Friday, January 8, 2021

ಭದ್ರಾವತಿಯಲ್ಲಿ ಯಶಸ್ವಿಯಾಗಿ ನಡೆದ ಡ್ರೈರನ್ ಕಾರ್ಯಕ್ರಮ

ಕೋವಿಡ್-೧೯  ಲಸಿಕೆ ಪೂರ್ವಸಿದ್ಧತೆ ಪರಿಶೀಲನೆ( ಡ್ರೈ ರನ್) ಕಾರ್ಯಕ್ರಮ ಶುಕ್ರವಾರ ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಯಿತು.  
ಭದ್ರಾವತಿ, ಜ. ೮: ಕೋವಿಡ್-೧೯ ಲಸಿಕೆ ಪೂರ್ವಸಿದ್ಧತೆ ಪರಿಶೀಲನೆ( ಡ್ರೈ ರನ್) ಕಾರ್ಯಕ್ರಮ ಶುಕ್ರವಾರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಯಿತು.  
    ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಆರ್ ಸಿ ಎಚ್ ಅಧಿಕಾರಿ ಡಾ. ನಾಗರಾಜ್ ನಾಯಕ್,  ತಾಲೂಕು ಆರೋಗ್ಯಾಧಿಕಾರಿ ಡಾ.  ಎಂ.ವಿ ಅಶೋಕ್, ಸಾರ್ವಜನಿಕ ಆಸ್ಪತ್ರೆ  ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ನೀಲೇಶ್ ರಾಜ್, ಕಿರಣ್ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
    ಲಸಿಕೆ ಹಾಕಲು ಕೈಗೊಂಡ ಕ್ರಮಗಳು:
     ಆರೋಗ್ಯ ಇಲಾಖೆಯ ೨೫ ಮಂದಿ ಸಿಬ್ಬಂದಿಗಳಿಗೆ ಪೂರ್ವ ಪರಿಶೀಲನಾ ಲಸಿಕೆ ಹಾಕಲಾಯಿತು. ಇದಕ್ಕೂ ಮೊದಲು ಲಸಿಕೆ ಹಾಕಿಸಿಕೊಳ್ಳಲು ನೋಂದಣಿ ಮಾಡಿಸಿಕೊಂಡಿರುವವರ ದಾಖಲೆಗಳನ್ನು ಪರಿಶೀಲನೆ ನಡೆಸಲಾಯಿತು. ನಂತರ ನಿರೀಕ್ಷಣಾ ಕೊಠಡಿಯಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಒಟ್ಟು ೩ ಮಂದಿ ವ್ಯಾಕ್ಸಿನೇಷನ್  ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದರು.   ಈ  ಪೈಕಿ ಇಬ್ಬರು ಲಸಿಕೆ ಹಾಕುವ ಅಧಿಕಾರಿಗಳಾಗಿದ್ದರು. ೧ ಕೊಠಡಿಯಲ್ಲಿ  ಲಸಿಕೆ ಹಾಕಲಾಯಿತು. ಮತ್ತೊಂದು ಕೊಠಡಿಯಲ್ಲಿ ಲಸಿಕೆ  ಹಾಕಿದ ನಂತರ ಅರ್ಧ ತಾಸುಗಳ ವರೆಗೆ ಪರಿಶೀಲನೆ ನಡೆಸಲಾಯಿತು.  





