Tuesday, January 19, 2021

ಜ.೨೧ರಂದು ಉಚಿತ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ



ಭದ್ರಾವತಿ, ಜ. ೧೯: ನಗರದ ತರೀಕೆರೆ ರಸ್ತೆಯಲ್ಲಿರುವ ಶ್ರೀ ಶಿವಸುಬ್ರಮಣ್ಯ ಸ್ವಾಮಿ ಆಶ್ರಮದಲ್ಲಿ ಜ.೨೧ರ ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೧.೩೦ರ ವರೆಗೆ ಉಚಿತ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
      ಕಣ್ಣಿಗೆ ಹನಿ ಹಾಕುವುದರಿಂದ ಕಣ್ಣಿನಲ್ಲಿ ನೀರು ಬರುತ್ತಿರುವುದು, ಕಣ್ಣು ಉರಿ, ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ಪೊರೆ ಬರುವ ಹಂತದಲ್ಲಿರುವವರು ಹಾಗು ದೂರ ದೃಷ್ಠಿ ಮತ್ತು ಸಮೀಪ ದೃಷ್ಠಿ ತೊಂದರೆ ಇರುವವರಿಗೆ ಹೆಚ್ಚಿನ ಅನುಕೂಲವಾಗಲಿದೆ.
   ಪ್ರತಿ ತಿಂಗಳು ದಿನಾಂಕ ೨೧ರಂದು ಉಚಿತ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಮೊ:೯೪೮೦೨೮೩೦೩೦ ಅಥವಾ ೯೪೪೮೨೫೫೫೪೪ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

Monday, January 18, 2021

ಆರ್‌ಎಎಫ್ ಘಟಕ ಶಿಲಾನ್ಯಾಸ ಕಾರ್ಯಕ್ರಮ ಯಶಸ್ವಿ : ಸಂಸದ ಬಿ.ವೈ ರಾಘವೇಂದ್ರ ಕೃತಜ್ಞತೆ


ಭದ್ರಾವತಿ ಸಿದ್ದರೂಢನಗರದ ಧರ್ಮಶ್ರೀ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿದರು.
   ಭದ್ರಾವತಿ, ಜ. ೧೮: ನಗರದ ಬುಳ್ಳಾಪುರ ಮಿಲ್ಟ್ರಿಕ್ಯಾಂಪ್‌ನಲ್ಲಿ ಕಳೆದ ೨ ದಿನಗಳ ಹಿಂದೆ ನೂತನವಾಗಿ ಕಾರ್ಯಾರಂಭಗೊಂಡಿರುವ ಕ್ಷಿಪ್ರ ಕಾರ್ಯ ಪಡೆ ಘಟಕದ ಶಿಲಾನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿಸುವಲ್ಲಿ ಸಹಕರಿಸಿದ ಭಾರತೀಯ ಜನತಾ ಪಕ್ಷದ ಜಿಲ್ಲಾ ಹಾಗು ತಾಲೂಕು ಮಟ್ಟದ ಮುಖಂಡರಿಗೆ, ಪದಾಧಿಕಾರಿಗಳಿಗೆ, ಎಲ್ಲಾ ಹಂತದ ಸಂಯೋಜಕರಿಗೆ, ಕಾರ್ಯಕರ್ತರಿಗೆ ಸಂಸದ ಬಿ.ವೈ ರಾಘವೇಂದ್ರ ಕೃತಜ್ಞತೆ ಸಲ್ಲಿಸಿದರು.
    ಸೋಮವಾರ ಸಿದ್ದರೂಢನಗರದ ಧರ್ಮಶ್ರೀ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ವೈ ರಾಘವೇಂದ್ರ ಮಾತನಾಡಿ, ಮುಂದಿನ ದಿನಗಳಲ್ಲೂ ಇದೆ ರೀತಿ ಸಂಘಟಿತವಾಗಿ ಕಾರ್ಯ ನಿರ್ವಹಿಸುವಂತೆ ಕರೆ ನೀಡಿದರು.
    ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿರುವ ಪಕ್ಷದ ಬೆಂಬಲಿತ ಸದಸ್ಯರನ್ನು ಅಭಿನಂದಿಸಲಾಯಿತು.
    ಪಕ್ಷದ ರಾಜ್ಯ ಪ್ರಕೋಷ್ಟಗಳ ಸಂಯೋಜಕ ಭಾನುಪ್ರಕಾಶ್, ವಿಭಾಗ ಪ್ರಮುಖ್ ಗಿರೀಶ್ ಪಟೇಲ್, ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ಜಿಲ್ಲಾ ಪ್ರಧಾನ ಕರ್ಯದರ್ಶಿಗಳಾದ ಶಿವರಾಜ್, ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ಹನುಮಂತನಾಯ್ಕ್, ನಿಕಟಪೂರ್ವ ಅಧ್ಯಕ್ಷರಾದ ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ಲಸಿಕೆ


