Sunday, January 17, 2021

ಗೃಹ ಸಚಿವ ಅಮಿತ್ ಷಾ ವಿರುದ್ಧ ಎಎಪಿ ಆಕ್ರೋಶ :

ಕಾಂಗ್ರೆಸ್ ಮುಖಂಡರ ಬಂಧನ, ಮನವಿ ಪತ್ರದೊಂದಿಗೆ ಹಿಂದಿರುಗಿದ ಸಂಘಟನೆಗಳು

ಭದ್ರಾವತಿಯಲ್ಲಿ ಶನಿವಾರ ನಡೆದ ಆರ್‌ಎಎಫ್ ಘಟಕದ ಶಿಲಾನ್ಯಾಸ ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕರಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಕಾಗದ ನಗರ ಠಾಣೆ ಪೊಲೀಸರು ಬಂಧಿಸಿರುವುದು.
ಭದ್ರಾವತಿ, ಜ. ೧೭: ಆರ್‌ಎಎಫ್ ಘಟಕ ಶಿಲಾನ್ಯಾಸ ನೆರವೇರಿಸಲು ಶನಿವಾರ ನಗರಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಆಮ್ ಆದ್ಮಿ ಪಾರ್ಟಿ ಆಕ್ರೋಶ ವ್ಯಕ್ತಪಡಿಸಿದೆ.
    ಪಕ್ಷದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಮಾತನಾಡಿ, ಕೇಂದ್ರದ ಪ್ರಭಾವಿ ನಾಯಕರು ಹಾಗು ಪ್ರಮುಖ ಸಚಿವರುಗಳಲ್ಲಿ ಒಬ್ಬರಾಗಿರುವ ಗೃಹ ಸಚಿವ ಅಮಿತ್ ಷಾ ಅವರಿಂದ ಕ್ಷೇತ್ರದ ಜನರು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ. ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ಯಾವುದೇ ಅಭಿವೃದ್ಧಿ ವಿಚಾರಗಳ ಬಗ್ಗೆ ಪ್ರಸ್ತಾಪಿಸದೆ ಇರುವುದು ದುರಾದೃಷ್ಟಕರ ಸಂಗತಿಯಾಗಿದೆ. ಅಲ್ಲದೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅಧ್ಯಕ್ಷತೆವಹಿಸಿದ್ದ ಕ್ಷೇತ್ರದ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
        ಕಾಂಗ್ರೆಸ್ ಮುಖಂಡರ ಬಂಧನ:
   ಈ ನಡುವೆ ಸಮಾರಂಭಕ್ಕೂ ಮೊದಲು ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರನ್ನು ಕಾಗದನಗರ ಠಾಣೆ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿರುವ ವಿಚಾರ ಬಹಿರಂಗಗೊಂಡಿದೆ.
ಪಕ್ಷದ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ರಾಮಚಂದ್ರ, ಮುಖಂಡರಾದ ಎಂ. ಶಿವಕುಮಾರ್, ರಾಘವೇಂದ್ರ ಸರಾಟೆ, ರೂಪನಾರಾಯಣರವರನ್ನು ಬಂಧಿಸಿ ಬಿಡುಗಡೆಗೊಳಿಸಲಾಗಿದೆ.
     ಮನವಿ ಪತ್ರದೊಂದಿಗೆ ಹಿಂದಿರುಗಿದ ವಿವಿಧ ಸಂಘಟನೆ :
ಎಂಪಿಎಂ, ವಿಐಎಸ್‌ಎಲ್ ಕಾರ್ಖಾನೆಗಳ ಅಭಿವೃದ್ಧಿ ವಿಚಾರ,  ಸಮುದಾಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗು ಉಪಮುಖ್ಯಮಂತ್ರಿಗಳಾದ ಡಾ. ಅಶ್ವತ್ಥ್ ನಾರಾಯಣ, ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಇನ್ನಿತರರಿಗೆ ಸಲ್ಲಿಸಲು ವಿವಿಧ ಸಂಘಟನೆಗಳು ಸಮಾರಂಭದ ವೇದಿಕೆ ಬಳಿ ಎದುರು ನೋಡುತ್ತಿದ್ದವು. ಆದರೆ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಿಲ್ಲ.

No comments:

Post a Comment