ಶುಕ್ರವಾರ, ಡಿಸೆಂಬರ್ 11, 2020

ಅತ್ಯಾಚಾರ ಪ್ರಕರಣ : ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಮನವಿ

ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಕರ್ನಾಟಕ ಜನಸೈನ್ಯ ಖಂಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಭದ್ರಾವತಿಯಲ್ಲಿ ತಹಸೀಲ್ದಾರ್ ಗ್ರೇಡ್ -೨ ರಂಗಮ್ಮ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಭದ್ರಾವತಿ, ಡಿ. ೧೧: ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಕರ್ನಾಟಕ ಜನಸೈನ್ಯ ಖಂಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ತಹಸೀಲ್ದಾರ್ ಗ್ರೇಡ್ -೨ ರಂಗಮ್ಮ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
    ಶಿವಮೊಗ್ಗ ಜಿಲ್ಲೆ ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಹಾಗು ರಾಜಕೀಯವಾಗಿ ಮುಂಚೂಣಿಯಲ್ಲಿದ್ದು, ಈ ಜಿಲ್ಲೆಯಲ್ಲಿ ಈ ರೀತಿಯ ಕೃತ್ಯ ನಡೆದಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಹಾಗು ಬಾಲಕಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಯಿತು.
     ಜಿಲ್ಲಾಧ್ಯಕ್ಷೆ ಕೆ ಮಂಜುನಾಥ್, ತಾಲೂಕು ಅಧ್ಯಕ್ಷ ವಿ. ಲೋಕೇಶ್, ಉಪಾಧ್ಯಕ್ಷ ಎಲ್.ಸಿ ಮುಥುನ್, ಜಿಲ್ಲಾ ಪ್ರಧಾನ ಕಾರ್ಯದಶಿ ಎಂ. ಅನಂತರಾಮ್, ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿ ಚಿರಾಗ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಚಂದ್ರಶೇಖರ್, ಎಲ್ ಶ್ರೀನಿವಾಸ್, ಪಿ. ಪರಮೇಶ್ ಸೇರಿದಂತೆ  ಇನ್ನಿತರರಿದ್ದರು ಉಪಸ್ಥಿತರಿದ್ದರು.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿಗಳ ಪರ ವಕಾಲತ್ತು ವಹಿಸದಿರಿ

ವಕೀಲರ ಸಂಘಕ್ಕೆ ಕರ್ನಾಟಕ ಜನಪರ ವೇದಿಕೆ ಮನವಿ

ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿರುವ ಅಪ್ರಾಪ್ತ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಪರವಾಗಿ ಯಾರು ಸಹ ವಕಾಲತ್ತು ವಹಿಸಬಾರದೆಂದು ಆಗ್ರಹಿಸಿ ತಾಲೂಕು ವಕೀಲರ ಸಂಘಕ್ಕೆ ಭದ್ರಾವತಿ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೧೧: ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿರುವ ಅಪ್ರಾಪ್ತ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಪರವಾಗಿ ಯಾರು ಸಹ ವಕಾಲತ್ತು ವಹಿಸಬಾರದೆಂದು ಆಗ್ರಹಿಸಿ ತಾಲೂಕು ವಕೀಲರ ಸಂಘಕ್ಕೆ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.
    ಆಸ್ಪತ್ರೆಯ ಗುತ್ತಿಗೆ ಕಾರ್ಮಿಕ ಹಾಗು ಆತನ ಸ್ನೇಹಿತರು ಸೇರಿ ನಡೆಸಿರುವ ಅತ್ಯಾಚಾರ ಘಟನೆಯನ್ನು ಜನಪರ ವೇದಿಕೆ ಖಂಡಿಸುತ್ತದೆ. ಈ ಘಟನೆ ಪ್ರಜ್ಞಾವಂತ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಈ ರೀತಿಯ ಘಟನೆಗಳು ಪುನಃ ಮರುಕಳುಹಿಸಬಾರದು. ಬಾಲಕಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ನ್ಯಾಯವಾದಿಗಳು ಮುಂದಾಗಬೇಕು. ಆರೋಪಿಗಳ ಪರವಾಗಿ ಯಾರು ಸಹ ವಕಾಲತ್ತು ವಹಿಸಬಾರದೆಂದು ಮನವಿ ಮಾಡಲಾಯಿತು.
    ಸಂಘದ ಅಧ್ಯಕ್ಷ ವಿ. ವೆಂಕಟೇಶ್ ಮನವಿ ಸ್ವೀಕರಿಸಿದರು. ಜನಪರ ವೇದಿಕೆ ತಾಲೂಕು ಅಧ್ಯಕ್ಷ ಎಸ್.ಎಸ್ ಭೈರಪ್ಪ ನೇತೃತ್ವ ವಹಿಸಿದ್ದರು. ಜಿಲ್ಲಾ ಕಾರ್ಯಾಧ್ಯಕ್ಷ ಸುದೀಪ್‌ಕುಮಾರ್, ಮುಖಂಡರಾದ ಮುಕುಂದಪ್ಪ, ಡಿ. ನರಸಿಂಹಮೂರ್ತಿ, ಪ್ರಾನ್ಸಿಸ್, ಅಬಿದ್, ಕಾಂತರಾಜ್, ಜೋಸೆಫ್, ಪ್ರಸನ್ನಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