ಕೋವಿಡ್-೧೯ ಲಸಿಕೆ ಹಾಕುವ ಕಾರ್ಯಕ್ರಮ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಸಹ ಮುಂದುವರೆಯಿತು. ಆರೋಗ್ಯ ಇಲಾಖೆ ಹಿರಿಯ ಆರೋಗ್ಯ ಸಹಾಯಕ ನೀಲೇಶ್ ರಾಜ್ ಲಸಿಕೆ ಪಡೆದುಕೊಂಡರು..
    ಭದ್ರಾವತಿ, ಜ. ೧೮: ಕೋವಿಡ್-೧೯ ಲಸಿಕೆ ಹಾಕುವ ಕಾರ್ಯಕ್ರಮ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಸಹ ಮುಂದುವರೆಯಿತು
     ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಆಡಳಿತ ವೈದ್ಯಾಧಿಕಾರಿ ಡಾ. ದೇವಾನಂದ್, ಹಿರಿಯ ಆರೋಗ್ಯ ಸಹಾಯಕರಾದ ನೀಲೇಶ್‌ರಾಜ್, ಹಾಲಸ್ವಾಮಿ, ವೈದ್ಯಾಧಿಕಾರಿ ಡಾ. ದೇವರಾಜ್, ಸಮುದಾಯ ಆರೋಗ್ಯ ಕೇಂದ್ರದ ಎಲ್ಲಾ ವೈದ್ಯಾಧಿಕಾರಿಗಳು ಮತ್ತು ಕಿರಿಯ ಆರೋಗ್ಯ ಸಹಾಯಕರು ಹಾಗು ಸಿಬ್ಬಂದಿಗಳು ಲಸಿಕೆ ಪಡೆದುಕೊಂಡರು. ಕಿರಿಯ ಫಾರ್ಮಸಿ ಅಧಿಕಾರಿ ದತ್ತಾತ್ರೇಯರವರಿಗೆ ಮೊದಲ ಲಸಿಕೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
    ಶನಿವಾರದಿಂದ ಆರಂಭಗೊಂಡಿರುವ ಲಸಿಕೆ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಮೊದಲ ಹಂತದಲ್ಲಿ ಲಸಿಕೆ ಹಾಕಲಾಗುತ್ತಿದೆ. ಸ್ಟಾಫ್ ನರ್ಸ್ ಡಯಾನ ಲಸಿಕೆ ಹಾಕಿದರು.

