೪,೫,೬,೮ ಮತ್ತು ಆನೆಕೊಪ್ಪ ಕೊಳಚೆ ಪ್ರದೇಶದಲ್ಲಿನ ಅಂಗಡಿಮುಂಗಟ್ಟುಗಳನ್ನು ಖಾಸಗಿಯವರಿಗೆ ವಹಿಸಿಕೊಡುವ ಬದಲು ನಗರಸಭೆ ಆಡಳಿತಕ್ಕೆ ವಹಿಸಿಕೊಡುವಂತೆ ಆಗ್ರಹಿಸಲಾಗಿದೆ.
     ಕರ್ನಾಟಕ ಆರ್ಯ ವೈಶ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಿ.ಎಸ್ ಅರುಣ್ , ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಏಳುಕೋಟಿ, ತಾಲೂಕು ನಗರ ಸಂಚಾಲಕ ಆರ್. ತಮ್ಮಯ್ಯ, ತಾಲೂಕು ಸಂಘಟನಾ ಸಂಚಾಲಕ ರವಿನಾಯ್ಕ, ಅಣ್ಣಪ್ಪ, ತಾಲೂಕು ಪಂಚಾಯಿತಿ ಸದಸ್ಯ ಕೆ. ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನೂತನ ತಾಲೂಕು ದಂಡಾಧಿಕಾರಿಯಾಗಿ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್

ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್
ಭದ್ರಾವತಿ, ನ. ೧೧: ನೂತನ ತಾಲೂಕು ದಂಡಾಧಿಕಾರಿಯಾಗಿ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ.
     ಈ ಹಿಂದೆ ದಾವಣಗೆರೆ ತಾಲೂಕು ದಂಡಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ನಂತರ ಬೆಂಗಳೂರು ನಗರ ಚುನಾವಣಾ ಶಾಖೆ ತಹಸೀಲ್ದಾರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ತಾಲೂಕು ದಂಡಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಜಿ. ಸಂತೋಷ್ ಕುಮಾರ್ ಮೂಲತಃ ಕಂದಾಯ ಇಲಾಖೆಯಲ್ಲಿ ಗ್ರೇಡ್-೧ ಅಧಿಕಾರಿಯಾಗಿ ಹುದ್ದೆಗೆ ಸೇರ್ಪಡೆಗೊಂಡು ಮುಂಬಡ್ತಿ ಹೊಂದಿ ೫ ವರ್ಷಗಳಿಂದ ತಹಸೀಲ್ದಾರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ತಾಲೂಕು ಕಛೇರಿ ಆಡಳಿತಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅನುಭವ ಹೊಂದಿದ್ದಾರೆ.
    ಈ ಹಿಂದೆ ವಿಧಾನಸಭೆ ಆಡಳಿತ ವಿಭಾಗದಲ್ಲಿ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಎಚ್.ಸಿ ಶಿವಕುಮಾರ್‌ರವರನ್ನು ನಿಯೋಜನೆ ಮೇರೆಗೆ ತಾಲೂಕು ದಂಡಾಧಿಕಾರಿಯಾಗಿ ನೇಮಕಗೊಳಿಸಲಾಗಿತ್ತು. ಲೈಂಗಿಕ ಕಿರುಕುಳ ಪ್ರಕರಣವೊಂದರಲ್ಲಿ ಇವರ ವಿರುದ್ಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಹುದ್ದೆಯಿಂದ ಬಿಡುಗಡೆಗೊಳಿಸಿದ್ದರು. ತೆರೆವಾದ ಹುದ್ದೆಗೆ ಶಿವಮೊಗ್ಗ ತಹಸೀಲ್ದಾರ್ ಎನ್.ಜೆ ನಾಗರಾಜ್‌ರವರಿಗೆ ಪ್ರಭಾರ ಅಧಿಕಾರ ವಹಿಸಲಾಗಿತ್ತು.