೧೮ ಅಡಿ ಉದ್ದದ ಬಾಳೆ ಎಲೆಯಲ್ಲಿ ಕುಟುಂಬ ಸದಸ್ಯರ ಬಾಡೂಟ...!

ಭದ್ರಾವತಿ ತಾಲ್ಲೂಕಿನ ಕಲ್ಪನಹಳ್ಳಿ ಗ್ರಾಮದಲ್ಲಿ ಬಾಬುನಾಯ್ಕ ನಂಜಿಬಾಯಿ ಕುಟುಂಬಸ್ಥರ ಮದುವೆ ಸಮಾರಂಭದಲ್ಲಿ ಬೃಹತ್ ಆಕಾರದ ಬಾಳೆ ಎಲೆಯಲ್ಲಿ ಕುಟುಂಬ ಸದಸ್ಯರು ಒಂದೇ ಎಲೆಯಲ್ಲಿ ಊಟ ಮಾಡುತ್ತಿರುವ ಪೋಟೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
   ಭದ್ರಾವತಿ, ಡಿ. ೧೧: ತಾಲ್ಲೂಕಿನ ಕಲ್ಪನಹಳ್ಳಿ ಗ್ರಾಮದಲ್ಲಿ ಬಾಬುನಾಯ್ಕ ನಂಜಿಬಾಯಿ ಕುಟುಂಬಸ್ಥರ ಮದುವೆ ಸಮಾರಂಭದಲ್ಲಿ ಬೃಹತ್ ಆಕಾರದ ಬಾಳೆ ಎಲೆಯಲ್ಲಿ ಕುಟುಂಬ ಸದಸ್ಯರು ಒಂದೇ ಎಲೆಯಲ್ಲಿ ಊಟ ಮಾಡುತ್ತಿರುವ ಪೋಟೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.  
    ಈ ಊರಿನಲ್ಲಿರುವ ಅತ್ಯಂತ ದೊಡ್ಡ ಕುಟುಂಬ ಇದಾಗಿದೆ. ೧೮ ಅಡಿ ಉದ್ದದ  ಬಾಳೆ ಎಲೆಯಲ್ಲಿ ಕುಟುಂಬದ ಕೆಲ ಸದಸ್ಯರು ಬಾಡೂಟದ ಸವಿದರು. ಈ ಕುಟುಂಬದ ಸದಸ್ಯರು ಯಾವಾಗಲೂ ಒಂದಲ್ಲ ಒಂದು ರೀತಿಯಲ್ಲಿ ವಿಭಿನ್ನ ಶೈಲಿಯಲ್ಲಿ ಸಂಭ್ರಮಾಚರಣೆ ಮಾಡುತ್ತಲೆ ಇರುತ್ತಾರೆ.