ಉತ್ಸವವಿಲ್ಲದ ೧೦೩ನೇ ಸಂಸ್ಥಾಪನಾ ದಿನ : ಕಾರ್ಮಿಕರ ಬಾಳಿಗೆ ವಿಐಎಸ್‌ಎಲ್ ಉತ್ಸವ ನೆನಪು ಮಾತ್ರ

ಅಂದಿನ ಮೈಸೂರು ರಾಜ್ಯದ ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಾಯ ಮತ್ತು ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ ಮಾರ್ಗದರ್ಶನದಲ್ಲಿ ಪ್ರಾಥಮಿಕ ತನಿಖೆಯನ್ನು ೧೯೧೫-೧೯೧೬ರ ನಡುವೆ ನಡೆಸಲಾಯಿತು.     
      * ಅನಂತಕುಮಾರ್
    ಭದ್ರಾವತಿ, ಜ. ೧೮: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸೋಮವಾರ ಶಂಕು ಸ್ಥಾಪನೆಗೊಂಡು ೧೦೩ ವರ್ಷ ಕಳೆದಿದ್ದು, ಇದೀಗ ಕಾರ್ಖಾನೆ ವ್ಯಾಪ್ತಿಯಲ್ಲಿ ಸಂಭ್ರಮದ ಬದಲು ಸೂತಕದ ಛಾಯೆ ಆವರಿಸಿಕೊಂಡಿದೆ. ಕೋವಿಡ್-೧೯ರ ಪರಿಣಾಮ ಆಡಳಿತ ಮಂಡಳಿ ಈ ಬಾರಿ ವಿಐಎಸ್‌ಎಲ್ ಉತ್ಸವ ನಡೆಸದಿರುವುದು ಒಂದೆಡೆ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಕಾರ್ಮಿಕರು, ಕುಟುಂಬ ವರ್ಗದವರು ಸೇರಿದಂತೆ ನಗರದ ಜನತೆಯನ್ನು ನಿರಾಸೆಗೊಳಿಸಿದೆ. ಮತ್ತೊಂದೆಡೆ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿರುವುದು ಈ ಬಾರಿಯ ಸಂಭ್ರಮವನ್ನು ಮತ್ತಷ್ಟು ಮೊಟಕುಗೊಳಿಸಿದೆ.
    ಸುಮಾರು ೨ ದಶಕಗಳಿಂದ ಕಾರ್ಖಾನೆ ಆಡಳಿತ ಮಂಡಳಿ ಸುಮಾರು ೧ ತಿಂಗಳ ಕಾಲ ವಿಐಎಸ್‌ಎಲ್ ಉತ್ಸವ ನಡೆಸುವ ಮೂಲಕ ಸಂಸ್ಥಾಪನಾ ದಿನ, ಸೈಲ್ ಡೇ ಹಾಗು ಗಣ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದೆ. ವಿಐಎಸ್‌ಎಲ್ ಉತ್ಸವದಲ್ಲಿ ಪ್ರತಿ ದಿನ ಸುಮಾರು ೫ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವುದು ವಿಶೇಷವಾಗಿದೆ. ಪ್ರತಿ ದಿನ ಸಂಜೆ ಮಕ್ಕಳ ವಿವಿಧ ಬಗೆಯ ಆಟಿಕೆಗಳು, ಗೃಹ ಬಳಕೆ ಸಾಮಾಗ್ರಿಗಳ ಮಾರಾಟ, ವಿಐಎಸ್‌ಎಲ್ ವಸ್ತು ಪ್ರದರ್ಶನ ಮಳಿಗೆಗಳು, ಬಗೆ ಬಗೆಯ ಆಹಾರ ಖಾದ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವದಲ್ಲಿ ಕಂಡು ಬರುತ್ತಿತ್ತು. ನಗರದ ಜನತೆ ೧ ತಿಂಗಳ ಕಾಲ ಸಂಭ್ರಮದಲ್ಲಿ ಕಾಲ ಕಳೆಯುತ್ತಿದ್ದರು. ಆದರೆ ಈ ಬಾರಿ ಕೋವಿಡ್-೧೯ರ ಹಿನ್ನಲೆಯಲ್ಲಿ ಉತ್ಸವ ಆಯೋಜಿಸಿಲ್ಲ.  ಈ ಹಿಂದೆ ಸುನಾಮಿ ಪ್ರವಾಹ ಸಂದರ್ಭದಲ್ಲಿ ಉತ್ಸವ ನಡೆಸಿರಲಿಲ್ಲ. ೨ ದಶಕದಲ್ಲಿ ಕೇವಲ ೨ ಬಾರಿ ಮಾತ್ರ ಉತ್ಸವ ನಡೆದಿಲ್ಲ ಎಂಬುದು ಬಿಟ್ಟರೇ ಬೇರೆ ಎಲ್ಲಾ ಸಂದರ್ಭದಲ್ಲೂ ಉತ್ಸವ ನಿಗದಿತ ದಿನಾಂಕದಂದು ಜನವರಿ ಆರಂಭದಿಂದ ಫೆಬ್ರವರಿವರೆಗೆ ನಡೆದಿರುವುದು ಗಮನಾರ್ಹ ಸಂಗತಿಯಾಗಿದೆ.