Thursday, November 12, 2020

ಮಹಿಳಾ ಸಮಾಜದಿಂದ ಸಂಸದರಿಗೆ ಸನ್ಮಾನ, ಅಭಿನಂದನೆ

ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಸಂಸದರ ನಿಧಿಯಿಂದ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿರುವ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರರನ್ನು ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ನ. ೧೨: ಕ್ಷೇತ್ರದಲ್ಲಿ ಸಂಸದರ ನಿಧಿಯಿಂದ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿರುವ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರರನ್ನು ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
      ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಸಮಾಜದ ಕಟ್ಟಡದ ಮೊದಲ ಹಂತದ ಕಾಮಗಾರಿ ಮುಕ್ತಾಯಗೊಂಡು ಉದ್ಘಾಟನೆಗೆ ಸಿದ್ದಗೊಂಡಿದೆ. ಎರಡನೇ ಹಂತದ ಕಾಮಗಾರಿಗೆ ಸಂಸದರ ನಿಧಿಯಿಂದ ರು.೨೦ ಲಕ್ಷ ಬಿಡುಗಡೆಯಾಗಿದ್ದು, ಈ ಹಿನ್ನಲೆಯಲ್ಲಿ ಸಂಸದರಿಗೆ ಸಮಾಜದ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದರು.
    ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್, ಪದಾಧಿಕಾರಿಗಳಾದ ಶೋಭಾ ಗಂಗಾರಾಜ್, ಜಯಂತಿ ನಾಗರಾಜ್, ಕಮಲಕುಮಾರಿ, ಶಕುಂತಲಾ, ಕಮಲರಾಯ್ಕರ್, ಸೂಡ ಅಧ್ಯಕ್ಷ ಎಸ್ ಎಸ್ ಜ್ಯೋತಿ ಪ್ರಕಾಶ್, ಬಿಜೆಪಿ ಅಧ್ಯಕ್ಷ ಎಂ. ಪ್ರಭಾಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಅಂಬೇಡ್ಕರ್ ಸಮುದಾಯ ಭವನ ದುರ್ಬಳಕೆ : ಸೂಕ್ತ ಕ್ರಮಕ್ಕೆ ಆಗ್ರಹ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯ ಭವನವನ್ನು ಪರಿಶಿಷ್ಟರು, ಆರ್ಥಿಕವಾಗಿ ಹಿಂದುಳಿದವರು, ಶೋಷತರಿಗೆ ಬಿಟ್ಟುಕೊಡದೆ ಅಡಕೆ ಚೀಲಗಳನ್ನು ಸಂಗ್ರಹಿಸಲು, ಅಡಕೆ ಒಣಗಿಸಲು ಹಾಗು ಇನ್ನಿತರೆ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ.
ಭದ್ರಾವತಿ, ನ. ೧೨: ಪರಿಶಿಷ್ಟರು, ಆರ್ಥಿಕವಾಗಿ ಹಿಂದುಳಿದವರು, ಶೋಷಿತರಿಗೆ  ಸಹಕಾರಿಯಾಗುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಂಬೇಡ್ಕರ್ ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಆದರೆ ಸಮುದಾಯ ಭವನಗಳು ಸದ್ಬಳಕೆಯಾಗುವ ಬದಲು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.
    ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯ ಭವನವನ್ನು ಪರಿಶಿಷ್ಟರು, ಆರ್ಥಿಕವಾಗಿ ಹಿಂದುಳಿದವರು, ಶೋಷತರಿಗೆ ಸಮುದಾಯದ ಕುಂದು-ಕೊರತೆ ಚರ್ಚಿಸಲು, ಸಭೆ-ಸಮಾರಂಭಗಳನ್ನು ನಡೆಸಲು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಬಿಟ್ಟುಕೊಡದೆ ಅಡಕೆ ಚೀಲಗಳನ್ನು ಸಂಗ್ರಹಿಸಲು, ಅಡಕೆ ಒಣಗಿಸಲು ಹಾಗು ಇನ್ನಿತರೆ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕೆಂದು ಪರಿಶಿಷ್ಟ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.