ಗುರುವಾರ, ಡಿಸೆಂಬರ್ 10, 2020

ಅಂಧರ ಕೇಂದ್ರದಲ್ಲಿ ಕರಾವೇ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ಹುಟ್ಟುಹಬ್ಬ

ಭದ್ರಾವತಿ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಅಂಧ ವಿಕಲಚೇತನರೊಂದಿಗೆ ಆಚರಿಸಿಕೊಂಡರು.
ಭದ್ರಾವತಿ, ಡಿ. ೧೦: ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಅಂಧ ವಿಕಲಚೇತನರೊಂದಿಗೆ ಆಚರಿಸಿಕೊಂಡರು.
   ನ್ಯೂಟೌನ್ ಸಿದ್ಧಾರ್ಥ ಅಂಧರ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರಾವೇ ಪ್ರಮುಖರಾದ ಅನಿತಾ, ಶಾರದ, ಮಹೇಶ್ವರಿ, ಪದ್ಮಮ್ಮ, ಸುಮಿತ್ರಾ, ಹೇಮಾ, ಸೌಮ್ಯ, ಶಾರದಕುಮಾರಿ, ರೂಪಾ ನಾರಾಯಣ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಅಂಧ ವಿಕಲಚೇತನರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಳೆದ ಕೆಲವು ವರ್ಷಗಳಿಂದ ಜ್ಯೋತಿಯವರು ತಮ್ಮ ಹುಟ್ಟುಹಬ್ಬವನ್ನು ಅಂಧರ ಕೇಂದ್ರದಲ್ಲಿ ಆಚರಿಸಿಕೊಳ್ಳುವ ಮೂಲಕ ಅಂಧರೊಂದಿಗೆ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ.

ಗೋ ಹತ್ಯೆ ನಿಷೇಧ ಕಾಯ್ದೆ ಮಂಡನೆ : ಬಿಜೆಪಿಯಿಂದ ವಿವಿಧೆಡೆ ಗೋ ಪೂಜೆ

ಭದ್ರಾವತಿ ತಾಲೂಕಿನ ವಿವಿಧ ದೇವಾಲಯಗಳ ಆವರಣದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಗುರುವಾರ ಗೋ ಪೂಜೆ ನೆರವೇರಿಸಲಾಯಿತು.
ಭದ್ರಾವತಿ, ಡಿ. ೧೦: ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಮಂಡಿಸುವಲ್ಲಿ ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ನಗರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ವಿವಿಧ ದೇವಾಲಯಗಳ ಆವರಣದಲ್ಲಿ ಗೋ ಪೂಜೆ ನೆರವೇರಿಸಲಾಯಿತು.
    ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ನೇತೃತ್ವದಲ್ಲಿ ಹೊಸಸೇತುವೆ ರಸ್ತೆಯಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನ, ಹೊಸಮನೆ ಹಿಂದೂ ಮಹಾಸಭಾ ಗಣಪತಿ ದೇವಸ್ಥಾನ ಹಾಗು ತಾಲೂಕು ಕಚೇರಿ ರಸ್ತೆಯಲ್ಲಿರುವ ಶ್ರೀ ಭದ್ರೇಶ್ವರ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಧಾರ್ಮಿಕ ಆಚರಣೆಗಳೊಂದಿಗೆ ಗೋ ಪೂಜೆ ನೆರವೇರಿಸಲಾಯಿತು.
   ಪಕ್ಷದ ಪ್ರಮುಖರಾದ ಚನ್ನೇಶ್, ಅನ್ನಪೂರ್ಣ ಸಾವಂತ್, ಕಲ್ಪನಾ, ಮಂಜುಳ, ಸುಲೋಚನ ಪ್ರಕಾಶ್, ಕೆ.ಆರ್ ಸತೀಶ್, ನಾರಾಯಣ ದೊಡ್ಮನೆ, ಸುಬ್ರಮಣಿ, ರಾಜಶೇಖರ್ ಉಪ್ಪಾರ ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷ ಹಾ. ರಾಮಪ್ಪ, ರಾಮಮೂರ್ತಿ, ಬಜರಂಗದಳ ಜಿಲ್ಲಾ ಸಂಚಾಲಕ ಸುನಿಲ್‌ಕುಮಾರ್, ತಾಲೂಕು ಸಂಚಾಲಕ ವಡಿವೇಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಹೊಸಮನೆ ಹಿಂದೂ ಮಹಾಸಭಾ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೂಡಾ ಸದಸ್ಯ ವಿ. ಕದಿರೇಶ್, ಎಂ. ಮಂಜುನಾಥ್, ಯುವ ಮೋರ್ಚಾ ಅಧ್ಯಕ್ಷ ವಿಜಯ್, ಎಸ್‌ಸಿ ಮೋರ್ಚಾ ಅಧ್ಯಕ್ಷ ಗಣೇಶ್‌ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಾಲೂಕಿನ ೨೨ ಗ್ರಾ.ಪಂ ವ್ಯಾಪ್ತಿಯಲ್ಲಿ ವಿಶೇಷವಾಗಿ ಪೂಜೆ ನೆರವೇರಿಸಲಾಯಿತು.