         ಆಡಳಿತ ಮಂಡಳಿಯಿಂದ ಸರಳವಾಗಿ ಸಂಸ್ಥಾಪನಾ ದಿನ ಆಚರಣೆ:
   ಕಾರ್ಖಾನೆಯ ಒಳಭಾಗದಲ್ಲಿರುವ ಆಡಳಿತ ಕಛೇರಿಯಲ್ಲಿ ಸರಳವಾಗಿ ಸಂಸ್ಥಾಪನಾ ದಿನ ಆಚರಿಸಲಾಯಿತು. ಕಛೇರಿ ಆವರಣದಲ್ಲಿರುವ ಕಾರ್ಖಾನೆಯ ಮೊದಲ ಅಧ್ಯಕ್ಷರು ಹಾಗು ಸಂಸ್ಥಾಪಕರಲ್ಲಿ ಒಬ್ಬರಾದ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಪ್ರತಿಮೆಗೆ ಕಾರ್ಖಾನೆಯ ಮಹಾಪ್ರಬಂಧಕ(ಸ್ಥಾವರ) ಮತ್ತು ಆಕ್ಟಿಂಗ್ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ೧೦೩ನೇ ಸಂಸ್ಥಾಪನಾ ದಿನ ಸೋಮವಾರ ಕಾರ್ಖಾನೆಯ ಒಳಭಾಗದಲ್ಲಿರುವ ಆಡಳಿತ ಕಛೇರಿಯಲ್ಲಿ ಸರಳವಾಗಿ ಆಚರಿಸಲಾಯಿತು. ಸರ್.ಎಂ.ವಿ ಪ್ರತಿಮೆಗೆ ಆಕ್ಟಿಂಗ್ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ ಮಾಲಾರ್ಪಣೆ ಮಾಡಿದರು.
    ಮಹಾಪ್ರಬಂಧಕರು ಪ್ರಭಾರಿ (ಸಿಬ್ಬಂದಿ ಮತ್ತು ಆಡಳಿತ) ಬಿ. ವಿಶ್ವನಾಥ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ, ಅಧಿಕಾರಿಗಳ ಸಂಘದ ಅಧ್ಯಕ್ಷ ಎ.ಆರ್. ವೀರಣ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
      ೧೦೩ನೇ ಸಂಸ್ಥಾಪನಾ ದಿನ :
     ನಗರದಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪಿಸುವ ಸಲುವಾಗಿ ಅಂದಿನ ಮೈಸೂರು ರಾಜ್ಯದ ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಾಯ ಮತ್ತು ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ ಮಾರ್ಗದರ್ಶನದಲ್ಲಿ ಪ್ರಾಥಮಿಕ ತನಿಖೆಯನ್ನು ೧೯೧೫-೧೯೧೬ರ ನಡುವೆ ನಡೆಸಲಾಯಿತು. ಇದ್ದಿಲು ಇಂಧನ ಬಳಸಿ ಗಟ್ಟಿ ಕಬ್ಬಿಣ ತಯಾರಿಸುವ ಸಾಧ್ಯತೆಯನ್ನು ಪರಿಶೋಧಿಸಲಾಯಿತು. ಇದರ ಮುಖ್ಯ ಉದ್ದೇಶ ಬಾಬಾ ಬುಡನ್ ಗಿರಿ ಬೆಟ್ಟಗಳಲ್ಲಿ ಮತ್ತು ಕೆಮ್ಮಣ್ಣುಗುಂಡಿ ಬಳಿ ಇದ್ದ ಶ್ರೀಮಂತ ಕಬ್ಬಿಣದ ಅದಿರು ನಿಕ್ಷೇಪಗಳನ್ನು ಉಪಯೋಗಿಸಿ ಕಬ್ಬಿಣ ಮತ್ತು ಇತರ ಉತ್ಪನ್ನಗಳ ತಯಾರಿಕೆ ಆಗಿತ್ತು .ಈ ತನಿಖೆಯನ್ನು ಒಂದು ನ್ಯೂಯಾರ್ಕ್ ಮೂಲದ ಸಂಸ್ಥೆ ನಿರ್ವಹಿಸಿತು. ಇದರ ಫಲವಾಗಿ ೧೯೧೮ರಲ್ಲಿ ವಿಶ್ವೇಶ್ವರಯ್ಯನವರು ಈ ಕಾರ್ಖಾನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಹಿನ್ನಲೆಯಲ್ಲಿ ಪ್ರತಿ ವರ್ಷ ಜ.೧೮ರಂದು ಸಂಸ್ಥಾಪನಾ ದಿನ ಆಚರಿಸಿಕೊಂಡು ಬರಲಾಗುತ್ತಿದೆ.

