ಪ್ರಗತಿಪರ ಸಂಘಟನೆಗಳಿಂದ ಮುಖ್ಯಮಂತ್ರಿಗಳಿಗೆ ಮನವಿ
![](https://blogger.googleusercontent.com/img/b/R29vZ2xl/AVvXsEixDO63sMeQ3DTJX5kcwR8V1kNdd5JdiwhcGr20TsK6FvTLtABPvUPAxuBul046lPk8K_PJHSoZWWSrNolvOdtXhYFwq9Sjy0gmlWjEO6mSqar2CTLLXvP2fyzpF7BlexDT_w6ECqoCQr21/w640-h304-rw/D5-BDVT-747019.jpg)
ಚಿಂತಕ, ವಿಚಾರವಾದಿ ಪ್ರೊ. ಕೆ.ಎಸ್ ಭಗವಾನ್‌ರವರ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ವಿರುದ್ಧ ವಕೀಲರ ಸಂಘದ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶುಕ್ರವಾರ ಭದ್ರಾವತಿಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ವಕೀಲರ ಸಂಘದ ಅಧ್ಯಕ್ಷ ಟಿ. ವೆಂಕಟೇಶ್‌ರವರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಫೆ. ೫: ಚಿಂತಕ, ವಿಚಾರವಾದಿ ಪ್ರೊ. ಕೆ.ಎಸ್ ಭಗವಾನ್‌ರವರ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ವಿರುದ್ಧ ದೇಶದ್ರೋಹ ಕಾಯ್ದೆ ದಾಖಲಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ಶುಕ್ರವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖರು, ವಿಚಾರಣೆಗಾಗಿ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾಗಿದ್ದ ನಾಡಿನ ಪ್ರಗತಿಪರ ಚಿಂತಕರು, ವಿಚಾರವಾದಿಗಳಾದ ಪ್ರೊ. ಕೆ.ಎಸ್ ಭಗವಾನ್‌ರವರಿಗೆ ನ್ಯಾಯಾಲಯ ಜಾಮೀನು ನೀಡಿದ ಹಿನ್ನಲೆಯಲ್ಲಿ ಕೋಪಗೊಂಡ ವಕೀಲೆ ಮೀರಾ ರಾಘವೇಂದ್ರ ನ್ಯಾಯಾಲಯದಿಂದ ಹೊರಬರುತ್ತಿದ್ದ ಭಗವಾನ್‌ರವರ ಮುಖಕ್ಕೆ ಮಸಿ ಬಳಿದು ಹೇಯ ಕೃತ್ಯ ನಡೆಸಿದ್ದಾರೆ. ಈ ಕೃತ್ಯವನ್ನು ಪ್ರಗತಿಪರ ಸಂಘಟನೆಗಳ ಒಕ್ಕೂಟ ಖಂಡಿಸುತ್ತದೆ ಎಂದರು.
ನ್ಯಾಯಾಲಯದ ತೀರ್ಪನ್ನು ಗೌರವಿಸದೆ ಅದರಲ್ಲೂ ಸಮವಸ್ತ್ರದಲ್ಲಿ ನ್ಯಾಯಾಲಯದ ಆವರಣದಲ್ಲಿ ಈ ಕೃತ್ಯ ನಡೆಸಿರುವುದು ವಕೀಲ ವೃತ್ತಿ ಘನತೆಗೆ ಮಸಿ ಬಳಿದಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಮೀರಾ ರಾಘವೇಂದ್ರ ಮೂಲಭೂತವಾದಿಗಳ ಹಿನ್ನಲೆ ಹೊಂದಿರುವುದು ಕಂಡು ಬರುತ್ತಿದೆ. ಈ ಹಿಂದೆ ಸಹ ಸಾಮಾಜಿಕ ಜಾಲತಾಣಗಳಲ್ಲಿ ಚಿಂತಕರು ಮತ್ತು ವಿಚಾರವಾದಿಗಳ ವಿರುದ್ಧ ಅಸಹ್ಯಕರ ರೀತಿಯ ಪೋಸ್ಟರ್‌ಗಳನ್ನು ಪ್ರಕಟಿಸುವ ಮೂಲಕ ಸಾರ್ವಜನಿಕನಿಂದ ವ್ಯಾಪಕ ಖಂಡನೆಗೆ ಒಳಗಾಗಿದ್ದರು. ಇದೀಗ ಭಗವಾನ್‌ರವರ ಮುಖಕ್ಕೆ ಮಸಿ ಬಳಿದು ಸಂವಿಧಾನಕ್ಕೆ ಅಪಚಾರವೆಸಗುವ ಮೂಲಕ ಅಗೌರವದಿಂದ ವರ್ತಿಸಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣ ಇವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು. ಪ್ರೊ. ಕೆ.