ಬುಧವಾರ, ಡಿಸೆಂಬರ್ 9, 2020

ಮತದಾನದ ಹಕ್ಕು ಹೊಂದಿರುವ ಪ್ರತಿಯೊಬ್ಬರು ಗ್ರಾ.ಪಂ. ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ

ಸಿಂಗಮನೆ ಗ್ರಾಮ ಪಂಚಾಯಿತಿಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಓ ಡಾ. ಎಂ.ಎಲ್ ವೈಶಾಲಿ

ಭದ್ರಾವತಿ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಎಲ್ ವೈಶಾಲಿ ಪಾಲ್ಗೊಂಡು ಮಾತನಾಡಿದರು.
ಭದ್ರಾವತಿ, ಡಿ. ೯: ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮತದಾರರು ಗಂಭೀರವಾಗಿ ಪರಿಗಣಿಸಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಎಲ್ ವೈಶಾಲಿ ಮನವಿ ಮಾಡಿದರು.
  ಅವರು ಬುಧವಾರ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
   ಮತದಾನದ ಹಕ್ಕು ಹೊಂದಿರುವ ಪ್ರತಿಯೊಬ್ಬರು ಕಡ್ಡಾಯವಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು. ೧೮ ವರ್ಷ ತುಂಬಿದ ಪ್ರತಿಯೊಬ್ಬರು ತಮ್ಮ ಮತದಾನ ಹಕ್ಕನ್ನು ಪಡೆದುಕೊಳ್ಳಬೇಕು. ಮತದಾನದಲ್ಲಿ ಯುವ ಸಮುದಾಯ ಹೆಚ್ಚಾಗಿ ಪಾಲ್ಗೊಳ್ಳಬೇಕು. ಚುನಾವಣೆಗೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳಿಗೆ ಚುನಾವಣಾ ಅಧಿಕಾರಿಗಳು ಪೂರಕವಾಗಿ ಸ್ಪಂದಿಸಲಿದ್ದಾರೆಂದು ಭರವಸೆ ನೀಡಿದರು.
   ಕುವೆಂಪು ವಿಶ್ವವಿದ್ಯಾನಿಲಯದ ಉಪ ಕುಲಪತಿ ವೀರಭದ್ರಪ್ಪ, ರಿಜಿಸ್ಟ್ರಾರ್ ಎಸ್.ಎಸ್ ಪಾಟೀಲ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಜಿ. ಮಂಜುನಾಥ್, ನೋಡಲ್ ಅಧಿಕಾರಿ ನವೀದ್ ಪರ್ವೀಜ್ ಅಹಮದ್,  ಸಿಂಗನಮನೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮಶೇಖರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಚೌಡೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ


ಭದ್ರಾವತಿ ನಗರಸಭೆ ವ್ಯಾಪ್ತಿಯ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ತಿಕ ದೀಪೋತ್ಸವದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಭದ್ರಾವತಿ, ಡಿ. ೯: ನಗರಸಭೆ ವ್ಯಾಪ್ತಿಯ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಕಾರ್ತಿಕ ದೀಪೋತ್ಸವದ ಅಂಗವಾಗಿ ಕಲಾದುರ್ಗ ಹೋಮ ಹಮ್ಮಿಕೊಳ್ಳಲಾಗಿತ್ತು.
   ಅಮ್ಮನವರಿಗೆ ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ದೀಪೋತ್ಸವ ನಡೆಯಿತು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಾಮನಿರ್ದೇಶಿತ ಸದಸ್ಯ ಮಂಗೋಟೆ ರುದ್ರೇಶ್, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಯುವ ಮೋರ್ಚಾ ಅಧ್ಯಕ್ಷ ವಿಜಯ್‌ಕುಮಾರ್, ಬಜರಂಗದಳ ಜಿಲ್ಲಾ ಸಂಚಾಲಕ ಸುನಿಲ್‌ಕುಮಾರ್ ಹಾಗು ದೇವಸ್ಥಾನ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ನೂರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.