Sunday, January 17, 2021

ಗೃಹ ಸಚಿವ ಅಮಿತ್ ಷಾ ವಿರುದ್ಧ ಎಎಪಿ ಆಕ್ರೋಶ :

ಕಾಂಗ್ರೆಸ್ ಮುಖಂಡರ ಬಂಧನ, ಮನವಿ ಪತ್ರದೊಂದಿಗೆ ಹಿಂದಿರುಗಿದ ಸಂಘಟನೆಗಳು

ಭದ್ರಾವತಿಯಲ್ಲಿ ಶನಿವಾರ ನಡೆದ ಆರ್‌ಎಎಫ್ ಘಟಕದ ಶಿಲಾನ್ಯಾಸ ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕರಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಕಾಗದ ನಗರ ಠಾಣೆ ಪೊಲೀಸರು ಬಂಧಿಸಿರುವುದು.
ಭದ್ರಾವತಿ, ಜ. ೧೭: ಆರ್‌ಎಎಫ್ ಘಟಕ ಶಿಲಾನ್ಯಾಸ ನೆರವೇರಿಸಲು ಶನಿವಾರ ನಗರಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಆಮ್ ಆದ್ಮಿ ಪಾರ್ಟಿ ಆಕ್ರೋಶ ವ್ಯಕ್ತಪಡಿಸಿದೆ.
    ಪಕ್ಷದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಮಾತನಾಡಿ, ಕೇಂದ್ರದ ಪ್ರಭಾವಿ ನಾಯಕರು ಹಾಗು ಪ್ರಮುಖ ಸಚಿವರುಗಳಲ್ಲಿ ಒಬ್ಬರಾಗಿರುವ ಗೃಹ ಸಚಿವ ಅಮಿತ್ ಷಾ ಅವರಿಂದ ಕ್ಷೇತ್ರದ ಜನರು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ. ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ಯಾವುದೇ ಅಭಿವೃದ್ಧಿ ವಿಚಾರಗಳ ಬಗ್ಗೆ ಪ್ರಸ್ತಾಪಿಸದೆ ಇರುವುದು ದುರಾದೃಷ್ಟಕರ ಸಂಗತಿಯಾಗಿದೆ. ಅಲ್ಲದೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅಧ್ಯಕ್ಷತೆವಹಿಸಿದ್ದ ಕ್ಷೇತ್ರದ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
        ಕಾಂಗ್ರೆಸ್ ಮುಖಂಡರ ಬಂಧನ:
   ಈ ನಡುವೆ ಸಮಾರಂಭಕ್ಕೂ ಮೊದಲು ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರನ್ನು ಕಾಗದನಗರ ಠಾಣೆ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿರುವ ವಿಚಾರ ಬಹಿರಂಗಗೊಂಡಿದೆ.
ಪಕ್ಷದ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ರಾಮಚಂದ್ರ, ಮುಖಂಡರಾದ ಎಂ. ಶಿವಕುಮಾರ್, ರಾಘವೇಂದ್ರ ಸರಾಟೆ, ರೂಪನಾರಾಯಣರವರನ್ನು ಬಂಧಿಸಿ ಬಿಡುಗಡೆಗೊಳಿಸಲಾಗಿದೆ.
     ಮನವಿ ಪತ್ರದೊಂದಿಗೆ ಹಿಂದಿರುಗಿದ ವಿವಿಧ ಸಂಘಟನೆ :
ಎಂಪಿಎಂ, ವಿಐಎಸ್‌ಎಲ್ ಕಾರ್ಖಾನೆಗಳ ಅಭಿವೃದ್ಧಿ ವಿಚಾರ,  ಸಮುದಾಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗು ಉಪಮುಖ್ಯಮಂತ್ರಿಗಳಾದ ಡಾ. ಅಶ್ವತ್ಥ್ ನಾರಾಯಣ, ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಇನ್ನಿತರರಿಗೆ ಸಲ್ಲಿಸಲು ವಿವಿಧ ಸಂಘಟನೆಗಳು ಸಮಾರಂಭದ ವೇದಿಕೆ ಬಳಿ ಎದುರು ನೋಡುತ್ತಿದ್ದವು. ಆದರೆ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಿಲ್ಲ.