ಸಾಮಾನ್ಯ ಕಾರ್ಯಕರ್ತನಿಗೂ ಭವಿಷ್ಯದಲ್ಲಿ ಉನ್ನತ ಸ್ಥಾನ : ಡಿ.ಬಿ ಶಂಕರಪ್ಪ

ಭದ್ರಾವತಿ, ಜ. ೮: ಸಾಮಾನ್ಯ ಕಾರ್ಯಕರ್ತರಾಗಿ ಕನ್ನಡ ಸೇವೆ ಮಾಡಿದ ವ್ಯಕ್ತಿಗೆ ಸಮ್ಮೇಳನಾಧ್ಯಕ್ಷ ಗೌರವ ಸಂದಿರುವುದು ನಾಡಿನಪ್ರತಿಯೊಬ್ಬ ಕನ್ನಡ ಸೇವಕನಿಗೂ ಸಲ್ಲುವ ಗೌರವವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಬಿ ಶಂಕರಪ್ಪ ಪ್ರಶಂಸೆ ವ್ಯಕ್ತಪಡಿಸಿದರು.
     ಅವರು ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ೯ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಎ.ಪಿ ಕುಮಾರ್‌ರವರನ್ನು ಅಭಿನಂದಿಸಿ ಮಾತನಾಡಿದರು.
    ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಭವಿಷ್ಯದಲ್ಲಿ ಉನ್ನತಮಟ್ಟದ ಗೌರವ ಲಭಿಸುತ್ತದೆ ಎಂಬುದಕ್ಕೆ ಎ.ಪಿ ಕುಮಾರ್ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿವುದು ಸಾಕ್ಷಿಯಾಗಿದೆ. ಯಾವುದನ್ನೂ ನಿರೀಕ್ಷಿಸದೆ ಕನ್ನಡಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡು ಸುಮಾರು ೪ ದಶಕಕ್ಕೂ ಹೆಚ್ಚು ಕಾಲ ದುಡಿದಿರುವ ವ್ಯಕ್ತಿಯೊಬ್ಬರನ್ನು ಆಯ್ಕೆ ಮಾಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸಾಹಿತಿಯಲ್ಲದ ವ್ಯಕ್ತಿಯೊಬ್ಬರನ್ನು ಹಲವು ಆಯಾಮಗಳ ಮೂಲಕ ಗುರುತಿಸುವ ಪ್ರಯತ್ನವನ್ನು ತಾಲೂಕು ಪರಿಷತ್ ಮಾಡುವ ಮೂಲಕ ಜಿಲ್ಲೆಯಲ್ಲಿ ಮಾದರಿಯಾಗಿದೆ.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಸಾಪ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ, ಪ್ರಮುಖರಾದ ಡಾ.ಬಿ.ಎಂ ನಾಸಿರ್‌ಖಾನ್, ಜಿ.ಎನ್ ಸತ್ಯಮೂರ್ತಿ, ಕೆ. ಮಂದಾರಕುಮಾರ್, ಸಿದ್ದಲಿಂಗಯ್ಯ, ಅರಳೇಹಳ್ಳಿ ಅಣ್ಣಪ್ಪ, ಚಂದ್ರಶೇಖರಪ್ಪ ಚಕ್ರಸಾಲಿ, ಎನ್. ಮಂಜುನಾಥ್, ನಾಗರತ್ನ ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಜೈನ ಸಮಾಜದ ವತಿಯಿಂದ ಎ.ಪಿ ಕುಮಾರ್ ದಂಪತಿಯನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

Thursday, January 7, 2021

ಡ್ರೈ ರನ್ ಅನುಷ್ಠಾನಕ್ಕೆ ಉಸ್ತುವಾರಿ ಅಧಿಕಾರಿ, ಮೇಲ್ವಚಾರಕರ ನೇಮಕ

ಭದ್ರಾವತಿ, ಜ. ೭: ತಾಲೂಕಿನಾದ್ಯಂತ ಜ.೮ರಂದು ಕೋವಿಡ್-೧೯ ವ್ಯಾಕ್ಸಿನೇಷನ್ ಡ್ರೈ ರನ್ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಉಸ್ತುವಾರಿ ಅಧಿಕಾರಿ ಹಾಗು ಮೇಲ್ವಿಚಾರಕರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್‌ರವರನ್ನು ಉಸ್ತುವಾರಿ ಅಧಿಕಾರಿಯನ್ನಾಗಿ ಹಾಗು ಪೌಷ್ಠಿಕ ಆಹಾರ ವಿಭಾಗದ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪದ್ಮ ಮತ್ತು ಶಿವಮೊಗ್ಗ ನಗರ ಕಾರ್ಯಕ್ರಮ ವ್ಯವಸ್ಥಾಪಕಿ ಮಧುರವರನ್ನು ಮೇಲ್ವಿಚಾರಕರನ್ನಾಗಿ ನೇಮಕಗೊಳಿಸಲಾಗಿದೆ.