ಎಸ್ ಭಗವಾನ್‌ರವರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಹಾಗು ವಿಚಾರವಾದಿಗಳು ಮತ್ತು ಪ್ರಗತಿಪರರ ವಾಕ್ ಸ್ವಾತಂತ್ರ್ಯದ ಘನತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದಕ್ಕೂ ಮೊದಲು ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಘಟನೆಗೆ ಆಕ್ರೋಶ ವ್ಯಕ್ತಪಡಿಸಲಾಯಿತು. ನಂತರ ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ. ವೆಂಕಟೇಶ್‌ರವರಿಗೆ ಮನವಿ ಸಲ್ಲಿಸಲಾಯಿತು. ಕೊನೆಯಲ್ಲಿ ತಹಸೀಲ್ದಾರ್ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಸುರೇಶ್, ಜಿ. ರಾಜು, ಚನ್ನಪ್ಪ, ಎಸ್.ಕೆ ಸುಧೀಂದ್ರ, ಜೆಬಿಟಿ ಬಾಬು, ಪರಮೇಶ್ವರಚಾರ್, ಚಿನ್ನಯ್ಯ, ಅಬ್ದುಲ್ ಖದೀರ್, ಇಬ್ರಾಹಿಂ ಖಾನ್, ಮುರ್ತುಜಾ ಖಾನ್, ಖಾದರ್, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಮತ್ತು ಪದಾಧಿಕಾರಿಗಳು, ನ್ಯಾಯವಾದಿ ನಾರಾಯಣ್, ರಾಘವೇಂದ್ರ ಹಾಗು ಎಸ್‌ಡಿಪಿಐ ಅಧ್ಯಕ್ಷ ಮಹಮದ್ ತಾಹೀರ್, ಮಹಮದ್ ಗೌಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಹಿಂದೂಪರ ಸಂಘಟನೆಯಿಂದ ಕೃತ್ಯಕ್ಕೆ ಬೆಂಬಲ:
ವಕೀಲೆ ಮೀರಾ ರಾಘವೇಂದ್ರ ಕೃತ್ಯವನ್ನು ಪ್ರಗತಿಪರ ಸಂಘಟನೆಗಳು ಖಂಡಿಸಿ ಒಂದೆಡೆ ಪ್ರತಿಭಟನೆ ನಡೆಸಿದರೇ, ಮತ್ತೊಂದೆಡೆ ಈ ಕೃತ್ಯವನ್ನು ಬೆಂಬಲಿಸಿ ಹಿಂದೂಪರ ಸಂಘಟನೆ ಬಜರಂಗದಳ ಕಾರ್ಯಕರ್ತರು ಇದೆ ಸಂದರ್ಭದಲ್ಲಿ ದಿಢೀರನೆ ಪ್ರಗತಿಪರ ಸಂಘಟನೆಗಳ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾವತಿಯಲ್ಲಿ ಪ್ರೊ. ಕೆ.ಎಸ್ ಭಗವಾನ್‌ರವರ ಮುಖಕ್ಕೆ ಮಸಿ ಬಳಿದ ಮೀರಾ ರಾಘವೇಂದ್ರರವರ ಕೃತ್ಯವನ್ನು ಸಂಭ್ರಮಿಸುವ ಜೊತೆಗೆ ಹಿಂದೂಪರ ಸಂಘಟನೆ ಬಜರಂಗದಳ ಕಾರ್ಯಕರ್ತರು ಇದೆ ಸಂದರ್ಭದಲ್ಲಿ ದಿಢೀರನೆ ಪ್ರಗತಿಪರ ಸಂಘಟನೆಗಳ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರಗಳನ್ನು ಕೂಗಿದರು.
ಹಿಂದೂ ವಿರೋಧಿ ಪ್ರೊ. ಕೆ.ಎಸ್ ಭಗವಾನ್‌ರವರಿಗೆ ಮಸಿ ಬಳಿಯುವ ಮೂಲಕ ಮೀರಾ ರಾಘವೇಂದ್ರ ದಿಟ್ಟತನ ಪ್ರದರ್ಶಿಸಿದ್ದಾರೆಂದು ರಂಗಪ್ಪ ವೃತ್ತದಲ್ಲಿ ಬಜರಂಗದಳ ಕಾರ್ಯಕರ್ತರು ಸಂಭ್ರಮಿಸುವ ಜೊತೆಗೆ ಪ್ರಗತಿಪರ ಸಂಘಟನೆಗಳ ಮುಖಂಡರ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ಈ ನಡುವೆ ಸಂಚಾರ ದಟ್ಟಣೆ ಉಂಟಾದ ಹಿನ್ನಲೆಯಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಬಜರಂಗದಳ ಕಾರ್ಯಕರ್ತರನ್ನು ತೆರವುಗೊಳಿಸಿದರು.
ಬಜರಂಗದಳ ಜಿಲ್ಲಾ ಸಹ ಸಂಚಾಲಕ ವಡಿವೇಲು, ಕಿರಣ್ , ಶ್ರೀಕಾಂತ್, ಗುಂಡ, ಪ್ರದೀಪ್ ಕುಟ್ಟಿ, ಧನುಷ್ ಬೋಸ್ಲೆ, ಜಿ. ಧರ್ಮಪ್ರಸಾದ್, ಕೇಸರಿ ಪಡೆ ಗಿರೀಶ್, ದಿವ್ಯರಾಜ್ ಸೇರಿದಂತೆ ಇನ್ನಿತರರಿದ್ದರು.