ಅಂತರಾಷ್ಟ್ರೀಯ ಯೋಗ ಪಟು ಡಿ. ನಾಗರಾಜ್‌ಗೆ ಚಿನ್ನದ ಪದಕ

ಅಂತರಾಷ್ಟ್ರೀಯ ಯೋಗ ಪಟು ಡಿ. ನಾಗರಾಜ್
ಭದ್ರಾವತಿ, ಜ. ೧೭: ಅಂತರಾಷ್ಟ್ರೀಯ ಯೋಗ ಪಟು, ನಗರದ ವಿವೇಕಾನಂದ ಯೋಗ ಟ್ರಸ್ಟ್‌ನ ಡಿ. ನಾಗರಾಜ್ ಆನ್‌ಲೈನ್ ಇಂಟರ್‌ನ್ಯಾಷನಲ್ ಯೂನಿಕ್ ಯೋಗ ಕಂಟೆಸ್ಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
     ಪಶ್ಚಿಮ ಬಂಗಾಳ ಕೊಲ್ಕತಾದ ಯೋಗ ಎರ ವತಿಯಿಂದ ಸ್ವಾತಿ ಯೋಗ ಅಂಡ್ ಫಿಟ್ ಪಾಯಿಂಟ್ ಮತ್ತು ಯೋಗ ಆಬ್ಜೇಕ್ಟಿವ್ ಗ್ವೈಡ್ಲೇನ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಪಂದ್ಯಾವಳಿಯಲ್ಲಿ ೪೦ ವರ್ಷ ಮೇಲ್ಪಟ್ಟ ವಯೋಮಾನದವರ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿಕೊಂಡಿದ್ದು, ಪಂದ್ಯಾವಳಿಯಲ್ಲಿ ಇರಾನ್, ಥೈಲಾಂಡ್, ಶ್ರೀಲಂಕಾ, ಸಿಂಗಾಪುರ, ಮಲೇಷಿಯಾ, ವಿಯೆಟ್ನಾಮ್ ಸೇರಿದಂತೆ ವಿವಿಧ ದೇಶಗಳ ಸುಮಾರು ೬೩೦ಕ್ಕೂ ಹೆಚ್ಚು ಯೋಗ ಪಟುಗಳು ಭಾಗವಹಿಸಿದ್ದರು.
     ಡಿ. ನಾಗರಾಜ್‌ರವರು ಸುಮಾರು ೩೫ ವರ್ಷಗಳಿಂದ ರಾಷ್ಟ್ರೀಯ, ಅಂತರಾಷ್ಟ್ರೀಯ ಮತ್ತು ರಾಜ್ಯಮಟ್ಟದ ವಿವಿಧ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಸುಮಾರು ೩೦೦ಕ್ಕೂ ಹೆಚ್ಚು ಪದಕಗಳನ್ನು ಪಡೆದುಕೊಂಡಿದ್ದು, ಇವರನ್ನು ಕರ್ನಾಟಕ ಯೋಗ ಸಂಸ್ಥೆ ಅಧ್ಯಕ್ಷ ಡಾ. ಆರ್. ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ಡಿ. ಪುಟ್ಟೇಗೌಡ ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ.

