ಮಾಜಿ ಪ್ರಧಾನಿ, ಭಾರತರತ್ನ ಅಟಲ್‌ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮ
ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ ಕಾರ್ಯಕ್ರಮ ಸಂಸದ ಬಿ.ವೈ. ರಾಘವೇಂದ್ರ, ಸಚಿವ ಕೆ.ಎಸ್ ಈಶ್ವರಪ್ಪ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ, ಡಿ. ೨೫: ಕೃಷಿ ಸನ್ಮಾನ್ ಯೋಜನೆ ರೈತರಿಗೆ ಲಂಚ ಕೊಡುವ ಯೋಜನೆಯಲ್ಲ ಬದಲಾಗಿ ರೈತರ ಶ್ರಮ ಗೌರವಿಸುವುದಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಅವರು ಶುಕ್ರವಾರ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಸಹ ರೈತರ ಶ್ರಮವಿಲ್ಲದೆ ನಾವುಗಳು ಬದಕಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ನಾವುಗಳು ರೈತರನ್ನು ಪ್ರತಿ ಕ್ಷಣ ನೆನಪು ಮಾಡಿಕೊಳ್ಳಬೇಕಾಗಿದೆ. ರೈತರು ಪ್ರಕೃತಿ ವಿಕೋಪ, ಬೆಲೆ ಕುಸಿತ ಸೇರಿದಂತೆ ಒಂದಲ್ಲ ಒಂದು ಕಾರಣಕ್ಕೆ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ನಡುವೆಯೂ ಕೃಷಿ ನಂಬಿ ಬದುಕುತ್ತಿರುವ ರೈತರ ಬದುಕು ಅಭಿನಂದನಾರ್ಹವಾಗಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರನ್ನು ಅಭಿನಂದಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.
ಪ್ರಸ್ತುತ ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆಗಳು ಸಹ ಎಲ್ಲರೂ ಜೀವನ ಪರ್ಯಂತ ನೆನಪು ಮಾಡಿಕೊಳ್ಳುವಂತಹ ಯೋಜನೆಗಳಾಗಿವೆ ಎಂಬುದನ್ನು ಯಾರು ಸಹ ಮರೆಯಬಾರದು. ೨೦೧೮ರಲ್ಲಿ ಕೃಷಿ ಸನ್ಮಾನ್ ಯೋಜನೆ ಜಾರಿಗೆ ತಂದ ಆರಂಭದಲ್ಲಿ ಜಿಲ್ಲೆಯಲ್ಲಿ ೧೩,೫೦೦ ಮಂದಿ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದರು. ಪ್ರಸ್ತುತ ಈ ಯೋಜನೆಯಡಿ ಜಿಲ್ಲೆಯಲ್ಲಿ ೧,೫೦,೫೦೭ ಮಂದಿ ರೈತರು ಫಲಾನುಭವಿಗಳಾಗಿದ್ದು, ಜಿಲ್ಲೆಗೆ ೩೦.೫೦ ಕೋ. ರು. ಹಣ ಬಿಡುಗಡೆಯಾಗಿ ತಲಾ ೨,೦೦೦ ರು. ಇಂದು ರೈತರ ಖಾತೆಗಳಿಗೆ ನೇರವಾಗಿ ಜಮಾ ಆಗಿದೆ. ಇದೆ ರೀತಿ ಭದ್ರಾವತಿ ತಾಲೂಕಿನಲ್ಲಿ ೨೨,೮೬೩ ರೈತರು ಫಲಾನುಭವಿಗಳಾಗಿದ್ದು, ಒಟ್ಟು ೪.೭೦ ಕೋ. ರು. ಬಿಡುಗಡೆಯಾಗಿ ರೈತರ ಖಾತೆಗೆ ಹಣ ಜಮಾ ಆಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಿ, ಬಿಜೆಪಿ ಪಕ್ಷ ಸಾಮಾನ್ಯರ ಪಕ್ಷವಾಗಿದೆ. ಇದು ಹಣ, ಜಾತಿ ಆಧಾರದ ಮೇಲೆ ಸಂಘಟಿತಗೊಂಡಿಲ್ಲ ಬದಲಾಗಿ ಪಕ್ಷದ ಹಿರಿಯರ ವೈಚಾರಿಕ ಚಿಂತನೆಗಳು, ಆದರ್ಶ ಗುಣಗಳು, ಭವಿಷ್ಯದ ಆಲೋಚನೆಗಳು ಹಾಗು ಕಾರ್ಯಕರ್ತರ ಶ್ರಮದಿಂದ ಬೆಳೆದು ಬಂದಿದೆ. ಈ ಹಿನ್ನಲೆಯಲ್ಲಿ ಮುಂದಿನ ಎಲ್ಲಾ ಅವಧಿಗೂ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಮುಂದುವರೆಯಲಿದ್ದಾರೆಂಬ ವಿಶ್ವಾಸವಿದೆ ಎಂದರು.
ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಪಕ್ಷದ ತತ್ವ, ಸಿದ್ದಾಂತಗಳು ಮುಖ್ಯ. ಯಾವುದೇ ಅಧಿಕಾರದ ಆಸೆಗಾಗಿ ದುಡಿಯದೆ ಪಕ್ಷ ಸಂಘಟನೆಗಾಗಿ ದುಡಿಯಬೇಕು. ಅಟಲ್ ಬಿಹಾರಿ ವಾಜಪೇಯಿಯವರ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಪಕ್ಷದ ಸಿದ್ದಾಂತ ಹಾಗು ಕಾರ್ಯಕರ್ತರ ಶ್ರಮದಿಂದಾಗಿ ಸಾಮಾನ್ಯ ಕಾರ್ಯಕರ್ತನಾಗಿದ್ದ ನಾನು ಇಂದು ಸಚಿವನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರದ ಚಿತ್ರಣ ಸಹ ಬದಲಾಗಲಿದೆ. ಕಾರ್ಯಕರ್ತರು ಇನ್ನೂ ಹೆಚ್ಚಿನ ಉತ್ಸಾಹದಿಂದ ಮುನ್ನಡೆಯಬೇಕೆಂದು ಕರೆ ನೀಡಿದರು.
ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಪ್ರಮುಖರಾದ ಎಂ.ಬಿ ಭಾನುಪ್ರಕಾಶ್, ಆರ್.ಕೆ ಸಿದ್ದರಾಮಯ್ಯ, ಗಿರೀಶ್‌ಪಟೇಲ್, ಡಿ.ಎಸ್ ಅರುಣ್, ಸುವರ್ಣಶಂಕರ್, ಪವಿತ್ರ ರಾಮಯ್ಯ, ಚನ್ನಬಸಪ್ಪ, ಜ್ಞಾನೇಶ್ವರ್, ಎಸ್.ಎಸ್ ಜ್ಯೋತಿಪ್ರಕಾಶ್, ಗುರುಮೂರ್ತಿ, ಎಸ್. ದತ್ತಾತ್ರಿ, ಮಂಗೋಟೆ ರುದ್ರೇಶ್, ಜಿ. ಧರ್ಮಪ್ರಸಾದ್, ಬಿ.ಕೆ ಶ್ರೀನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಾಲೂಕು ಬಿಜೆಪಿ ಅಧ್ಯಕ್ಷ ಎಂ. ಪ್ರಭಾಕರ್ ಸ್ವಾಗತಿಸಿದರು.
ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ ಕಾರ್ಯಕ್ರಮ ಸಂಸದ ಬಿ.ವೈ. ರಾಘವೇಂದ್ರ, ಸಚಿವ ಕೆ.ಎಸ್ ಈಶ್ವರಪ್ಪ ಸೇರಿದಂತೆ ಇನ್ನಿತರ ಗಣ್ಯರು ಸಾಮಾನ್ಯರಂತೆ ಕಾರ್ಯಕರ್ತರ ನಡುವೆ ಕುಳಿತು ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ರೈತ ಸಂವಾದ ನೇರ ಪ್ರಸಾರ ಕಾರ್ಯಕ್ರಮ ವೀಕ್ಷಿಸಿದರು.