ಜಿ+೩ ಗುಂಪು ಮನೆ ಯೋಜನೆ ಮೊದಲನೇ ಕಂತಿನ ಪಾವತಿಗೆ ಅವಕಾಶ

ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದ ಆಶ್ರಮ ಸಮಿತಿ ಸಭೆಯಲ್ಲಿ ತೀರ್ಮಾನ
ಭದ್ರಾವತಿ, ಜ. ೭: ನಗರಸಭೆ ವತಿಯಿಂದ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ಜಿ+೩ ಗುಂಪು ಮನೆ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳು ಮೊದಲನೇ ಕಂತಿನ ವಂತಿಕೆ ಜಮಾ ಮಾಡಲು ಸೋಮವಾರದಿಂದ ಅವಕಾಶ ಕಲ್ಪಿಸಿಕೊಡಲಾಗಿದೆ.
ಗುರುವಾರ ನಗರಸಭೆ ಪೌರಾಯುಕ್ತರ ಕಛೇರಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಆಶ್ರಯ ಸಮಿತಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಫಲಾನುಭವಿಗಳು ಬ್ಯಾಂಕಿನಲ್ಲಿ ಪ್ರತ್ಯೇಕ ಖಾತೆ ತೆರೆದು ಮೊದಲನೆ ಕಂತಿನ ವಂತಿಕೆ ರು. ೧೦,೦೦೦ ಜಮಾ ಮಾಡಲು ಹಳೇನಗರದ ಬಸವೇಶ್ವರ ವೃತ್ತದಲ್ಲಿ ವ್ಯವಸ್ಥೆ ಕಲ್ಪಿಸಲು ತೀರ್ಮಾನಲಾಗಿದೆ. ಫಲಾನುಭವಿಗಳು ಒಂದೇ ಬಾರಿ ಅಥವಾ ಒಂದು ತಿಂಗಳ ಒಳಗೆ ಮೊದಲ ಕಂತಿನ ವಂತಿಕೆ ಜಮಾ ಮಾಡಬೇಕಾಗಿದೆ. ನಂತರ ಉಳಿದ ಹಣ ಜಮಾ ಮಾಡಲು ೫ ತಿಂಗಳ ಅವಕಾಶ ನೀಡಲಾಗಿದೆ. ಈ ಕುರಿತು ೨-೩ ದಿನಗಳಲ್ಲಿ ನಗರಸಭೆ ವ್ಯಾಪ್ತಿಯ ಎಲ್ಲೆಡೆ ಪ್ರಚಾರ ನಡೆಸಲು ನಿರ್ಧರಿಸಲಾಗಿದೆ ಎಂದು ಸಮಿತಿ ಸದಸ್ಯ ದೇವರಾಜ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ಸದಸ್ಯರಾದ ದೇವರಾಜ್, ಸಂಪತ್‌ರಾಜ್ ಬಾಂಟಿಯಾ, ಗೌರಮ್ಮ, ಸತೀಶ್‌ಕುಮಾರ್ ಹಾಗು ನಗರಸಭೆ ಕಂದಾಯಾಧಿಕಾರಿ ರಾಜ್‌ಕುಮಾರ್ ಉಪಸ್ಥಿತರಿದ್ದರು.

ಚಿತ್ರ: ಡಿ೭-ಬಿಡಿವಿಟಿ೧
ಭದ್ರಾವತಿ ನಗರಸಭೆ ಪೌರಾಯುಕ್ತರ ಕಛೇರಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಗುರುವಾರ ಆಶ್ರಯ ಸಮಿತಿ ಸಭೆ ನಡೆಯಿತು.