ಒಕ್ಕಲಿಗ ಸಮಾಜದ ಕೊಡುಗೆ ಅನನ್ಯ : ಬಿ.ವೈ ರಾಘವೇಂದ್ರ

ಭದ್ರಾವತಿ ನ್ಯೂಟೌನ್ ಬಂಟರ ಭವನದಲ್ಲಿ ಬುಧವಾರ ಸಂಜೆ ಶ್ರೀ ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್, ಶ್ರೀ ಕಾಲಭೈರವೇಶ್ವರ ದೇವಸ್ಥಾನ ಟ್ರಸ್ಟ್ ಮತ್ತು ಶ್ರೀ ಕಾಲಭೈರವೇಶ್ವರ ಮಹಿಳಾ ಘಟಕ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಣ್ಯರಿಗೆ ಅಭಿನಂದನೆ, ಸನ್ಮಾನ ಹಾಗು ಪ್ರತಿಭಾವಂತ ವಿದ್ಯಾಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿದರು.
ಭದ್ರಾವತಿ, ನ. ೧೧: ದೇಶದಲ್ಲಿ ಕೃಷಿಯನ್ನು ನಂಬಿ ಬದುಕುತ್ತಿರುವ ಒಕ್ಕಲಿಗ ಸಮಾಜದ ಕೊಡುಗೆ ಅನನ್ಯವಾಗಿದ್ದು, ಇಂತಹ ಸಮುದಾಯ ಮತ್ತಷ್ಟು ಕ್ರಿಯಾಶೀಲವಾಗಿ ಬೆಳೆಯುವ ಮೂಲಕ ಜನರು ಹಸಿವು ಮುಕ್ತರಾಗಿ ಬದುಕುವಂತಾಗಬೇಕೆಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
    ಅವರು ಬುಧವಾರ ಸಂಜೆ ನ್ಯೂಟೌನ್ ಬಂಟರ ಭವನದಲ್ಲಿ ಶ್ರೀ ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್, ಶ್ರೀ ಕಾಲಭೈರವೇಶ್ವರ ದೇವಸ್ಥಾನ ಟ್ರಸ್ಟ್ ಮತ್ತು ಶ್ರೀ ಕಾಲಭೈರವೇಶ್ವರ ಮಹಿಳಾ ಘಟಕ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಣ್ಯರಿಗೆ ಅಭಿನಂದನೆ, ಸನ್ಮಾನ ಹಾಗು ಪ್ರತಿಭಾವಂತ ವಿದ್ಯಾಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಸಮಾಜದ ಎಲ್ಲಾ ಸಮುದಾಯಗಳೊಂದಿಗೆ ಒಕ್ಕಲಿಗ ಸಮುದಾಯ ಗುರುತಿಸಿಕೊಂಡು ಮುಂಚೂಣಿಯಲ್ಲಿದ್ದು, ಶ್ರಮದ ಕೃಷಿ ಬದುಕನ್ನು ರೂಢಿಸಿಕೊಂಡಿರುವ ಈ ಸಮುದಾಯದ ಜನರು ಪ್ರಸ್ತುತ ಹೆಚ್ಚಿನ ರೀತಿಯಲ್ಲಿ ಸಂಘಟಿತರಾಗುವ ಮೂಲಕ ನಗರದಲ್ಲಿ ಸುಮಾರು ೧ ಕೋ. ರು. ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
    ಕೇಂದ್ರ ಸರ್ಕಾರ ಮಕ್ಕಳ ಶಿಕ್ಷಣಕ್ಕೆ ೨೫೦ ಕೋ. ರು. ಬಿಡುಗಡೆಗೊಳಿಸಿದೆ. ಜಿಲ್ಲೆಯಲ್ಲಿರುವ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು. ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
    ಶ್ರೀ ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣಗೌಡ ಅಧ್ಯಕ್ಷತೆ ವಹಿಸಿದ್ದರು. ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಪವಿತ್ರ ರಾಮಯ್ಯ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಡಿ.ಎಸ್ ಅರುಣ್, ಜಲಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ತಾಲೂಕು ಅಧ್ಯಕ್ಷ ಎಂ. ಪ್ರಭಾಕರ್, ಶ್ರೀ ರಾಮೇಶ್ವರ ಯುವಕರ ಸಂಘದ ಅಧ್ಯಕ್ಷ ಬಿ.ಎಸ್. ಶಶಿಕಾಂತ, ಮಹಿಳಾ ಟ್ರಸ್ಟ್ ಅಧ್ಯಕ್ಷೆ ಶಿವಮ್ಮ ಶ್ರೀನಿವಾಸ್ ಸೇರಿದಂತೆ ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಜಗದೀಶ್ ಸ್ವಾಗತಿಸಿದರು. ರಮಾ ವೆಂಕಟೇಶ್ ವಂದಿಸಿದರು.

Wednesday, November 11, 2020

ಕನ್ನಡ ರಾಜ್ಯೋತ್ಸವ ಸಾಂಕೇತಿಕವಾಗಬಾರದು, ನಿತ್ಯದ ಬದುಕಿನಲ್ಲಿ ಕನ್ನಡ ಹೆಚ್ಚು ಬಳಕೆಯಾಗಲಿ : ನ್ಯಾ. ಹೇಮಾವತಿ