೧೫ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಡಾ. ಎಸ್.ಎಸ್ ವಿಜಯದೇವಿಗೆ ಕರಾವೇ ಅಭಿನಂದನೆ

ವಿಜಯದೇವಿಯವರ ಆಯ್ಕೆ ಭದ್ರಾವತಿ ನಗರದ ಹಿರಿಮೆ ಮತ್ತಷ್ಟು ಹೆಚ್ಚಿಸಿದೆ : ಎಂ. ಪರಮೇಶ್

ವಿಜಯಪುರ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡದ ಮೊದಲ ಮಹಿಳಾ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಭದ್ರಾವತಿ ನಗರದ ನಿವಾಸಿ, ಸಾಹಿತಿ ಡಾ. ಎಸ್.ಎಸ್ ವಿಜಯದೇವಿಯವರನ್ನು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಜ. ೧೭: ವಿಜಯಪುರ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡದ ಮೊದಲ ಮಹಿಳಾ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ನಗರದ ನಿವಾಸಿ, ಸಾಹಿತಿ ಡಾ. ಎಸ್.ಎಸ್ ವಿಜಯದೇವಿಯವರನ್ನು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
  ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಈ ಬಾರಿ ಆಯೋಜಿಸಲಾಗಿರುವ ೧೫ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಜಯದೇವಿಯವರನ್ನು ಆಯ್ಕೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ.  ಸಂಶೋಧಕರು, ಲೇಖಕರು ಮತ್ತು ಸಾಹಿತಿಯಾಗಿರುವ ವಿಜಯದೇವಿಯವರು ಕನ್ನಡ ಭಾಷೆ ಹಾಗು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಅನನ್ಯವಾಗಿದೆ. ಅವರನ್ನು ಆಯ್ಕೆ ಮಾಡಿರುವುದು ಭದ್ರಾವತಿ ನಗರದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ವೇದಿಕೆ ತಾಲೂಕು ಅಧ್ಯಕ್ಷ ಎಂ. ಪರಮೇಶ್ ಪ್ರಶಂಸೆ ವ್ಯಕ್ತಪಡಿಸಿದರು.
ಮಮತ ವಿಜಯದೇವಿಯವರ ಕಿರುಪರಿಚಯ ಮಾಡಿಕೊಟ್ಟರು. ಅಭಿನಂದನೆ ಸ್ವೀಕರಿಸಿದ ವಿಜಯದೇವಿಯವರು ವೇದಿಕೆ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿ ಕನ್ನಡ ನಾಡಿಗೆ ವಚನ ಸಾಹಿತ್ಯದ ಕೊಡುಗೆಯನ್ನು ವಿವರಿಸಿದರು.
ವೇದಿಕೆ ಪ್ರದಾನ ಕಾರ್ಯದರ್ಶಿ ಅಶೋಕ್‌ರಾವ್ ಘೋರ್ಪಡೆ, ಯುವ ಘಟಕದ ಅಧ್ಯಕ್ಷ ರವಿಕುಮಾರ್, ಸಂಘಟನಾ ಕಾರ್ಯದರ್ಶಿ ರಾಮಕೃಷ್ಣ ಹಾಗೂ ರಮೇಶ್, ಸದಸ್ಯರುಗಳಾದ ಪಿ. ನಾಗರಾಜ್, ಮಲ್ಲಿಕಾರ್ಜುನ್, ಪ್ರಾಣೇಶ್, ದಿಲೀಪ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಹಾಗೂ ಇತರೆ ಕರವೇ ಸದಸ್ಯರು ಉಪಸ್ಥಿತರಿದ್ದರು.