Wednesday, January 6, 2021

ಅದ್ದೂರಿಯಾಗಿ ಜರುಗಿದ ಶ್ರೀ ಮಾರಿಯಮ್ಮ ಜಾತ್ರಾ ಮಹೋತ್ಸವ

ಭದ್ರಾವತಿ, ಜ. ೬: ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಅಮ್ಮನವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಒಂದು ವಾರದವರೆಗೆ ಪ್ರತಿ ದಿನ ಅಮ್ಮನವರಿಗೆ ವಿಶೇಷ ಆಲಂಕಾರ, ಅಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಕೊನೆಯ ದಿನ ಕೆಂಡದ ಆರತಿ ಸೇವೆ, ಉತ್ಸವ ಮೆರವಣಿಗೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುದವು.
ಬುಧವಾರ ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕೋವಿಡ್-೧೯ರ ನಡುವೆಯೂ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಬಿ.ಎಚ್ ರಸ್ತೆ ಹಾಗು ಉಂಬ್ಳೆಬೈಲು ರಸ್ತೆಗಳಲ್ಲಿ ವಿದ್ಯುತ್ ದೀಪಗಳಿಂದ ನಿರ್ಮಾಣಗೊಂಡ ಆಕರ್ಷಕವಾದ ದೇವಾನುದೇವತೆಗಳ ಪ್ರದರ್ಶಕಗಳು(ಡಿಸ್ ಪ್ಲೇ) ನೋಡುಗರ ಮನಸೂರೆಗೊಂಡವು. ನೂರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.

ಚಿತ್ರ: ಡಿ೬-ಬಿಡಿವಿಟಿ೪
ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಅಮ್ಮನವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಅಮ್ಮನವರಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.



ಕಾಗದನಗರ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ

ಭದ್ರಾವತಿ, ಜ. ೬: ಕಾಗದನಗರದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಅಮ್ಮನವರಿಗೆ ವಿಶೇಷ ಆಲಂಕಾರ, ಅಭಿಷೇಕ, ತಂಬಿಟ್ಟಿನ ಆರತಿ ಸೇವೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುದವು. ಕೋವಿಡ್-೧೯ರ ನಡುವೆಯೂ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ನೂರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.

ಚಿತ್ರ: ಡಿ೬-ಬಿಡಿವಿಟಿ೩
ಭದ್ರಾವತಿ ಕಾಗದನಗರದಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಅಮ್ಮನವರಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.


ಎಸ್.ಜಿ ಪೃಥ್ವಿಗೆ ಡಾಕ್ಟರೇಟ್ ಪದವಿ


ಎಸ್.ಜಿ ಪೃಥ್ವಿ ದೆಹಲಿಯ ರಾಷ್ಟ್ರೀಯ ಮೆದುಳು ಸಂಶೋಧನಾ ಕೇಂದ್ರದಿಂದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
     ಭದ್ರಾವತಿ, ಜ. ೬: ನಗರದ ನಿವಾಸಿ ಎಸ್.ಜಿ ಪೃಥ್ವಿ ದೆಹಲಿಯ ರಾಷ್ಟ್ರೀಯ ಮೆದುಳು ಸಂಶೋಧನಾ ಕೇಂದ್ರದಿಂದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
     ಕುಲಸಚಿವ ಶಿವಕುಮಾರ ಶರ್ಮ,  ನಿರ್ದೇಶಕರಾದ ನೀರಜ್  ಜೈನ್, ವಿಜ್ಞಾನಿ ಪ್ರೊಫೆಸರ್ ಎಲ್ಲೋರಸೇನ್ ಮಾರ್ಗದರ್ಶನದಲ್ಲಿ 'ಇನ್ ಫ್ಲೂಯೆನ್ಸ್  ಆಫ್ ಡೈಸ್ ರೆಗ್ಯುಲೇಟೆಡ್ ಮೆಟಾಬೋಲಿಸಂ ಆನ್ ಗೆನೆಸ್ ಅಸೋಸಿಯೇಟೆಡ್ ವಿತ್ ಇಮ್ಯೂನ್-ಎವೇಷನ್ ಅಂಡ್ ಸೆಲ್ಯೂಲಾರ್ ಸರ್ಕೇಡಿಯನ್ ರಿಥಮ್ ಇನ್ ಗ್ಲಿಯೋಮಾ' ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.  
       ಎಸ್.ಜಿ ಪೃಥ್ವಿ  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ದೈಹಿಕ ಶಿಕ್ಷಕ ಶಿವಲಿಂಗೇಗೌಡ ಮತ್ತು ಗೌರಮ್ಮ ದಂಪತಿ ಪುತ್ರರಾಗಿದ್ದು, ಇವರನ್ನು ವಿಇಎಸ್  ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.