ಭದ್ರಾವತಿಯಲ್ಲಿ ಬುಧವಾರ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘ ವತಿಯಿಂದ ಕನ್ನಡರಾಜ್ಯೋತ್ಸವ ನಡೆಯಿತು.
ಭದ್ರಾವತಿ, ನ. ೧೧: ಕನ್ನಡ ರಾಜ್ಯೋತ್ಸವ ಎಂಬುದು ಕೇವಲ ಸಾಂಕೆತಿಕ ಆಚರಣೆಯಾಗಬಾರದು. ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡದ ಬಳಕೆ ಹೆಚ್ಚಾಗಬೇಕೆಂದು ೪ನೇ ಹೆಚ್ಚುವರಿ ಜಿಲ್ಲಾ ಸತ್ರನ್ಯಾಯಾಲಯದ ನ್ಯಾಯಾಧೀಶರಾದ ಹೇಮಾವತಿ ಹೇಳಿದರು.
   ಅವರು ಬುಧವಾರ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
      ವಕೀಲರು ನ್ಯಾಯಾಲಯದಲ್ಲಿ ಹೆಚ್ಚು ಕನ್ನಡ ಬಳಸುವ ಮೂಲಕ ಕನ್ನಡ ಬಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಸಹಜವಾಗಿ ಕನ್ನಡ ಬಳಸುವ ಮನಸ್ಥಿತಿ ಹೆಚ್ಚಾಗಬೇಕು. ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಂಡಲ್ಲಿ ಕನ್ನಡ ಸಹಜವಾಗಿ ಅಭಿವೃದ್ಧಿ ಹೊಂದುತ್ತದೆ ಎಂದರು.
    ಹಿರಿಯ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಪ್ರಭಾಕರ್ ಮಾತನಾಡಿ, ಇಂದಿನ ದಿನಗಳಲ್ಲಿ ಬಹುತೇಕರು ಕನ್ನಡಿಗರು ಕನ್ನಡನಾಡಿನ ಪರಂಪರೆ, ಇತಿಹಾಸದ ಬಗ್ಗೆ ತಿಳಿದು ಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳದಿರುವುದು ನಿಜಕ್ಕೂ ವಿಷಾದನೀಯ ಬೆಳವಣಿಗೆಯಾಗಿದೆ. ಕನ್ನಡ ನಾಡಿಗಾಗಿ ಶ್ರಮಿಸಿದ ಮಹನೀಯರ ಹೋರಾಟ, ಆದರ್ಶತನಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕೆಂದರು.  
ಜೆಎಂಎಫ್‌ಸಿ ಪ್ರಧಾನ ನ್ಯಾಯಾಲಯದ ನ್ಯಾಯಾಧೀಶ ಮೋಹನ ಗೌಡ ಮಾತನಾಡಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ವಿ. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ವೈ.ಜಯರಾಂ ವಂದಿಸಿದರು. ಕಾರ್ಯದರ್ಶಿ ಟಿ.ಎಸ್ ರಾಜುನಿರೂಪಿಸಿದರು.
     ನ್ಯಾಯಾಧೀಶರಾದ ಉಜ್ವಲ ವೀರಣ್ಣ, ಪುರುಷೋತ್ತಮ್, ಚಂದ್ರಶೇಖರ ಬಣಕಾರ್, ಸ್ನೇಹ ಹಾಗೂ ಹಿರಿಯ ವಕೀಲರಾದ ಉಮಾಪತಿ, ಮಂಜಪ್ಪ, ನಾರಾಯಣರಾವ್, ವಾಗಿಶ್, ರೂಪರಾವ್, ವಿದ್ಯಾಬೇಕಲ್, ವಿಮಲ, ಶೋಭ, ಆಶಾ, ವಿನಾಯಕ್, ಪಂಡರಿನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೆಸರು ನಾಮಕರಣಗೊಳಿಸಲು ಒತ್ತಾಯಿಸಿ ಮನವಿ

ಭದ್ರಾವತಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಹೆಸರು ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ನಾಮಕರಣಗೊಳಿಸಲು ಒತ್ತಾಯಿಸಿ ಶಾಸಕ ಬಿ ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ನ. ೧೧: ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಹೆಸರು ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ನಾಮಕರಣಗೊಳಿಸಲು ಒತ್ತಾಯಿಸಿ ಶಾಸಕ ಬಿ ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಯಿತು.
    ಎಂ.ಜೆ ಅಪ್ಪಾಜಿಯವರು  ೩ ಬಾರಿ ಕ್ಷೇತ್ರದ ಶಾಸಕರಾಗಿದ್ದು, ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ.  ಬಸ್ ನಿಲ್ದಾಣ ನಿರ್ಮಾಣಕ್ಕೂ ಸಾಕಷ್ಟು ಶ್ರಮಿಸಿರುವುದು ತಮಗೂ ತಿಳಿದಿರುವ ವಿಚಾರವಾಗಿದೆ. ಈಗಾಗಲೇ ಅಪ್ಪಾಜಿ ಹೆಸರು ನಾಮಕರಣಗೊಳಿಸಲು ಮಾಜಿ ಶಾಸಕ ವೈಎಸ್‌ವಿ ದತ್ತ ನೇತೃತ್ವದಲ್ಲಿ ಹೋರಾಟ ನಡೆಸಿ ತಾಲೂಕು ಆಡಳಿತಕ್ಕೂ ಮನವಿ ಸಹ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಾವು ಸಹ ಸರ್ಕಾರಕ್ಕೆ ಅಪ್ಪಾಜಿ ಹೆಸರು ನಾಮಕರಣಗೊಳಿಸಲು ಸರ್ಕಾರಕ್ಕೆ ಆಗ್ರಹಿಸಬೇಕೆಂದು ಸಮಿತಿ ವತಿಯಿಂದ ಒತ್ತಾಯಿಸುತ್ತೇವೆಂದು ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮನವಿಯಲ್ಲಿ ತಿಳಿಸಿದ್ದಾರೆ.