![](https://blogger.googleusercontent.com/img/b/R29vZ2xl/AVvXsEivSUbeRtugSGh3Mwpp9NEfeI4DX6YtmuvhRrUkfJ_ggtHvbhF1Ihykd-TPJ_yQklq_t1ds-bspNSoGIrIeIsIY93JR0lEdw10Z7zrag6GUHCskT_PddDztky2IWqRjCghtTCLUbbXcqalH/w640-h284-rw/D6-BDVT2-796998.jpg)
ಭದ್ರಾವತಿ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಅಪೇಕ್ಷ ನೃತ್ಯ ಕಲಾ ವೃಂದದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಿರಿಯ ರಂಗ ಕಲಾವಿದ, ಚಲನ ಚಿತ್ರ ಮತ್ತು ಕಿರುತೆರೆ ನಟ ವೈ.ಕೆ ಹನುಮಂತಯ್ಯನವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಜ. ೬: ಹಿರಿಯ ಕಲಾವಿದರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯದ ಡಾ. ವಿಜಯದೇವಿ ಹೇಳಿದರು.
ಅವರು ನಗರ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಅಪೇಕ್ಷ ನೃತ್ಯ ಕಲಾ ವೃಂದದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಿರಿಯ ರಂಗ ಕಲಾವಿದ, ಚಲನ ಚಿತ್ರ ಮತ್ತು ಕಿರುತೆರೆ ನಟ ವೈ.ಕೆ ಹನುಮಂತಯ್ಯನವರ ೭೦ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವೈ.ಕೆ ಹನುಮಂತಯ್ಯನವರ ಕಲಾ ಸೇವೆ ಅಪಾರವಾಗಿದ್ದು, ಹಲವಾರು ಸಂಕಷ್ಟಗಳ ನಡುವೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಇಂದಿಗೂ ಜೀವಂತಿಕೆ ಕಾಯ್ದುಕೊಂಡು ಬಂದಿರುವುದು ಶ್ಲಾಘನೀಯ ಎಂದರು.
ಹಿರಿಯ ರಂಗ ಕಲಾವಿದ, ಚಲನಚಿತ್ರ ಮತ್ತು ಕಿರುತೆರೆ ನಟ ಆಂಜನೇಯ ಮಾತನಾಡಿ, ಅಂದಿನ ಕಲಾವಿದರು ಸಾಕಷ್ಟು ಸವಾಲುಗಳನ್ನು ಮೆಟ್ಟಿ ತಮ್ಮಲ್ಲಿನ ಪ್ರತಿಭೆಗಳನ್ನು ಹೊರಹಾಕುವ ಮೂಲಕ ರಾಷ್ಟ್ರ, ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಪೈಕಿ ಹನುಮಂತಯ್ಯನವರು ಸಹ ಒಬ್ಬರಾಗಿದ್ದು, ಸಮಾಜಕ್ಕೆ ಇವರ ಸೇವೆ ಮತ್ತಷ್ಟು ಲಭಿಸುವಂತಾಗಲಿ. ಇನ್ನೂ ಹೆಚ್ಚಿನ ಆಯುರಾರೋಗ್ಯ ಭಗವಂತ ಕರುಣಿಸಲೆಂದು ಶುಭ ಹಾರೈಸಿದರು.
ವೈ.ಕೆ ಹನುಮಂತಯ್ಯ ತಮ್ಮ ಕಲಾ ಸೇವೆಯ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮ ಆಯೋಜಕ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಭಿನಂದನೆ ನುಡಿಗಳನ್ನಾಡಿದರು.
ಅಪೇಕ್ಷ ಕಲಾ ವೃಂದದಿಂದ ಹನುಮಂತಯ್ಯನವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸ್ತ್ರೀ ರೋಗ ತಜ್ಞೆ ಡಾ. ವೀಣಾ ಎಸ್. ಭಟ್, ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸಿದ್ದಲಿಂಗಯ್ಯ, ಕಸಾಪ ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿ, ಕಲಾವಿದ ಚಿದಾನಂದ, ಶಿಕ್ಷಕ ಎ. ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.